Sunday, August 18, 2024

ಸತ್ಯ | ನ್ಯಾಯ |ಧರ್ಮ

ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ನಿಧನ

ಪಶ್ಚಿಮ ಬಂಗಾಳದ ಮಾಜಿ ಸಿಎಂ ಹಾಗೂ ಸಿಪಿಎಂ ಹಿರಿಯ ನಾಯಕ ಬುದ್ಧದೇವ್ ಭಟ್ಟಾಚಾರ್ಯ (80) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಕೋಲ್ಕತ್ತಾದಲ್ಲಿ ಕೊನೆಯುಸಿರೆಳೆದರು.

ಅವರು 2000ರಿಂದ 2011ರವರೆಗೆ ಸತತ 11 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಅವರು ಬಲ್ಲಿಗಂಜ್‌ ಪ್ರದೇಶದ ಎರಡು ಕೊಠಡಿಗಳ ಸರ್ಕಾರಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸಿಸುತ್ತಿದ್ದರು.

ಭಟ್ಟಾಚಾರ್ಯ ಅವರು ಮಾರ್ಚ್ 1, 1944ರಂದು ಉತ್ತರ ಕೋಲ್ಕತ್ತಾದಲ್ಲಿ ಜನಿಸಿದರು. 1966ರಲ್ಲಿ ಸಿಪಿಎಂನ ಪ್ರಾಥಮಿಕ ಸದಸ್ಯರಾದರು. 1968ರಲ್ಲಿ, ಅವರು ಪಶ್ಚಿಮ ಬಂಗಾಳ ಡೆಮಾಕ್ರಟಿಕ್ ಯೂತ್ ಫೆಡರೇಶನ್‌ನ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು 1971ರಲ್ಲಿ ಸಿಪಿಎಂ ರಾಜ್ಯ ಸಮಿತಿಯ ಸದಸ್ಯರಾದರು, 1982ರಲ್ಲಿ ಸೆಕ್ರೆಟರಿಯೇಟ್ ಸದಸ್ಯರಾದರು. 1984ರಿಂದ ಪಕ್ಷದ ಕೇಂದ್ರ ಸಮಿತಿಯ ಸಾಮಾನ್ಯ ಅತಿಥಿ ಸದಸ್ಯರಾಗಿದ್ದರು. ಅವರು 1985ರಲ್ಲಿ ಕೇಂದ್ರ ಸಮಿತಿಯ ಸದಸ್ಯರಾಗಿ ಮತ್ತು 2000 ಇಸವಿಯಿಂದ ಪಾಲಿಟ್‌ಬ್ಯೂರೊ ಸದಸ್ಯರಾಗಿ ಸೇವೆ ಸಲ್ಲಿಸಿದರು.

1977ರಲ್ಲಿ, ಅವರು ಮೊದಲ ಬಾರಿಗೆ ಕೊಸ್ಸಿಪುರದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. 1987ರಲ್ಲಿ ಸೋತರೂ ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಚಿವರಾದರು. ಅವರು 1987-96ರವರೆಗೆ ಸಂವಹನ ಮತ್ತು ಸಂಸ್ಕೃತಿ ಇಲಾಖೆ ಮತ್ತು 1996-99ರವರೆಗೆ ಗೃಹ ವ್ಯವಹಾರಗಳ ಸಚಿವಾಲಯವನ್ನು ಹೊಂದಿದ್ದರು.

ಭಟ್ಟಾಚಾರ್ಯ ಜುಲೈ 2000ರಲ್ಲಿ ಉಪಮುಖ್ಯಮಂತ್ರಿಯಾದರು. ಅದೇ ವರ್ಷ ನವೆಂಬರ್‌ನಲ್ಲಿ ಅನಾರೋಗ್ಯದ ಕಾರಣ ಜ್ಯೋತಿ ಬಸು ಅವರು ನಿವೃತ್ತರಾದಾಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪಶ್ಚಿಮ ಬಂಗಾಳದ ಕೈಗಾರಿಕೀಕರಣದ ಬಗ್ಗೆ ಅವರು ದೃಢವಾದ ನಿಲುವು ತಳೆದಿದ್ದ ಅವರು ಹೆಂಡತಿ ಮೀರಾ, ಮಗಳು ಸುಚೇತನಾ ಅವರನ್ನು ಅಗಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page