Monday, June 17, 2024

ಸತ್ಯ | ನ್ಯಾಯ |ಧರ್ಮ

ಇಲ್ಲಿ ನಮ್ಮವರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನದಿಂದ ಕರೆತಂದು ಉದ್ಯೋಗ ಕೊಡುವುದು ಸರಿಯೇ?: CAA ಕುರಿತು ಕೇಜ್ರಿವಾಲ್‌ ಪ್ರತಿಕ್ರಿಯೆ

ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ ಸಂಖ್ಯೆಯ ಹಿಂದೂ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಬರುವಂತೆ ಮಾಡುತ್ತೇವೆ,  ಕರೆ ತರುತ್ತೇವೆ. ಅವರಿಗೆ ಉದ್ಯೋಗ ಕೊಡಿಸುತ್ತೇವೆ, ಮನೆ ಕಟ್ಟಿಸಿಕೊಡುತ್ತೇವೆ, ಇಲ್ಲೇ ನೆಲೆಸುವಂತೆ ಮಾಡುತ್ತೇವೆ ಅನ್ನುವುದು ವಿಚಿತ್ರ ಅಲ್ಲವೇ ಎಂದು ಪ್ರಶ್ನಿಸಿದರು.

 ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರಕ್ಕೆ ಯಾವ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಚುನಾವಣೆ ಸಂದರ್ಭದಲ್ಲಿ CAA ಜಾರಿಗೆ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಸರ್ಕಾರ ಏನಾದರು ಒಳ್ಳೆ ಕೆಲಸ ಮಾಡಿದ್ದರೆ ಇವತ್ತು CAA ಬದಲಾಗಿ ತಾವು ಮಾಡಿದ ಕೆಲಸ ತೋರಿಸಿ ಓಟು ಕೇಳಬಹುದ್ದೀತು ಎಂದರು.

ಹಣದುಬ್ಬರ ಮತ್ತು ನಿರುದ್ಯೋಗ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಮಧ್ಯಮವರ್ಗದ ಕುಟುಂಬಕ್ಕೂ ಇಂದು ಮನೆ ನಡೆಸುವುದು ಕಷ್ಟವಾಗುತ್ತಿದೆ. ಹಣದುಬ್ಬರ ಬೆನ್ನು ಮುರಿಯುತ್ತಿದೆ, ಮತ್ತೊಂದೆಡೆ ನಮ್ಮ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಅವರ ಮೇಲೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗ, ಮತ್ತು ಹಣದುಬ್ಬರಕ್ಕೆ ಸರಕಾರ ಪರಿಹಾರ ಹುಡುಕುವ ಬದಲು ಸಿಎ ಬಗ್ಗೆ ಮಾತನಾಡುತ್ತಿರುವುದು ತುಂಬಾ ದುಖಃಕರ ಸಂಗತಿ ಎಂದರು.

ಭಾರತದ ಅನೇಕ ಜನರು ನಿರಾಶ್ರಿತರಾಗಿದ್ದಾರೆ.  ಆದರೆ ಬಿಜೆಪಿಯವರು ಪಾಕಿಸ್ತಾನದಿಂದ ಜನರನ್ನು ಕರೆತಂದು ಭಾರತದಲ್ಲಿ ನೆಲೆಸಲು ಬಯಸುತ್ತಾರೆ.  ಅವರಿಗೆ ಮನೆಗಳನ್ನು ನೀಡಲು ಬಯಸುತ್ತಾರೆ.  ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಖರ್ಚು ಮಾಡಬೇಕಾದ ಭಾರತ ಸರ್ಕಾರದ ಸರ್ಕಾರಿ ಹಣ ಬೇರೆ ದೇಶದ ಜನರಿಗೆ ಖರ್ಚು ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.

ಆ ಮೂರು ದೇಶಗಳಲ್ಲಿ ಸುಮಾರು 2.5 ರಿಂದ 3 ಕೋಟಿ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಈ ಮೂರು ದೇಶಗಳು ಬಡ ದೇಶಗಳು ಹೌದು. ಭಾರತದ ಬಾಗಿಲು ತೆರೆದ ತಕ್ಷಣ ಈ ಮೂರು ದೇಶಗಳಿಂದ ಭಾರಿ ಜನಸಮೂಹವು ನಮ್ಮ ಭಾರತಕ್ಕೆ ಬರುತ್ತದೆ, ಈ 2.5 ಕೋಟಿ ಜನರಲ್ಲಿಯೂ ಸಹ. 1.5 ಕೋಟಿ ಜನರು ಭಾರತಕ್ಕೆ ಬರುತ್ತಾರೆ. ಹಾಗಾದರೆ ಅವರಿಗೆಲ್ಲ  ಯಾರು ಉದ್ಯೋಗ ಕೊಡುತ್ತಾರೆ?  ನೀವು ಅವರನ್ನು ಎಲ್ಲಿ ನೆಲೆಗೊಳಿಸುತ್ತೀರಿ? ಇವರಿಗೆಲ್ಲ ಬಿಜೆಪಿಯವರು ತಮ್ಮ  ಮನೆಯಲ್ಲಿ ಪಾಲು ಕೊಡುತ್ತಾರೆಯೇ? ಅವರು ತಮಗೆ ಸಿಗುವ ಉದ್ಯೋಗವನ್ನು ಇವರಿಗೆಲ್ಲ ಬಿಟ್ಟುಕೊಡುತ್ತಾರೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

ಹಾಗಾದರೆ ಬಿಜೆಪಿ ಏಕೆ ಇಂಥ ಮಹಾನ್‌ ತಪ್ಪನ್ನು ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.̤ ಉತ್ತರ ಬಹಳ ಸರಳವಾಗಿದೆ. ಕೇವಲ ವೋಟ್ ಬ್ಯಾಂಕ್ ಸೃಷ್ಟಿಸುವ ಕೊಳಕು ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಒಂದೂವರೆ ಕೋಟಿ ಜನರನ್ನು ಭಾರತಕ್ಕೆ ಕರೆತಂದು ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿ ಉದ್ದೇಶ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಭಾರೀ ಲಾಭವಾಗಬಹುದು. ಒಂದೆಡೆ  ಹರಿಯಾಣದ ಬಿಜೆಪಿಯ ಸರ್ಕಾರಕ್ಕೆ ಅಲ್ಲಿನ ಮಕ್ಕಳಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಕ್ಕಳನ್ನು ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಕಳುಹಿಸುತ್ತಿದೆ.  ನಮ್ಮ ಮಕ್ಕಳನ್ನು ಯುದ್ಧಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇಡೀ ಪ್ರಪಂಚದ ಯಾವುದೇ ದೇಶವು ತನ್ನ ನೆರೆಹೊರೆಯವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ದೇಶಗಳ ಬಡವರನ್ನು ನೆರೆಯ ದೇಶಗಳ ಜನರು ತಮ್ಮ ದೇಶಕ್ಕೆ ಬರುವುದನ್ನು ತಡೆಯಲು ವಿವಿಧ ರೀತಿಯ ಕಾನೂನುಗಳನ್ನು ಮಾಡುತ್ತದೆ. ಗಡಿಗಳಲ್ಲಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತಿದೆ.  ಪಕ್ಕದ ದೇಶದ ಬಡವರಿಗೆ ದೇಶವನ್ನು ಪ್ರವೇಶಿಸಲು ಬಾಗಿಲು ಪ್ರವೇಶಿಸುವುತ್ತಿರುವುದು ನಮ್ಮಲ್ಲಿಯೇ ಮೊದಲು. ಇಂಥ ಕೊಳಕು ರಾಜಕೀಯ ಮಾಡುತ್ತಿರುವ ಪ್ರಪಂಚದಲ್ಲೇ ಏಕೈಕ ಪಕ್ಷವೆಂದರೆ ಅದು ಬಿಜೆಪಿಯಾಗಿದೆ ಎಂದು ಹರಿಹಾಯ್ದರು.

 ಯೋಚಿಸಬೇಕಾದ ವಿಷಯವೆಂದರೆ ಕಳೆದ 10 ವರ್ಷಗಳಲ್ಲಿ ಭಾರತದ 11 ಲಕ್ಷಕ್ಕೂ ಹೆಚ್ಚು ದೊಡ್ಡ ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಭಾರತವನ್ನು ತೊರೆದಿದ್ದಾರೆ. ಈ ಜನರು ಭಾರತದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳನ್ನು ನಡೆಸುತ್ತಿದ್ದರು.  ಜನರಿಗೆ ಉದ್ಯೋಗ ನೀಡುತ್ತಿದ್ದರು.  ಬಿಜೆಪಿಯ ತಪ್ಪು ನೀತಿಗಳು ಮತ್ತು ಅವರ ದೌರ್ಜನ್ಯಗಳಿಂದ ಬೇಸತ್ತು ಅವರು ಭಾರತವನ್ನು ತೊರೆದರು. ನಿಜವಾಗಿಯೂ ವಾಪಸ್‌ ಕರೆತರಬೇಕಾದರೆ ಆ ಉದ್ಯಮಿಗಳನ್ನು ಕರೆತನ್ನಿ. ಅವರು ಭಾರತದಲ್ಲಿ ಹೂಡಿಕೆ ಮಾಡುತ್ತಾರೆ.  ಅವರು ಹೊಸ ಕಾರ್ಖಾನೆಗಳನ್ನು ಮತ್ತು  ಹೊಸ ಉದ್ಯಮಗಳನ್ನು ತೆರೆಯುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.

2014ರ ಹಿಂದೆ ಬಂದ ನುಸುಳುಕೋರರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು. ಇದು ಕೇವಲ ಆರಂಭ.  ಒಮ್ಮೆ ಬಾಗಿಲು ತೆರೆದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಸಮುದ್ರೋಪಾದಿಯಲ್ಲಿ ಜನ ಬರುತ್ತಾರೆ.  ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಈಶಾನ್ಯ ರಾಜ್ಯಗಳು ಅದರಲ್ಲೂ ವಿಶೇಷವಾಗಿ ಅಸ್ಸಾಂ ಈ ವಲಸೆ ಜನರ ಭಾರವನ್ನು ಹೊರಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು