Tuesday, August 13, 2024

ಸತ್ಯ | ನ್ಯಾಯ |ಧರ್ಮ

ವಿಜಯೇಂದ್ರ ರಾಜೀನಾಮೆ ನೀಡಲಿ, BSY ಶ್ರೀಮಂತರ ಸಹವಾಸ ನಿಲ್ಲಿಸಲಿ: ಬಿಜೆಪಿಯ ಬಿ.ಪಿ.ಹರೀಶ್‌ ಆಗ್ರಹ

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮರುಚುನಾವಣೆ ಎದುರಿಸಬೇಕು ಮತ್ತು ಅವರ ತಂದೆ ಹಿರಿಯ ರಾಜಕಾರಣಿ ಯಡಿಯೂರಪ್ಪನವರ ಸ್ವಜಾತಿ ಶ್ರೀಮಂತರ ಸ್ನೇಹ ಸಹವಾಸ ಮಾಡುವುದನ್ನು ನಿಲ್ಲಿಸಲಿ ಅವರದೇ ಬಿಜೆಪಿ ಪಕ್ಷದ ಶಾಸಕ ಹರಿಹರ ಶಾಸಕ ಬಿ.ಪಿ.ಹರೀಶ್‌ ಆಗ್ರಹಿಸಿದ್ದಾರೆ.

‘ಬಿ.ವೈ.ವಿಜಯೇಂದ್ರ ಶಾಸಕ ಸ್ಥಾನ ಕಾಂಗ್ರೆಸ್‌ ಪಕ್ಷದ ಭಿಕ್ಷೆ’ ಎಂಬ ಗಂಭೀರ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವಿನ ಹೊಂದಾಣಿಕೆ ರಾಜಕಾರಣದ ಆರೋಪಕ್ಕೆ ಇದು ಪುಷ್ಟಿ ನೀಡಿದೆ. ಇಂತಹ ಬ್ಲ್ಯಾಕ್‌ಮೇಲ್‌ಗೆ ಬಿ.ಎಸ್‌.ಯಡಿಯೂರಪ್ಪ ಕುಟುಂಬ ಸರಿಯಾಗಿ ಪ್ರತಿಕ್ರಿಯಿಸಬೇಕು. ಕಾಂಗ್ರೆಸ್‌ ಭಿಕ್ಷೆಯಿಂದ ಶಾಸಕರಾಗುವ ಅನಿವಾರ್ಯತೆ ಬಿಜೆಪಿ ನಾಯಕರಿಗೆ ಇಲ್ಲ ಎಂಬುದನ್ನು ತೋರಿಸಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹರೀಶ್‌ ಒತ್ತಾಯಿಸಿದರು.

ಬಿ.ಎಸ್.ಯಡಿಯೂರಪ್ಪ ಶ್ರೀಮಂತ ಕುಟುಂಬಗಳ ಸಹವಾಸ ಮಾಡುತ್ತಿದ್ದಾರೆ. ‘ಹೋರಾಟ, ಪಕ್ಷ ಸಂಘಟನೆಯಿಂದ ವಿಮುಖರಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗೆಳೆತನ ಬೆಳೆಸಿದ್ದಾರೆ. ಕೃಷ್ಣಮೃಗ ಸಾಕಣೆ ಪ್ರಕರಣದಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರನ್ನು ರಕ್ಷಣೆ ಮಾಡಿರುವುದು ಇದೇ ಕಾರಣಕ್ಕೆ. ಸಂಸದ ಬಸವರಾಜ ಬೊಮ್ಮಾಯಿ ಕೂಡ ಇವರೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಇಂಥ ಕ್ಷುಲ್ಲಕ ಸಂಗತಿಗಳನ್ನು ಬಿಟ್ಟು ಪಕ್ಷದ ಕಡೆ ಹಿರಿಯರು ನಿಗಾವಹಿಸಲಿ ಎಂದು ಹರೀಶ್‌ ಸಲೆ ನೀಡಿದ್ದಾರೆ.

‘ರಾಜ್ಯದಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕಾರಣ ಅಸಹ್ಯ ಹುಟ್ಟಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪರಸ್ಪರ ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಮುಖಂಡರಿಗೆ ತಕ್ಕ ಪಾಠ ಕಲಿಸಲಿದ್ದೇವೆ’ ಎಂದು ಹರೀಶ್‌ ಹೇಳಿದರು.

‘ಬಿಜೆಪಿಯ ಸಮಾನ ಮನಸ್ಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದೇವೆ. ಪಕ್ಷದ ಬಲವರ್ಧನೆಯ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ಶೀಘ್ರದಲ್ಲೇ ಆಯೋಜಿಸಲಾಗುತ್ತಿದೆ. ಪಕ್ಷದ ಸಾಕಷ್ಟು ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿ.ವೈ.ವಿಜಯೇಂದ್ರ ಮಾಡಿರುವ ತಪ್ಪುಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುತ್ತದೆ. ಪಕ್ಷಕ್ಕೆ ಪರ್ಯಾಯ ನಾಯಕರ ಅಗತ್ಯವಿದ್ದು, ಹೈಕಮಾಂಡ್‌ ಒಪ್ಪಿಗೆ ಪಡೆದು ಮುಂದುವರಿಯುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page