Sunday, June 23, 2024

ಸತ್ಯ | ನ್ಯಾಯ |ಧರ್ಮ

ಎಚ್ಚೆತ್ತಿರುವ ಕರ್ನಾಟಕದ ಮತದಾರರು

ಜನಾದೇಶವನ್ನು ಪಕ್ಷಗಳು ಗೌರವಿಸಬೇಕು. ನಾಳೆಯ ಫಲಿತಾಂಶದ ಬಳಿಕವಾದರೂ ರಾಜಕೀಯ ಪಕ್ಷಗಳು ಇಂತಹ ಅನೈತಿಕ ರಾಜಕಾರಣಕ್ಕೆ ಯತ್ನಿಸದಿರಲಿ ಎಂದು ಆಶಿಸೋಣ. ಗೆದ್ದವರು ಅಧಿಕಾರ ನಡೆಸಲಿ. ಸೋತವರು ವಿಪಕ್ಷದಲ್ಲಿ ಕುಳಿತು ತಮ್ಮ ಶಾಸಕ ನೆಲೆಯ ಮತ್ತು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವಂತಾಗಲಿ – ಶ್ರೀನಿವಾಸ ಕಾರ್ಕಳ

2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದೆ. ಇನ್ನೇನು ನಾಳೆ ಅಂದರೆ, ಮೇ 13 ರ ಮಧ್ಯಾಹ್ನಕ್ಕಾಗುವಾಗ ಮತಗಳ ಎಣಿಕೆ ಮುಗಿದು, ಫಲಿತಾಂಶ ಪ್ರಕಟಗೊಂಡು, ಯಾವ ಅಭ್ಯರ್ಥಿಗಳು ಗೆದ್ದಿದ್ದಾರೆ, ಯಾರು ಸೋತಿದ್ದಾರೆ, ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಬಂದಿವೆ, ಯಾವ ಪಕ್ಷ ಅಧಿಕಾರಕ್ಕೇರಬಹುದು, ಒಂದು ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೇರುವುದೋ ಅಥವಾ ಸಮ್ಮಿಶ್ರ ಸರಕಾರ ಅನಿವಾರ್ಯವೋ ಎಂಬ ಒಂದು ಸ್ಪಷ್ಟ ಚಿತ್ರಣ ಲಭಿಸಬಹುದು.

ಚುನಾವಣೆ ಅಂದ ಮೇಲೆ ಕೆಲವರು ಗೆಲ್ಲಬೇಕು, ಕೆಲವರು ಸೋಲಬೇಕು. ಒಂದು ರಾಜಕೀಯ ಪಕ್ಷ ಅಧಿಕಾರದ ಅವಕಾಶ ಪಡೆದುಕೊಳ್ಳಬೇಕು, ಇನ್ನೊಂದು ರಾಜಕೀಯ ಪಕ್ಷ ಅವಕಾಶ ಕಳೆದುಕೊಳ್ಳಬೇಕು. ಗೆದ್ದವರಿಗೆ ತಮ್ಮ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸುವ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಕೆಲಸ ಮಾಡುವ ಜವಾಬ್ದಾರಿಯಿದೆ. ಜನಮೆಚ್ಚುಗೆ ಗಳಿಸುವಂತೆ ಒಳ್ಳೆಯ ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಮರು ಆಯ್ಕೆಯಾಗುವ ಅವಕಾಶವೂ ಇದೆ. ಜನವಿರೋಧಿಯಾಗಿ ಅಹಂಕಾರದಿಂದ ನಡೆದುಕೊಂಡರೆ ಮುಂದೆ ಮತದಾರರು ನೀಡುವ ಶಿಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ.

ಸೋತವರಿಗೂ ಮುಂದೆ ಗೆಲ್ಲುವ ಅವಕಾಶ ಇದ್ದೇ ಇದೆ

ಅದೇ ಹೊತ್ತಿನಲ್ಲಿ, ವಿಪಕ್ಷಕ್ಕೆ ಸರಕಾರ ಹಾದಿ ತಪ್ಪದಂತೆ ನೋಡಿಕೊಳ್ಳುವ, ಅದನ್ನು ನಿರಂತರವಾಗಿ ಉತ್ತರದಾಯಿ ಮಾಡುವ ಮಹತ್ತರ ಹೊಣೆಗಾರಿಕೆಯಿದೆ. ಈ ಕೆಲಸವನ್ನು ಅದು ಹೊಣೆಗಾರಿಕೆಯಿಂದ, ನಿಷ್ಠೆಯಿಂದ ನಿರ್ವಹಿಸಿದರೆ, ಸರಕಾರದ ತಪ್ಪುಗಳನ್ನು ಜನರ ಗಮನಕ್ಕೆ ತರುವ ಕೆಲಸದಲ್ಲಿ ಯಶಸ್ವಿಯಾದರೆ, ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಅವಕಾಶವೂ ಇದೆ.

ಸೋಲು ಗೆಲುವು ತೀರಾ ಸಹಜ. ಇಂದು ಗೆದ್ದೆ ಎಂದು ಬೀಗುವವರು ನಾಳೆ ಸೋತು ಅಳುವ ಕಾಲವೂ ಬರಬಹುದು. ಇಂದು ಸೋತು ಅಳುವವರು ನಾಳೆ ನಗುವ ಕಾಲವೂ ಬರಬಹುದು. ಇವೆಲ್ಲ ತೀರಾ ಸಹಜ ಮತ್ತು ಅದು ಇರಬೇಕಾದುದೇ ಹಾಗೆ. ಶಾಸನ ಸಭೆಯಲ್ಲಿ ಆಡಳಿತ ಪಕ್ಷ ಇರುತ್ತದೆ, ಹಾಗೆಯೇ ವಿರೋಧ ಪಕ್ಷವೂ ಇರುತ್ತದೆ. ಅವರಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಇಬ್ಬರಿಗೂ ಕೈಜೋಡಿಸಿ ಕೆಲಸ ಮಾಡಬೇಕಾದ ಜವಾಬ್ದಾರಿಯಿದೆ. ಶಾಸನ ಸಭೆಯ ಕೆಲಸವೆಂದರೆ ಅದೊಂದು ಟೀಮ್ ವರ್ಕ್.

ಆದ್ದರಿಂದ, ಇಲ್ಲಿ ಅಧಿಕಾರವೇ ಮುಖ್ಯವಾಗಬಾರದು. ಜನರು ತಮ್ಮ ಪ್ರತಿನಿಧಿಯನ್ನು ಅನೇಕ ಸಲ ಪಕ್ಷದ ನೆಲೆಯಲ್ಲಿ ಆರಿಸಿ ಕಳುಹಿಸುತ್ತಾರೆ. ಅವರು ಅದೇ ಪಕ್ಷದಲ್ಲಿ ಮುಂದುವರಿಯಬೇಕು ಎಂದು ಅವರು ಬಯಸಿರುತ್ತಾರೆ. ತಮ್ಮನ್ನು ಕೇಳದೆ ಇನ್ನೊಂದು ಪಕ್ಷಕ್ಕೆ ಜಿಗಿಯುವುದನ್ನು ಅವರು ಖಂಡಿತಾ ಇಷ್ಟಪಡುವುದಿಲ್ಲ. ನೈತಿಕವಾಗಿಯೂ ಅದು ಸರಿಯಲ್ಲ. ಇಂತಹ ಕೆಲಸವನ್ನು ಯಾರೂ ಮಾಡಬಾರದು.

ಮತದಾರರು ಎಚ್ಚೆತ್ತಿದ್ದಾರೆ

ಜನ ಹಿಂದಿನಂತಿಲ್ಲ. ಈಗ ಎಚ್ಚರಗೊಂಡಿದ್ದಾರೆ. ಅವರು ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದ್ದಾರೆ. ಅಧಿಕಾರ ಲಾಲಸೆಯಿಂದ ಜನಪ್ರತಿನಿಧಿಯೊಬ್ಬರು ಇಂದು ತನ್ನ ಮತದಾರರ ಆದೇಶವನ್ನು ಧಿಕ್ಕರಿಸಿ, ಬೇರೊಂದು ಪಕ್ಷಕ್ಕೆ ಜಿಗಿದು ಮಂತ್ರಿಯಾಗಬಹುದು. ಆದರೆ, ಅಂಥವರ ಕ್ರೆಡಿಬಿಲಿಟಿ ಅಥವಾ ವಿಶ್ವಾಸಾರ್ಹತೆ ನಷ್ಟವಾಗಿರುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಗಳಿಸುವುದು ಬಲು  ಕಷ್ಟ; ಅಸಾಧ್ಯವೆಂದರೂ ಸರಿಯೇ. ಅವರು ಈಗ ಖುಷಿಯಿಂದ ಇರಬಹುದು. ಆದರೆ ಮುಂದೊಂದು ದಿನ ಅವರಿಗೆ ಮತದಾರರು ಮರೆಯಲಾಗದ ಪಾಠ ಕಲಿಸುತ್ತಾರೆ.

ಈ ನಿಟ್ಟಿನಲ್ಲಿ ಹಿರಿಯ ಚಿಂತಕ ಡಾ. ಪುರುಷೋತ್ತಮ ಬಿಳಿಮಲೆಯವರ ಕಾಳಜಿ ಪೂರ್ಣ ಮಾತುಗಳನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ಹೀಗೆ ಹೇಳುತ್ತಾರೆ- “ಪ್ರಜಾಪ್ರಭುತ್ವದಲ್ಲಿ ಜನರು ಮತದಾನ ಮಾಡುತ್ತಾರೆ. ಅದರಲ್ಲಿ ಗೆದ್ದವರು ಜನಾದೇಶದ ಪ್ರಕಾರ ಕೆಲಸ ಮಾಡಬೇಕು. ಜನಾದೇಶವನ್ನು ತಿರುಚಿ ಪ್ರಜಾಪ್ರಭುತ್ವಕ್ಕೂ ಸಂವಿಧಾನಕ್ಕೂ ಅವಮಾನ ಮಾಡುವ ಅಧಿಕಾರ ಯಾರಿಗೂ ಇಲ್ಲ. ಬಗೆ ಬಗೆಯ ಆಪರೇಶನ್‌ ಗಳು, ರೆಸಾರ್ಟ್‌ ವಾಸ್ತವ್ಯಗಳು, ವಿಶೇಷ ವಿಮಾನಗಳಲ್ಲಿ ಪರ ಊರುಗಳಿಗೆ ಪಯಣ, ಪಂಚತಾರಾ ಹೋಟೆಲ್‌ ಗಳಲ್ಲಿ ವಾಸ್ತವ್ಯ, ಅಲ್ಲಿನ ರಾಜಕಾರಣಿಗಳು ಇವರಿಗೆ ನೀಡುವ ಬೆಂಬಲ, ಸೀಡಿ ತಯಾರಿಗಳು, ಅವುಗಳ ಮೂಲಕ ಬ್ಲಾಕ್‌ ಮೇಲ್‌, ಹಣದ ವರ್ಗಾವಣೆ – ಇತ್ಯಾದಿಗಳು ನಮ್ಮ ಚುನಾವಣೆಗಳನ್ನೇ ಅಣಕಿಸುವಂತಾಗಬಾರದು. ಸಮಾನ ಮನಸ್ಕರು ಒಟ್ಟು ಸೇರಿ ಸರಕಾರ ನಡೆಸಲಿ, ಅಥವಾ ಬಿಡಲಿ. ಆದರೆ ಅನೈತಿಕ ನಡವಳಿಗಳು ಸಲ್ಲ.

ಯಾವುದೇ ಚುನಾವಣೋತ್ತರ ಅಕ್ರಮಗಳನ್ನು ತಡೆಯಲು  ಕರ್ನಾಟಕದ ಜನರು ಈಗ ಪಕ್ಷಾತೀತವಾಗಿ ಸಿದ್ಧವಾಗಿದ್ದಾರೆ. ಜನಾಂದೋಲನ ರೂಪುಗೊಳ್ಳುತ್ತಿದೆ. ಮತದಾರರು ಈಗ ಎಚ್ಚೆತ್ತಿದ್ದಾರೆ. ಪರಿಸ್ಥಿತಿ ಹಿಂದಿನಂತಿಲ್ಲ ಎಂಬುದನ್ನು  ರಾಜಕಾರಣಿಗಳು ತಿಳಿದಿರಲಿ. ನಾವು ಭಕ್ತರೂ ಅಲ್ಲ, ಭಗವಂತರೂ ಅಲ್ಲ, ಕೇವಲ ಮತದಾರರು. ನಮಗೂ ಒಂದು ಶಕ್ತಿ ಇದೆ”.

ಅನೈತಿಕ ರಾಜಕಾರಣಕ್ಕೆ ಅವಕಾಶ ಇರದಿರಲಿ

ರಾಜಕೀಯವೇ ಇರಲಿ, ಅಥವಾ ಇನ್ಯಾವುದೇ ಇರಲಿ ಕರ್ನಾಟಕಕ್ಕೊಂದು ಭವ್ಯ ಇತಿಹಾಸವಿದೆ. ಅನೇಕ ಸಂಗತಿಗಳಲ್ಲಿ ಕರ್ನಾಟಕವು ದೇಶಕ್ಕೇ ಮಾದರಿಯಾದುದೂ ಇದೆ. ಆದರೆ ಇತ್ತೀಚಿನ ಕೆಲ ವರ್ಷಗಳ ಹಿಂದೆ ಬಿಜೆಪಿ ಪಕ್ಷವು ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಆವಿಷ್ಕರಿಸಿದ ‘ಆಪರೇಶನ್ ಕಮಲ’ ಎಂಬ ಅನೈತಿಕ ರಾಜಕಾರಣ ಕರ್ನಾಟಕದ ಹೆಸರಿಗೆ ಮಸಿ ಬಳಿಯುವಂತಾಗಿದೆ.

2009 ರಲ್ಲಿ ಮಾಡಿದ ಆ ತಪ್ಪನ್ನು ಬಿಜೆಪಿಯು 2019 ರಲ್ಲಿ ಮತ್ತೆ ಪುನರಾವರ್ತಿಸಿ ಅಧಿಕಾರ ಹಿಡಿಯಿತು. ಇದು ಸರಿಯಲ್ಲ. ಜನಾದೇಶವನ್ನು ಪಕ್ಷಗಳು ಗೌರವಿಸಬೇಕು. ನಾಳೆಯ ಫಲಿತಾಂಶದ ಬಳಿಕವಾದರೂ ರಾಜಕೀಯ ಪಕ್ಷಗಳು ಇಂತಹ ಅನೈತಿಕ ರಾಜಕಾರಣಕ್ಕೆ ಯತ್ನಿಸದಿರಲಿ ಎಂದು ಆಶಿಸೋಣ. ಗೆದ್ದವರು ಅಧಿಕಾರ ನಡೆಸಲಿ. ಸೋತವರು ವಿಪಕ್ಷದಲ್ಲಿ ಕುಳಿತು ತಮ್ಮ ಶಾಸಕ ನೆಲೆಯ ಮತ್ತು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವಂತಾಗಲಿ. ಯಾರೇ ಸೋಲಲಿ ಆದರೆ, ಒಟ್ಟಿನಲ್ಲಿ ಪ್ರಜಾತಂತ್ರ, ಸಂವಿಧಾನ ಮತ್ತು ಕರ್ನಾಟಕ ಗೆಲ್ಲುವಂತಾಗಲಿ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿhttps://peepalmedia.com/political-achievement-of-rapists/ http://ಅತ್ಯಾಚಾರಿಗಳ ರಾಜಕೀಯ ಸಾಧನೆ !!

Related Articles

ಇತ್ತೀಚಿನ ಸುದ್ದಿಗಳು