‘ಹಿಜಾಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಲು ಬಯಸುತ್ತೇನೆ’ ಎಂದು AIMIM ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ANI ಸುದ್ದಿ ಸಂಸ್ಥೆ ಹಂಚಿಕೊಂಡ ವಿಡಿಯೋ ಒಂದರಲ್ಲಿ ಓವೈಸಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿಜೆಪಿ ಪಕ್ಷದ ಅಜೆಂಡಾ ಭಾರತದ ವೈವಿಧ್ಯಮಯ ಪರಂಪರೆಯ ವಿರುದ್ಧವಾಗಿದೆ. ಭಾರತದ ಐಕ್ಯತೆಗೆ ಬಿಜೆಪಿ ಪಕ್ಷವೇ ಒಂದು ದೊಡ್ಡ ಕಂಟಕ. ಇದರ ಜೊತೆಗೆ ಬಿಜೆಪಿಯಿಂದಾಗಿ ಮುಸ್ಲಿಮರ ಅಸ್ಮಿತೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ಅನವಶ್ಯಕವಾಗಿ ಹಲಾಲ್ ಕಟ್ ವಿವಾದ ಎಬ್ಬಿಸಿ, ಹಲಾಲ್ ಮಾಂಸದ ಬಗ್ಗೆ ಜನರು ಕೆಟ್ಟ ದೃಷ್ಟಿಯಲ್ಲಿ ನೋಡುವಂತೆ ಮಾಡಲಾಗುತ್ತಿದೆ. ಆದರೆ ಬಿಜೆಪಿ ಮುಖಂಡರೇ ಹಲಾಲ್ ಕಮಿಷನ್ ಪಡೆಯುತ್ತಿರುವ ಬಗ್ಗೆ ವಿಡಿಯೊ ಸಾಕ್ಷ್ಯಗಳಿವೆ’ ಎಂದು ಹೇಳಿದ್ದಾರೆ. ಇದರ ಜೊತೆಗೆ ರಾಷ್ಟ್ರಾದ್ಯಂತ ಬಿಜೆಪಿ ಮುಸಲ್ಮಾನರ ಬಗ್ಗೆ ತಪ್ಪು ಭಾವನೆ ಹುಟ್ಟುವಂತೆ ವ್ಯವಸ್ಥಿತವಾದ ದ್ವೇಷ ಹರಡುತ್ತಿದೆ ಎಂದು ಬಿಜೆಪಿಯನ್ನು ಆರೋಪಿಸಿದೆ.
ಹಿಂದಿನಿಂದಲೂ AIMIM ಪಕ್ಷವನ್ನು ಬಿಜೆಪಿ ಪಕ್ಷದ ಬಿ ಟೀಮ್ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ಮೇಲೂ ಅಸಾದುದ್ದೀನ್ ಓವೈಸಿ ಹರಿಹಾಯ್ದಿದ್ದು, ‘ನಮಗೆ ಕಾಂಗ್ರೆಸ್ ಪಕ್ಷದ ಸರ್ಟಿಫಿಕೇಟ್ ಬೇಕಾಗಿಲ್ಲ, ಕಾಂಗ್ರೆಸ್ ನ ಕಳಪೆ ನಾಯಕತ್ವದಿಂದಲೇ ಮೋದಿ ಎರಡು ಅವಧಿಗೆ ಪ್ರಧಾನಿ ಆಗಿದ್ದು’ ಎಂದು ಕಾಂಗ್ರೆಸ್ ಮೇಲೂ ಆರೋಪ ಮಾಡಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಮದರಸಾಗಳ ಸರ್ವೆ ಕಾರ್ಯದ ಬಗ್ಗೆ ಪ್ರಸ್ತಾಪಿಸಿ ‘ಸರ್ಕಾರಗಳು RSS ಕೇಂದ್ರಿತ ಶಿಶು ಮಂದಿರ, ಶಾಲೆ, ಕ್ರೈಸ್ತ ಶಾಲೆ, ಖಾಸಗಿ ಶಾಲೆ ಕಾಲೇಜುಗಳ ಮೇಲೂ ಸರ್ವೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಓವೈಸಿ ಆರೋಪಕ್ಕೆ ತಿರುಗೇಟು ಕೊಟ್ಟ ಬಿಜೆಪಿ ಓವೈಸಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾಕೆ ಮಹಿಳೆಗೆ ನೀಡಿಲ್ಲ ಎಂಬುದಾಗಿ ತಿರುಗೇಟು ನೀಡಿದೆ.