Monday, February 2, 2026

ಸತ್ಯ | ನ್ಯಾಯ |ಧರ್ಮ

ಎಸಿ ಕೋರ್ಟ್ ಕೇಸ್ ವಿಲೇವಾರಿ: ಅಸಾಧ್ಯವೆಂದಿದ್ದುದನ್ನು ಸಾಧ್ಯ ಮಾಡಿದ್ದೇವೆ – ಕೃಷ್ಣ ಬೈರೇಗೌಡ

ಎಸಿ ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಉಳಿದಿದ್ದ ಸಾವಿರಾರು ಪ್ರಕರಣಗಳನ್ನು ಎರಡೂವರೆ ವರ್ಷಗಳಲ್ಲಿ ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, 2023ಕ್ಕೂ ಮೊದಲು ಎಸಿ ಕೋರ್ಟ್‌ಗಳಲ್ಲಿ 62,857 ಅವಧಿ ಮೀರಿದ ಪ್ರಕರಣಗಳು ಬಾಕಿ ಇದ್ದವು. ಜೊತೆಗೆ, 11,000 ಪ್ರಕರಣಗಳು ಆರ್ಸಿಸಿಎಂಎಸ್‌ನಲ್ಲಿ ದಾಖಲಾಗದೇ ಉಳಿದಿದ್ದವು. ಒಟ್ಟಾರೆ ಸುಮಾರು 73,000 ಪ್ರಕರಣಗಳ ಬಾಕಿ ಇದ್ದುದಾಗಿ ತಿಳಿಸಿದರು.

ಅಧಿಕಾರ ಸ್ವೀಕರಿಸಿದ ನಂತರ ಈ ಪ್ರಕರಣಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಲಾಗಿದ್ದು, ಇದೀಗ ಬಾಕಿ ಪ್ರಕರಣಗಳ ಸಂಖ್ಯೆಯನ್ನು 10,656ಕ್ಕೆ ಇಳಿಸಲಾಗಿದೆ. ಈ ಮೂಲಕ ಜನರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ಸ್ಥಿತಿಗೆ ಅಂತ್ಯ ಹಾಡಲಾಗಿದೆ ಎಂದು ಸಚಿವರು ಹೇಳಿದರು.

ಇನ್ನೂ 10,000ಕ್ಕೂ ಹೆಚ್ಚು ಅವಧಿ ಮೀರಿದ ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿವೆ. ಈ ಎಲ್ಲ ಪ್ರಕರಣಗಳನ್ನು ಮಾರ್ಚ್ ಅಂತ್ಯದೊಳಗೆ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇನ್ನು ಮುಂದೆ ಎಸಿ ನ್ಯಾಯಾಲಯಗಳ ಎಲ್ಲಾ ಆದೇಶಗಳನ್ನು ಆರ್ಸಿಸಿಎಂಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಹಿಂದಿನ ಅನುಮಾನಾಸ್ಪದ ಆದೇಶಗಳನ್ನು ಮರುಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಸರ್ಕಾರಿ ಜಮೀನುಗಳ ವಿವರಗಳನ್ನು ಬೀಟ್ ಆ್ಯಪ್‌ನಲ್ಲಿ ದಾಖಲಿಸಿರುವ ಹಿನ್ನೆಲೆಯಲ್ಲಿ, ಒತ್ತುವರಿ ಕಂಡುಬಂದಲ್ಲಿ ಸರ್ವೇ ನಡೆಸಿ ತಹಶೀಲ್ದಾರರ ಮೂಲಕ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಈ ಪ್ರಕ್ರಿಯೆ ಬೆಂಗಳೂರಿನಿಂದ ಆರಂಭವಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತೆ ಮೀನಾ ನಾಗರಾಜ್ ಸೇರಿದಂತೆ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page