Sunday, June 16, 2024

ಸತ್ಯ | ನ್ಯಾಯ |ಧರ್ಮ

ಯಾವುದೇ ಆಮಿಷಕ್ಕೆ ಒಳಗಾಗದೇ ತಪ್ಪದೇ ಮತದಾನ ಮಾಡಿ: ಡಾ: ಕುಮಾರ

ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಏಪ್ರಿಲ್ 26 ರಂದು ನಡೆಯಲಿದೆ. ಸಾರ್ವಜನಿಕರು ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗವಿರುವ ಕಾವೇರಿ ಉದ್ಯಾನವನ ಹಾಗೂ ಮಂಡ್ಯ ಬಸ್ ನಿಲ್ದಾಣದಲ್ಲಿ ಮತದಾರರ ಜಾಗೃತಿ ಕುರಿತು ಸಹಿ ಅಭಿಯಾನ ನಡೆಸಿ ಮಾತನಾಡಿದರು.

ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಏ. 26 ರಂದು ತಪ್ಪದೇ ಮತದಾನ ಮಾಡಿ. ತಮ್ಮೊಂದಿಗೆ ತಮ್ಮ ಸುತ್ತಮುತ್ತಲಿನವರಿಗೂ ಮತದಾನ ಮಾಡಲು ಪ್ರೇರೆಪಿಸಿ ಎಂದರು.

ಮತದಾನದ ಬಗ್ಗೆ ನಿರಾಸಕ್ತಿ ಬೇಡ, ಮತದಾನದ ಮಹತ್ವದ ಬಗ್ಗೆ ತಿಳಿದುಕೊಳ್ಳಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಾವೆಲ್ಲರೂ ಮತದಾನ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಪ್ರತಿಯೊಬ್ಬ ಮತದಾರರು ಮತಗಟ್ಟೆಗೆ ಬಂದು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂಬುದು ಮತದಾನ ಜಾಗೃತಿ ಅಭಿಯಾನದ ಉದ್ದೇಶವಾಗಿದೆ ಎಂದರು.

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಪಟ್ಟಂತೆ ಈಗಾಗಲೇ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್ 26 ರಂದು ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಜರುಗಲಿದ್ದು, ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ ಎಂದು ಕರೆಯಬಹುದು ಎಂದರು.

ಇಂದು ವಿಶೇಷವಾಗಿ ಮತದಾನ ಜಾಗೃತಿ ಕುರಿತು ಸಹಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಂತಹ ಜಿಲ್ಲಾ ಪಂಚಾಯತ್ ನ ಸಿ.ಇ.ಓ ಅವರಿಗೆ ಅಭಿನಂದನೆಯನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್ ಅವರು ಮಾತನಾಡಿ ಪ್ರತಿಯೊಬ್ಬರ ಮತವು ಬಹಳ ವಿಶೇಷವಾಗಿದ್ದು, ಬದಲಾವಣೆಯನ್ನು ತರುವಂತಹ ಶಕ್ತಿ ಮತದಾನಕ್ಕಿದೆ. ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಸ್ಥಳಗಳನ್ನು ಗುರುತಿಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪ್ರತಿಯೊಬ್ಬರು ವೋಟರ್ ಹೆಲ್ಪ್ ಲೈನ್ ಆಪ್ ಅನ್ನು ಬಳಸಿ ಮತದಾರರ ಚೀಟಿಯನ್ನು ಡೌನ್ಲೋಡ್ ಮಾಡಬಹುದು. ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ನೋಂದಣಿ ಆಗಿರುವುದನ್ನು ಹಾಗೂ ತಮ್ಮ ಮತಗಟ್ಟೆಗಳನ್ನು ನೋಡಿಕೊಂಡು, ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಮ್ಮ ಭವಿಷ್ಯವನ್ನು ಶಕ್ತಿಯುತಗೊಳಿಸಲು ಕಡ್ಡಾಯವಾಗಿ ಏಪ್ರಿಲ್ 26 ರಂದು ಮತ ಚಲಾಯಿಸುತ್ತೇನೆ ಎಂಬ ಹೇಳಿಕೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ಸಾರ್ವಜನಿಕರು ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಮೊಬೈಲ್ ನಲ್ಲಿ‌ ಲೈವ್ ಘಟನೆಗಳನ್ನು ಸೆರೆ ಹಿಡಿದು ಸಿ.ವಿಜಿಲ್ ನಲ್ಲಿ ದೂರು ಸಲ್ಲಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಂಜೀವಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್. ಹೆಚ್ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು