ದೆಹಲಿ: ಇಥಿಯೋಪಿಯಾದ ಎರ್ಟಾ ಅಲೆ ಶ್ರೇಣಿಯಲ್ಲಿರುವ ಹೈಲಿ ಗುಬ್ಬಿ ಜ್ವಾಲಾಮುಖಿಯು ಸುಮಾರು 10,000 ವರ್ಷಗಳ ನಂತರ ಭಾನುವಾರ ಸ್ಫೋಟಗೊಂಡಿದೆ.
ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೂದಿ, ಸಲ್ಫರ್ ಡೈಆಕ್ಸೈಡ್ ಮತ್ತು ಧೂಳಿನಿಂದ ಕೂಡಿದ ಹೊಗೆ ಮೋಡಗಳು ವ್ಯಾಪಕವಾಗಿ ಹರಡುತ್ತಿವೆ. ಈ ಹೊಗೆ ಮೋಡಗಳು 10-15 ಕಿ.ಮೀ. ವರೆಗೆ ಮೇಲಕ್ಕೆ ಏರಿವೆ ಎಂದು ಟೌಲೌಸ್ ಜ್ವಾಲಾಮುಖಿ ಬೂದಿ ಸಲಹಾ ಕೇಂದ್ರವು (Toulouse Volcanic Ash Advisory Centre) ಉಪಗ್ರಹದ ಮೂಲಕ ಅಂದಾಜಿಸಿದೆ. ಇವು ಕೆಂಪು ಸಮುದ್ರದ ಮೇಲಿಂದ ಪೂರ್ವ ದಿಕ್ಕಿಗೆ ಹರಡುತ್ತಿವೆ ಎಂದು ವರದಿ ತಿಳಿಸಿದೆ.
ಈಗಾಗಲೇ ಓಮನ್ ಮತ್ತು ಯೆಮೆನ್ ದೇಶಗಳ ಮೇಲೆ ಇವುಗಳ ಪರಿಣಾಮ ಬೀರಿದೆ. ಈ ಮೋಡಗಳು ಉತ್ತರ ಭಾರತದತ್ತ ಬರಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಈ ಪ್ರದೇಶದ ಮೂಲಕ ವಿಮಾನ ಸಂಚಾರಕ್ಕೆ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ.
ದೆಹಲಿ ಮತ್ತು ಜೈಪುರ ಮಾರ್ಗವಾಗಿ ಪ್ರಯಾಣಿಸುವ ವಿಮಾನಗಳ ಮೇಲೆ ಆಗುವ ಪರಿಣಾಮವನ್ನು ಭಾರತೀಯ ವಿಮಾನಯಾನ ಇಲಾಖೆ ಅಂದಾಜು ಮಾಡುತ್ತಿದೆ. ಸೋಮವಾರ ಕೆಲವು ವಿಮಾನಗಳ ಪ್ರಯಾಣದ ಮಾರ್ಗಗಳನ್ನು ಬದಲಾಯಿಸಲಾಗಿದೆ. ಕಣ್ಣೂರಿನಿಂದ ಅಬುಧಾಬಿಗೆ ಹೋಗಬೇಕಿದ್ದ ಇಂಡಿಗೋ 6E 1433 ವಿಮಾನವನ್ನು ಅಹಮದಾಬಾದ್‌ಗೆ ತಿರುಗಿಸಲಾಗಿದೆ.
