Home ಲೋಕಸಭೆ ಚುನಾವಣೆ -2024 ನಾವು ಎನ್‌ಡಿಎ ಜೊತೆಗೆ: ಚಂದ್ರಬಾಬು ನಾಯ್ಡು ಪುನರುಚ್ಛಾರ

ನಾವು ಎನ್‌ಡಿಎ ಜೊತೆಗೆ: ಚಂದ್ರಬಾಬು ನಾಯ್ಡು ಪುನರುಚ್ಛಾರ

0

ಅಮರಾವತಿ: ಈ ಮೊದಲೇ ಹೇಳಿದಂತೆ ನಮ್ಮ ಪಕ್ಷವು ಕೇಂದ್ರದಲ್ಲಿ ಸರಕಾರ ರಚನೆಗೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲ ನೀಡುತ್ತದೆ ಎಂದು ಟಿಡಿಪಿ ಮುಖ್ಯಸ್ಥ ಎನ್‌ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಯಾವಾಗಲೂ ಸುದ್ದಿ ಬೇಕು. ನನಗೆ ಅನುಭವ ಇದೆ. ನಾನು ಈ ದೇಶದಲ್ಲಿ ಹಲವಾರು ರಾಜಕೀಯ ಬದಲಾವಣೆಗಳನ್ನು ನೋಡಿದ್ದೇನೆ. ನಾವು ಎನ್‌ಡಿಎಯಲ್ಲಿದ್ದೇವೆ, ನಾನು ಎನ್‌ಡಿಎ ಸಭೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ದೆಹಲಿಗೆ ಹೋಗುತ್ತಿದ್ದೇನೆ. ಮತದಾರರ ಬೆಂಬಲ ಖುಷಿ ನೀಡಿದೆ. ರಾಜಕಾರಣದಲ್ಲಿ ಏಳು ಬೀಳುಗಳು ಸಹಜ. ಇದೊಂದು ಐತಿಹಾಸಿಕ ಚುನಾವಣೆ. ಟಿಡಿಪಿ ಇಂದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪಕ್ಷದ ಕಾರ್ಯಕರ್ತರ ಶ್ರಮವಿದೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಐದು ವರ್ಷಗಳ ಕಾಲ ಹೋರಾಟ ನಡೆಸಿದೇವು. ಈಗ ಆ ಹೋರಾಟ ಫಲ ಕೊಟ್ಟಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 293 ಸ್ಥಾನಗಳನ್ನು, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟವು 233 ಸ್ಥಾನಗಳನ್ನು ಮತ್ತು ಇತರರು 17 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಬಿಜೆಪಿಗೆ ಸಂಪೂರ್ಣ ಬಹುಮತ ಸಿಗದ ಕಾರಣ ಟಿಡಿಪಿ ಮತ್ತು ಜೆಡಿಯು ಈಗ ಸರ್ಕಾರ ರಚಿಸಲುಯ ಕಿಂಗ್‌ ಮೇಕರ್‌ ಆಗಿದ್ದಾರೆ.

ಈ ಎರಡೂ ಪಕ್ಷಗಳು ಚುನಾವಣೆ ಪೂರ್ವದಲ್ಲೇ ಎನ್‌ಡಿಎ ಜೊತೆ ಮೈತ್ರಿಯನ್ನು ಮಾಡಿಕೊಂಡಿದ್ದವು. ಆದರೆ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟದ ನಾಯಕರು ನಾಯ್ಡು ಮತ್ತು ನಿತೀಶ್‌ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಚಂದ್ರಬಾಬು ನಾಯ್ಡು ನಿರಾಕರಿಸಿದ್ದು, ಇಂದು ಬೆಳಗ್ಗೆ ದೆಹಲಿಗೆ ಎನ್‌ಡಿಎ ಸಭೆಗೆ ಹಾಜರಾಗಲು ದೆಹಲಿಗೆ ತೆರಳಿದರು.

You cannot copy content of this page

Exit mobile version