2024ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತವರಿಗೆ ಮರಳಿದ್ದಾರೆ. ಅವರು ಸ್ವಲ್ಪ ಸಮಯದ ಹಿಂದೆ ರಾಷ್ಟ್ರ ರಾಜಧಾನಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಅಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವು ಕ್ರೀಡಾಪಟುಗಳು ಅವರನ್ನು ಸ್ವಾಗತಿಸಿದರು.
ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ ತಲುಪಿದ್ದರು. ಅಂತಿಮ ಪಂದ್ಯದಲ್ಲಿ, ಅಮೇರಿಕನ್ ಕುಸ್ತಿಪಟು ಸಾರಾ ಹಿಂಡೆಬ್ರಾಂಡ್ ವಿರುದ್ಧ ಅವರು ಹೋರಾಡಬೇಕಿತ್ತು, ಆದರೆ ಪಂದ್ಯ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ಅವರನ್ನು ಅನರ್ಹಗೊಳಿಸಲಾಯಿತು. 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಫೋಗಟ್ ಅವರನ್ನು ಅನರ್ಹಗೊಳಿಸಲಾಯಿತು. ಇದರಿಂದಾಗಿ ಅವರಿಗೆ ಯಾವುದೇ ಪದಕವನ್ನು ಪಡೆಯಲು ಸಾಧ್ಯವಾಗಲಿಲ್ಲ.
ಫೈನಲ್ ಪಂದ್ಯದಲ್ಲಿ ಸೋತರೂ ಅವರಿಗೆ ಬೆಳ್ಳಿ ಪದಕ ಖಚಿತವಾಗಿತ್ತು. ಆದರೆ ಅಧಿಕ ದೇಹದ ತೂಕದಿಂದಾಗಿ ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದೆ ಸರಿಯಬೇಕಾಯಿತು.
ತಮ್ಮ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಕಾನೂನು ಹೋರಾಟ ಆರಂಭಿಸಿದ್ದಾರೆ. ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಅವರ ಪರವಾಗಿ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಿದೆ. ಪ್ರಕರಣವನ್ನು ವಾದಿಸಲು ಹಿರಿಯ ವಕೀಲ, ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಮತ್ತು ಮತ್ತೊಬ್ಬ ವಕೀಲ ವಿದುಷ್ ಪಥ್ ಸಿಂಘಾನಿಯಾ ಅವರನ್ನು ನೇಮಿಸಿದೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ವಿನೇಶ್ ಫೋಗಟ್, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರತಿನಿಧಿಗಳು ವಿಚಾರಣೆಗೆ ಹಾಜರಾಗಿದ್ದರು. ಅವರ ವಾದಗಳನ್ನು ಕ್ರೀಡಾ ಆರ್ಬಿಟ್ರೇಟರ್ ಡಾ ಅನ್ನಾಬೆಲ್ಲೆ ಬೆನೆಟ್ ಆಲಿಸಿದರು. ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಕಾರ್ಯವಿಧಾನಗಳು ಮತ್ತು ನಿಬಂಧನೆಗಳನ್ನು ಅಲ್ಲಿ ಪರಿಶೀಲಿಸಲಾಯಿತು. ನ್ಯಾಯಾಲಯ ಅನರ್ಹತೆಯ ನಿರ್ಧಾರವನ್ನು ಎತ್ತಿ ಹಿಡಿಯಿತು. ನ್ಯಾಯಾಲಯದಲ್ಲಿಯೂ ಅವರಿಗೆ ನ್ಯಾಯ ಸಿಗಲಿಲ್ಲ
ಈ ಸಂದರ್ಭ ವಿನೇಶ್ ಫೋಗಟ್ ಪ್ರತಿಕ್ರಿಯಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ನೋವಿನಿಂದ ಕಣ್ಣೀರು ಸುರಿಸಿದರು. ತಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದುರಾದೃಷ್ಟ ತನ್ನನ್ನು ಹಿಂಬಾಲಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.