ಕೋಲಾರ: ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಕೋಲಾರದ ಮಹಿಳಾ ಸರ್ಕಾರಿ ಕಾಲೇಜಿನ ಭೌತವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್ ಸಿ ಮಂಜುನಾಥ್ ಅವರು ಸತತ ಮೂರನೇ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ. ನ್ಯೂಕ್ಲಿಯರ್ ಮತ್ತು ಪಾರ್ಟಿಕಲ್ ಭೌತ ವಿಜ್ಞಾನ ಸಂಶೋಧನೆಯಲ್ಲಿ ವಿಶ್ವಮಟ್ಟದಲ್ಲಿ 714, ದಕ್ಷಿಣ ಭಾರತದಲ್ಲಿ ಮೊದಲನೆ ರ್‍ಯಾಂಕ್ ಪಡೆದಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಲಕ್ಷ್ಮೀ, ʼಡಾ. ಎಚ್ ಸಿ ಮಂಜುನಾಥ್ ಅವರು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಅರ್ಥವಾಗುವ ಭಾಷೆಯಲ್ಲಿ ನಮಗೆ ಹೇಳಿಕೊಡುತ್ತಾರೆ.ಇದರಿಂದ ಹೆಚ್ಚಿನ ಕಾಲ ನೆನಪಿರುತ್ತೆ. ಆದ್ದರಿಂದ ನನಗೆ ಫಿಸಿಕ್ಸ್ ಕಷ್ಟ ಅನಿಸುವುದಿಲ್ಲ. ಜೊತೆಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಕಾರಿಯಾಗಿದೆ. ನಾನು ಈ ಸರ್ ಅವರ ಸ್ಟೂಡೆಂಟ್ ಆಗಿರುವುದು ಬಹಳ ಹೆಮ್ಮೆ ಅನಿಸುತ್ತದೆʼ ಎಂದು ಹೇಳಿದ್ದಾರೆ.
ಸಂಶೋಧನಾ ವಿದ್ಯಾರ್ಥಿ ದಾಮೋದರ್, ಡಾ. ಎಚ್ ಸಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಿಎಚ್‌ಡಿ ಮಾಡುತ್ತಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೆಮಿನಾರ್‌ಗಳಲ್ಲಿ ಪಾಲ್ಗೊಳ್ಳಲು ಅವರು ಪ್ರೋತ್ಸಹ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಕೋಲಾರದ ಮಹಿಳಾ ಸರ್ಕಾರಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್ ಸಿ ಮಂಜುನಾಥ್ ಅವರು, ʼಭೌತಶಾಸ್ತ್ರದ ಸಂಶೋಧನೆ ಕುರಿತು ಈ ವರೆಗೆ ಒಟ್ಟು 280 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲೇಖನಗಳನ್ನು ಪ್ರಕಟಿಸಿದ್ದೇವೆ. ಇದರಲ್ಲಿ ಐ ಮತ್ತು ಹೆಚ್ ಇಂಡೆಕ್ಸ್ ಪರಿಗಣಿಸಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಈ ಪಟ್ಟಿಯನ್ನು ಪ್ರಕಟಿಸಿದೆ. ಕಳೆದ ವರ್ಷ 514ನೇ ಸ್ಥಾನ ಪಡೆದುಕೊಂಡಿದ್ದೆ.ಈ ಬಾರಿ ಪ್ರಕಟಗೊಂಡ ಉನ್ನತ ವಿಜ್ಞಾನಿಗಳ ಪಟ್ಟಿಗಳಲ್ಲಿ ನನ್ನ ಹೆಸರು 13 ನೇ ಸ್ಥಾನ ಮತ್ತು ವಿಶ್ವಮಟ್ಟದಲ್ಲಿ 714 ನೇ ಸ್ಥಾನ ಪಡೆದುಕೊಂಡಿದೆʼ ಎಂದು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.