Wednesday, May 28, 2025

ಸತ್ಯ | ನ್ಯಾಯ |ಧರ್ಮ

ಕರಾವಳಿಯ ಸರಣಿ ಹತ್ಯೆಗಳು ರಾಜ್ಯಕ್ಕೇ ಕಾಡ್ಗಿಚ್ಚಿನಂತೆ ಹಬ್ಬುವ ಮುನ್ನ ಎಚ್ಚೆತ್ತುಕೊಳ್ಳಿ : ಮುನೀರ್ ಕಾಟಿಪಳ್ಳ

ಕರಾವಳಿ ಜಿಲ್ಲೆಗಳ ಮುಸ್ಲಿಂ ಸಮುದಾಯದ ಅಸಹಾಯಕತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ (ಫಾಸಿಲ್ ಹಾಗು ದಲಿತ ಯುವಕ ಕೀರ್ತಿ ಹತ್ಯೆಯ ಆರೋಪಿ) ಕೊಲೆಗೆ ಪ್ರತೀಕಾರ ಎಂದು ಅಮಾಯಕ ಮುಸ್ಲಿಂ ಗೃಹಸ್ಥನೊಬ್ಬನನ್ನು ಸಂಘಪರಿವಾರ ಬೆಂಬಲಿತ ಕ್ರಿಮಿನಲ್ ಗಳ  ಗುಂಪು ಕಡಿದು ಕೊಲೆ ಗೈದಿದೆ.

ಜೊತೆಯಲ್ಲಿದ್ದ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಹಾಸ್ ಹತ್ಯೆಯ ತರುವಾಯ ಮುಸ್ಲಿಂ ಸಮುದಾಯದ ನಾಲ್ಕೈದು ಜನರ ಮೇಲೆ ಚೂರಿಯಿಂದ ಇರಿಯಲಾಗಿದೆ. ಸಾಲು ಸಾಲು ಪ್ರತೀಕಾರದ ಭಾಷಣಗಳು, ಬಹಿಷ್ಕಾರದ ಕರೆಗಳು ಈ ಅವಧಿಯಲ್ಲಿ ಬಹಿರಂಗವಾಗಿಯೆ ಬಂದಿದೆ. ಬಜ್ಪೆಯಲ್ಲಿ ಸಂಘಪರಿವಾರ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬ ಜಾಗರಣಾ ವೇದಿಕೆಯ ಭಾಷಣಕಾರ “ಪ್ರತೀಕಾರ ನಡೆಸಿಯೇ ಸಿದ್ದ” ಎಂದು ಘೋಷಿಸುವಾಗ ದ.ಕ. ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು ವೇದಿಕೆಯ ಮುಂಭಾಗದಲ್ಲಿ ಕುಳಿತು ಆ “ಪ್ರತಿಜ್ಞೆ” ಗೆ ಅಂಗೀಕಾರ ಒದಗಿಸಿದರು. ಚಪ್ಪಾಳೆ ತಟ್ಟಿದರು.

ಇದೀಗ, ದುಡಿಮೆಗೆ ಹೊರಟಿದ್ದ ಬಡಪಾಯಿ ಮುಸ್ಲಿಂ ಯುವಕನ ಹತ್ಯೆ ನಡೆದಿದೆ. ಆತನ ಪುಟಾಣಿ ಮಕ್ಕಳು ಅನಾಥರಾಗಿದ್ದಾರೆ. ಈ ನಡುವೆ, ಪ್ರತೀಕಾರದ ಬೆದರಿಕೆ ಭಾಷಣಗಳನ್ನು ಮಾಡಿದ್ದ ಕ್ರಿಮಿನಲ್ ಹಿನ್ನಲೆಯ ಬಜರಂಗ ದಳದ ನಾಲ್ಕೈದು ಮುಖಂಡರ ಮೇಲೆ ನೆಪ ಮಾತ್ರಕ್ಕೆ ಸಾಮಾನ್ಯ ಎಫ್ಐಆರ್ ಹಾಕಿ ಮುಂದಿನ ಕಾನೂನು ಕ್ರಮ ಜರುಗಿಸದೆ ಕೂತಿದ್ದ ಪೊಲೀಸ್ ವರಿಷ್ಟರುಗಳು ಮುಸ್ಲಿಂ ಯುವಕ ರೆಹಿಮಾನ್ ಕೊಲೆಯಾದ ತಕ್ಷಣ, ಸುಹಾಸ್ ಕೊಲೆಯ ಸಂದರ್ಭ ಬಂದ್ ಗೆ ಕರೆ ನೀಡಿದ ಪ್ರಕರಣದಲ್ಲಿ ನೆಪ ಮಾತ್ರಕ್ಕೆ FIR ಹಾಕಲಾಗಿದ್ದ ಶರಣ್ ಪಂಪ್ ವೆಲ್ ಅನ್ನು ಆತುರ ಆತುರವಾಗಿ ಬಂಧಿಸಿದ್ದಾರೆ. ಬಂಧಿಸಿ ಎರಡು ತಾಸಿನ ಒಳಗಡೆ ಅಷ್ಟೆ ಆತುರ ಆತುರವಾಗಿ ಬಿಡುಗಡೆ ಮಾಡಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಪ್ರತೀಕಾರದ ನೇರ ಬೆದರಿಕೆಯ ಆರೋಪ ಹೊತ್ತಿರುವ ಬಜರಂಗ ದಳದ ಭರತ್ ಕುಮ್ಡೇಲ್ (ಈತ ಮುಸ್ಲಿಮನೊಬ್ಬನ ಕೊಲೆಯ ನೇರ ಆರೋಪಿ) ನ ಬಂಧನ ಇನ್ನೂ ಆಗಿಲ್ಲ. ಬಜ್ಪೆಯಲ್ಲಿ ಬಿಜೆಪಿ ಶಾಸಕ ಗಡಣವನ್ನು ಸಾಕ್ಷಿಯಾಗಿ ಕೂರಿಸಿ “ಪ್ರತೀಕಾರ ನಡೆಸಿಯೇ ಸಿದ್ಧ” ಎಂದು ಘಂಟಾಘೋಷವಾಗಿ ಕರೆ ನೀಡಿದ ಶ್ರೀಕಾಂತ್ ಶೆಟ್ಟಿಯ ಬಂಧನ ಈ ವರಗೆ ನಡೆದಿಲ್ಲ. ಇನ್ನು ಮುಸ್ಲಿಮರ ವಿರುದ್ದ ದ್ವೇಷ ಭಾಷಣ, ಪ್ರತೀಕಾರದ ಭಾಷಣ ಮಾಡಿದ ಶಾಸಕರುಗಳನ್ನು ಈ ಪೊಲೀಸರು ಮುಟ್ಟುವುದು ಕನಸಿನ ಮಾತು.

ಬಹುಷ, ಇಂತಹ ದ್ವೇಷ ಭಾಷಣ, ಪ್ರತೀಕಾರದ ಮಾತುಗಳಿಗೆ ವೇದಿಕೆ ಕಲ್ಪಿಸುತ್ತಿರುವುದಕ್ಕೆ ಬಹುಮಾನವಾಗಿಯೆ ಈ ಶಾಸಕರುಗಳ ಅಮಾನತು ಆದೇಶವನ್ನು ಸಿದ್ದರಾಮಯ್ಯ ಸರಕಾರ, ಸ್ಪೀಕರ್ ಖಾದರ್ ವಾಪಾಸು ಪಡೆದಿರಬೇಕು.

  ಕುಡುಪು ಮಾಬ್ ಲಿಂಚಿಂಗ್ ನಲ್ಲಿ ಅಶ್ರಫ್ ಹತ್ಯೆ, ಸುಹಾಸ್ ಹತ್ಯೆ ತರುವಾಯ ಜಿಲ್ಲೆಗೆ ಭೇಟಿ ನೀಡಿ ನಾಲ್ಕು ನುಡಿ ಮುತ್ತು ಉದುರಿಸಿ ಹೋದ, “ಅತಿಥಿ” ಸಚಿವ ಎಂದು ಟ್ರೋಲ್ ಗೆ ಒಳಗಾಗಿ ಹಾಸ್ಯಾಸ್ಪದರಾಗಿರುವ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆ ನಂತರ ಜಿಲ್ಲೆಯ ಕಡೆಗೆ ತಲೆ ಹಾಕಿಲ್ಲ. “ನಕ್ಸಲ್ ನಿಗ್ರಹ ದಳದ ಮಾದರಿಯಲ್ಲಿ ಕಮ್ಯುನಲ್ ನಿಗ್ರಹ ದಳ ರಚಿಸುತ್ತೇವೆ” ಎಂದು ಕೀರಲು ಧ್ವನಿಯಲ್ಲಿ ಹೇಳಿಕೆ ನೀಡಿ ಹೋದ ಜಿ ಪರಮೇಶ್ವರ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೆ ಬಹುಷ ಈ ಮಾತನ್ನು ಮರೆತು ಬಿಟ್ಟಿದ್ದಾರೆ.

ಇನ್ನು, ಇದೇ ಅವಧಿಯಲ್ಲಿ ಮಂಗಳೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ವೇದವ್ಯಾಸ ಕಾಮತ್ ಗೆ ಒಂದಿಷ್ಟು “ಬುದ್ದಿ ಮಾತು” ಹೇಳಿ ತಮ್ಮ ಪಂಚಿಂಗ್ ಡೈಲಾಗ್ ಗಳಿಗೆ ಕಾಂಗ್ರೆಸ್ಸಿಗರು, ಬೆಂಬಲಿಗರಿಂದ ಚಪ್ಪಾಳೆ ಗಿಟ್ಟಿಸಿ ವಾಪಾಸ್ ಆದರು ಹೊರತು, ಜಿಲ್ಲೆಯಲ್ಲಿ ಅಂಕೆ ಮೀರಿರುವ ಕೋಮುವಾದ, ಪೂರ್ತಿ ಹಳ್ಳ ಹಿಡಿದಿರುವ ಕಾನೂನು ಸುವ್ಯವಸ್ಥೆ, ತಬ್ಬಲಿಗಳಂತಾಗಿರುವ ಅಲ್ಪಸಂಖ್ಯಾತ ಮುಸ್ಲಿಮರಿಗೆ ಧೈರ್ಯ ತುಂಬುವ ಕುರಿತು ಒಂದು ಶಬ್ದವನ್ನೂ ಮಾತಾಡಲಿಲ್ಲ.

ಇನ್ನು, ಸದ್ಯ ರಾಜ್ಯ ಮಟ್ಟದಲ್ಲಿ ಮುಸ್ಲಿಮರ ಪ್ರತಿನಿಧಿ ಎಂದು ಬಿಂಬಿಸಲ್ಪಟ್ಟಿರುವ ಸ್ಪೀಕರ್ ಯು ಟಿ ಖಾದರ್ ದ‌.ಕ. ಜಿಲ್ಲೆಯ ಮಟ್ಟಿಗೆ ‘ಸರಕಾರ’ ಎಂದೆ ಕರೆಯಲ್ಪಡುವವರು. ಕರಾವಳಿ ಜಿಲ್ಲೆಯ ಮುಸ್ಲಿಮರ ಪಾಲಿಗೆ ಉಳಿದಿರುವ ಏಕೈಕ ನಾಯಕ ಎಂದು ಬಿಂಬಿಸಲ್ಪಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಆಧ್ಯಾತ್ಮ ನಾಯಕರು, ಶ್ರೀಮಂತ ಉದ್ಯಮಿಗಳು, ಅನಿವಾಸಿ ಭಾರತೀಯರು, ಕುಲೀನ ಮನೆತನಗಳು ಯು ಟಿ ಖಾದರ್ ಸುತ್ತವೇ ನೆರೆದಿರುತ್ತದೆ. ಆ ಪ್ರಭಾವಳಿಯ ಆಚೆಗೆ ಆಲೋಚಿಸಲು ಅಸಾಧ್ಯವಾದ ಸ್ಥಿತಿ ಮುಸ್ಲಿಮರಲ್ಲಿನ ಪ್ರಭಾವಿ ವಲಯದಲ್ಲಿದೆ.

ಮುಸ್ಲಿಂ ಸಮುದಾಯದ ಆಚೆಗೂ ಜನಪ್ರಿಯರಾಗಿರುವ ಇಂತಹ ಯು ಟಿ ಖಾದರ್ ಕೋಮುವಾದದ ವಿರುದ್ದ ದೃಢ ಕ್ರಮಗಳಿಗೆ ಮುಂದಾಗಿದ್ದೇ ಇಲ್ಲ. ಬದಲಿಗೆ, ಕೋಮುವಾದದ ವಿರುದ್ದ ಧ್ವನಿ ಎತ್ತಿದವರನ್ನೆ ಲೇವಡಿ ಮಾತುಗಳಲ್ಲಿ ತಿವಿದವರು. ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಕೋಮು ಶಕ್ತಿಗಳ ಬದಲಿಗೆ ಜನಪರ ಶಕ್ತಿಗಳ ವಿರುದ್ದವೇ FIR ಅಸ್ತ್ರದ ಮೂಲಕ ದಂಡ ಪ್ರಯೋಗ ಮಾಡಿದಾಗ ಕಮೀಷನರ್  ರಕ್ಷಣೆಗೆ ಬಲವಾಗಿ ಖಾದರ್ ನಿಂತರು. ಪೊಲೀಸ್ ಕಮೀಷನರ್ ರ ವೈಫಲ್ಯ, ಕಮ್ಯೂನಲ್, ಕ್ರಿಮಿನಲ್ ಶಕ್ತಿಗಳ ಕುರಿತಾದ ಮೃದು ಧೋರಣೆಗಳನ್ನು ಬೊಟ್ಟು ಮಾಡಿ ” ಕಮೀಷನರ್ ವರ್ಗಾಯಿಸಿ, ಖಡಕ್ ಅಧಿಕಾರಿಗಳನ್ನು ಜಿಲ್ಲೆಗೆ ತನ್ನಿ” ಎಂದು ಹೋರಾಟ ನಡೆಸಿದರೆ, ಇದೇ ಕಮೀಷನರ್ ಸಹಿತ ವಿಫಲ ಪೊಲೀಸ್ ಅಧಿಕಾರಿಗಳನ್ನು ಹಠಕ್ಕೆ ಬಿದ್ದು ರಕ್ಷಿಸಿಕೊಂಡರು, ಪದಕದಂತೆ ಎದೆಯ ಮೇಲಿಟ್ಟು ಕೊಂಡರು. ಈಗ ಪರಿಸ್ಥಿತಿ ಪೂರ್ತಿ ಕೈ ಮೀರಿ ಇಡೀ ಮುಸ್ಲಿಂ ಸಮುದಾಯ ಧಿಕ್ಕಾರ ಕೂಗುತ್ತಿರುವಾಗ “ಪೊಲೀಸರ ವೈಫಲ್ಯವೇ ಮುಸ್ಲಿಂ ಯುವಕನ ಕೊಲೆಗೆ ಕಾರಣ, ಕೋಮು ಪ್ರಚೋದಕ ಕಾರ್ಯಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಹೀಗಾಯ್ತು” ಎಂದು ಅದೇ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ತಾನು ಜಾರಿಕೊಳ್ಳಲು ನೋಡಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ಕೋಟಾ ಅಡಿಯಲ್ಲಿ ಶಾಸಕರು, ಪರಿಷತ್, ರಾಜ್ಯ ಸಭೆ ಸದಸ್ಯರಾದವರು ಡಜನ್ ಲೆಕ್ಕದಲ್ಲಿ ಇದ್ದಾರೆ. ಇವರೆಲ್ಲರಿಗೂ ತಮ್ಮ ಅಧಿನಾಯಕ ಸಿದ್ದರಾಮಯ್ಯನವರ ಎದುರು ನಿಂತು ಕರಾವಳಿಯ ಮುಸ್ಲಿಮರ ಈ ದಯನೀಯ ಸ್ಥಿತಿಯ ಕುರಿತು ಗಟ್ಟಿಯಾಗಿ ಮಾತಾಡುವ ಧೈರ್ಯ, ಕಾಳಜಿ ಎರಡೂ ಇಲ್ಲ. ಅವರವರ ಬೇಳೆ ಕಾಳು ಬೇಯಿಸಲು ನಾಯಕರಿಗೆ ಬಹು ಪರಾಕ್ ಹಾಕುವುದರಲ್ಲೆ ಅವರು ಮಗ್ನ. ಮುಖ್ಯಮಂತ್ರಿ ಖುರ್ಚಿಯಾಟಕ್ಕೆ ಪ್ರಭಾವಿ ನಾಯಕರು ಕರೆಯುವ ಬ್ರೇಕ್ ಫಾಸ್ಟ್, ಡಿನ್ನರ್ ಗಳೆಂಬ ಶಕ್ತಿ ಪ್ರದರ್ಶನದ ಸಭೆಗಳಲ್ಲಿ ಭಾಗಿಯಾಗುವ ಇವರಿಗೆ, ಕರಾವಳಿಯ ಮುಸ್ಲಿಮರ ದೌರ್ಭಾಗ್ಯಕರ ಸ್ಥಿತಿಯ ಕುರಿತು ಮಾತಾಡಲು ಕನಿಷ್ಟ ಚಾ ಕುಡಿಯುವ ನೆಪದಲ್ಲಾದರು ಒಂದೆಡೆ ಸೇರಬೇಕು ಎಂದು ಅನಿಸಿಲ್ಲ.

ಇನ್ನು, ಪ್ರಗತಿಪರರು, ಜನಪರ ಚಳವಳಿಗಳು, ಎಡಪಂಥೀಯ ಬರಹಗಾರರು ಕರಾವಳಿಯ ಕೋಮು ರಾಜಕಾರಣದ ಎದುರಾಗಿ ತಮ್ಮ ಕೈಲಾದ ಪ್ರಯತ್ನ ಮಾಡುತ್ತಲೆ ಬಂದಿದ್ದಾರೆ. ಆದರೆ, ಆಳುವವರಿಗೆ ಈ ಧ್ವನಿಗಳ ಕುರಿತು ತಾತ್ಸಾರ. ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕತ್ವವಂತೂ ತಮ್ಮದೇ ಪಕ್ಷದಲ್ಲಿ ಈ ರೀತಿ ಆಲೋಚಿವವರು, ಮಾತಾಡುವರನ್ನು ಸದಾ ಅನುಮಾನದ ದೃಷ್ಟಿಯಲ್ಲಿ ಕಾಣುತ್ತಾ ಬಂದಿದೆ.

ಇಂತಹ ಸ್ಥಿತಿಯಲ್ಲಿ, ಎಲ್ಲಾ ಕ್ಷೇತ್ರಗಳು (ಪುತ್ತೂರು, ಮಂಗಳೂರು ವೈದ್ಯರ ಸಂಘದ ಇತ್ತೀಚಿನ ನಡವಳಿಕೆ ಒಂದು ಉದಾಹರಣೆ) ಇಸ್ಲಾಮಾಫೋಬಿಯಾ ದಿಂದ ಬಳಲುತ್ತಿರುವಾಗ ಕರಾವಳಿಯ ಮುಸ್ಲಿಮರ ನೋವುಗಳನ್ನು  ಆಲಿಸುವವರು ಯಾರು ?  ಜನಸಂಖ್ಯೆಯ ಸುಮಾರು 25 ಶೇಕಡಾ ಇರುವ ಸಮುದಾಯವೊಂದು ಹೀಗೆ ದಿಕ್ಕೆಟ್ಟು ನಿಂತರೆ ಅದರ ಪರಿಣಾಮಗಳು ಏನು, ನಾಯಕತ್ವ ನೀಡುವವರು ಯಾರು ? ಅಸಹಾಯಕತೆಯ ಪರಮಾವಧಿ ತಲುಪಿ, ಯಾವ ನಾಯಕತ್ವವೂ ಇಲ್ಲದೆ ಇಂದು ಆಕ್ರೋಶ ಭರಿತವಾಗಿ ಒಕ್ಕೊರಲಿನಿಂದ ನೋವಿನ ಧ್ವನಿ ಹೊರಡಿಸುತ್ತಿರುವ ಸಮುದಾಯಕ್ಕೆ ಸಾಂತ್ವನ ಹೇಳುವವರು ಯಾರು, ಮುಸ್ಲಿಮರ ಪ್ರತಿಭಟನೆ, ಸಮಾವೇಶಗಳನ್ನೆ ಬಿಜೆಪಿಯ ಚುನಾವಣಾ ಶಕ್ತಿಯಾಗಿ ಪರಿವರ್ತನೆ ಹೊಂದಿಸುವ “ಚಾಣಕ್ಯ” ನಡೆಗಳ ಮುಂದೆ ಕರಾವಳಿಯ ಈ ಸಮುದಾಯಕ್ಕೆ  ಸರಿಯಾಕ್ಕೆ ನಾಯಕತ್ವ ಕೊಡಬೇಕಾದವರು ಯಾರು ? ಒಂದು ವೇಳೆ ನಕಾರಾತ್ಮಕವಾಗಿಯೆ ಮುಂದುವರಿದರೆ ಇದು ಕರಾವಳಿಯ ಸಮಸ್ಯೆಯಾಗಿ  ಮಾತ್ರ ಉಳಿಯುವುದಿಲ್ಲ.  ಇಡೀ  ರಾಜ್ಯದ ರಾಜಕಾರಣವನ್ನು ಬಲಿ ಪಡೆಯುವ ಕಾಡ್ಗಿಚ್ಚಾಗುತ್ತದೆ. ಅಷ್ಟು ಎಚ್ಚರ ಇದ್ದರೆ ಒಳಿತು.

ಮುನೀರ್ ಕಾಟಿಪಳ್ಳ

Related Articles

ಇತ್ತೀಚಿನ ಸುದ್ದಿಗಳು

You cannot copy content of this page