Home ರಾಜ್ಯ ಕೃಷ್ಣ ಬೈರೇಗೌಡರಂತಹ ಸಂವೇದನೆರಹಿತ ಸಚಿವರನ್ನು ನಾವು ಈವರೆಗೂ ಕಂಡಿಲ್ಲ – ನವೀನ್ ಸೂರಿಂಜೆ

ಕೃಷ್ಣ ಬೈರೇಗೌಡರಂತಹ ಸಂವೇದನೆರಹಿತ ಸಚಿವರನ್ನು ನಾವು ಈವರೆಗೂ ಕಂಡಿಲ್ಲ – ನವೀನ್ ಸೂರಿಂಜೆ

0

ಕೃಷ್ಣ ಬೈರೇಗೌಡರಂತಹ ಸಂವೇದನೆರಹಿತ ಸಚಿವರನ್ನು ನಾವು ಈವರೆಗೂ ಕಂಡಿಲ್ಲ. ಪೌರಕಾರ್ಮಿಕರು ತಮ್ಮ ಬದುಕಿನ ಅನಿಶ್ಚಿತತೆಯನ್ನು ತೊಡೆದುಹಾಕಿ, ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿ ಮಾಡಿದ ಸಂದರ್ಭದಲ್ಲಿ, “ನೀವು ಕೆಲಸವೇ ಮಾಡುವುದಿಲ್ಲ. ನಿಮ್ಮನ್ನು ಏಕೆ ಪರ್ಮನೆಂಟ್ ಮಾಡಬೇಕು?” ಎಂದು ಪ್ರಶ್ನಿಸುವುದು ಕ್ರೂರತನದ ಪರಮಾವಧಿ. ತಮ್ಮ ಹಕ್ಕಿಗಾಗಿ ಮನವಿ ಮಾಡುತ್ತಿರುವ ಕಾರ್ಮಿಕರನ್ನು ಸಾರ್ವಜನಿಕವಾಗಿ ಅವಮಾನಿಸುವ ಫ್ಯೂಡಲ್ ಮನಸ್ಥಿತಿ. ಊರಿನ ಜಮೀನ್ದಾರಿ ಧಣಿ ‘ಸಂಬಳ ಬೇಕಾ ನಿನಗೆ, ಏನ್ ಕೆಲಸ ಮಾಡಿದ್ದಿ ನೀನು ? ನಡಿ, ಜೀತಕ್ಕಿದ್ದಿ ನೀನು’ ಎನ್ನುವ ಟೋನ್ ನಲ್ಲಿ ಕೃಷ್ಣಬೈರೇಗೌಡ ಮಾತನಾಡುತ್ತಾರೆ.

ಯಾವುದೇ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ನಿರ್ದಿಷ್ಟ ಆರೋಪವಿದ್ದರೆ, ಸಂಬಂಧಿಸಿದ ಉದ್ಯೋಗಿಯ ವಿರುದ್ಧ ಸೇವಾ ನಿಯಮಗಳ ಪ್ರಕಾರ ತನಿಖೆ ನಡೆಸಬಹುದು. ಕರ್ತವ್ಯಲೋಪ ಸಾಬೀತಾದರೆ, ಅನ್ವಯಿಸುವ ಕಾನೂನು ಮತ್ತು ಸೇವಾ ನಿಯಮಗಳಂತೆ ಶಿಸ್ತು ಕ್ರಮ ಕೈಗೊಳ್ಳಬಹುದು. ಆದರೆ ಕೆಲವರು ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವನ್ನು ಆಧಾರವಾಗಿಸಿಕೊಂಡು, ಪೌರಕಾರ್ಮಿಕ ವರ್ಗವನ್ನೇ ಸಾಮೂಹಿಕವಾಗಿ “ಕೆಲಸ ಕಳ್ಳರು” ಎಂದು ಚಿತ್ರಿಸುವುದು ಆಡಳಿತಾತ್ಮಕವಾಗಿಯೂ ನ್ಯಾಯಸಮ್ಮತವಲ್ಲ, ಮಾನವೀಯವಾಗಿಯೂ ಅಲ್ಲ.
ಒಬ್ಬ ಸಚಿವರು ಕರ್ತವ್ಯ ನಿರ್ವಹಿಸದಿದ್ದರೆ ಅಥವಾ ಭ್ರಷ್ಟಾಚಾರದ ಆರೋಪ ಎದುರಾದರೆ, ಆರೋಪಕ್ಕೆ ಸಂಬಂಧಿಸಿದ ಸಚಿವನ ವಿರುದ್ಧವೇ ತನಿಖೆ ಮತ್ತು ಕಾನೂನು ಕ್ರಮ ನಡೆಯಬೇಕು. ಅದರ ಬದಲು, ಒಬ್ಬ ಸಚಿವರ ತಪ್ಪಿಗೆ ಇಡೀ ಸಚಿವ ಸಂಪುಟವೇ ತಪ್ಪಿತಸ್ಥ ಎಂದು ಹೇಳುವುದು ಹೇಗೆ ನ್ಯಾಯಸಮ್ಮತವಲ್ಲವೋ, ಅದೇ ತರ್ಕ ಪೌರಕಾರ್ಮಿಕರಿಗೂ ಅನ್ವಯಿಸುತ್ತದೆ. ವೈಯಕ್ತಿಕ ಕರ್ತವ್ಯಲೋಪವನ್ನು ಸಾಮೂಹಿಕ ತಪ್ಪಾಗಿ ಪರಿವರ್ತಿಸುವುದು ನ್ಯಾಯದ ಮೂಲತತ್ತ್ವಗಳಿಗೆ ವಿರುದ್ಧ. ನಾಗೇಂದ್ರನ ಮೇಲಿನ ಭ್ರಷ್ಟಾಚಾರದ ಆರೋಪಕ್ಕೆ ಕೃಷ್ಣಬೈರೇಗೌಡರ ರಾಜೀನಾಮೆ ಕೇಳಬಹುದೇ ?
ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವುದು ಸಾಧ್ಯವಿಲ್ಲ ಎಂದು ಸರ್ಕಾರದ ನಿಲುವಾಗಿದ್ದರೆ, ಅದಕ್ಕೆ ಸಂಬಂಧಿಸಿದ ಸ್ಪಷ್ಟವಾದ ಕಾನೂನು, ಆಡಳಿತಾತ್ಮಕ ಅಥವಾ ತಾಂತ್ರಿಕ ಕಾರಣಗಳನ್ನು ಸಚಿವರು ಜನರ ಮುಂದೆ ವಿವರಿಸಬೇಕಿತ್ತು. ಕಾಯಂಗೊಳಿಸುವಿಕೆಗೆ ಇರುವ ಕಾನೂನುಬದ್ಧ ಮಿತಿಗಳೇನು? ಯಾವ ನ್ಯಾಯಾಲಯದ ತೀರ್ಪುಗಳು ಅಥವಾ ಸರ್ಕಾರದ ನಿಯಮಗಳು ಅಡ್ಡಿಯಾಗುತ್ತಿವೆ? ನಿಯಮಿತ ನೇಮಕಾತಿಗೆ ಇರುವ ಅವಕಾಶಗಳೇನು? ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಉದ್ಯೋಗ ಭದ್ರತೆಗಾಗಿ ಸರ್ಕಾರ ಪರ್ಯಾಯವಾಗಿ ಏನು ಮಾಡಲಿದೆ? ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಜವಾಬ್ದಾರಿಯುತ ಆಡಳಿತದ ಕರ್ತವ್ಯ.

ಪೌರ ಕಾರ್ಮಿಕರ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದಿದ್ದರೂ, ಅವರ ಗೌರವವನ್ನು ಕಾಪಾಡಿಕೊಂಡೇ ಸರ್ಕಾರ ತನ್ನ ನಿಲುವನ್ನು ವ್ಯಕ್ತಪಡಿಸಬಹುದು. “ನಿಮ್ಮ ಸೇವೆಯನ್ನು ನಾವು ಗೌರವಿಸುತ್ತೇವೆ. ಆದರೆ ಪ್ರಸ್ತುತ ಕಾನೂನು ಮತ್ತು ನೇಮಕಾತಿ ನಿಯಮಗಳ ಕಾರಣದಿಂದ ನಿಮ್ಮನ್ನು ನೇರವಾಗಿ ಕಾಯಂಗೊಳಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ ಉದ್ಯೋಗ ಭದ್ರತೆಗಾಗಿ ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳಲಿದೆ” ಎಂದು ಹೇಳಬಹುದಿತ್ತು. ಅಂತಹ ಉತ್ತರದ ಬಗ್ಗೆ ನಮಗೆ ಭಿನ್ನಾಭಿಪ್ರಾಯವಿದ್ದರೂ ಕಾರ್ಮಿಕರಲ್ಲಿ ಕನಿಷ್ಠ ನಂಬಿಕೆ ಮತ್ತು ಧೈರ್ಯವನ್ನು ಮೂಡಿಸುತ್ತಿತ್ತು.

ಪೌರಕಾರ್ಮಿಕರು ಕೇವಲ ಸರ್ಕಾರದ ವೇತನ ಪಡೆಯುವ ಉದ್ಯೋಗಿಗಳಲ್ಲ. ನಗರಗಳ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಮತ್ತು ಜನರ ದೈನಂದಿನ ಬದುಕಿನ ಮೂಲಭೂತ ವ್ಯವಸ್ಥೆಗಳಲ್ಲಿ ಅವರ ಶ್ರಮ ನೇರವಾಗಿ ಅಡಕವಾಗಿದೆ. ಅವರ ಕೆಲಸವನ್ನು ಟೀಕಿಸುವ ಹಕ್ಕು ಸರ್ಕಾರಕ್ಕಿದೆ. ಆದರೆ ಅವರ ಶ್ರಮವನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ.

ಕಾಯಂಗೊಳಿಸುವ ಬೇಡಿಕೆಗೆ ಕಾನೂನುಬದ್ಧ ಪರಿಹಾರ ಸಾಧ್ಯವಿಲ್ಲದಿದ್ದರೆ, ಅದನ್ನು ಕಾನೂನಿನ ಭಾಷೆಯಲ್ಲಿ ವಿವರಿಸಿ. ಸಾಧ್ಯವಿದ್ದರೆ ಯಾವ ಮಾರ್ಗದಲ್ಲಿ ಸಾಧ್ಯವಿದೆ ಎಂಬುದನ್ನು ತಿಳಿಸಿ. ಆದರೆ ಬದುಕಿನ ಭದ್ರತೆಗಾಗಿ ಸರ್ಕಾರದ ಮುಂದೆ ನಿಂತಿರುವ ಅಮಾಯಕ ಕಾರ್ಮಿಕರಿಗೆ “ನೀವು ಕೆಲಸ ಮಾಡುವುದಿಲ್ಲ” ಎಂಬ ಸಾಮೂಹಿಕ ಆರೋಪ ಹೊರಿಸಿ ಅವರನ್ನೇ ಅವಮಾನಿಸುವುದು ಸಮಸ್ಯೆಯನ್ನು ಪರಿಹರಿಸುವ ಮಾರ್ಗವಲ್ಲ.

ನಗರ ಗಬ್ಬೆದ್ದು ಹೋಗಿದ್ದರೆ ಜಿಬಿಎ ಕಮಿಷನರ್ ಅನ್ನು ವರ್ಗಾವಣೆ ಮಾಡಿ. ಸಾದ್ಯವಾಗದಿದ್ದರೆ ಬೆಂಗಳೂರು ಸಚಿವರಾದ ತಾವು ರಾಜೀನಾಮೆ ಕೊಡಿ. ನಗರ ಗಬ್ಬೆದ್ದು ಹೋಗಿದ್ದಕ್ಕೆ ಪೌರಕಾರ್ಮಿಕರು ಮಾತ್ರ ಹೊಣೆ ಆಗುವುದಾದರೆ ಜಿಬಿಎಯಂತಹ ಬಿಳಿಯಾನೆ, ಸಚಿವರೆಂಬ ಗಜಪಡೆಗಳನ್ನು ನಮ್ಮ ತೆರಿಗೆ ಹಣದಲ್ಲಿ ಸಾಕುತ್ತಿರುವುದು ಯಾಕೆ ? ಸರ್ಕಾರದ ಜವಾಬ್ದಾರಿ ಪೌರ ಕಾರ್ಮಿಕರನ್ನು ದೂಷಿಸುವುದಲ್ಲ. ಅವರ ಸೇವೆಯ ಸ್ವರೂಪವನ್ನು ಅರ್ಥಮಾಡಿಕೊಂಡು, ಕಾನೂನಿನ ಚೌಕಟ್ಟಿನೊಳಗೆ ಅವರಿಗೆ ಸಾಧ್ಯವಾದಷ್ಟು ಉದ್ಯೋಗ ಭದ್ರತೆ, ನ್ಯಾಯಸಮ್ಮತ ವೇತನ ಮತ್ತು ಗೌರವಯುತ ಬದುಕಿನ ಅವಕಾಶ ಕಲ್ಪಿಸುವುದಾಗಿದೆ. ಪೌರಕಾರ್ಮಿಕರ ಪ್ರಶ್ನೆಯನ್ನು ಈ ದೃಷ್ಟಿಯಿಂದ ನೋಡುವುದು ಆಡಳಿತದ ಮಾನವೀಯ ಕರ್ತವ್ಯವೂ ಹೌದು, ಪ್ರಜಾಪ್ರಭುತ್ವದ ಹೊಣೆಗಾರಿಕೆಯೂ ಹೌದು. ಸಚಿವರು ಫ್ಯೂಡಲ್ ಧಣಿಯಂತೆ ವರ್ತಿಸುವುದನ್ನು ಬಿಡಬೇಕು.

  • ನವೀನ್ ಸೂರಿಂಜೆ

You cannot copy content of this page

Exit mobile version