Saturday, June 22, 2024

ಸತ್ಯ | ನ್ಯಾಯ |ಧರ್ಮ

ಬೈಡನ್ ಇಟ್ಟ ಬಗನಿಗೂಟ: ಬಯಲಾಯ್ತು ವಿಶ್ವಗುರುವಿನ ಆಟ

ಎರಡು ದಿನಗಳ ಆತಿಥ್ಯ ಅನುಭವಿಸಿ ಹೋದ ದೊಡ್ಡಣ್ಣ ಅಮೇರಿಕದ ಅಧ್ಯಕ್ಷ ಜೋ ಬೈಡನ್ ಮೋದಿಯವರ ಭ್ರಮಾಲೋಕಕ್ಕೆ ಬಗನಿಗೂಟ ಬಡಿದಿದ್ದರು. ಅದೂ ಅಮೇರಿಕಕ್ಕೆ ಹೋಗಿ ತಲುಪುವ ಮುನ್ನ ವಿಯಟ್ನಾಂ ದೇಶದ ಸುದ್ದಿಗಾರರನ್ನುದ್ದೇಶಿಸಿ ಮಾತಾಡಿದ ಬೈಡನ್ “ಮಾನವ ಹಕ್ಕುಗಳು ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ಕೊಡಬೇಕು ಅಂತಾ ಮೋದಿ ಅವರ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಒತ್ತುಕೊಟ್ಟು ಹೇಳಿದ್ದೇನೆ” ಎಂದು ಹೇಳುವ ಮೂಲಕ ವಿಶ್ವದ ಮುಂದೆ ವಿಶ್ವಗುರುವಿನ ಅಸಲಿ ಮುಖವಾಡವನ್ನು ಕಳಚಿ ಹಾಕಿದರು ಶಶಿಕಾಂತ ಯಡಹಳ್ಳಿ, ಲೇಖಕರು

ಅಂತೂ ಇಂತೂ  ಭಾರತದ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ 18ನೇ ಜಿ20 ಶೃಂಗಸಭೆ  ಸಾಂಗವಾಗಿ ಮುಗೀತು. ಹೊಸದಿಲ್ಲಿ ನವವಧುವಿನಂತೆ ಕಂಗೊಳಿಸಿತ್ತು. ಎರಡು ಬೃಹತ್ ದೇಶಗಳ ಅಧ್ಯಕ್ಷರ ಅನುಪಸ್ಥಿತಿಯಲ್ಲೂ ಅಂದುಕೊಂಡಂತೆ ದಿಲ್ಲಿ ಘೋಷಣೆಗಳನ್ನು ಮಾಡಲಾಯಿತು.

ಇದಕ್ಕಾಗಿ ಈ ದೇಶದ ಜನರ ಅಪಾರ ತೆರಿಗೆ ಹಣ ಬಳಸಿ ಭವ್ಯವಾದ ಭಾರತ ಮಂಟಪ ಕಟ್ಟಿಸಿದ್ದೂ ಆಯ್ತು. ಒಂದೇ ಮಳೆಗೆ ಈ ಕಟ್ಟಡ ಸೋರಿದ್ದೂ ದಾಖಲಾಯ್ತು. ವಿದೇಶಿ ಗಣ್ಯರು ಬಂದಾಗ ಮರ್ಯಾದೆ ಹೋದೀತೆಂದು ದೆಹಲಿಯ ಕೊಳಗೇರಿಗಳಿಗೆ ಪರದೆ ಹಾಕಿ ಮಾನವನ್ನು ಕಾಪಾಡಲಾಯ್ತು. ಒಂದೇ ಒಂದು ನಾಯಿ ಕೋತಿಯನ್ನೂ ಬಿಡದೇ ಹಿಡಿದು ದೂರ ಸಾಗಿಸಲಾಯ್ತು. ಬಂದ ಅತಿಥಿಗಳಿಗೆ ಐಶಾರಾಮಿ ಆತಿಥ್ಯ ಕೊಟ್ಟು ಚಿನ್ನ ಲೇಪಿತ ತಟ್ಟೆಯಲ್ಲಿ ಭಾರೀ ಭೋಜನ ಬಡಿಸಿ ಸಂತಸ ಪಡಿಸಲಾಯ್ತು. ಭಾರತ ಮಂಟಪವನ್ನು ಕಾಲ್ಪನಿಕ ಇಂದ್ರನ ಒಡ್ಡೋಲಗವನ್ನೂ ಮೀರಿಸುವಂತೆ ಅಲಂಕರಿಸಲಾಗಿತ್ತು.

ನಭೂತೋ ನಭವಿಷ್ಯತಿ ಎನ್ನುವಂತೆ ಈ ಶೃಂಗಸಭೆ ನಡೆದಿದೆ ಎಂದು ನಂಬಿದ ಮೋದಿ ಅಭಿಮಾನಿಗಳು ಇದೆಲ್ಲಾ ಸಾಧ್ಯವಾಗಿದ್ದು ವಿಶ್ವಗುರು ಅವರಿಂದ ಎಂದು ಕೊಂಡಾಡಿದ್ದೂ ಆಯ್ತು, ಸಂಘ ಪರಿವಾರದವರು ಉಘೆ ಉಘೇ ಅಂದಿದ್ದೂ ಆಯ್ತು. ಗೋದಿ ಮಾಧ್ಯಮಗಳು ಇನ್ನಷ್ಟು ಒಗ್ಗರಣೆ ಹಾಕಿ ಪ್ರಚಾರ ಕೊಟ್ಟಿದ್ದೂ ಆಯ್ತು.  ಭಾರತವನ್ನೂ ಹಿಂದಿಕ್ಕಿ ಸಂಭ್ರಮಿಸಿದ ಮೋದಿಯವರ ವ್ಯಕ್ತಿ ವೈಭವೀಕರಣವನ್ನು ವಿರೋಧಿಗಳು ಟೀಕಿಸಿದ್ದೂ ಆಯ್ತು.

ಎರಡು ದಿನಗಳ ಸಂತೆ, 48 ಗಂಟೆಗಳ ಹೈಫೈ ಜಾತ್ರೆ ಮುಗಿದಾದ ಮೇಲೆ ಇನ್ನೇನಿದೆ. ಎಲ್ಲವೂ ಸುಖಾಂತ್ಯ ಎಂದುಕೊಳ್ಳುತ್ತಿದ್ದಂತೆ ಅಸಲಿ ವಿಷಯವೊಂದು ಮೋದಿ ಭಕ್ತರಿಗೆ ಭರಸಿಡಿಲಿನಂತೆ ಬಡಿಯಿತು. ಎರಡು ದಿನಗಳ ಆತಿಥ್ಯ ಅನುಭವಿಸಿ ಹೋದ ದೊಡ್ಡಣ್ಣ ಅಮೇರಿಕದ ಅಧ್ಯಕ್ಷ ಜೋ ಬೈಡನ್ ಮೋದಿಯವರ ಭ್ರಮಾಲೋಕಕ್ಕೆ ಭಗನಿಗೂಟ ಬಡಿದಿದ್ದರು. ವಿಶ್ವಗುರುವಿನ ಹುಸಿ ವರ್ಚಸ್ಸಿನ ಬಲೂನಿಗೆ ಮಾತಿನ ಸೂಜಿ ಚುಚ್ಚಿದರು. ಅದೂ ಅಮೇರಿಕಕ್ಕೆ ಹೋಗಿ ತಲುಪುವ ಮುನ್ನ ವಿಯಟ್ನಾಂ ದೇಶದ ಸುದ್ದಿಗಾರರನ್ನುದ್ದೇಶಿಸಿ ಮಾತಾಡಿದ ಬೈಡನ್ “ಮಾನವ ಹಕ್ಕುಗಳು ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ಕೊಡಬೇಕು ಅಂತಾ ಮೋದಿ ಅವರ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಒತ್ತುಕೊಟ್ಟು ಹೇಳಿದ್ದೇನೆ” ಎಂದು ಹೇಳುವ ಮೂಲಕ ವಿಶ್ವದ ಮುಂದೆ ವಿಶ್ವಗುರುವಿನ ಅಸಲಿ ಮುಖವಾಡವನ್ನು ಕಳಚಿ ಹಾಕಿದರು.

‘ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಮಹತ್ವದ ಕುರಿತೂ ಒತ್ತಿ ಹೇಳಿದ್ದೇನೆ ಹಾಗೂ ನಾನೂ ಕೂಡಾ ಈ ಎರಡೂ ವಿಷಯಗಳನ್ನು ಗೌರವಿಸುತ್ತೇನೆ” ಎಂದ ದೊಡ್ಡಣ್ಣ ಈ ಮೋದಿ ತಮ್ಮನಿಗೆ ಕಿವಿಹಿಂಡಿ ಬುದ್ದಿ ಹೇಳಿದಂತೆ ಭಾಸವಾಯ್ತು. 

ಕೊಳಗೇರಿ ಮುಚ್ಚಿಡಬಹುದು, ನಾಯಿ ಮಂಗಗಳ ಬಚ್ಚಿಡಬಹುದು ಆದರೆ ಅವ್ಯಾಹತವಾಗಿ ಕಳೆದ ಒಂಬತ್ತು ವರ್ಷಗಳಿಂದ ಈ ದೇಶದಲ್ಲಿ ದೇವರು ಧರ್ಮ ರಾಷ್ಟ್ರೀಯವಾದ ಹಾಗೂ ಹಿಂದುತ್ವದ ಹೆಸರಲ್ಲಿ ನಡೆದುಕೊಂಡು ಬಂದ ಮಾನವ ಹಕ್ಕುಗಳ ದಮನವನ್ನು ಹೇಗೆ ಮುಚ್ಚಿಡಲು ಸಾಧ್ಯ? ವಿರೋಧಿಸಿ ಬರೆದರೆಂಬ ಕಾರಣಕ್ಕೆ ಸುಳ್ಳು ಕೇಸು ಹಾಕಿ ಪತ್ರಕರ್ತರನ್ನು ಜೈಲಿಗಟ್ಟಿದ ಪ್ರಕರಣಗಳನ್ನು ಬಚ್ಚಿಡಲು ಹೇಗೆ ಸಾಧ್ಯ? ಹಿಂದಿನದ್ದು ಬಿಡಿ ಮೊನ್ನೆ ಮೊನ್ನೆ ಮಣಿಪುರದ ಹತ್ಯಾಕಾಂಡಗಳ ಕುರಿತ ಸುಳ್ಳು ಪತ್ರಿಕಾ ವರದಿಗಳ ಸತ್ಯಾಸತ್ಯತೆಯನ್ನು ಬಯಲು ಮಾಡಿದ ಭಾರತದ ಎಡಿಟರ್ಸ್ ಗಿಲ್ಡ್ ನ ಅಧ್ಯಕ್ಷ ಹಾಗೂ ಸದಸ್ಯರ ಮೇಲೆ ಸುಳ್ಳು ಕೇಸು ದಾಖಲಿಸಿ ಬಂಧಿಸಲು ಬಯಸಿದ ಮೋದಿ ಸರಕಾರದ ಮಾಧ್ಯಮ ದಮನವನ್ನು ಮರೆಯಲು ಹೇಗೆ ಸಾಧ್ಯ?. ಭೀಮಾ ಕೋರೆಗಾಂವ್ ವಾರ್ಷಿಕೋತ್ಸವದ ಗಲಾಟೆ ಪ್ರಕರಣದಲ್ಲಿ ಬಂಧಿಸಲಾದ ಹೋರಾಟಗಾರರ ಮೇಲಿನ ದಬ್ಬಾಳಿಕೆಯನ್ನು ಹೇಗೆ ನಿರ್ಲಕ್ಷಿಸಲು ಸಾಧ್ಯ?. ಮಣಿಪುರದ ಜನಾಂಗೀಯ ಹತ್ಯೆಗಳು, ಅತ್ಯಾಚಾರಗಳು ಹಾಗೂ ಪ್ರಭುತ್ವ ಪ್ರಾಯೋಜಿತ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮರೆಮಾಚಲು ಹೇಗೆ ಸಾಧ್ಯ? ಮೋದಿ ಸರಕಾರ ಮಾಡುತ್ತಲೇ ಬಂದಿರುವ ರೈತರ ಮೇಲಿನ ದಮನ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ದಲಿತರ ಮೇಲಿನ ಶೋಷಣೆಗಳನ್ನು ಯಾರು ತಾನೇ ಸಹಿಸಲು ಸಾಧ್ಯ? ಇದೆಲ್ಲದಕ್ಕೂ ಮೋದಿಯವರ ಮೌನವೇ ಸ್ಪೂರ್ತಿ ಯಾಗಿರುವಾಗ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಹರಣಗಳಿಗೆ ಮೋದಿಯವರೇ ನೇರ ಹೊಣೆಗಾರರಲ್ಲವೇ? ಅದನ್ನೇ ಜೋ ಬೈಡನ್ ಮೋದಿಯವರ ಜೊತೆಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದಾರೆ. ವಿಯಟ್ನಾಂನಲ್ಲಿಯೂ ಪ್ರಶ್ನಿಸಿದ್ದಾರೆ. 

“ನಮ್ಮ ದೇಶದ ಆಂತರಿಕ ವಿಷಯದಲ್ಲಿ ಬೇರೆಯವರು ಮೂಗುತೂರಿಸುವುದನ್ನು ಭಾರತ ಸಹಿಸುವುದಿಲ್ಲ” ಎನ್ನುವ ಮಾಮೂಲು ಹೇಳಿಕೆ ಮೋದಿ ಸರಕಾರದ ಸಚಿವರಿಂದ ಬರುತ್ತದೆ. “ನಮ್ಮ ವಿಶ್ವಗುರುವಿಗೆ ಬುದ್ಧಿ ಹೇಳಲು ಬೈಡನ್ ಯಾರು?” ಎನ್ನುವ ಪ್ರಶ್ನೆಯನ್ನೂ ಸಂಘ ಪರಿವಾರಿಗರು ತಮ್ಮ ಆರಾಧ್ಯ ದೈವದ ಸಮರ್ಥನೆಗೆ ಬಳಸಿಕೊಳ್ಳುತ್ತಾರೆ.

ಆದರೆ.. ಸತ್ಯ ಪಳಪಳ ಅಂತಾ ಪ್ರತಿಫಲಿಸುತ್ತಿದೆಯಲ್ಲಾ? ಬಿಕರಿಯಾಗದ  ಮಾಧ್ಯಮಗಳ ಮೇಲೆ ಪ್ರಭುತ್ವದ ದಮನ ಹೆಚ್ಚಾಗುತ್ತಲೇ ಇದೆಯಲ್ಲಾ. ಸತ್ಯವನ್ನು ಸಾರಿದ ಪತ್ರಕರ್ತರ ಧ್ವನಿ ಅಡಗಿಸುವ ಪ್ರಯತ್ನ ನಿರಂತರವಾಗಿದೆಯಲ್ಲಾ? ರೈತರು ಕಾರ್ಮಿಕರು ಮಹಿಳೆಯರು ಹಾಗೂ ದಲಿತರ  ಮಾನವ ಹಕ್ಕುಗಳ ಮೇಲೆ ಆಕ್ರಮಣ ಹೆಚ್ಚುತ್ತಲೇ ಇದೆಯಲ್ಲಾ? ಇವೆಲ್ಲಾ ಮುಚ್ಚಿಡಬಹುದಾದ ಕೊಳಗೇರಿಗಳಲ್ಲಾ. ಇಡೀ ಜಗತ್ತಿಗೆ ಗೊತ್ತಿರುವ ಸುಡು ಸತ್ಯ. 

ಬೈಡನ್ ಹೇಳಿದ್ದನ್ನೇ ಈ ಹಿಂದೆ ಕೂಡಾ ಅನೇಕ ವಿದೇಶಿ ಮಾಧ್ಯಮಗಳ ಅಧ್ಯಯನ ವರದಿ ಮಾಡಿವೆ. ವಿದೇಶಿ ಎಡಿಟರ್ಸ್ ಗಿಲ್ಡ್ ನವರು ಆತಂಕ ವ್ಯಕ್ತ ಪಡಿಸಿದ್ದಾರೆ. ಬೇರೆ ದೇಶಗಳ ಸಂಸದರೂ ಬೇಸರಿಸಿಕೊಂಡಿದ್ದಾರೆ. ಆದರೆ ಇವೆಲ್ಲವುಗಳನ್ನೂ ಸುಳ್ಳು ಸುದ್ದಿಗಳು ಎಂದು ತಳ್ಳಿ ಹಾಕಿದ ಮೋದಿ ಪಡೆ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಜನರಿಂದ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಲೇ ಬಂದಿವೆ. ಪ್ರಭುತ್ವದ ಅಡಿಯಾಳಾಗಿರುವ ಗೋದಿ ಮಾಧ್ಯಮಗಳಂತೂ ಸತ್ಯ ಸಂಗತಿಗಳನ್ನು ಮರೆಮಾಚಲು ಅತಿರಂಜಿತ ಸುಳ್ಳುಗಳ ಪ್ರಸಾರದ ಮೂಲಕ ತಮ್ಮ ವೃತ್ತಿಪರತೆಯನ್ನು ಮಾರಿಕೊಂಡಿವೆ. ಈಗ ಈ ಬೈಡನ್ ರವರು ವಿಶ್ವಗುರುವಿನ ಮುಖವಾಡ ಬಿಚ್ಚಿಟ್ಟರೂ ಯಾವ ಗೋದಿ ಮಾಧ್ಯಮಗಳೂ ಆ ಬಗ್ಗೆ ಚರ್ಚಿಸುತ್ತಿಲ್ಲ, ಬೈಡನ್ ಮಾತುಗಳಿಗೆ ಪ್ರಚಾರ ಕೊಡುತ್ತಿಲ್ಲ, ಬೈಡನ್ ಎತ್ತಿದ ಪ್ರಶ್ನೆಗಳನ್ನು ಮಾಧ್ಯಮದ ಮೂಲಕ ಕೇಳುತ್ತಿಲ್ಲ. ಹಾಗೂ ಮಾರಿಕೊಂಡ ಮಾಧ್ಯಮಗಳಿಂದ ಇವು ಅಪೇಕ್ಷಣೀಯವೂ ಅಲ್ಲ.

ಆದರೆ ಈ ಅಮೇರಿಕದ ದೊಡ್ಡಣ್ಣನಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಈಗ ಭಾರತದಲ್ಲಿ ಇರುವುದು ಪ್ರಜಾಪ್ರಭುತ್ವವಲ್ಲ. ಆ ಹೆಸರಿನಲ್ಲಿರುವುದು ಸರ್ವಾಧಿಕಾರಿ ಪ್ರಭುತ್ವ. ಯಾವೊಬ್ಬ ಮಂತ್ರಿಗಳಿಗೂ ಮೋದಿಯವರನ್ನು ಪ್ರಶ್ನಿಸುವ ಧೈರ್ಯವಿಲ್ಲದೇ ಇರುವಾಗ, ಹಾಗೊಮ್ಮೆ ಪ್ರಶ್ನಿಸಿದರೆ ಪ್ರಶ್ನಿಸಿದವರ ಅಸ್ತಿತ್ವವೇ ಅಪ್ರಸ್ತುತವಾಗುವ ಭಯವಿದ್ದಾಗ ಅದಕ್ಕೆ ಸರ್ವಾಧಿಕಾರವೇ ಕಾರಣ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಇನ್ನೂ ಇಂಡಿಯಾದಲ್ಲಿ ಡೆಮಾಕ್ರಸಿ ಇದೆ ಎಂದು ನಂಬಿಕೊಂಡಿರುವ ಬೈಡನ್ ಮಾನವ ಹಕ್ಕು ಹಾಗೂ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತಾಡಿದ್ದಾರೆ. ಆದರೆ ಪ್ರಜಾತಂತ್ರದ ಈ ಮೌಲ್ಯಗಳಿಗೂ ಹಾಗೂ ಸರ್ವಾಧಿಕಾರಕ್ಕೂ ಆಗಿ ಬರುವುದಿಲ್ಲ. ಮಾನವ ಹಕ್ಕುಗಳ ದಮನ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಹರಣದ ಮೇಲೆಯೇ ಡಿಕ್ಟೇಟರ್‌ಶಿಪ್ ಸ್ಥಾಪನೆಯಾಗುವುದು. ಅದೇ ಪ್ರೋಸೆಸ್ ನಲ್ಲಿ ಭಾರತದ ಹಾಲಿ ಪ್ರಭುತ್ವ ಕಾರ್ಯನಿರತವಾಗಿದೆ. ಹಕ್ಕು ಮತ್ತು ಸ್ವಾತಂತ್ರ್ಯದ ಮೇಲಿನ ನಿಯಂತ್ರಣ ನಿರಂತರವಾಗಿದೆ. ಬೈಡನ್ ಹೇಳಿದ ಬುದ್ಧಿ ಮಾತಿಗೆ ಕವಡೆ ಕಾಸಿನ ಬೆಲೆಯೂ ಇಲ್ಲವಾಗಿದೆ.

ಹಾಗಾದರೆ ಪ್ರಭುತ್ವ ಪ್ರಾಯೋಜಿತ ಮಾನವ ಹಕ್ಕುಗಳ ಮೇಲಿನ ದಬ್ಬಾಳಿಕೆಗೆ ಕೊನೆ ಎಂದು? ಪ್ರಭುತ್ವವನ್ನು ಪ್ರಶ್ನಿಸಿದ ಪತ್ರಕರ್ತರ ಮೇಲಿನ ದಮನವನ್ನು ತಡೆದು ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವವರು ಯಾರು? ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಾ ಏಕಾಧಿಪತ್ಯದತ್ತ ದಾಪುಗಾಲಿಡುತ್ತಿರುವ ಸರ್ವಾಧಿಕಾರದ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವವರು ಯಾರು?  ಭ್ರಮಾತ್ಮಕ ಭಾವತೀವ್ರತೆಯಲ್ಲಿ ಮುಳುಗಿರುವ ಜನರನ್ನು ಎಚ್ಚರಿಸಿ ವಾಸ್ತವದ ಅರಿವನ್ನು ಮಾಡಿಕೊಡುವವರು ಯಾರು? ಇದಕ್ಕೆ ಕಾಲವೇ ಉತ್ತರಿಸಬೇಕು, ಉತ್ತರಿಸುತ್ತದೆ. 

ಶಶಿಕಾಂತ ಯಡಹಳ್ಳಿ

ಲೇಖಕರು

ಇದನ್ನೂ ಓದಿ-

ಮುಖವಾಡಗಳನ್ನೆಲ್ಲ ಕಳಚಿ ಹಾಕುತ್ತಿರುವ ಸಾಮಾಜಿಕ ಮಾಧ್ಯಮ

Related Articles

ಇತ್ತೀಚಿನ ಸುದ್ದಿಗಳು