Monday, September 2, 2024

ಸತ್ಯ | ನ್ಯಾಯ |ಧರ್ಮ

ಹರಿಯಾಣ‌ ಚುನಾವಣೆ:‌ ಬಿಜೆಪಿ ಓಟಕ್ಕೆ ಅಡ್ಡಗಾಲಿಡಲಿರುವ ವಿನೇಶ್‌ ಫೋಗಟ್‌ ಎನ್ನುವ ಗೇಮ್‌ ಚೇಂಜರ್

ಇತ್ತ ಮಾನ್ಸೂನ್‌ ಕೊನೆಯ ಚರಣಕ್ಕೆ ಬರುತ್ತಿರುವಂತೆ ಅತ್ತ ಹರಿಯಾಣದಲ್ಲಿ ಚುನಾವಣಾ ಗಾಳಿ ಬೀಸತೊಡಗಿದೆ. ಈ ಬಾರಿಯ ಚುನಾವಣೆ ಹರಿಯಾಣ ಮಟ್ಟಿಗೆ ಹಲವು ಕಾರಣಗಳಿಗಾಗಿ ವಿಶೇಷ. ಹಲವು ಸಂಗತಿಗಳು ಅಧಿಕಾರರೂಢ ಬಿಜೆಪಿಯನ್ನು ವಿಚಲಿತಗೊಳಿಸುತ್ತಿವೆ.

ಈ ಬಾರಿ ಹತ್ತು ಹಲವು ರಾಜಕೀಯ ಹಾಗೂ ರಾಜಕೀಯೇತರ ವಿಷಯಗಳು ಹರಿಯಾಣ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅವುಗಳಲ್ಲಿ ಅಧಿಕಾರ ವಿರೋಧಿ ಅಲೆ, ರೈತ ಹೋರಾಟ, ಕುಸ್ತಿಪಟುಗಳ ಸಮಸ್ಯೆ, ಸರ್ಕಾರಿ ನೌಕರರ ಅಸಮಾಧಾನ, ಜಾಟ್ ಸಮುದಾಯ ಇತ್ಯಾದಿ ಪ್ರಮುಖ ಪಾತ್ರ ವಹಿಸಲಿವೆ.

ಈ ಪ್ರಮುಖ ಸಮಸ್ಯೆಗಳ ನಡುವೆಯೇ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಈ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕಿಳಿಯಬಹುದು ಎಂಬ ಊಹಾಪೋಹಗಳು ರಾಜಕೀಯ ಆಸಕ್ತರ ಗಮನವನ್ನು ಸೆಳೆಯುತ್ತಿದೆ.

ವಿನೇಶ್ ಫೋಗಟ್ ಕುಟುಂಬಕ್ಕೆ ರಾಜಕೀಯ ಹೊಸದಲ್ಲ. ಆ ಕುಟುಂಬ ಬಹಳ ಕಾಲದಿಂದ ರಾಜಕೀಯದಲ್ಲಿ ಸಕ್ರಿಯವಾಗಿದೆ. ವಿನೇಶ್ ಸಹೋದರನ ಪತ್ನಿ ಬಬಿತಾ ಫೋಗಟ್ 2019ರ ವಿಧಾನಸಭಾ ಚುನಾವಣೆಯಲ್ಲಿ ದಾದ್ರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.

ಆದರೆ ಈ ಬಾರಿ ವಿನೇಶ್‌ ಫೋಗಟ್‌ ಬಿಜೆಪಿ ಹಾಗೂ ಬೃಜಭೂಷಣ್‌ ಸಿಂಗ್‌ ವಿರುದ್ಧ ಹೋರಾಟಕ್ಕೆ ಇಳಿದಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಸಂದರ್ಭದಲ್ಲಿ, ಸೋದರಸಂಬಂಧಿಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯವೂ ಹೊರಹೊಮ್ಮಿತು. ಬಬಿತಾ ಮತ್ತು ಆಕೆಯ ಪತಿ ಸೋಷಿಯಲ್ ಮೀಡಿಯಾದಲ್ಲಿ ವಿನೇಶ್ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡಿದ್ದಾರೆ. ಇದರಿಂದಾಗಿ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ.

ಒಂದು ವೇಳೆ ವಿನೇಶ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರೆ ರಾಜ್ಯದಲ್ಲಿ ರಾಜಕೀಯ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬುದು ಕುತೂಹಲಕಾರಿ ಸಂಗತಿ. 2019ರಲ್ಲಿ ಬಬಿತಾ ಸ್ಪರ್ಧಿಸಿದ್ದ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಬಬಿತಾ ವಿರುದ್ಧ ಸ್ಪರ್ಧಿಸಬಹುದು ಎಂದು ಸಂಬಂಧಿತ ಮೂಲಗಳು ಹೇಳುತ್ತವೆ.

ರಾಜ್ಯದಲ್ಲಿ ಕುಸ್ತಿಪಟುಗಳು ಮತ್ತು ವಿರೋಧ ಪಕ್ಷಗಳು ಬ್ರಿಜ್ ಭೂಷಣ್ ವಿಷಯವನ್ನು ಜೀವಂತವಾಗಿಟ್ಟಿವೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಭಾಗವಹಿಸಿದ್ದರು. ಪ್ರತಿಭಟನೆಯ ಸಂಕೇತವಾಗಿ ಬಜರಂಗ್ ಪುನಿಯಾ ಅವರ ಪದ್ಮಶ್ರೀಯನ್ನು ಹಿಂದಿರುಗಿಸಿದರು. ಇದು ಕಳೆದ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಿತ್ತು.

ಪ್ರಸ್ತುತ ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಇದು ಪ್ರಮುಖ ಅಂಶವಾಗಿ ಪರಿಣಮಿಸಲಿದೆ ಎಂಬುದು ರಾಜಕೀಯ ವೀಶ್ಲೇಷಕರ ಅಭಿಪ್ರಾಯ.

ಜಾಟ್ ಮತ್ತು ರೈತ ಸಂಘಗಳ ಪಾತ್ರ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಜಾಟ್ ಸಾಮಾಜಿಕ ವರ್ಗ ಮತ್ತು ರೈತರ ಮತಗಳು ಒಟ್ಟಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ 42 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದು ಹರ್ಯಾಣದ ಜನರು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಪರಿವಾರ ಪೆಹಚಾನ್ ಪತ್ರ ಯೋಜನೆಯಡಿ ಡಿಜಿಟಲೀಕರಣ ಪ್ರಕ್ರಿಯೆಯಿಂದ ವಿಮುಖರಾಗಿರುವ ಗ್ರಾಮದ ಸರಪಂಚ್‌ಗಳು ಮತ್ತು ಸಾಮಾನ್ಯ ರೈತರಲ್ಲಿ ಈ ಅಸಮಾಧಾನ ಗೋಚರಿಸುತ್ತಿದೆ. ಹರಿಯಾಣದಲ್ಲಿ ಬಿಜೆಪಿ ವಿರುದ್ಧ ಬೀಸುತ್ತಿರುವ ಗಾಳಿ ಕೇವಲ ಜಾತಿ ಮತ್ತು ರೈತರಿಗೆ ಸೀಮಿತವಾಗಿಲ್ಲ. ಕುಸ್ತಿಪಟುಗಳು ಮತ್ತು ಸರಪಂಚ್‌ಗಳು ಸಹ ಡಬಲ್ ಎಂಜಿನ್ ಸರ್ಕಾರದ ವಿರುದ್ಧ ಇದ್ದಾರೆ.

2019ರಲ್ಲಿ 10 ಲೋಕಸಭಾ ಸ್ಥಾನಗಳನ್ನು ಹೊಂದಿದ್ದರೂ, ಒಬ್ಬನೇ ಒಬ್ಬ ಜಾಟ್ ನಾಯಕನನ್ನು ಕೇಂದ್ರ ಸರ್ಕಾರಕ್ಕೆ ಸೇರಿಸಿಕೊಂಡಿರಲಿಲ್ಲ. 2014ರಿಂದ ಯಾವುದೇ ಜಾಟ್ ನಾಯಕರೂ ಮುಖ್ಯಮಂತ್ರಿಯಾಗಿಲ್ಲ ಎಂಬ ಆಕ್ರೋಶ ಆ ಗುಂಪಿನಲ್ಲಿದೆ.

ವಿನೇಶ್ ಫೋಗಟ್ ಸಕ್ರಿಯ ರಾಜಕಾರಣಕ್ಕೆ ಬಂದರೆ ಅವರು ಕಾಂಗ್ರೆಸ್ ಸೇರಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಮತ್ತೊಂದೆಡೆ, ಖಾಫ್ ಪಂಚಾಯತ್‌ಗಳು ವಿನೇಶ್‌ಗೆ ಚಿನ್ನದ ಪದಕವನ್ನು ನೀಡಿವೆ. ಈ ಸಂದರ್ಭದಲ್ಲಿ ʼನಾನು ಕಷ್ಟದಲ್ಲಿದ್ದಾಗ ರೈತರು ನನಗೆ ಸಹಾಯ ಮಾಡಿದರು’ ಎಂದು ಅವರು ಹೇಳಿದ್ದರು.

ವಿನೇಶ್ ಅವರನ್ನು ಸೆಳೆಯಲು ಕಾಂಗ್ರೆಸ್ ಕೂಡ ಹೆಜ್ಜೆಇಟ್ಟಿದೆ. ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ ತಕ್ಷಣ, ಕಾಂಗ್ರೆಸ್ ಸಂಸದ ಮತ್ತು ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ ಅವರು ವಿನೇಶ್ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕೆಂದು ಒತ್ತಾಯಿಸಿದರು, ಆದರೆ ಅವರ ವಯಸ್ಸಿನ ಕಾರಣ ಇದು ಸಾಧ್ಯವಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ ವಿನೇಶ್ ಫೋಗಟ್ ಅವರ ರಾಜಕೀಯ ಪ್ರವೇಶವು ಹರಿಯಾಣ ರಾಜಕೀಯದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂಬ ಮಾತು ಕೇಳಿಬರುತ್ತಿದೆ.

ಖಾಫ್ ಪಂಚಾಯತ್‌ಗಳು ಮತ್ತು ರೈತರೊಂದಿಗೆ ಅವರ ಬಲವಾದ ಸಂಬಂಧದಿಂದಾಗಿ, ಅವರು ಚುನಾವಣೆಯಲ್ಲಿ ವ್ಯಾಪಕ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ.

ವಿನೇಶ್ ರಾಜಕೀಯಕ್ಕೆ ಬರುವುದಾಗಿ ಅಧಿಕೃತವಾಗಿ ಘೋಷಿಸದಿದ್ದರೂ, ರಾಜಕೀಯ ವಲಯಗಳು ಅವರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಫೋಗಟ್ ಪಾತ್ರ ಹರಿಯಾಣ ರಾಜಕೀಯದಲ್ಲಿ ಮಹತ್ವದ ತಿರುವು ಪಡೆಯಲಿದೆ.

ಬ್ರಿಜ್‌ಭೂಷಣ ವಿವಾದದ ಪರಿಣಾಮ
ಬ್ರಿಜ್‌ಭೂಷಣ್ ವಿವಾದವು ಹರಿಯಾಣ ರಾಜಕೀಯದಲ್ಲಿ ಆಳವಾಗಿ ಬೇರೂರಿದೆ. ಲೋಕಸಭೆ ಚುನಾವಣೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದರಿಂದ ಇದು ಕಾಂಗ್ರೆಸ್ ತಂತ್ರಗಾರಿಕೆಯ ಭಾಗವಾಯಿತು. ಇದು ಈಗ ವಿಧಾನಸಭಾ ಚುನಾವಣೆಯಲ್ಲಿಯೂ ಪ್ರಮುಖ ವಿಷಯವಾಗುವ ಸಾಧ್ಯತೆಯಿದೆ. ಏಕೆಂದರೆ ಈ ವಿಷಯ ಅಲ್ಲಿ ಇಂದಿಗೂ ಹಾಟ್ ಟಾಪಿಕ್ ಆಗಿಯೇ ಉಳಿದಿದೆ.

ಶಂಭು ಗಡಿಯಲ್ಲಿ ರೈತರ ಚಳವಳಿ ಆರಂಭವಾಗಿ 200 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ವಿನೇಶ್ ಫೋಗಟ್ ರೈತರ ಬಳಿಗೆ ಬಂದು ಒಗ್ಗಟ್ಟು ವ್ಯಕ್ತಪಡಿಸಿದರು. ಜಿಂದ್ ಮತ್ತು ರೋಟಕ್‌ನ ಖಾಫ್ ಪಂಚಾಯತ್ ನಾಯಕರನ್ನು ಭೇಟಿ ಮಾಡಿದರು. ಜಿಂದ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ವಿನೇಶ್, ʼನನ್ನ ಮನಸ್ಸು ಶಾಂತವಾದ ಬಳಿಕ ನಾನು ನಿರ್ಧಾರ ತೆಗದುಕೊಳ್ಳುತ್ತೇನೆ. ರಾಜಕೀಯದ ಕುರಿತು ಮಾತನಾಡಲು ಇದು ಸರಿಯಾದ ಸಮಯವಲ್ಲʼ ಎಂದಿದ್ದರು.

ಈ ನಡುವೆ ವಿನೇಶ್ ಕಾಂಗ್ರೆಸ್‌ನತ್ತ ಒಲವು ತೋರಿದ್ದು, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರೆ ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page