ಕಾಂಗ್ರೆಸ್‌ಗೆ ಹೊರಗಿನ ಆರ್‌ಎಸ್‌ಎಸ್‌ಗಿಂತ ಪಕ್ಷದೊಳಗಿನ ‘ಸಂಘಿ’ ಮನೋಭಾವವೇ ಹೆಚ್ಚು ಅಪಾಯಕಾರಿ: ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಬಲ್ಲ ಪೋಸ್ಟರ್‌ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ವೈಚಾರಿಕ ಸಂಘರ್ಷವನ್ನು ಬಹಿರಂಗಪಡಿಸುವಂತಹ ಬರಹ ಒಳಗೊಂಡಿರುವ ಈ ಪೋಸ್ಟರ್ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟರ್‌ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರಗಳನ್ನು ಬಳಸಲಾಗಿದ್ದು, ಪಕ್ಷದೊಳಗಿನ ಕೆಲವು ನಾಯಕರ ಧೋರಣೆಯ ವಿರುದ್ಧ ನೇರ ವಾಗ್ದಾಳಿ ನಡೆಸಲಾಗಿದೆ.

ಪೋಸ್ಟರ್‌ನಲ್ಲಿ ಏನಿದೆ?

ವೈರಲ್ ಆಗಿರುವ ಪೋಸ್ಟರ್‌ನ ಮುಂಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ, “ಕಾಂಗ್ರೆಸ್‌ಗೆ ಹೊರಗಿನ ಆರ್‌ಎಸ್‌ಎಸ್ ಗಿಂತ ಪಕ್ಷದೊಳಗಿನ ಸಂಘಿ ಮನೋಭಾವವೇ ಹೆಚ್ಚು ಅಪಾಯಕಾರಿ” ಎಂದು ಬರೆಯಲಾಗಿದೆ. ಅದರ ಕೆಳಗೆ, “ಅದನ್ನು ಮೊದಲು ಬಿ. ಕೆ. ಹರಿಪ್ರಸಾದ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಬೇಕು” ಎಂದು ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, ಪೋಸ್ಟರ್‌ನ ಕೆಳಭಾಗದ ಪಟ್ಟಿಯಲ್ಲಿ ಎಚ್ಚರಿಕೆಯ ಸಂಕೇತದೊಂದಿಗೆ , “ಪಕ್ಷವನ್ನು ದುರ್ಬಲಗೊಳಿಸುವವರು ಹೊರಗಿನವರು ಮಾತ್ರವಲ್ಲ, ಒಳಗಿನ ಸಂಘಿ ಮನೋಭಾವವೇ ಅಪಾಯದ ಪ್ರಮಾದ!” ಎಂಬ ಅತ್ಯಂತ ಗಂಭೀರವಾದ ಸಾಲುಗಳನ್ನು ಬರೆಯಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಹಿಂದುತ್ವ ಹಾಗೂ ಆರ್‌ಎಸ್‌ಎಸ್ ಸಿದ್ದಾಂತಗಳನ್ನು ಕಟುವಾಗಿ ಟೀಕಿಸುವ ಪ್ರಮುಖ ನಾಯಕರಾದ ಬಿ.ಕೆ. ಹರಿಪ್ರಸಾದ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಹೆಸರನ್ನೇ ಬಳಸಿ ಈ ಪೋಸ್ಟರ್ ರೂಪಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪಕ್ಷದ ಅಧಿಕೃತ ಲಾಂಛನವನ್ನು ಹೊಂದಿರುವ ಈ ಪೋಸ್ಟರ್ ಅನ್ನು ಯಾರು ಸೃಷ್ಟಿಸಿದ್ದಾರೆ ಮತ್ತು ಇದರ ಹಿಂದಿರುವ ಮೂಲ ಉದ್ದೇಶವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಇದು ಕಾಂಗ್ರೆಸ್ ಪಾಳೆಯದಲ್ಲಿ ಆಂತರಿಕ ಅಸಮಾಧಾನ ಹೊಗೆಯಾಡುತ್ತಿರುವುದಕ್ಕೆ ಸಾಕ್ಷಿ ಎಂಬ ಚರ್ಚೆಗಳು ಆರಂಭವಾಗಿವೆ.

ವಿಶೇಷವಾಗಿ ಪಕ್ಷದ ಸಿದ್ದಾಂತಕ್ಕೆ ಬದ್ಧವಾಗಿರದ ಅಥವಾ ಮೃದು ಹಿಂದುತ್ವ ಧೋರಣೆ ಹೊಂದಿರುವ ಸ್ವಪಕ್ಷೀಯ ನಾಯಕರನ್ನು ಗುರಿಯಾಗಿಸಿಕೊಂಡು ಈ ಪೋಸ್ಟರ್ ಬಿಡುಗಡೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು