Friday, June 14, 2024

ಸತ್ಯ | ನ್ಯಾಯ |ಧರ್ಮ

ದಲಿತ ಸಂಘರ್ಷ ಸಮಿತಿ ಐಕ್ಯತೆ : ಸಂಭ್ರಮ, ಆಶಯ ಮತ್ತು ಆತಂಕ

ದಲಿತಸಂಘಟನೆಗಳ ಐಕ್ಯತೆಯನ್ನು ಇಂದು ಸಂಭ್ರಮಿಸುತ್ತಿರುವವರೆಲ್ಲರೂ ದಲಿತ ಸಂಘಟನೆಗಳ ನಾಯಕರ ಬಾಯಿಯಿಂದ ‘ನಾವು ಮುಂದೆಂದೂ ಛಿದ್ರಗೊಳ್ಳುವುದಿಲ್ಲ’ ಎಂಬ ಉತ್ತರವನ್ನು ಬಯಸುತ್ತಿದ್ದಾರೆ. ಡಿಸೆಂಬರ್ 6 ರಂದು ‘ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ’ ಮತ್ತು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ದಿನದಂದು ನಾಡಿನ ಜನತೆಯ ಮುಂದೆ ‘ಈ ಒಗ್ಗಟ್ಟು ಮುರಿಯುವುದಿಲ್ಲ’ವೆಂಬ ಭರವಸೆಯನ್ನು ದಲಿತ ನಾಯಕರು ನೀಡಬೇಕಿದೆ ಎನ್ನುತ್ತಾರೆ ಲೇಖಕ ವಿಕಾಸ್ ಆರ್ ಮೌರ್ಯ

ನಡೆಯುವವರು ಮಾತ್ರ ಎಡುವುತ್ತಾರೆ.

-ಜಾನಪದ ನಾಣ್ಣುಡಿ

ಅಂದು 1981 ರ ಜೂನ್ 10 ನೇ ದಿನ. ಬುಧವಾರದ ಹಗಲಿನ ಸಮಯ. ಕೋಲಾರದ ಹಾರೋಹಳ್ಳಿಯ ಗಂಗಮ್ಮನ ಗುಡಿ ಮುಂದಿನ ಜಾಗದಲ್ಲಿ ವೇದಿಕೆ ಸಿದ್ಧಗೊಂಡಿತ್ತು. ಅಲ್ಲಿಯೇ ನೀಲಿ ಬಟ್ಟೆಗೆ ಅಪ್ಪಿಕೊಂಡಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ದೊಡ್ಡದಾದ ಭಾವಚಿತ್ರ ನೆರೆದಿದ್ದ ಜನರೆಲ್ಲರ ಮುಖ್ಯ ಆಕರ್ಷಣೀಯ ಕೇಂದ್ರವಾಗಿತ್ತು. ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರಾದ ಎನ್. ಶಿವಣ್ಣ, ಎನ್. ವೆಂಕಟೇಶ್, ಎನ್. ಮುನಿಸ್ವಾಮಿ, ಕೆ. ರಾಮಯ್ಯ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಸಿ.ಎಂ. ಮುನಿಯಪ್ಪ ಮುಂತಾದವರು ಭಾಗವಹಿಸಿದ್ದರು. ಇಡೀ ಕಾರ್ಯಕ್ರಮವನ್ನು ಲಾಯರ್ ಕೃಷ್ಣ ಅವರು ಸಂಯೋಜಿಸಿದ್ದರು. ಅಂದು ಹಾರೋಹಳ್ಳಿಯಲ್ಲಿ ‘ದಲಿತ ಸಂಘರ್ಷ ಸಮಿತಿ’ ವತಿಯಿಂದ ರಾಜ್ಯಮಟ್ಟದ ಜಾಗೃತಿ ಸಮಾವೇಶ ನಡೆದಿತ್ತು. ಜೊತೆಗೆ ಶಿಕ್ಷಣದಲ್ಲಿ ಸಾಧನೆ ಮಾಡಿದ ದಲಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಇತ್ತು. ದಲಿತ ಕಲಾ ಮಂಡಳಿಯೂ ಹಾಜರಿತ್ತು.

ಅಂದು ಅದೇ ವೇದಿಕೆಯಲ್ಲಿ ಮತ್ತೊಂದು ಶುಭ ಸಮಾರಂಭವೂ ಜರುಗಿತು. ಅದು ಹಾಸನದ ಹೆಚ್.ಜೆ.ರುದ್ರಯ್ಯ ಮತ್ತು ಕೋಲಾರದ ಚಿಂತಾಮಣಿಯ ಪದ್ಮ ಇವರ ನಡುವಿನ ಅಂತರ್ಜಾತಿ ವಿವಾಹ. ರುದ್ರಯ್ಯ ಹೊಲೆಯ ಸಮುದಾಯದವರಾದರೇ, ಪದ್ಮ ಮಾದಿಗ ಸಮುದಾಯದವರು. ದಲಿತ ಸಂಘರ್ಷ ಸಮಿತಿಯ ‘ಫಾಹಿಯಾನ’ ಹಿರಿಯ ಜೀವ ಎನ್.ವೆಂಕಟೇಶ್ ಅವರ ತಂಗಿಯಾದ ಪದ್ಮ ಮತ್ತು ರೇಷ್ಮೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರುದ್ರಯ್ಯ ಇವರಿಬ್ಬರೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅನಾವರಣ ಮಾಡುವ ಮೂಲಕ ಒಂದಾದರು, ವಿವಾಹವಾದರು. ದಲಿತ ಸಂಘರ್ಷ ಸಮಿತಿಯ ಎಲ್ಲಾ ಹೋರಾಟಗಾರರು ಹಾಗೂ ಹಾರೋಹಳ್ಳಿಯ ಜನತೆ ಇವರಿಬ್ಬರನ್ನೂ ಹಾರೈಸಿದ್ದರು.

ಪದ್ಮ ಮತ್ತು ಹೆಚ್.ಜೆ.ರುದ್ರಯ್ಯನವರ ಮೊದಲ ಮಗನೇ ನಾನು. ನನ್ನ ಬಗ್ಗೆಯೇ ಹೇಳಿಕೊಳ್ಳಲು ಮುಜುಗರವಾಗುತ್ತದೆಯಾದರೂ ನನ್ನ ಮತ್ತು ದಲಿತ ಸಂಘರ್ಷ ಸಮಿತಿಯ ನಡುವೆ ಇರುವ ಈ ಕಳ್ಳುಬಳ್ಳಿ ಸಂಬಂಧದ ಬಗ್ಗೆ ನನಗೆ ಹೆಮ್ಮೆಯಿದೆ. ದಸಂಸ ನನ್ನಂತಹ ಲಕ್ಷಾಂತರ ಯುವಜನತೆಗೆ ನೀಡಿದ ಬೆಳಕಿನ ಬಗ್ಗೆ, ದಲಿತ ಜನಮಾನಸದಲ್ಲಿ ದಸಂಸ ಮೂಡಿಸಿದ ಘನತೆ ಬಗ್ಗೆ ಅಪಾರವಾದ ಗೌರವವಿದೆ. ನನ್ನಂತವರ ಪಾಲಿಗೆ ದಸಂಸ ತಂದೆ-ತಾಯಿ ಎರಡೂ ಆಗಿದೆ. ಬಾಬಾಸಾಹೇಬ್ ಒಂದು ಕಣ್ಣಾದರೆ, ಮತ್ತೊಂದು ದಸಂಸ.

ನಾ ಬೆಳೆದ ಕೇರಿಯಲ್ಲಿ ಏಪ್ರಿಲ್ 14 ಬಂದರೆ ಸಂಭ್ರಮವೋ ಸಂಭ್ರಮ. ಅಲ್ಲಿನ ನಮ್ಮ ದಸಂಸದ ಹಿರಿಯಣ್ಣಂದಿರು ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಾಡುವ ಹಾಡಿಗೆ ಹೆಜ್ಜೆ ಹಾಕುವುದೆಂದರೆ ಸಂತೋಷವೋ ಸಂತೋಷ. ಹನುಮಂತಣ್ಣ, ಗುಡುಗಣ್ಣ, ಚಿಕ್ಕಾಳಣ್ಣ ಬಾರಿಸುತ್ತಿದ್ದ ತಮಟೆ ಸದ್ದಿಗೆ ನಮ್ಮಪ್ಪನೂ ಸೇರಿದಂತೆ ಹೋಮ್‍ಗಾರ್ಡ್ ಪ್ರಕಾಶಣ್ಣ ಹಾಕುತ್ತಿದ್ದ ಕುಣಿತ ನೆಲವ ನಡುಗಿಸುವಾಗ ಅದರಲ್ಲಿ ನಾವೂ ಗುಡುಗಿ ಮೆತ್ತಗಾಗುತ್ತಿದ್ದೆವು. ನನಗೂ ಕೇರಿಗೂ ದಲಿತ ಅಸ್ಮಿತೆಯ ಬಗ್ಗೆ ಹೆಮ್ಮೆ ಹಾಗೂ ಅಂಬೇಡ್ಕರ್ ಅವರ ವಿಚಾರವನ್ನು ಹೇಳಿಕೊಟ್ಟಿದ್ದೇ ದಸಂಸ.

ಸ್ವತಃ ನನ್ನ ಸೋದರಮಾವ ಗಡ್ಡಮಾಮ (ಎನ್. ವೆಂಕಟೇಶಣ್ಣ) ಮೈಸೂರಿನ ಕಡೆ ಬಂದಾಗ ನಮ್ಮ ಕುಟುಂಬ ನೆಲಸಿದ್ದ ಮಂಡ್ಯ ಜಿಲ್ಲೆಯ ಹೊಸಹೊಳಲಿಗೂ ಬರುತ್ತಿದ್ದರು. ಒಂದೆರಡು ದಿನ ವಿಶ್ರಾಂತಿ ಪಡೆದು ಹೊರಡುತ್ತಿದ್ದರು. ಅವರು ಬಂದರೆಂದರೆ ನನಗೂ ನನ್ನ ತಂಗಿಗೂ ಅವರ ತೋಳೇರಿದ್ದ ಬಟ್ಟೆಯ ಚೀಲದ ಮೇಲೆಯೇ ಕಣ್ಣು. ಎನ್. ವೆಂಕಟೇಶಣ್ಣ ಯಾವಾಗಲೂ ಪ್ರತಿಭಟನೆ ಅಥವಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬರುತ್ತಿದ್ದದ್ದು ತಡರಾತ್ರಿಯ ಸಮಯವೇ. ಅವರು ಬರುವವರೆಗೂ ನಾನು ಮತ್ತು ನನ್ನ ತಂಗಿ ಶೀಲ ನಿದ್ದೆ ಮಾಡದೇ ಕಾದಿರುತ್ತಿದ್ದೆವು. ಅವರು ಬಂದೊಡನೇ ಒಂದೆರಡು ಮುತ್ತು ವಿನಿಮಯವಾಗಿ ಅವರ ಭುಜವೇರಿದ್ದ ಬ್ಯಾಗಿಗಾಗಿ ನನ್ನ ಮತ್ತು ಶೀಲ ಇಬ್ಬರ ನಡುವೆಯೂ ಯುದ್ಧವಾಗುತ್ತಿತ್ತು. ಅದರಲ್ಲಿರುವ ಕ್ರ್ಯಾಕ್‍ಜಾಕ್ ಬಿಸ್ಕತ್ತಿಗಾಗಿಯೇ ನಮ್ಮಿಬ್ಬರ ಹೊಡೆದಾಟ. ಹೀಗೆ ಬಿಸ್ಕತ್ತು ಹುಡುಕುವಾಗ ಬ್ಯಾಗಿನಲ್ಲಿದ್ದ ಕರಪತ್ರದಲ್ಲಿ ನಗುತ್ತಿದ್ದ ಅಂಬೇಡ್ಕರ್ ಮತ್ತು ದಸಂಸ ‘ಲೋಗೋ’ ನಮ್ಮ ಕಣ್ಣಿಗೆ ಬಿದ್ದು ಅಂದಿನಿಂದಲೇ ಬಾಬಾಸಾಹೇಬ್ ಮತ್ತು ದಸಂಸದ ಪರಿಚಯವಾಗಿತ್ತು.

ಮುಂದೆ ಪಿಯುಸಿ ಫೇಲಾದಾಗ ಅದೇ ವೆಂಕಟೇಶಣ್ಣನ ಚೀಲದಲ್ಲಿ ಸಿಕ್ಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳ ಸಂಪುಟ 3 – ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ, ಬ್ರಾಹ್ಮಣ ಧರ್ಮದ ದಿಗ್ವಿಜಯ ಕೃತಿ ನನ್ನ ಬದುಕನ್ನೇ ಬದಲಾಯಿಸಿಬಿಟ್ಟಿತು. ಪದವಿ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳಿದಾಗ ಗೌತಮ್ ಹಾಸ್ಟೆಲ್‍ನಲ್ಲಿ ತುಂಬಿ ತುಳುಕುತ್ತಿದ್ದ ಬಹುಜನ ಚಳವಳಿಯ ವಿಚಾರಗಳೂ ಸಹ ನನ್ನ ಮೇಲೆ ಪ್ರಭಾವ ಬೀರಿದವು. ಅಷ್ಟೊತ್ತಿಗೆ ಒಂದು ಮಟ್ಟಕ್ಕೆ ಪ್ರಭಾವ ಕಳೆದುಕೊಂಡಿದ್ದ ದಸಂಸದ ಸ್ಥಿತಿಯೂ ಸಮಕಾಲೀನ ಯುವಜನತೆಯಲ್ಲಿ ಆತಂಕ ಮೂಡಿಸಿತ್ತು. ಆದರೆ ಕಾಲಕ್ರಮೇಣ ದಸಂಸದ ಹಿರಿಯ ಜೀವಗಳೊಂದಿಗೆ ಬಹಳ ಕಾಲದ ನಂತರ ಏರ್ಪಟ್ಟ ನಂಟಿನಿಂದ ಮತ್ತೆ ದಸಂಸ ನಮ್ಮೆದೆಗಳಲ್ಲಿ ತುಂಬಿಕೊಂಡಿತು.

ದಸಂಸ ಬಣಗಳಾದದ್ದು ಯಾರಿಗೆಲ್ಲಾ ದುಃಖವನ್ನು ಉಂಟುಮಾಡಿತ್ತೋ ಅವರೆಲ್ಲರೂ ಇಂದು ಹುಮ್ಮಸ್ಸಿನಿಂದ ಕುಣಿಯುತ್ತಿದ್ದಾರೆ. ಎರಡು ದಶಕಗಳ ನಂತರ ಒಗ್ಗೂಡಲು ಅಣಿಯಾಗಿರುವ ದಸಂಸ ಹೋರಾಟಗಾರರ ನಡೆಯನ್ನು ಕಂಡು ಕಣ್ತುಂಬಿ ಸಂಭ್ರಮಿಸುತ್ತಿದ್ದಾರೆ. ಅಲ್ಲೆಲ್ಲೋ ಕೊಲೆ, ಇಲ್ಲೆಲ್ಲೋ ಅತ್ಯಾಚಾರ, ಪಕ್ಕದಲ್ಲಿಯೇ ಬಹಿಷ್ಕಾರ, ಮನೆ ಮುಂದೆಯೇ ನಿಂದನೆ ಹೀಗೆ ಒಂದಾ ಎರಡಾ.. ಲೆಕ್ಕವಿಲ್ಲದಷ್ಟು ದಲಿತರ ಮೇಲಿನ ದೌರ್ಜನ್ಯಗಳು ನಡೆದಾಗ ಕೇರಿ ಕೇರಿಗಳಲ್ಲಿನ ದಲಿತರು ‘ಡಿಎಸ್‍ಎಸ್’ ಕೈಗಳು ನಮ್ಮನ್ನು ಕಾಪಾಡುತ್ತವೆ ಎಂದು ಕಾಯುತ್ತಿದ್ದರು. ಒಗ್ಗಟ್ಟಾಗಿ ಬರದಿದ್ದಾಗ ನೊಂದು ಗೆಲ್ಲುವ ಅಥವಾ ಉಳಿಯುವ ಆಸೆಯನ್ನೇ ಬಿಟ್ಟಿದ್ದರು. ನಮ್ಮ ಕತೆ ಇಷ್ಟೇ. ಪೊಲೀಸ್ ಸ್ಟೇಷನ್, ನ್ಯಾಯಾಲಯಗಳಲ್ಲಿ ನಮಗೆ ನ್ಯಾಯವಿಲ್ಲ. ಈ ಮೇಲ್ಜಾತಿ ಜಾತಿವಾದಿಗಳ ಕೈಕೆಳಗೆ ನಮಗೆ ಉಳಿಗಾಲವಿಲ್ಲ. ಮತ್ತೆ ಮೊದಲಿನಂತೆಯೇ ಬದುಕಿ ಬಿಡೋಣವೇ? ಎಂದೊಮ್ಮೆ ಯೋಚಿಸಿ ‘ಅಯ್ಯೋ ಬೇಡವೇ ಬೇಡ’ ಎಂದುಕೊಂಡರೂ ಎದುರುಗೊಳ್ಳುವ ಯಮಕಿಂಕರರನ್ನು ಸೋಲಿಸುವುದೆಂತು? ವಾಮನರ ಹೆಜ್ಜೆಯ ಸಪ್ಪಳವನ್ನರಿಯುವುದೆಂತು? ನಮ್ಮನ್ನೆಲ್ಲ ಕಾಪಾಡಲು ಬಾಬಾಸಾಹೇಬ್ ಮತ್ತೆ ಹುಟ್ಟಿ ಬರಬೇಕಷ್ಟೆ ಎಂದು ನಿರಾಶರಾಗಿ ಕುಳಿತಿದ್ದ ದಲಿತರ ಕಿವಿಗೆ ‘ದಲಿತ ಸಂಘಟನೆಗಳು ಐಕ್ಯಗೊಳ್ಳುತ್ತಿವೆ’ ಎಂಬ ಸುದ್ದಿ ಮುಟ್ಟಿದ್ದೇ ತಡ ನರನಾಡಿಗಳೆಲ್ಲ ನಿಮಿರಿ ನಿಂತಿವೆ. ಎದೆಯೊಳಗೆ ಧೈರ್ಯ ತುಂಬಿ ಕೊಂಡಂತಾಗಿದೆ. ರಟ್ಟೆಗಳಿಗೆ ಶಕ್ತಿ ಬಂದಂತಾಗಿದೆ. ಹಲವರಿಗೆ ಇದು ಕನಸೋ ನನಸೋ ಎಂಬ ಅನುಮಾನವೂ ಶುರುವಾಗಿದೆ. ಕಳೆದೆರಡು ವಾರಗಳಿಂದ ದಲಿತ ಕೇರಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ‘ಜೈ ಭೀಮ್’ ಘೋಷಣೆ ಮುಗಿಲು ಮುಟ್ಟಿದೆ.

ಈ ಬೆಳವಣಿಗೆಯ ನಡುವೆ ‘ಐಕ್ಯತೆ 6 ನೇ ತಾರೀಖಿನವರೆಗೆ ಮಾತ್ರವೇ?’ ಎಂಬ ಪ್ರಶ್ನೆಯೂ ಎದ್ದು ಬಂದಿದೆ. ದಲಿತಸಂಘಟನೆಗಳ ಐಕ್ಯತೆಯನ್ನು ಇಂದು ಸಂಭ್ರಮಿಸುತ್ತಿರುವವರೆಲ್ಲರೂ ದಲಿತ ಸಂಘಟನೆಗಳ ನಾಯಕರ ಬಾಯಿಯಿಂದ ‘ನಾವು ಮುಂದೆಂದೂ ಛಿದ್ರಗೊಳ್ಳುವುದಿಲ್ಲ’ ಎಂಬ ಉತ್ತರವನ್ನು ಬಯಸುತ್ತಿದ್ದಾರೆ. ಡಿಸೆಂಬರ್ 6 ರಂದು ‘ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ’ ಮತ್ತು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ದಿನದಂದು ನಾಡಿನ ಜನತೆ ಮುಂದೆ ‘ಈ ಒಗ್ಗಟ್ಟು ಮುರಿಯುವುದಿಲ್ಲ’ವೆಂಬ ಭರವಸೆಯನ್ನು ದಲಿತ ನಾಯಕರು ನೀಡಬೇಕಿದೆ.

ಬಹುಮುಖ್ಯವಾಗಿ ಇಂದು ಜೊತೆಯಾಗಿರುವ 12 ಬಣಗಳ ಸಂಖ್ಯೆ ಮತ್ತಷ್ಟು ಹೆಚ್ಚಬೇಕಿದೆ. ಕರ್ನಾಟಕಕ್ಕೆಲ್ಲಾ ಒಂದೇ ‘ದಲಿತ ಸಂಘರ್ಷ ಸಮಿತಿ’ ಎಂಬ ಕನಸು ನನಸಾಗಬೇಕಿದೆ. ಮಹಿಳೆಯರನ್ನು ಒಳಗೊಳ್ಳುವ, ಒಳಮೀಸಲಾತಿಯನ್ನು ಮುಂದು ಮಾಡಿಕೊಂಡು ಒಳರಾಜಕಾರಣ ಮಾಡುತ್ತಿರುವ ದಲಿತ ವಿರೋಧಿ ರಾಜಕೀಯ ಪಕ್ಷಗಳಿಗೆ ‘ಒಳಮೀಸಲಾತಿ ಜಾರಿಯಾಗಲೇಬೇಕು. ಇಲ್ಲವಾದರೆ..’ ಎಂಬ ಖಡಕ್ ಎಚ್ಚರಿಕೆಯನ್ನು ನೀಡಬೇಕಿದೆ. ಮತ್ತೆ ‘ಹೊಲೆಮಾದಿಗರ ಹಾಡನ್ನು’ ದಸಂಸ ಒಕ್ಕೊರಲಿನಿಂದ ಹಾಡಬೇಕಿದೆ. ಶೇಷಗಿರಿಯಪ್ಪ ಮತ್ತು ಅನುಸೂಯಮ್ಮಂದಿರೂ ಇತ್ತ ನೋಡುತ್ತಿದ್ದಾರೆ. ಇತರೆ ಎಲ್ಲಾ ಜಾತಿಯ ಬಡವರ ಬವಣೆಗೆ ದಸಂಸ ಸ್ಪಂದಿಸಬೇಕಿದೆ.

ಕೊನೆಯದಾಗಿ, ಈ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶವು ಕೇವಲ ಡಿಸೆಂಬರ್ 6 ಕ್ಕೆ ಮಾತ್ರ ಕೊನೆಗೊಂಡರೆ ಅಥವಾ ಈ ಐಕ್ಯತೆಯು ಚುನಾವಣಾ ಪೂರ್ವ ಜಾಗೃತಿಗೆ ಮಾತ್ರ ಸೀಮಿತಗೊಂಡರೆ ಖಂಡಿತವಾಗಿಯೂ ಇಂದು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ನೊಂದ ಜನತೆ ಶಾಶ್ವತವಾಗಿ ‘ದಲಿತ ಸಂಘರ್ಷ ಸಮಿತಿ’ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಿದ್ದಾರೆ. ಅಪ್ಪಿತಪ್ಪಿ ಇಂತಹ ಬೆಳವಣಿಗೆ ನಡೆದುಬಿಟ್ಟರೆ ಅದಕ್ಕೆ ಮುಖ್ಯ ಕಾರಣ ಇಂದು ಐಕ್ಯಗೊಂಡಿರುವ ದಲಿತ ನಾಯಕರೇ ಆಗುತ್ತಾರೆ.

ದಲಿತ ಸಂಘರ್ಷ ಸಮಿತಿಯ ಲಕ್ಷಾಂತರ ಕೂಸುಗಳಲ್ಲಿ ಒಬ್ಬನಾದ ನನ್ನ ಆಶಯವೂ ಸಹ ಈ ಐಕ್ಯತೆ ಉಳಿಯುತ್ತದೆ ಹಾಗೂ ವಿಸ್ತರಿಸುತ್ತದೆ ಎಂಬುದಾಗಿದೆ. ‘ನಮ್ಮೆದೆಯೊಳಗೆ ಕಾರುಣ್ಯ ಹಾಗೂ ಕ್ರಾಂತಿಯ ದೀಪ ಹಚ್ಚಿದ ನಮ್ಮಂಣ್ಣಂದಿರು ಸ್ವತಃ ಅವರೇ ಕೈಯಾರೆ ಆ ದೀಪಗಳನ್ನು ಆರಿಸುವುದಿಲ್ಲ’ ಎಂಬ ನಂಬಿಕೆ ನಮಗಿದೆ.

ವಿಕಾಸ್ ಆರ್ ಮೌರ್ಯ

ಲೇಖಕರು

Related Articles

ಇತ್ತೀಚಿನ ಸುದ್ದಿಗಳು