Friday, September 6, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ: ರೈಲ್ವೆ ಇಲಾಖೆಯ ಕೆಲಸಕ್ಕೆ ರಾಜೀನಾಮೆ ನೀಡಿದ ವಿನೇಶ್ ಫೋಗಟ್

ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೇರಲು ಹೊರಟಿರುವ ವಿನೇಶ್‌ ಫೋಗಟ್‌ ತಮ್ಮ ಬದುಕಿನ ಒಂದು ಮುಖ್ಯ ನಿರ್ಧಾರವನ್ನು ಕೈಗೊಂಡಿದ್ದಾರೆ.

ಅವರು ಭಾರತೀಯ ರೈಲ್ವೇಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಎಕ್ಸ್‌ ಪೋಸ್ಟ್‌ ಮೂಲಕ ಬಹಿರಂಗಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಚರ್ಚೆ ನಡೆಯುತ್ತಿದೆ. ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರಿಗೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿದೆ ಎಂಬ ವರದಿಗಳಿವೆ.

ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಕುಸ್ತಿಪಟುಗಳು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸರಣಿ ಸುದ್ದಿಗಳು ಹರಿದಾಡುತ್ತಿವೆ. ‌

ಮಧ್ಯಾಹ್ನ 1:30ಕ್ಕೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಸಮ್ಮುಖದಲ್ಲಿ ಅವರಿಬ್ಬರು ಕಾಂಗ್ರೆಸ್ ಸೇರಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಸುದ್ದಿಯ ಹೊತ್ತಿನಲ್ಲಿ ವಿನೇಶ್ ಪೋಸ್ಟ್ ಹಾಟ್ ಟಾಪಿಕ್ ಅಗಿ ಚರ್ಚಿಸಲ್ಪಡುತ್ತಿದೆ.

ಈ ನಡುವೆ ಈ ಕುಸ್ತಿಪಟುಗಳ ಹೋರಾಟದ ಸಹವರ್ತಿ ಸಾಕ್ಷಿ ಮಲ್ಲಿಕ್‌ ತನ್ನ ಸಹವರ್ತಿಗಳ ರಾಜಕೀಯ ನಡೆಯ ಬಗ್ಗೆ ಸ್ಪಂದಿಸಿದ್ದು, ರಾಜಕೀಯ ಸೇರುವ ಅವರ ನಿರ್ಧಾರ ವೈಯಕ್ತಿಕವಾದ್ದು ಎಂದಿದ್ದಾರೆ.

ಬಜರಂಗ್ ಮತ್ತು ವಿನೇಶ್ ರಾಜಕೀಯ ಪಕ್ಷ ಸೇರುವ ನಿರ್ಧಾರ ಅವರ ವೈಯಕ್ತಿಕ ನಿರ್ಧಾರ ಎಂದು ಖ್ಯಾತ ಕುಸ್ತಿಪಟು ಸಾಕ್ಷಿ ಮಲಿಕ್ ಸ್ಪಷ್ಟಪಡಿಸಿದ್ದಾರೆ. ಮಹಿಳಾ ಕುಸ್ತಿಪಟುಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಕುರಿತು ತಪ್ಪು ಸಂಕೇತಗಳು ಹೋಗಬಾರದು ಎನ್ನುವ ಕಾರಣಕ್ಕೆ ನಾನು ಪ್ರತಿಕ್ರಿಯಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಮಹಿಳಾ ಕುಸ್ತಿಪಟುಗಳ ಪರವಾಗಿ ನಡೆಸುತ್ತಿರುವ ಹೋರಾಟವನ್ನು ತಾನು ಒಂಟಿಯಾಗಿಯಾದರೂ ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page