ಮೈಸೂರು : ಮೊದಲಿನಿಂದಲೂ ಕೇಂದ್ರದಿಂದ (Central Govt) ಅನ್ಯಾಯವಾಗುತ್ತಿದೆ. ನಮ್ಮ ತೆರಿಗೆ (Tax) ಪಾಲನ್ನು ನ್ಯಾಯಸಮ್ಮತವಾಗಿ ಕೇಳುವುದು ತಪ್ಪಾ?. ಅಗತ್ಯವಿದ್ದರೆ ಕೋರ್ಟ್ (Court) ಮೆಟ್ಟಿಲೇರಿ ನಮ್ಮ ಪಾಲು ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಣ ಬಿಡುಗಡೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡುತ್ತಿದೆ. ಬಿಜೆಪಿ ಸಂಸದರು, ಕೇಂದ್ರ ಸಚಿವರು ಮೋದಿ ಮುಂದೆ ಮಾತಾಡಲ್ಲ. ಮೋದಿಯನ್ನು ಹೊಗಳುವುದಷ್ಟೇ ರಾಜ್ಯ ಬಿಜೆಪಿ ಸಂಸದರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತ ಮಾಡಿದ ವಿಚಾರವಾಗಿ ಮಾತನಾಡಿದ ಸಿಎಂ, ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲದರ ಮೇಲೆಯೂ ಜಿಎಸ್‌ಟಿ ಹೆಚ್ಚಳ ಮಾಡಿದ್ದು, ಇದೀಗ ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಕಡಿತಗೊಳಿಸಿದೆ. ಇದರಿಂದ ರಾಜ್ಯಕ್ಕೆ 15 ಕೋಟಿ ರೂ. ನಷ್ಟವಾಗುತ್ತದೆ ಎಂದು ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.ಜಿಎಸ್‌ಟಿ ಕಡಿತದಿಂದ ನಮಗೆ 15 ಕೋಟಿ ರೂ. ನಷ್ಟವಾಗುತ್ತಿದೆ. ಕಡಿಮೆ ಮಾಡಿದ್ದನ್ನು ಸ್ವಾಗತಿಸಬೇಕು. ನಷ್ಟ ನಾವೇ ಅನುಭವಿಸಬೇಕು. ಎಂಟು ವರ್ಷ ಕೇಂದ್ರ ಸರ್ಕಾರ ಅತಿ ಹೆಚ್ಚು ಜಿಎಸ್‌ಟಿ ವಸೂಲಿ ಮಾಡಿದೆ. ಆ ಹಣವನ್ನು ಈಗ ವಾಪಸ್ ಕೊಡುತ್ತಾರಾ? ಜಾಸ್ತಿ ಮಾಡುವುದು ಇವರೇ ಕಡಿಮೆ ಮಾಡುವುದು ಇವರೇ. ಚುನಾವಣೆಗೋಸ್ಕರ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿದೆ ಎಂದು ಗರಂ ಆದರು.
ರಾಜ್ಯಕ್ಕೆ 3,705 ಕೋಟಿ ರೂ. ಬಿಡುಗಡೆ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆ ಪಾಲು ಬಿಡುಗಡೆ ಮಾಡಿದ್ದು, ಈ ಬಾರಿ ಕರ್ನಾಟಕಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ 3,705 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.
ದಸರಾ-ದೀಪಾವಳಿ ಹಬ್ಬಗಳ ಋತುವಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ನಿರ್ಣಯ ಕೈಗೊಂಡು ಎಲ್ಲಾ ರಾಜ್ಯಗಳಿಗೂ ನೆರವಾಗುವಂತೆ ತೆರಿಗೆ ಹಂಚಿಕೆಯ ಒಂದು ಮುಂಗಡ ಕಂತು ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ ಎಲ್ಲಾ 28 ರಾಜ್ಯ ಸರ್ಕಾರಗಳಿಗೂ ಕೇಂದ್ರ ಹಣಕಾಸು ಸಚಿವಾಲಯ ಒಟ್ಟಾರೆ 1,01,603 ಕೋಟಿ ರೂ. ಹೆಚ್ಚುವರಿ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಹಾರಕ್ಕೆ ಬಂಪರ್ ಹಣವನ್ನು ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದು ಅಕ್ಟೋಬರ್ 10 ರಂದು ಬಿಡುಗಡೆಯಾಗಬೇಕಿದ್ದ ಸಾಮಾನ್ಯ ಮಾಸಿಕ ಹಂಚಿಕೆ 81,735 ಕೋಟಿ ರೂ. ಜೊತೆಗೆ ಹೆಚ್ಚುವರಿಯಾಗಿದೆ. ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ಹಣ 18,227 ಕೋಟಿ ರೂ., ತೆರಿಗೆ ಪಾಲು ಬಿಡುಗಡೆಯಾಗಿದ್ದು, ಚುನಾವಣೆ ನಡೆಯಲಿರುವ ಬಿಹಾರಕ್ಕೆ 10,219 ಕೋಟಿ ರೂ. ಹಂಚಿಕೆಯಾಗಿದೆ.