ವೋಟ್ ಚೋರಿ ವಿವಾದ ತಾರಕಕ್ಕೆ: ಇಂದು ಸುಪ್ರೀಂ ಕೋರ್ಟ್‌ಗೆ ವಿಪಕ್ಷಗಳ ಮಾರ್ಚ್ ಫಾರ್ ಡೆಮಾಕ್ರಸಿ ಬೃಹತ್ ಪಾದಯಾತ್ರೆ

ಚುನಾವಣಾ ಆಯೋಗದಲ್ಲಿನ ‘ವೋಟ್ ಚೋರಿ’ (ಮತಗಳ ಕಳವು) ಆರೋಪ ಹಾಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ವಿರೋಧ ಪಕ್ಷಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಿವೆ. ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ‘ಇಂಡಿಯಾ’ (INDIA) ಮೈತ್ರಿಕೂಟದ ನಾಯಕರು ಇಂದು (ಸೋಮವಾರ) ಸುಪ್ರೀಂ ಕೋರ್ಟ್‌ ಕಡೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

‘ಚಲೋ ದೆಹಲಿ – ಮಾರ್ಚ್ ಫಾರ್ ಡೆಮಾಕ್ರಸಿ’ (ಪ್ರಜಾಪ್ರಭುತ್ವ ಸಂರಕ್ಷಣಾ ಮಾರ್ಚ್) ಹೆಸರಿನಲ್ಲಿ ನಡೆಯಲಿರುವ ಈ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮೈತ್ರಿಕೂಟದ ಪ್ರಮುಖ ನಾಯಕರು, ಯುವಜನ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಸಿಇಸಿ ಗ್ಯಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು, ವಿವಾದಾತ್ಮಕ ಎಸ್‌ಐಆರ್ ಪ್ರಕ್ರಿಯೆಯನ್ನು ಕೈಬಿಡಬೇಕು ಮತ್ತು ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿಯನ್ನು ಮರುಸ್ಥಾಪಿಸಬೇಕು ಎಂಬುದು ವಿಪಕ್ಷಗಳ ಪ್ರಮುಖ ಆಗ್ರಹವಾಗಿದೆ.

ರಾಹುಲ್, ಖರ್ಗೆ ಭೇಟಿಗೆ ಸಿಜೆಐ ನಕಾರ:

ಈ ಗಂಭೀರ ವಿಷಯದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರಿಗೆ ಜಂಟಿ ಮನವಿ ಸಲ್ಲಿಸಲು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಮಯ ಕೋರಿದ್ದರು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಈಗಾಗಲೇ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ, ಆಡಳಿತಾತ್ಮಕವಾಗಿ (Administrative side) ಯಾವುದೇ ಆದೇಶ ನೀಡಲಾಗದು ಎಂದು ಸ್ಪಷ್ಟಪಡಿಸಿರುವ ಸಿಜೆಐ, ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ (Judicial petition) ಅರ್ಜಿ ಸಲ್ಲಿಸುವಂತೆ ಸೂಚಿಸಿ ಭೇಟಿಗೆ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ಸುಪ್ರೀಂ ಕೋರ್ಟ್ 24 ಗಂಟೆಯೂ ತೆರೆದಿರುತ್ತದೆ ಎಂದೂ ಸಿಜೆಐ ತಿಳಿಸಿದ್ದಾರೆ ಎನ್ನಲಾಗಿದೆ.

ಪೊಲೀಸ್ ದೌರ್ಜನ್ಯಕ್ಕೆ ಖರ್ಗೆ ಆಕ್ರೋಶ:

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಮಹಿಳೆಯರ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಈ ರಾಜಕೀಯ ಸಂಘರ್ಷ ಮತ್ತಷ್ಟು ಕಾವೇರಿದೆ.

ಇಂದು ಮಧ್ಯಾಹ್ನ 1:30ಕ್ಕೆ ನವದೆಹಲಿಯ ಕನ್ನಾಟ್ ಪ್ಲೇಸ್-ಬಾರಾಖಂಬಾ ರಸ್ತೆ ಜಂಕ್ಷನ್‌ನಲ್ಲಿ ವಿಪಕ್ಷ ನಾಯಕರು ಒಗ್ಗೂಡಿ ಸುಪ್ರೀಂ ಕೋರ್ಟ್ ಕಡೆಗೆ ಈ ಬೃಹತ್ ಪಾದಯಾತ್ರೆ ಆರಂಭಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು