ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟಗಳ ನಡುವೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಲಾಗಿದೆ. ಇಂದು ಬೆಳಗ್ಗೆ ಕ್ಯಾಬಿನೆಟ್ ಸಭೆಗೂ ಮುನ್ನ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ನ್ಯಾ. ನಾಗಮೋಹನ್ ದಾಸ್ ಮಧ್ಯಂತರ ವರದಿಯನ್ನು ಸಲ್ಲಿಸಿದರು.
ಸಮುದಾಯಗಳಿಗೆ ಶಾಶ್ವತ ಪರಿಹಾರ ಕೊಡಬೇಕು ಎಂಬುದು ನನ್ನ ಮೊದಲ ಆಸೆಯಾಗಿದೆ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ಅದರ ಆಧಾರದಲ್ಲಿ ಅಂತಿಮ ವರದಿ ಸಲ್ಲಿಸುತ್ತೇನೆ. ಮಧ್ಯಂತರ ವರದಿ ನೀಡಿದ್ದೇನೆ, ಇದಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ. ಉತ್ತರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ನ್ಯಾ.ನಾಗಮೋಹನ್ ದಾಸ್ ವರದಿಗಾರರಿಗೆ ತಿಳಿಸಿದ್ದಾರೆ.
ನಂತರ ಮಾತನಾಡಿ “ಎರಡು ತಿಂಗಳಿಗಿಂತ ಹೆಚ್ಚು ನಾನು ಹಾಗೂ ನನ್ನ ತಂಡ ಆಳವಾದ ಅಧ್ಯಯನ ಮಾಡಿ 104 ಪುಟಗಳ ಒಳಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇದು ಮಧ್ಯಂತರ ವರದಿ. ಇದರಲ್ಲಿ ತರಾತುರಿ ಪ್ರಶ್ನೆ ಇಲ್ಲ. ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ನಮ್ಮನ್ನು ಕೇಳಲಿಲ್ಲ. ನಾವೇ ಸ್ವ ಇಚ್ಛೆಯಿಂದ ವರದಿಯನ್ನು ನೀಡಿದ್ದೇವೆ. ಅಂತಿಮ ವರದಿಗೆ ಸಧ್ಯದಲ್ಲೇ ಸಿಗಲಿದೆ. ಸರ್ಕಾರ ಕೇಳಿದರೆ ಕೆಲಸ ಚುರುಕುಗೊಳಿಸುತ್ತೇವೆ” ಎಂದು ನ್ಯಾ.ನಾಗಮೋಹನ್ ದಾಸ್ ತಿಳಿಸಿದ್ದಾರೆ.
ಮಧ್ಯಂತರ ವರದಿಯಲ್ಲಿ ನೇಮಕಾತಿ ಬಗ್ಗೆ ಯಾವುದೇ ಸಲಹೆ ಕೊಟ್ಟಿಲ್ಲ. ವರದಿಯಲ್ಲಿ ಏನಿದೆ ಎಂಬುದಕ್ಕೆ ನಾನು ಉತ್ತರ ನೀಡಲ್ಲ. ಇದನ್ನು ಸರ್ಕಾರದ ಬಳಿ ಕೇಳಬೇಕು ಎಂದು ಹೇಳಿದರು.