Thursday, February 26, 2026

ಸತ್ಯ | ನ್ಯಾಯ |ಧರ್ಮ

ನಮಗೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ಗೌರವವಿದೆ ಮತ್ತು ಅದರ ನಿಷ್ಪಕ್ಷಪಾತಿತನದ ಕುರಿತು ಹೆಮ್ಮೆಯಿದೆ: ಬಿಜೆಪಿ

ಎನ್‌ಸಿಇಆರ್‌ಟಿ (NCERT) 8ನೇ ತರಗತಿಯ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಸೇರಿಸಿರುವ ವಿಚಾರವನ್ನು ಬಿಜೆಪಿ ‘ಅತ್ಯಂತ ಸೂಕ್ಷ್ಮ ವಿಷಯ’ ಎಂದು ಕರೆದಿದೆ. ನಾವು ದೇಶದ ನ್ಯಾಯಾಂಗವನ್ನು ಗೌರವಿಸುತ್ತೇವೆ ಮತ್ತು ಅದರ ನಿಷ್ಪಕ್ಷಪಾತ ಕಾರ್ಯವೈಖರಿಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಪಕ್ಷ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, “ಭಾರತೀಯ ನ್ಯಾಯಾಂಗದಷ್ಟು ಸ್ವತಂತ್ರ ಮತ್ತು ಅರ್ಹವಾದ ಸಂಸ್ಥೆ ಇಡೀ ವಿಶ್ವದಲ್ಲೇ ಮತ್ತೊಂದಿಲ್ಲ. ನಮ್ಮೆಲ್ಲರ ಹೃದಯದಲ್ಲಿ ನ್ಯಾಯಾಂಗದ ಬಗ್ಗೆ ಅಪಾರ ಗೌರವ ಮತ್ತು ಹೆಮ್ಮೆಯಿದೆ” ಎಂದು ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ನಡೆದ ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೂಡ ಸರ್ಕಾರವು ನ್ಯಾಯಾಂಗದ ಪರವಾಗಿ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಅವರು ನೆನಪಿಸಿದರು.

8ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಸೇರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದು ನ್ಯಾಯಾಂಗವನ್ನು ದೂಷಿಸಲು ನಡೆಸಿರುವ ‘ವ್ಯವಸ್ಥಿತ ಸಂಚು’ ಎಂದು ನ್ಯಾಯಾಲಯ ಬಣ್ಣಿಸಿತ್ತು. ಇದರ ಬೆನ್ನಲ್ಲೇ ಈ ಪಠ್ಯಪುಸ್ತಕದ ಮಾರಾಟ ಮತ್ತು ಡಿಜಿಟಲ್ ಹಂಚಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಎಲ್ಲಾ ಪ್ರತಿಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ತರಾಟೆಯ ನಂತರ ಎನ್‌ಸಿಇಆರ್‌ಟಿ ಕ್ಷಮೆಯಾಚಿಸಿದ್ದು, ವಿವಾದಿತ ಪಠ್ಯಪುಸ್ತಕವನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ಅಧ್ಯಾಯವನ್ನು ಮರುಬರಹ ಮಾಡುವುದಾಗಿ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page