Friday, December 19, 2025

ಸತ್ಯ | ನ್ಯಾಯ |ಧರ್ಮ

ಬಾಂಗ್ಲಾ ವಿಪಕ್ಷ ನಾಯಕ ಉಸ್ಮಾನ್ ಹಾದಿ ಹ*ತ್ಯೆ: ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿ*ಸಾಚಾರ

ಢಾಕಾ/ಸಿಂಗಾಪುರ: ಬಾಂಗ್ಲಾದೇಶದ ವಿಪಕ್ಷದ ಯುವ ನಾಯಕ ಉಸ್ಮಾನ್ ಹಾದಿ ಅವರ ಹತ್ಯೆಯ ಬಳಿಕ ದೇಶದಲ್ಲಿ ಮತ್ತೆ ತೀವ್ರ ಹಿಂಸಾಚಾರ ಭುಗಿಲೆದ್ದಿದೆ. ರಾಜಧಾನಿ ಢಾಕಾ ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ವರ್ತಿಸಿ, ಸ್ಟಾರ್ ಹೋಟೆಲ್‌ಗಳು, ಪತ್ರಿಕಾ ಕಚೇರಿಗಳು ಹಾಗೂ ಸರ್ಕಾರಿ–ಖಾಸಗಿ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ವರ್ಷ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನಡೆದ ಹಿಂಸಾತ್ಮಕ ದಂಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರೋಧ ಪಕ್ಷದ ನಾಯಕ ಉಸ್ಮಾನ್ ಹಾದಿ ಅವರು, ಕಳೆದ ವಾರ ಗುಂಡೇಟಿಗೆ ಒಳಗಾಗಿದ್ದರು. ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅವರು, ಚಿಕಿತ್ಸೆಗಾಗಿ ಸಿಂಗಾಪುರದ ಆಸ್ಪತ್ರೆಗೆ ದಾಖಲಾಗಿ, ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಫೆಬ್ರವರಿ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಹಾದಿ ಅವರನ್ನು, ಕಳೆದ ಶುಕ್ರವಾರ ಮಧ್ಯ ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಆರಂಭಿಸುವ ವೇಳೆ ಮುಸುಕುಧಾರಿ ಬಂದೂಕುಧಾರಿಗಳು ತಲೆಗೆ ಗುಂಡು ಹಾರಿಸಿದ್ದರು. ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ, ಮಧ್ಯಂತರ ಸರ್ಕಾರದ ಆದೇಶದಂತೆ ಸೋಮವಾರ ಏರ್ ಆಂಬ್ಯುಲೆನ್ಸ್ ಮೂಲಕ ಸಿಂಗಾಪುರಕ್ಕೆ ಕಳುಹಿಸಲಾಗಿತ್ತು.

ಉಸ್ಮಾನ್ ಹಾದಿ ಅವರ ಮರಣದ ಸುದ್ದಿ ತಿಳಿಯುತ್ತಿದ್ದಂತೆ, ಗುರುವಾರ ತಡರಾತ್ರಿ ದೇಶಾದ್ಯಂತ ಉದ್ವಿಗ್ನತೆ ಹೆಚ್ಚಾಗಿ ಹಿಂಸಾಚಾರ ಆರಂಭವಾಯಿತು. ‘ಇಂಕ್ವಿಲಾಬ್ ಮಂಚ್’ ಸಂಘಟನೆಯ ಕಾರ್ಯಕರ್ತರು ಢಾಕಾ ವಿಶ್ವವಿದ್ಯಾಲಯದ ಸಮೀಪದ ಶಹಬಾಗ್ ಚೌಕದಲ್ಲಿ ಜಮಾಯಿಸಿ,
“ನೀನು ಯಾರು, ನಾನು ಯಾರು – ಹಾದಿ, ಹಾದಿ!” ಎಂಬ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರು ರಾಜಧಾನಿಯ ಕಾರ್ವಾನ್ ಬಜಾರ್ ಬಳಿಯ ಶಹಬಾಗ್ ಚೌಕದ ಸಮೀಪದಲ್ಲಿರುವ ಪ್ರೋಥೋಮ್ ಅಲೋ ಪತ್ರಿಕೆಯ ಕಚೇರಿಯ ಮೇಲೆ ದಾಳಿ ನಡೆಸಿ, ಹಲವಾರು ಮಹಡಿಗಳನ್ನು ಧ್ವಂಸಗೊಳಿಸಿದರು. ಪತ್ರಕರ್ತರು ಹಾಗೂ ಸಿಬ್ಬಂದಿಯನ್ನು ಕಟ್ಟಡದೊಳಗೆ ಸಿಲುಕಿಸಲಾಯಿತು. ಗುಂಪು ಕಟ್ಟಡದ ಮುಂಭಾಗಕ್ಕೆ ಬೆಂಕಿ ಹಚ್ಚಿದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ರಾತ್ರಿ 11 ಗಂಟೆ ಸುಮಾರಿಗೆ ನೂರಾರು ಪ್ರತಿಭಟನಾಕಾರರು ಕಚೇರಿಯನ್ನು ಸುತ್ತುವರೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದೇ ವೇಳೆ ಢಾಕಾದಲ್ಲಿರುವ ಡೈಲಿ ಸ್ಟಾರ್ ಪತ್ರಿಕೆಯ ಕಟ್ಟಡದ ಮೇಲೂ ದಾಳಿ ನಡೆದಿದೆ.

ಇದೇ ಸಂದರ್ಭದಲ್ಲಿಒಬ್ಬ ವ್ಯಕ್ತಿಯನ್ನು ಹೊಡೆದು ಕೊಂದು ಬಳಿಕ ಬೆಂಕಿ ಹಚ್ಚಲಾಗಿದೆ ಎಂಬ ವರದಿಗಳೂ ಹೊರಬಂದಿವೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ.

ಈ ನಡುವೆ, ಗುರುವಾರ ತಡರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, ಉಸ್ಮಾನ್ ಹಾದಿ ಅವರ ಸಾವನ್ನು ಅಧಿಕೃತವಾಗಿ ದೃಢಪಡಿಸಿ, ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ದೇಶದ ಹಲವು ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಮುಂದುವರಿದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page