Friday, June 14, 2024

ಸತ್ಯ | ನ್ಯಾಯ |ಧರ್ಮ

ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗೆ ನಾವು ಬಲ ತುಂಬಬೇಕು : ಸಿದ್ದರಾಮಯ್ಯ

ಬೆಂಗಳೂರು: ಡಾ. ಬಿ.ಆರ್‌ ಅಂಬೇಡ್ಕರ್‌ ಅವರು ನಮ್ಮೆಲ್ಲರಿಗೂ ಸಮಾನತೆ ತಂದುಕೊಡುವುದಾದರೆ ಅವರ ಚಿಂತನೆಗಳಿಗೆ ನಾವು ಬಲ ತುಂಬಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಬೆಂಗಳೂರಿನ ಡಾ.ಬಿ,ಆರ್‌ ಅಂಬೇಡ್ಕರ್‌ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಜಾಪ್ರಭುತ್ವದ ಬಲವರ್ದನೆ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ, ಅದರ ಹುಟ್ಟು ಮತ್ತು ಬೆಳವಣಿಗೆ, ಈಗಿನ ಸವಾಲುಗಳು ಮತ್ತು ಮುಂದೇನು ಮಾಡಬೇಕು ಎಂಬ ಬಗ್ಗೆ ಶಿವಮಲ್ಲು ಅವರು ಬಹಳಷ್ಟು ಅಧ್ಯಯನ ನಡೆಸಿ, ಪುಸ್ತಕ ರಚನೆ ಮಾಡಿದ್ದಾರೆ. ಇಂಜಿನಿಯರಿಂಗ್‌ ಪದವೀಧರರಾದ ಶಿವಮಲ್ಲು ಅವರು ರಾಜಕಾರಣದಲ್ಲಿ ಭಾಗವಹಿಸದೆ ಇದ್ದರೂ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. ಬಹಳ ಅಳೆದು ತೂಗಿ ಈ ದೇಶಕ್ಕೆ ಪ್ರಜಾಪ್ರಭುತ್ವ ಅಗತ್ಯವಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡು, ಅಳವಡಿಸಿಕೊಂಡಿದ್ದೇವೆ. ಸ್ವಾತಂತ್ಯ್ರ ನಂತರ ನಮ್ಮ ಸಂವಿಧಾನ ರಚನೆಯಾಗಿದ್ದು, ನಮ್ಮನ್ನು ನಾವೇ ಆಳಿಕೊಳ್ಳುವುದು ಪ್ರಜಾಪ್ರಭುತ್ವ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರರು ಸಂವಿಧಾನ ಸಭೆಯಲ್ಲಿ ಭಾಷಣ ಮಾಡುವಾಗ, ನಾವೇನೋ ಇಂದು ಸಂವಿಧಾನ ರಚನೆ ಮಾಡಿಕೊಂಡಿದ್ದೇವೆ, 1950 ಜನವರಿ 26ರಿಂದ ಈ ಸಂವಿಧಾನ ಜಾರಿಗೆ ಬರಲಿದೆ. ಅಂದಿನಿಂದ ನಾವು ವೈರುಧ್ಯದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ನಮಗೆ ಸಂವಿಧಾನದ ಮೂಲಕ ರಾಜಕೀಯ ಸಮಾನತೆ ಸಿಕ್ಕಿದೆ ಆದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾನತೆಯನ್ನು ನಿರಾಕರಿಸಲಾಗಿದೆ. ನಮಗೆ ಕೇವಲ ಮತದಾನದ ಹಕ್ಕು ಇದ್ದರೆ ಸಾಲದು, ಇದರಿಂದ ಸ್ವಾತಂತ್ರ್ಯ ಸಾರ್ಥಕವಾಗಲ್ಲ, ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗಲಿದೆ ಎಂದು ಹೇಳಿದ್ದರು. ಸಂವಿಧಾನ ಒಳ್ಳೆಯವರ ಕೈಲಿದ್ದರೆ ಒಳ್ಳೆಯದಾಗಲಿದೆ, ಕೆಟ್ಟವರ ಕೈಲಿದ್ದರೆ ಕೆಟ್ಟದ್ದಾಗಲಿದೆ. ಹಾಗಾಗಿ ಸಂವಿಧಾನ ಬದ್ಧತೆ ಇರುವವರ ಕೈಲಿ ಇದ್ದಾಗ ಮಾತ್ರ ಜನರಿಗೆ ಒಳ್ಳೆಯದಾಗಲಿದೆ. ಇಂದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವವರ ಕೈಲಿ ಸಂವಿಧಾನವಿದೆ. ಸಂಘಪರಿವಾರ ಯಾವತ್ತೂ ಕೂಡ ಅಂಬೇಡ್ಕರರ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ದೇಶದಲ್ಲಿ ಸಮಾನತೆ ಬರಬಾರದು ಎಂಬುದು ಅವರ ಉದ್ದೇಶ. ಸಮಾನತೆ ಬಂದಾಗ ಶೋಷಣೆ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಹೇಳಿದರು.

ಬಾಬಾ ಸಾಹೇಬರು ರಚನೆ ಮಾಡಿರುವ ಸಂವಿಧಾನವನ್ನು ಬದಲಾವಣೆ ಮಾಡಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅನಂತ ಕುಮಾರ್‌ ಹೆಗ್ಡೆ ಅವರು ಹೇಳಿದ್ದರು, ಅವರನ್ನು ನರೇಂದ್ರ ಮೋದಿ ಅವರಾಗಲೀ, ಅಮಿತ್‌ ಶಾ ಅವರಾಗಲೀ ಸಚಿವ ಸಂಪುಟದಿಂದ ವಜಾ ಮಾಡಿದ್ರಾ? ಕನಿಷ್ಠ ಅವರ ವಿರುದ್ಧ ಶಿಸ್ತುಕ್ರಮವನ್ನೂ ಕೈಗೊಂಡಿಲ್ಲ. ಇಂಥವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಣೆ ಮಾಡುತ್ತಾರಾ? ಎಂದು ಪ್ರಶ್ನಿಸಿದರು.

ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಸರಿಯಾ? ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಏನು ಹೇಳಿದೆ? ಈ ಮೀಸಲಾತಿ ಅಡಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮಾತ್ರ ಅವಕಾಶ ಇದೆ. ಹಿಂದುಳಿದ, ದಲಿತ ಸಮುದಾಯದ ಬಡವರಿಗೆ ಇದರಲ್ಲಿ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ. ಈಗ ರಾಜ್ಯದಲ್ಲಿ ಶೇಕಡಾ 3 ರಷ್ಟು ಸಾಮಾನ್ಯ ವರ್ಗದ ಜನರಿದ್ದಾರೆ. ಅವರಿಗೆ 10% ಮೀಸಲು ಬೇಕಾ? ಆದರೂ ನಾವೆಲ್ಲ ಸುಮ್ಮನೆ ಇದ್ದೇವೆ. ಹೀಗಾದರೆ ಸಮಾನತೆ ಬಂದು ಬಿಡುತ್ತಾ? ಯಾವ ವರ್ಗದ ಜನರಿಗೆ ಶತಶತಮಾನಗಳ ಕಾಲ ಓದಲು, ಸಂಪತ್ತು ಅನುಭವಿಸಲು ಅವಕಾಶ ಇತ್ತು ಅಂಥವರಿಗೆ ಮೀಸಲಾತಿ ನೀಡುವುದು ಸರಿನಾ? ಅಂಬೇಡ್ಕರ್‌ ಅವರು ರಚನೆ ಮಾಡಿರುವ ಸಂವಿಧಾನದ ಆಶಯ ಇದರಿಂದ ಈಡೇರುತ್ತದಾ? ಸಂವಿಧಾನದ 15 ಮತ್ತು 16ನೇ ಪರಿಚ್ಛೇದದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಮಾತ್ರ ಅವಕಾಶ ನೀಡಿದೆ. 3% ಜನರಿಗೆ 10% ಮೀಸಲಾತಿ, 52% ಜನರಿಗೆ 27% ಮೀಸಲಾತಿ ನೀಡಿದರೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವೇ? ಎಂದರು.

1983ರಲ್ಲಿ ಕೇವಲ 63,000 ಹಣ ಖರ್ಚು ಮಾಡಿ ಚುನಾವಣೆ ಗೆದ್ದಿದ್ದೆ, ಈಗ ಎಷ್ಟಾಗುತ್ತದೆ ಎಂದು ಹೇಳುವ ಹಾಗೆ ಇಲ್ಲ, ಹೇಳಿದ್ರೂ ಕಷ್ಟವಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ ರಾಜೀನಾಮೆ ನೀಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮತ್ತೆ ನಿಂತು ಗೆದ್ದು ಬರುತ್ತಾರೆ. ಕಳೆದ ಉಪಚುನಾವಣೆಯಲ್ಲಿ ನಾನೂ ಸಕ್ರಿಯವಾಗಿ ಭಾಗವಹಿಸಿದ್ದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಬ್ಬೊಬ್ಬನು ಕನಿಷ್ಠ 25 ಕೋಟಿ ಖರ್ಚು ಮಾಡಿದ್ರು. ಹೀಗಾದರೆ ಪ್ರಜಾಪ್ರಭುತ್ವ ಗಟ್ಟಿಯಾಗುತ್ತಾ? ದುಡ್ಡಿಲ್ಲದವನು ಗೆಲ್ಲಲು ಸಾಧ್ಯವಾ? ಇದಕ್ಕೆ ಪರಿಹಾರ ಏನಿದೆ? ಎಂದು ವಾಗ್ದಾಳಿ ನಡೆಸಿದರು.

ಇಷ್ಟೆಲ್ಲಾ ಆಗುತ್ತಿದೆ ಎಂಬ ಕಾರಣಕ್ಕೆ ನಾವು ಅಧೈರ್ಯಗೊಂಡು ಸುಮ್ಮನೆ ಕೂರುವುದು ಸರಿಯಲ್ಲ. ಯಾವೆಲ್ಲಾ ಸುಧಾರಣೆ ಸಾಧ್ಯ ಅದನ್ನು ಮಾಡುವ ಪ್ರಯತ್ನ ಮಾಡಲೇ ಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ಸಾಕ್ಷರತೆ ಪ್ರಮಾಣ 14% ಇತ್ತು, ಇಂದು 74% ಆಗಿದೆ. ಆದರೆ ಎಲ್ಲರಿಗೂ ಸಮಾನತೆ, ಸಂಪತ್ತಿನ ಸಮಾನ ಹಂಚಿಕೆ ಆಗಿದೆಯಾ? ಉದ್ಯೋಗ ಎಲ್ಲರಿಗೂ ದೊರೆಯುತ್ತಿದೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರ ವರ್ಗದವರಿಗೆ ಮತ್ತು ಮಹಿಳೆಯರಿಗೆ ಅಕ್ಷರ ಸಂಸ್ಕೃತಿಯಿಂದ ಹೊರಗಿಡಲಾಗಿತ್ತು. ನಾನು ಮುಖ್ಯಮಂತ್ರಿಯಾಗಲು, ಮೋದಿ ಅವರು ಪ್ರಧಾನಿಯಾಗಲು ಕೂಡ ಸಂವಿಧಾನ ಕಾರಣ. ಬಿಜೆಪಿಯವರು ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವವರು, ಒಂದು ಕಾಲದಲ್ಲಿ ಇವರು ಹಿಟ್ಲರ್‌ ನನ್ನು ಹೊಗಳುತ್ತಿದ್ದರು ಎಂದು ಹೇಳಿದರು.

ದಲಿತರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಭಿಯಾಗಬೇಕು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು. ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾಯ್ದೆ ಜಾರಿ ಮಾಡಿದ್ದು ಕೂಡ ಇದೇ ಕಾರಣಕ್ಕೆ. ಈ ಕಾಯ್ದೆ ಕೇಂದ್ರ ಸರ್ಕಾರದಲ್ಲಿ ಇದೆಯಾ? ಅಥವಾ ಬೇರೆ ರಾಜ್ಯಗಳಲ್ಲಿ ಇದೆಯಾ? ಯಾಕೆ ಬೇರೆ ರಾಜ್ಯಗಳಲ್ಲಿ ಜಾರಿಯಾಗಿಲ್ಲ? 2013ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ಅಧಿವೇಶನದಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಿದ್ದೆವು. 2008ರಿಂದ 2013 ರವರೆಗೆ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾಗಿ ಖರ್ಚು ಮಾಡಿದ್ದ ಹಣ 22,000 ಕೋಟಿ ರೂಪಾಯಿ. ನಮ್ಮ ಸರ್ಕಾರ ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾನೂನು ಜಾರಿ ಮಾಡಿದ ನಂತರ ಖರ್ಚಾದ ಹಣ 88,000 ಕೋಟಿ ರೂಪಾಯಿ. ಕಡೇ ಪಕ್ಷ ನೀವು ನಮ್ಮ ಬೆನ್ನು ತಟ್ಟಬೇಕಲ್ವ? 2018ರ ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ಈ ಯೋಜನೆಗೆ ನೀಡಿದ್ದ ಅನುದಾನ 30,000 ಕೋಟಿ, ಈ ವರ್ಷದ ಬಜೆಟ್‌ ನಲ್ಲಿ 28,300 ಕೋಟಿ. ಬಜೆಟ್‌ ಗಾತ್ರ ಹೆಚ್ಚಿದ್ದರೂ ಅನುದಾನ ಕಡಿಮೆ ಮಾಡಿದ್ದಾರೆ. ಈಗಿನ ಬಜೆಟ್‌ ಗಾತ್ರಕ್ಕೆ ಅನುಗುಣವಾಗಿ ಕನಿಷ್ಠ 42,000 ಕೋಟಿಗೆ ಏರಿಕೆಯಾಗಬೇಕಿತ್ತು. ಈ ಯೋಜನೆಯ ಅನುದಾನದಲ್ಲಿ ಸುಮಾರು 7,885 ಕೋಟಿ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ವಿದ್ಯಾವಂತ ಸಮುದಾಯದ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್‌ ಅವರು ತಾವು ಸಾಮಾಜಿಕ ನ್ಯಾಯದ ರಥವನ್ನು ಇಷ್ಟುದೂರ ಎಳೆದುಕೊಂಡು ಬಂದಿದ್ದೇನೆ, ನಿಮ್ಮಿಂದ ಸಾಧ್ಯವಾದರೆ ಮುಂದಕ್ಕೆ ತಳ್ಳಿ ಇಲ್ಲದಿದ್ದರೆ ಅಲ್ಲಿಯೇ ಬಿಟ್ಟುಬಿಡಿ, ಹಿಂದಕ್ಕೆ ಮಾತ್ರ ತಳ್ಳುವ ಕೆಲಸ ಮಾಡಬೇಡಿ ಎಂದಿದ್ದರು. ಈಗ ಸಾಮಾಜಿಕ ನ್ಯಾಯದ ರಥವನ್ನು ಹಿಂದಕ್ಕೆ ತಳ್ಳುವ ಪ್ರಯತ್ನ ಆಗುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭಡ್ತಿಯಲ್ಲಿ ಇದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ತೆಗೆದುಹಾಕಿತ್ತು, ಆಗ ನಾನು ರತ್ನಪ್ರಭಾ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿ, ಅದರ ವರದಿಯನ್ನು ಆಧರಿಸಿ ಸುಪ್ರೀಂಕೋರ್ಟ್‌ ನಲ್ಲಿ ಮೇಲ್ಮನವಿ ಮಾಡಿದ್ದೆವು. ಅದೃಷ್ಟವಶಾತ್‌ ನಮ್ಮ ಕಾನೂನನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿಯಿತು. ಕರ್ನಾಟಕ ಒಂದನ್ನು ಬಿಟ್ಟರೆ ದೇಶದ ಬೇರೆ ರಾಜ್ಯದಲ್ಲಿ ಇಂಥಾ ಕಾನೂನನ್ನು ಜಾರಿ ಮಾಡಿದೆಯಾ ನೀವೇ ಒಮ್ಮೆ ಹುಡುಕಿ ನೋಡಿ. ಆದರೂ ಜನ ಮೋದಿ, ಮೋದಿ ಎನ್ನುತ್ತಾರೆ. ದುರ್ಬಲರು, ಅವಕಾಶ ವಂಚಿತ ಜನರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡರೆ ಪ್ರಜಾಪ್ರಭುತ್ವ ಉಳಿಯುತ್ತಾ? ನಮ್ಮ ಸರ್ಕಾರ ಸರ್ಕಾರಿ ಗುತ್ತಿಗೆಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ತಂದೆವು, ಈ ಕಾನೂನು ದೇಶದ ಬೇರೆ ರಾಜ್ಯಗಳಲ್ಲಿ ಇದೆಯಾ? ಇಲ್ಲ. ಅಸಮಾನತೆ ನಿರ್ಮಾಣವಾಗಿರುವ ಕಡೆ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಒಬ್ಬ ಅಂಬೇಡ್ಕರ್‌ ಅವರು ನಮ್ಮೆಲ್ಲರಿಗೂ ಸಮಾನತೆ ತಂದುಕೊಡುವುದಾದರೆ ಅವರ ಚಿಂತನೆಗಳಿಗೆ ನಾವು ಬಲ ತುಂಬಬೇಕು ಅಲ್ವಾ? ಅಂಬೇಡ್ಕರ್‌ ಅವರ ಆಶಯಗಳ ಹಾದಿಯಲ್ಲಿ ನಾವು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದು ಸಂವಿಧಾನದ ರೀತಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಜನರೇ ಅದನ್ನು ಕಿತ್ತುಬಿಸಾಕುವಷ್ಟು ಜಾಗೃತರಾಗಬೇಕು ಆಗ ಮಾತ್ರ ಸಂವಿಧಾನ ಉಳಿಯಲು ಸಾಧ್ಯ, ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದರು.

ಯಾರೇ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೂ ಅದನ್ನು ಗಟ್ಟಿಯಾಗಿ ವಿರೋಧ ಮಾಡುವಷ್ಟು ದಾರ್ಷ್ಟ್ಯವನ್ನು ಬೆಳೆಸಿಕೊಳ್ಳಬೇಕು. ಈ ಜಾಗೃತಿ ಜನರಲ್ಲಿ ಮೂಡಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು