ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 19 ಆರೋಪಿಗಳು ದೋಷಿಗಳು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಗಂಭೀರ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರಿಗೆ ಮತ್ತೆ ಜೈಲು ಶಿಕ್ಷೆ ಖಚಿತವಾಗಿದ್ದು, ಅವರ ಶಾಸಕ ಸ್ಥಾನಕ್ಕೂ ಅಪಾಯ ಎದುರಾಗಿದೆ.
ನ್ಯಾಯಾಲಯವು ತೀರ್ಪು ಪ್ರಕಟಿಸುತ್ತಿದ್ದಂತೆಯೇ ವಿನಯ್ ಕುಲಕರ್ಣಿ ಸೇರಿದಂತೆ ದೋಷಿ ಎಂದು ಘೋಷಿಸಲ್ಪಟ್ಟ 19 ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, ಈ ಪೈಕಿ ಎ20 ವಾಸುದೇವ ನಿಲೇಕಣಿ ಮತ್ತು ಎ21 ಸೋಮಶೇಖರ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಳಿಸಲು ಆದೇಶಿಸಿದೆ.
ಉಳಿದಂತೆ ಮಾಫಿ ಸಾಕ್ಷಿಯಾಗಿದ್ದ ಎ1 ಬಸವರಾಜ ಮುತ್ತಗಿ ಮತ್ತು ಪ್ರತಿಕೂಲ ಹೇಳಿಕೆ ನೀಡಿದ್ದ ಎ17 ಶಿವಾನಂದ ಅವರನ್ನು ಹೊರತುಪಡಿಸಿ, ಮುಖ್ಯ ಸಂಚುಕೋರ ಎನ್ನಲಾದ ವಿನಯ್ ಕುಲಕರ್ಣಿ ಸೇರಿದಂತೆ ಇತರರಿಗೆ ಶಿಕ್ಷೆ ಖರಾರಾಗಿದೆ. ಶಿಕ್ಷೆಯ ಪ್ರಮಾಣದ ಕುರಿತು ಗುರುವಾರ (ಏಪ್ರಿಲ್ 16) ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯಲಿದೆ.
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ಇದನ್ನು ಆಸ್ತಿ ವಿವಾದ ಎಂದು ತನಿಖೆ ನಡೆಸಿದ್ದರು. ಆದರೆ, ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಸಿಬಿಐ ತನಿಖೆಯ ವೇಳೆ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬಯಲಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದ ಅವರಿಗೆ ಈಗ ನ್ಯಾಯಾಲಯದ ಈ ತೀರ್ಪು ದೊಡ್ಡ ಆಘಾತ ನೀಡಿದೆ.
ಈ ತೀರ್ಪಿನಿಂದಾಗಿ ವಿನಯ್ ಕುಲಕರ್ಣಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜನಪ್ರತಿನಿಧಿಗಳ ಕಾಯ್ದೆಯ ಅನ್ವಯ, ಗಂಭೀರ ಅಪರಾಧ ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದಲ್ಲಿ ಶಾಸಕ ಸ್ಥಾನ ತಕ್ಷಣವೇ ರದ್ದಾಗುವ ಸಾಧ್ಯತೆಯಿದೆ. ತಾಂತ್ರಿಕ ಕಾರಣಗಳಿಂದಾಗಿ ಏಪ್ರಿಲ್ 9ರಿಂದ ಮುಂದೂಡಲ್ಪಟ್ಟಿದ್ದ ಈ ಬಹುನಿರೀಕ್ಷಿತ ತೀರ್ಪು ಅಂತಿಮವಾಗಿ ಇಂದು ಪ್ರಕಟವಾಗಿದೆ.
