Tuesday, August 27, 2024

ಸತ್ಯ | ನ್ಯಾಯ |ಧರ್ಮ

ಸಾವಿನ ಮನೆಯಲ್ಲಿ ಹೃದಯ ವಿದ್ರಾವಕ ದೃಶ್ಯಗಳು… ತಬ್ಬಿಕೊಂಡೇ ಸಾವಿನ ಮಡಿಲು ಸೇರಿದ ಕುಟುಂಬಗಳು; 270ಕ್ಕೆ ತಲುಪಿದ ಸಾವಿನ ಸಂ‍ಖ್ಯೆ

ವಯನಾಡು, ಜುಲೈ 31: ಪ್ರಕೃತಿ ವಿಕೋಪದಿಂದಾಗಿ ವಯನಾಡು ಮರುಭೂಮಿಯಾಗಿ ಮಾರ್ಪಟ್ಟಿದೆ. ಎತ್ತ ನೋಡಿದರೂ ಅವಶೇಷಗಳೇ ಕಾಣುವ ದುರಂತ ದೃಶ್ಯ. ಅವಶೇಷಗಳನ್ನು ತೆಗೆಯುತ್ತಿದ್ದಂತೆ ದೇಹಗಳು ಹೊರಬರುತ್ತಿವೆ. ಚಾಲಿಯಾರ್ ನದಿಯಲ್ಲಿ ಮೃತದೇಹಗಳು ತೇಲುತ್ತಲೇ ಇವೆ. ನೂರಾರು ಮನೆಗಳು ನಾಪತ್ತೆಯಾಗಿವೆ. ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಅವರ ಕುರುಹು ಸಿಗುತ್ತಿಲ್ಲದ ಕಾರಣ ಅವರ ಪ್ರೀತಿಪಾತ್ರರು ಚಿಂತಿತರಾಗಿದ್ದಾರೆ. ಕಣ್ಣೆದುರೇ ಪ್ರವಾಹದಲ್ಲಿ ಕುಟುಂಬಸ್ಥರು ಕೊಚ್ಚಿ ಹೋಗಿದ್ದಾರೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಹಲವು ಮನೆಗಳು ಕೆಸರಿನಲ್ಲಿ ಮುಳುಗಿವೆ. ಮುಂಡಕ್ಕೈ, ಚುರಲ್ಮಲಾ ಮತ್ತು ಮೆಪ್ಪಾಡಿ ಹೃದಯವಿದ್ರಾವಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿವೆ.

270ಕ್ಕೆ ತಲುಪಿದ ಸಾವಿನ ಸಂಖ್ಯೆ

ಭೂಕುಸಿತ ಘಟನೆಯಲ್ಲಿ ಇದುವರೆಗೆ 270 ಮೃತದೇಹಗಳು ಪತ್ತೆಯಾಗಿವೆ. ಚಾಲಿಯಾರ್ ನದಿಯಲ್ಲಿ ಕೊಚ್ಚಿಹೋಗಿದ್ದ 83 ಮೃತದೇಹಗಳನ್ನು ಹೊರತೆಗೆಯಲಾಗಿದೆ. 166 ಶವಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, 32 ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. 200 ಜನರು ಇನ್ನೂ ಅಧಿಕೃತವಾಗಿ ಕಾಣೆಯಾಗಿದ್ದಾರೆ. 191 ಮಂದಿ ಗಂಭೀರ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ 45 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ ಮತ್ತು 3,069 ಜನರನ್ನು ಸ್ಥಳಾಂತರಿಸಿದೆ. ಈಗಾಗಲೇ ಒಡೆದು ಹೋಗಿರುವ ಬಹುತೇಕ ಭೂಕುಸಿತಗಳು ತೆಗೆದಿಲ್ಲ. ಅನೇಕ ಮನೆಗಳಿಗೆ ಸಹಾಯ odgisuv ಕಾರ್ಯಕರ್ತರು ತಲುಪಿಲ್ಲ. ಪ್ರವಾಹದಲ್ಲಿ ಸುಮಾರು 500 ಮನೆಗಳು ಸಂಪೂರ್ಣ ಕೊಚ್ಚಿ ಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದಾಗಿ ಮೃತರ ಮತ್ತು ನಾಪತ್ತೆಯಾದವರ ಸಂಖ್ಯೆ ಭಾರೀ ಪ್ರಮಾಣದಲ್ಲಿರುವ ಸಾಧ್ಯತೆಯಿಇದೆ.

ಸೇತುವೆಗಳನ್ನು ನಿರ್ಮಿಸಿ..

ಮುಂಡಕ್ಕೈ, ಚುರಲ್ಮಲಾ ಮತ್ತು ಮೆಪ್ಪಾಡಿಯಲ್ಲಿ ಮಂಗಳವಾರ ರಾತ್ರಿ ಸ್ಥಗಿತಗೊಂಡಿದ್ದ ಪರಿಹಾರ ಕಾರ್ಯಾಚರಣೆ ಬುಧವಾರ ವೇಗ ಪಡೆದುಕೊಂಡಿದೆ. ಸಂತ್ರಸ್ತರನ್ನು ರಕ್ಷಿಸಲು ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಸೇನೆ, ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಮುಂಡಕ್ಕೈ ಮತ್ತು ಚುರಲ್‌ಮಲಾ ನಡುವಿನ ಸೇತುವೆ ಕುಸಿದಿರುವುದು ಪರಿಹಾರ ಕಾರ್ಯಕ್ಕೆ ದೊಡ್ಡ ಅಡಚಣೆಯಾಗಿದೆ. ಸೇನಾ ಸಿಬ್ಬಂದಿ ತಾತ್ಕಾಲಿಕ ಸೇತುವೆಯನ್ನು ಯುದ್ಧೋಪಾದಿಯಲ್ಲಿ ನಿರ್ಮಿಸುತ್ತಿದ್ದಾರೆ. ಸಣ್ಣ ಪ್ರವಾಹದ ಹೊಳೆಗಳಿಗೆ ಅಡ್ಡಲಾಗಿ ಬಿದ್ದ ಮರಗಳು ಮತ್ತು ಮರಳಿನ ಚೀಲಗಳೊಂದಿಗೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ಸಂತ್ರಸ್ತರನ್ನು ಸುರಕ್ಷಿತವಾಗಿ ಹೊರತರಲಾಗುತ್ತಿದೆ. ಮೆಪ್ಪಾಡಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಹ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಶಿಬಿರಗಳ ಸಂತ್ರಸ್ತರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

‘ಯಾರಾದರೂ ಬಂದು ನಮ್ಮನ್ನು ಕಾಪಾಡಿ’

ಚುರಲ್‌ಮಲಾ ಗ್ರಾಮದಲ್ಲಿ ಪತ್ತೆಯಾಗದ ನೀತು ಜೊಜೊ ಕೊನೆಯ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ಬೆಳಕಿಗೆ ಬಂದಿದೆ. ಅವರು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಾಳೆ. ತನ್ನ ಮನೆಗೆ ಪ್ರವಾಹದ ನೀರು ನುಗ್ಗಿದ್ದರಿಂದ ಎಚ್ಚರಗೊಂಡು ಚಿಂತಾಕ್ರಾಂತಳಾದರು. ಮಂಗಳವಾರ ಬೆಳಗಿನ ಜಾವ 1.30ರಿಂದ 2.30ರ ನಡುವೆ ತಾನು ಕೆಲಸ ಮಾಡುವ ಕಾಲೇಜಿಗೆ ಅವರು ಮೂರು ಬಾರಿ ಕರೆ ಮಾಡಿದ್ದಾರೆ. ‘ನಮ್ಮ ಇಡೀ ಮನೆ ಜಲಾವೃತವಾಗಿದೆ. ಯಾರಾದರೂ ಬಂದು ನಮ್ಮನ್ನು ರಕ್ಷಿಸಲು ಹೇಳಿ. ಇಲ್ಲವಾದರೆ ನಾವು ಕೊಚ್ಚಿ ಹೋಗುತ್ತೇವೆ’ ಎಂದು ಮನವಿ ಮಾಡಿದರು. ಚುರಲ್‌ಮಲಾಗೆ ಹೋಗುವ ಸೇತುವೆ ಕಡಿತಗೊಂಡಿದ್ದರಿಂದ ಅವರು ಸ್ನೇಹಿತರು ಮತ್ತು ಕಾಲೇಜು ಸಿಬ್ಬಂದಿ ಅಸಹಾಯಕರಾಗಿದ್ದರು. 2.50ಕ್ಕೆ ಮತ್ತೆ ಕರೆ ಮಾಡಿದಾಗ ನೀತೂ ನಾಪತ್ತೆಯಾಗಿದ್ದರು. ನೀತೂ ಅವರ ಮನೆಯ ಅಡುಗೆ ಮನೆ ಕೊಚ್ಚಿ ಹೋಗಿದೆ. ಆಕೆಯ ಕುಟುಂಬ ಬದುಕುಳಿದಿದೆ.

ನಾಲ್ಕು ದಶಕಗಳಲ್ಲಿ ಎರಡು ಘಟನೆಗಳು

ಮುಂಡಕೈಯಲ್ಲಿ ಈ ಹಿಂದೆಯೂ ಭೂಕುಸಿತ ಸಂಭವಿಸಿತ್ತು. ಜುಲೈ 1, 1984ರಂದು, ಪಟ್ಟಣದಲ್ಲಿ ಭಾರಿ ಭೂಕುಸಿತ ಸಂಭವಿಸಿ 14 ಜನರು ಸಾವನ್ನಪ್ಪಿದರು. ಆಗಲೂ ಚಾಲಿಯಾರ್ ನದಿಯಲ್ಲಿ ಹಲವು ಮೃತದೇಹಗಳು ಪತ್ತೆಯಾಗಿದ್ದವು. ಆಗಸ್ಟ್ 8, 2019ರಂದು, ಭಾರೀ ಮಳೆಯ ನಂತರ ಪಟ್ಟಣದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿ 22 ಜನರು ಸಾವನ್ನಪ್ಪಿದರು.

ಸ್ಮಶಾನ ಸ್ವರೂಪಿ ಮುಂಡಕ್ಕೈ ಮತ್ತು ಚುರಲ್ಮಲಾ ಪಟ್ಟಣಗಳು

ಮುಂಡಕ್ಕೈ ಮತ್ತು ಚುರಲ್ಮಲಾ ಪಟ್ಟಣಗಳು ​​ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಂಪೂರ್ಣವಾಗಿ ಹಾನಿಗೊಳಗಾಗಿವೆ. ನೂರಾರು ಮನೆಗಳು ಕುಸಿದಿವೆ. ಕೆಲವು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಎರಡೂ ಪಟ್ಟಣಗಳು ​​ಸಂಪೂರ್ಣವಾಗಿ ಕೆಸರಿನಿಂದ ಆವೃತವಾಗಿವೆ. ಸಮೀಪದಲ್ಲೇ ಜಲಪಾತಗಳಿದ್ದು, ಪ್ರವಾಸಿಗರಿಂದ ಸದಾ ಗಿಜಿಗುಡುವ ಈ ಪ್ರದೇಶಗಳು ಈಗ ಭೂತದ ಊರುಗಳನ್ನು ನೆನಪಿಸುತ್ತಿವೆ. ಈ ಪಟ್ಟಣಗಳಲ್ಲಿ ಅನೇಕ ಪ್ರದೇಶಗಳ ಕುರುಹುಗಳಿಲ್ಲ.

ಮೊದಲೇ ಎಚ್ಚರಿಕೆ ನೀಡಿದ್ದೆವು

ಜುಲೈ 23, 24, 25 ಮತ್ತು 26ರಂದು ಭಾರೀ ಮಳೆ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಕೇಂದ್ರವು ಕೇರಳಕ್ಕೆ ಎಚ್ಚರಿಕೆ ನೀಡಿದೆ. ಆದರೆ ಕೇರಳ ಸರ್ಕಾರ ಏನು ಮಾಡಿತು? ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿಕೊಟ್ಟಿದೆ.

  • ಕೇಂದ್ರ ಸಚಿವ ಅಮಿತ್ ಶಾ

ಘಟನೆ ಬಳಿಕ ರೆಡ್ ಅಲರ್ಟ್

115-204 ಮಿ.ಮೀ. ಸಾಧಾರಣ ಮಳೆಯಾಗಲಿದೆ ಎಂದು ಕೇಂದ್ರ ತಿಳಿಸಿತ್ತು. ಆದರೆ 572 ಮಿ.ಮೀ. ಮಳೆ ದಾಖಲಾಗಿದೆ. ಭೂಕುಸಿತದ ನಂತರವೇ ರೆಡ್ ಅಲರ್ಟ್ ಘೋಷಿಸಲಾಗಿದೆ. ನದಿಗಳಿಗೆ ಸಂಬಂಧಿಸಿದಂತೆ ಸಿಡಬ್ಲ್ಯುಸಿ ಎಚ್ಚರಿಕೆ ನೀಡಿಲ್ಲ. ಭೂಕುಸಿತದ ಸಣ್ಣ ಘಟನೆಗಳು ಸಂಭವಿಸಬಹುದು ಎಂದು GSI ಹಸಿರು ಎಚ್ಚರಿಕೆ ನೀಡಿತ್ತು. ದೂರುವ ಸಮಯ ಇದಲ್ಲ.

  • ಕೇರಳ ಸಿಎಂ ವಿಜಯನ್

ಸಾವಿನ ತೆಕ್ಕೆಯಲ್ಲಿ…

ಪರಿಹಾರ ಕಾರ್ಯಕರ್ತರು ಕುಸಿದ ಮನೆಗಳ ಅವಶೇಷಗಳನ್ನು ಮತ್ತು ಮನೆಗಳನ್ನು ಮುಳುಗಿಸಿದ ಮಣ್ಣನ್ನು ತೆಗೆಯುತ್ತಿರುವ ಮನ ಕಲಕುವ ದೃಶ್ಯಗಳು ಕಂಡು ಬರುತ್ತಿವೆ. ಕೆಲವು ಶವಗಳು ಕುಳಿತಿರುವುದು ಕಂಡುಬಂದರೆ ಇನ್ನು ಕೆಲವರು ಹಾಸಿಗೆಯ ಮೇಲೆ ಮಲಗಿದ್ದಾಗ ಸಾವನ್ನಪ್ಪಿದ್ದಾರೆ. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಕೆಲವರು ಕೊನೆಯ ಕ್ಷಣದವರೆಗೂ ಪ್ರಯತ್ನ ಪಟ್ಟಂತೆ ಕಾಣುತ್ತದೆ. ನಾಲ್ವರ ಮೃತ ದೇಹಗಳು ಪರಸ್ಪರ ಬಿಗಿಯಾಗಿ ಅಪ್ಪಿಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿವೆ.

ಎರಡು ಕುಟುಂಬಗಳನ್ನು ಉಳಿಸಿದ ಹಸು

ಚುರಲ್ಮಲಾದಲ್ಲಿ, ಒಂದು ಕುಟುಂಬವನ್ನು ಹಸು ರಕ್ಷಿಸಿದೆ. ಸೋಮವಾರ ಮಧ್ಯರಾತ್ರಿ ವಿನೋದ್ ಎಂಬುವರ ಗೋಶಾಲೆಯಲ್ಲಿದ್ದ ಹಸು ಕೂಗಲು ಆರಂಭಿಸಿತ್ತು. ವಿನೋದ್ ಹೋಗಿ ನೋಡಿದಾಗ ಅಲ್ಲಿ ಪ್ರವಾಹದ ನೀರು ಸುತ್ತುವರೆದಿತ್ತು. ಇದರಿಂದ ಎಚ್ಚೆತ್ತುಕೊಂಡ ಅವರ ಕುಟುಂಬದ ಮೂವರು ಗುಡ್ಡದ ಮೇಲಿನ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಮೆಪ್ಪಾಡಿ ಗ್ರಾಮದಲ್ಲಿರುವ ಅತ್ತಿಗೆಯನ್ನು ಕರೆಸಿಕೊಂಡ ಕಾರಣ ಅವರೂ ಸುರಕ್ಷಿತ ಸ್ಥಳಕ್ಕೆ ತೆರಳಿ ಪ್ರಾಣ ಉಳಿಸಿಕೊಂಡರು.

ಭರ್ತಿಯಾಗುತ್ತಿವೆಶವಾಗಾರಗಳು

ಕೆಲವು ಕುಟುಂಬಗಳಲ್ಲಿ ಒಬ್ಬರೂ ಉಳಿಯದ ಕಾರಣ ಸ್ವಯಂಸೇವಕರು ಅಂತಿಮ ಸಂಸ್ಕಾರವನ್ನು ಮುಗಿಸುತ್ತಿದ್ದಾರೆ. ಮೆಪ್ಪಾಡಿಯ ಜುಮಾ ಮಸೀದಿಯಲ್ಲಿ 30 ಮೃತದೇಹಗಳ ಅಂತಿಮ ಸಂಸ್ಕಾರ ನೆರವೇರಿಸಲಾಯಿತು ಎಂದು ಮಸೀದಿ ಸಮಿತಿ ಉಪಾಧ್ಯಕ್ಷ ಮುಸ್ತಫಾ ಮೌಲವಿ ತಿಳಿಸಿದ್ದಾರೆ. ಮುಂಡಕ್ಕೈಯಲ್ಲಿರುವ ಮಸೀದಿಯಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು. ಅನೇಕ ಮೃತ ದೇಹಗಳನ್ನು ಗುರುತಿಸಲು ಯಾರೂ ಇಲ್ಲದ ಕಾರಣ ಶವಾಗಾರಗಳು ಸಹ ತುಂಬುತ್ತಿವೆ.

7 ನದಿಗಳು ಉಗ್ರ

ಕೇರಳದ ಏಳು ನದಿಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಏರಿದೆ ಎಂದು ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ. ಏಳು ನದಿಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಐದು ನದಿಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ನದಿಗಳ ಜಲಾನಯನ ಪ್ರದೇಶದ ಜನರು ಎಚ್ಚರದಿಂದ ಇರುವಂತೆ ಸೂಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page