Friday, June 14, 2024

ಸತ್ಯ | ನ್ಯಾಯ |ಧರ್ಮ

ನಾವೆಲ್ಲರೂ ಮುಟ್ಟಾಗುವ ಹೆಣ್ಣಿನ ಒಡಲ ಉತ್ಪನ್ನಗಳೇ…

ಹಿಂದಿನ ಕಾಲದಲ್ಲಿ  ರೈತಾಪಿ ಜನರಿಗೆ ಹೆಣ್ಣಿನ ಮುಟ್ಟು ಶ್ರೇಷ್ಠ  ಮತ್ತು ಫಲವಂತಿಕೆಯ ಸಂಕೇತವಾಗಿತ್ತು. ಮಹಿಳೆಯ ಮುಟ್ಟಿನ ಸ್ರಾವವನ್ನು ಹೊಲಗದ್ದೆಗಳಲ್ಲಿ ಚೆಲ್ಲಿದರೆ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ ಎಂಬ ನಂಬಿಕೆಯಲ್ಲಿ ಅದನ್ನು ಹೊಲ ಗದ್ದೆಗಳಲ್ಲಿ ಚೆಲ್ಲುವುದರ ಮೂಲಕ ಹೆಣ್ಣನ್ನು ಮತ್ತು ಅವಳ ಮುಟ್ಟನ್ನು ಶ್ರೇಷ್ಠವೆಂದು ಭಾವಿಸಲಾಗಿತ್ತು- ಪ್ರಿಯಾಂಕಾ ಮಾವಿನಕರ್

ಮುಡಿಚೆಟ್ಟಿನೊಳ ಬಂದು ಮುಟ್ಟಿ ತಟ್ಟಿ ಅಂತೀರಿ

ಮುಡಿಚೆಟ್ಟು ಎಲ್ಲ್ಯಾದ ಹೇಳಣ್ಣ?

ಮುಟ್ಟಾದ ಮೂರು ದಿನಕ ಹುಟ್ಟಿ ಬರತಿರಿ ನೀವು

ಮುಡಿಚೆಟ್ಟು ಎಲ್ಲ್ಯಾದ ಹೇಳಣ್ಣ..?

ಹೈದ್ರಾಬಾದ ಕರ್ನಾಟಕದ  ತತ್ವಪದಕಾರ ಕಡಿಕೋಳ ಮಡಿವಾಳಪ್ಪನವರು ಹೆಣ್ಣಿನ ಮುಟ್ಟು ಸೂತಕವೆಂದು ಹಾಗೂ ಅವಳು ಮೈಲಿಗೆ ಎಂದು ಹೇಳುವ  ಮೂಢರಿಗೆ ಮುಟ್ಟಿನಿಂದಲೆ ಹುಟ್ಟಿ ಬಂದಿರಲ್ಲಪ್ಪ ನೀವು  ಮುಡಿಚೆಟ್ಟು ಎಲ್ಲ್ಯಾದ ಹೇಳಿ ಎಂದು ಕೇಳಿದ ಪ್ರಶ್ನೆ.

ಹೆಣ್ಣೆಂದರೆ ಸೂತಕ ಎನ್ನುವ  ಈ ಪುರುಷಪ್ರಧಾನ ವ್ಯವಸ್ಥೆಯ  ಕುಡಿಗಳೆಲ್ಲರೂ ಮುಟ್ಟಾಗುವ ಹೆಣ್ಣಿನ ಉತ್ಪನ್ನಗಳೇ.. ಹೌದು. ಮುಟ್ಟು ಮೈಲಿಗೆ ಎಂದು ಭಾವಿಸುವ ಪ್ರತಿಯೊಬ್ಬರೂ ಮುಟ್ಟಾಗುವ ಹೆಣ್ಣಿನ ಒಡಲಲ್ಲೇ  ಜೀವ ಪಡೆದವರಲ್ಲವೇ?

2019ರಲ್ಲಿ ಮೈಸೂರು ದಸರಾ ಕ್ಕೆ ಚಾಲನೆ ನೀಡಿ “ ಮಹಿಳೆಯರು ಮುಟ್ಟಾದಾಗ  ಆಫೀಸಿಗೆ ಹೋಗಬಹುದು, ಅದು ಅವರಿಗೆ ಸಂಬಂಧಪಟ್ಟಿದ್ದು. ಆದರೆ ದೇವಸ್ಥಾನಕ್ಕೆ ಹೋಗಬಾರದು. ಅಯ್ಯಪ್ಪ ದೇವಸ್ಥಾನವನ್ನು ಪ್ರವೇಶಿಸಬಾರದು, ಅದೊಂದು ನಂಬಿಕೆಯೆಂದು ಮುಟ್ಟು ಸೂತಕ ಎಂಬ ರೀತಿಯಲ್ಲಿ ಸಾಹಿತಿ ಎಸ್ ಎಲ್ ಭೈರಪ್ಪನವರ ಬಿಂಬಿಸಿರುವುದು ಈಗಲೂ ಚಾಲನೆಯಲ್ಲಿದೆ.

 ಈಗ ಇವನ್ಯಾರೊ ನಾಲಾಯಕ್ ಮಹಿಳೆಯರು ಮಾಡಿದ ಆಹಾರ ಸೇವಿಸಿದರೆ ಪಶುಜನ್ಮ, ನಾಯಿ ಜನ್ಮದಲ್ಲಿ ಜನಿಸುತ್ತಾರೆಂದು ಹೇಳಿಕೆ ನೀಡಿದ್ದಾನೆ. 

ಹಿಂದಿನ ಕಾಲದಲ್ಲಿ  ರೈತಾಪಿ ಜನರಿಗೆ ಹೆಣ್ಣಿನ ಮುಟ್ಟು ಶ್ರೇಷ್ಠ  ಮತ್ತು ಫಲವಂತಿಕೆಯ ಸಂಕೇತವಾಗಿತ್ತು. ಒಂದು ಜೀವಕ್ಕೆ ಜೀವ ಕೊಡುವುದು ಮಹಿಳೆ. ಅವಳೇ ಶ್ರೇಷ್ಠವೆಂದು ಅನೇಕ ಬುಡಕಟ್ಟು ಜನಾಂಗದವರ ನಂಬಿಕೆಯೂ ಆಗಿತ್ತು. ಹಾಗಾಗಿ ಮಹಿಳೆ ಮತ್ತು ಅವಳ ಮುಟ್ಟಿನ ರಕ್ತಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು.  ಮಹಿಳೆಯ ಮುಟ್ಟಿನ ಸ್ರಾವವನ್ನು ಹೊಲಗದ್ದೆಗಳಲ್ಲಿ ಚೆಲ್ಲಿದರೆ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ ಎಂಬ ನಂಬಿಕೆಯಲ್ಲಿ ಅದನ್ನು ಹೊಲ ಗದ್ದೆಗಳಲ್ಲಿ ಚೆಲ್ಲುವುದರ ಮೂಲಕ ಹೆಣ್ಣನ್ನು ಮತ್ತು ಅವಳ ಮುಟ್ಟನ್ನು ಶ್ರೇಷ್ಠವೆಂದು ಭಾವಿಸಲಾಗಿತ್ತು.

ಅಸ್ಸಾಂ ರಾಜ್ಯದ ಗುವಾಹಟಿಯ ನೀಲಾಚಲ ಬೆಟ್ಟದ ಮೇಲೆ ಕಾಮ್ಯಕ ದೇವಿ ಎಂಬ ಮುಟ್ಟಿನ ದೇವತೆಯ ದೇವಸ್ಥಾನವಿದೆ ಹಾಗೂ ಅಸ್ಸಾಂನ ಬ್ರಹ್ಮಪುತ್ರ ನದಿಯ ತೀರದಲ್ಲಿ ಯೋನಿದೇವತೆ ದೇವಸ್ಥಾನವೂ ಇದೆ. ಮಹಿಳೆಯು ಮೈಲಿಗೆ, ಸೂತಕವೆಂದು ವಾದ ಮಾಡುವವರೆಲ್ಲ ಮಹಿಳೆಯೆಂದರೆ ಒಂದು ಜೀವಕ್ಕೆ ಜೀವ ಕೊಡುವ ಜೀವ, ಅವಳ ಮುಟ್ಟು ಫಲವಂತಿಕೆಯ ಸಂಕೇತ ಎಂಬುದನ್ನು  ಅರ್ಥ ಮಾಡಿಕೊಳ್ಳಬೇಕು.

ಹೆಣ್ಣಿನ ಮುಟ್ಟಿನ ಬಗ್ಗೆ ನಮಗೆಲ್ಲ ತಪ್ಪು ಕಲ್ಪನೆಗಳೆ ಹೆಚ್ಚಾಗಿವೆ. ಅದರಿಂದ ಹೊರ ಬಂದು ವೈಜ್ಞಾನಿಕವಾಗಿ ನೋಡಬೇಕು. ಮುಟ್ಟಿನ ಸಮಯದಲ್ಲಿ ಕೆಲವು ಮಹಿಳೆಯರಲ್ಲಾಗುವ ಮಾನಸಿಕ ತೊಳಲಾಟಗಳು, ಕೋಪ, ಸಿಟ್ಟು, ಅಸಹಾಯಕತೆ, ನಿರಾಸಕ್ತಿ, ಹೊಟ್ಟೆನೋವು ಎಲ್ಲವೂ  ಒಮ್ಮೆಲೆ ಅವಳ ಮೇಲೆ ಅಲೆಗಳಂತೆ ಅಪ್ಪಳಿಸುತ್ತವೆ. ಆ ಸಮಯದಲ್ಲಿ ಅವಳನ್ನು ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳಬೇಕಾದ ಮನೆಯವರು ಸೂತಕವೆಂದು ಭಾವಿಸಿ ಮನೆಯಿಂದ ಹೊರಗೆ  ಕೂರಿಸುತ್ತಾರೆ.

ಈ ಹಿಂದೆ ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ಕೋಳಗುಂದದ  ಗೊಲ್ಲರಹಟ್ಟಿಯಲ್ಲಿ ಪ್ರತಿ ತಿಂಗಳು ಋತುಮತಿಯಾಗುವ ಹೆಣ್ಣು ಮಕ್ಕಳನ್ನು ಹಾಗೂ ಬಾಣಂತಿಯರನ್ನು ಊರಿಂದ ಹೊರಗೆ ಗುಡಿಸಲು ಹಾಕಿ ಅದರಲ್ಲಿ ಇರಿಸುವಂತಹ ಅನಿಷ್ಟ ಪದ್ಧತಿ ಆಚರಣೆಯಲ್ಲಿತ್ತು. 2015ರಲ್ಲಿ ಈ ಅನಿಷ್ಠ ಪದ್ಧತಿಯ ವಿರುದ್ಧ ಹೋರಾಡಿ ಮುಟ್ಟಿನ ಮೌಢ್ಯವನ್ನು  ಮೆಟ್ಟಿ ನಿಂತು ಈ ಕೆಟ್ಟ ಪದ್ಧತಿಯನ್ನು ಆಚರಿಸುವುದಿಲ್ಲವೆಂದು ಗ್ರಾಮಸ್ಥರೆಲ್ಲರೂ ಪ್ರತಿಜ್ಞೆ ಮಾಡಿದ್ದರು. ಆದರೆ, ಜನಸಾಮಾನ್ಯರಿಗೆ ಮುಟ್ಟು ಎಂಬುದು ಪ್ರಕೃತಿ ಸಹಜವಾದದ್ದು ಎಂದು ಅರಿವು ಮೂಡಿಸಬೇಕಾದ ನಾಡಿನ ಹಿರಿಯ ಸಾಹಿತಿಗಳಾದ ಎಸ್ ಎಲ್ ಭೈರಪ್ಪನವರು ಮುಟ್ಟಿನ ಸಮಯದಲ್ಲಿ ದೇವಸ್ಥಾನ ಪ್ರವೇಶಿಸಬಾರದೆಂದು ಮಹಿಳಾ ವಿರೋಧಿ ಹೇಳಿಕೆಯೊಂದನ್ನು ನೀಡಿ ಸಮಾಜದಲ್ಲಿ ಹಾಸುಹೊಕ್ಕಿರುವ ಮುಟ್ಟಿನ ಕುರಿತಾದ ಮೂಢನಂಬಿಕೆಗೆ ಮತ್ತಷ್ಟು ನೀರೆರಿದಿದ್ದರು. ಗುಜರಾತ್ ನ ಭುಜ್ ನಲ್ಲಿರುವ ಸ್ವಾಮಿ ನಾರಾಯಣ ದೇಗುಲದ ಸ್ವಾಮಿ ಕೃಷ್ಣ ಸ್ವರೂಪ್ ದಾಸ್ ಎಂಬ ಮತಿಹೀನನೊಬ್ಬ ” “ಮುಟ್ಟಾದ ಮಹಿಳೆ ತಯಾರಿಸಿದ ಆಹಾರವನ್ನು ಒಮ್ಮೆ ಸೇವಿಸಿದರೂ ಅಂಥವರು ಮುಂದಿನ ಜನ್ಮದಲ್ಲಿ ಪಶುವಾಗಿ ಜನಿಸುತ್ತಾರೆ” ಎಂದು ಮತ್ತಷ್ಟೂ ಈಗ ಪುಷ್ಟಿ ನೀಡಿದ್ದಾನೆ. ಯಾಕೆ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅಡುಗೆ ಮಾಡಬಾರದು? ದೇವಸ್ಥಾನ ಪ್ರವೇಶಿಸಬಾರದು?

ಇನ್ನೂ ಮುಟ್ಟಿನ ಮೌಢ್ಯದಿಂದ ಹೊರಬರದೆ ಇರುವವರೆಲ್ಲ ಮುಟ್ಟು ತಾಯ್ತನದ ಸಂಕೇತ, ಮುಟ್ಟು ಸೃಷ್ಟಿಯ ಗುಟ್ಟು, ಮುಟ್ಟು ಮೈಲಿಗೆಯಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು.

ಪ್ರಿಯಾಂಕಾ ಮಾವಿನಕರ್

ಹವ್ಯಾಸಿ ಬರಹಗಾರ್ತಿ, ಕಲಬುರುಗಿ.

Related Articles

ಇತ್ತೀಚಿನ ಸುದ್ದಿಗಳು