Home ದೇಶ ಮೀಸಲಾತಿ: ಕೆನೆಪದರ ನೀತಿ ಜಾರಿಗೆ ತರುವುದಿಲ್ಲ – ಕೇಂದ್ರ ಸರ್ಕಾರ

ಮೀಸಲಾತಿ: ಕೆನೆಪದರ ನೀತಿ ಜಾರಿಗೆ ತರುವುದಿಲ್ಲ – ಕೇಂದ್ರ ಸರ್ಕಾರ

0

ಹೊಸದಿಲ್ಲಿ, ಆಗಸ್ಟ್ 9: ಸಂವಿಧಾನದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯಲ್ಲಿ ಕೆನೆ ಪದರದ ನಿಯಮವನ್ನು ತರುವುದಿಲ್ಲ ಎಂದು ಕೇಂದ್ರ ಸಚಿವ ಸಂಪುಟ ಶುಕ್ರವಾರ ಸ್ಪಷ್ಟಪಡಿಸಿದೆ.

ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯಲ್ಲಿ ಕೆನೆಪದರ ವ್ಯವಸ್ಥೆ ಜಾರಿಯಾಗಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ನೀಡಿರುವ ಸಲಹೆಗಳ ಕುರಿತು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸರ್ಕಾರ ಸಂವಿಧಾನದ ನಿಯಮಗಳಿಗೆ ಬದ್ಧವಾಗಿದ್ದು, ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

‘PMAY-G’ ಅನುಮೋದನೆ

ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಎರಡು ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಏತನ್ಮಧ್ಯೆ, ದೇಶದಲ್ಲಿ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ರೂ.1,766 ಕೋಟಿ ವೆಚ್ಚದೊಂದಿಗೆ ಕ್ಲೀನ್ ಪ್ಲಾಂಟ್ ಪ್ರೋಗ್ರಾಂ (ಸಿಪಿಪಿ) ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಕ್ರೀಮಿ ಲೇಯರ್ ಕುರಿತು ಬಿಜೆಪಿ ಸಂಸದರು ಪ್ರಧಾನಿ ಭೇಟಿ

ಎಸ್‌ಸಿ ಮತ್ತು ಎಸ್‌ಟಿಗಳಲ್ಲಿ ಕೆನೆಪದರಕ್ಕೆ ಮಾನ್ಯತೆ ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ಟೀಕೆಗಳ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರ ಗುಂಪು ಶುಕ್ರವಾರ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಕ್ರೀಮಿ ಲೇಯರ್ ವಿಚಾರವಾಗಿ ಸಂಸದರು ಮೋದಿ ಎದುರು ಕಳವಳ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಗಳು ಎಸ್ಸಿ ಮತ್ತು ಎಸ್ಟಿಯಲ್ಲಿ ಕೆನೆಪದರವನ್ನು ಗುರುತಿಸುವ ನೀತಿಯನ್ನು ರೂಪಿಸಬೇಕು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಇದೇ ತಿಂಗಳ 1ರಂದು ಹೇಳಿಕೆ ನೀಡಿದ್ದರು.

ನ್ಯಾಯಾಲಯದ ಹೇಳಿಕೆಗಳನ್ನು ಸರ್ಕಾರ ಜಾರಿಗೆ ತರುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆಂದು ಸಂಸದರ ನಿಯೋಗ ಹೇಳಿದೆ.

You cannot copy content of this page

Exit mobile version