Friday, October 11, 2024

ಸತ್ಯ | ನ್ಯಾಯ |ಧರ್ಮ

ಚನ್ನಪಟ್ಟಣವನ್ನು ಬಿಟ್ಟು ಕೊಡುತ್ತೇವೆ ಎಂದು ನಾವು ಹೇಳಿಲ್ಲ: ಸಚಿವ ಕುಮಾರ ಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಗೆ ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವ ಗೊಂದಲ ಇನ್ನೂ ಪರಿಹಾರಗೊಂಡಿಲ್ಲ. ಸಿ ಪಿ ಯೋಗೇಶ್ವರ್‌ ಈ ಸೀಟಿನ ಮೇಲೆ ಕಣ್ಣಿಟ್ಟಿರುವ ಹೊತ್ತಿನಲ್ಲೇ ಕುಮಾರ ಸ್ವಾಮಿಯವರು ನಾವು ಚನ್ನಪಟ್ಟಣವನ್ನು ಬಿಟ್ಟುಕೊಡುತ್ತೇವೆ ಎಂದು ಹೇಳಿಲ್ಲ ಎಂದಿದ್ದಾರೆ.

ಕುಮಾರಸ್ವಾಮಿಯವರ ಹೇಳಿಕೆಯೊಂದಿಗೆ ಈಗ ಮತ್ತೊಮ್ಮೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವಿಷಯದಲ್ಲಿ ಕ್ಷೇತ್ರ ಬಿಟ್ಟುಕೊಡುವ ಯಾವ ಒಪ್ಪಂದವೂ ಆಗಿಲ್ಲ. ನಿಖಿಲ್‌ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಬಗ್ಗೆಯೂ ನಾನು ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನುವ ಮೂಲಕ ಕುಮಾರಸ್ವಾಮಿ ಮತ್ತೊಮ್ಮೆ ಮಗನಿಗೆ ತನ್ನ ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆಗಳ ಕುರಿತು ಮಾತನಾಡಿದ್ದಾರೆ.

“ಪ್ರಾರಂಭದಲ್ಲೇ ಯೋಗೇಶ್ವರ್‌ ಅವರಿಗೆ ಲೋಕಸಭೆಗೆ ಸ್ಪರ್ಧಿಸುವಂತೆ ಹೇಳಿದ್ದೆ. ಆದರೆ ಅಮಿತ್‌ಶಾ ಕರೆ ಮಾಡಿ, ಡಾ| ಮಂಜುನಾಥ್‌ ಅವರನ್ನು ಸ್ಪರ್ಧೆಗೆ ಒಪ್ಪಿಸಿ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಅವರನ್ನು ಕಣಕ್ಕಿಳಿಸಲಾಯಿತು ಎಂದರು. ಚನ್ನಪಟ್ಟಣ ಟಿಕೆಟ್‌ ವಿಚಾರವಾಗಿ ಯೋಗೇಶ್ವರ್‌ ಒಂದು ಬಾರಿ ನನ್ನನ್ನು ಭೇಟಿ ಮಾಡಿದ್ದರು. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೆ. ಅನಂತರ ನನ್ನ ಬಳಿ ಬಂದಿಲ್ಲ” ಎನ್ನುವ ಮೂಲಕ ಕುಮಾರಸ್ವಾಮಿ ಯೋಗೇಶ್ವರ್‌ ಉಮೇದುವಾರಿಕೆಯನ್ನು ಬಹುತೇಕ ಅಲ್ಲಗಳೆದಿದ್ದಾರೆ.

ಇತ್ತ ಡಿಕೆ ಸಹೋದರರೂ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಇಬ್ಬರೂ ಒಂದೇ ಸಮನೇ ಕ್ಷೇತ್ರ ಪರ್ಯಟನೆ ಮಾಡುತ್ತಿದ್ದಾರೆ. ಅಲ್ಲಿಂದ ಡಿ ಕೆ ಸುರೇಶ್‌ ಕಣಕ್ಕಿಳಿಯುವ ಕುರಿತಾಗಿಯೂ ಮಾತುಗಳು ಕೇಳಿಬರುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page