Wednesday, September 17, 2025

ಸತ್ಯ | ನ್ಯಾಯ |ಧರ್ಮ

ಶಿಲುಬೆ ಧರಿಸಿದವರನ್ನು ನಡುಮನೆಗೆ ಬಿಟ್ಟುಕೊಳ್ಳುವ ಸವರ್ಣೀಯರು ದಲಿತರನ್ನು ಬಿಟ್ಟುಕೊಳ್ಳುವುದಿಲ್ಲ; ಶಿಲುಬೆ ಧರಿಸಿದರೆ ಸಮಾನತೆ ಸಿಗುತ್ತದೆ: ಕೆ.ಎನ್. ರಾಜಣ್ಣ

ತುಮಕೂರು: ಅನ್ಯಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರವನ್ನು ವಜಾ ಮಾಡುವ ವಿಚಾರವಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ದಲಿತ ಸಮುದಾಯದವರು ಮತಾಂತರಗೊಳ್ಳಲು ಇರುವ ಕಾರಣವನ್ನು ಅವರು ವಿವರಿಸಿದರು.

ಸಮಾನತೆಗಾಗಿ ಮತಾಂತರ

“ಒಬ್ಬ ಪರಿಶಿಷ್ಟ ಜಾತಿಯ ಯುವಕ ಸವರ್ಣೀಯರ ಮನೆಗೆ ಹೋದರೆ, ಅವರನ್ನು ನಡುಮನೆಗೆ ಬಿಟ್ಟುಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ಆದರೆ, ಅದೇ ಹುಡುಗ ಕತ್ತಿನಲ್ಲಿ ಶಿಲುಬೆ ಕಟ್ಟಿಕೊಂಡು ಹೋದರೆ, ಅವರನ್ನು ನಡುಮನೆಗೆ ಕರೆದು ಕೂರಿಸುತ್ತಾರೆ. ಆಗ ಆ ಯುವಕನಿಗೆ ಸಮಾನತೆ ಬಂದಿದೆ ಎಂಬ ಭಾವನೆ ಬರುತ್ತದೆ” ಎಂದು ರಾಜಣ್ಣ ಅವರು ಪ್ರಶ್ನಿಸಿದ್ದಾರೆ.

ಮತಾಂತರದ ಬಗ್ಗೆ ನಾನು ಸರಿ-ತಪ್ಪು ವ್ಯಾಖ್ಯಾನ ನೀಡಲು ಹೋಗುವುದಿಲ್ಲ. ಆದರೆ ದಲಿತ ಸಮುದಾಯದವರು ಕ್ರಿಶ್ಚಿಯಾನಿಟಿಗೆ ಬದಲಾಗುವುದನ್ನು ನಾನು ನೋಡುತ್ತಿದ್ದೇನೆ. ಇದಕ್ಕೆ ಯಾರ ಒತ್ತಾಯವೂ ಇಲ್ಲ; ಒಬ್ಬರನ್ನು ನೋಡಿ ಇನ್ನೊಬ್ಬರು ಮತಾಂತರವಾಗುವ ಪರಿಸ್ಥಿತಿ ಬಂದಿದೆ ಎಂದರು.

ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಮತಾಂತರಗೊಂಡ ಹಲವರನ್ನು ನಾನು ಪ್ರಶ್ನಿಸಿದಾಗ, “ಅವರ ಮನೆಗೆ ಹೋದರೆ ನಮ್ಮನ್ನು ಒಳಗೆ ಕರೆಯುತ್ತಾರೆಯೇ? ಅದೇ ಶಿಲುಬೆ ಕಟ್ಟಿಕೊಂಡರೆ ಕರೆಯುತ್ತಾರೆ ಸ್ವಾಮಿ, ಅದಕ್ಕೆ ಸೇರಿದ್ದೇನೆ” ಎಂಬ ಉತ್ತರ ಬಂತು. ಇದಕ್ಕೆ ನನ್ನ ಬಳಿ ಪ್ರತಿಕ್ರಿಯೆ ಇರಲಿಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ಅವರು ತೀರ್ಮಾನ ಮಾಡಿಕೊಳ್ಳುತ್ತಿರಬಹುದು.

“ಅಂಬೇಡ್ಕರ್ ಅವರು ‘ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯಲಾರೆ’ ಎಂದು ಹೇಳಿ, ಹಿಂದೂತ್ವದ ವಿರುದ್ಧ ನಿಂತು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಇಂದು ಅಂಬೇಡ್ಕರ್ ಅನುಯಾಯಿಗಳೇ ನಾಮ ಬಳಿದುಕೊಂಡು, ಟೇಪ್ ಕಟ್ಕೊಂಡು ಹಿಂದೂತ್ವದ ಭಾಷಣ ಮಾಡುತ್ತಾರೆ. ಹೀಗೆ ಮಾಡುವುದು ಅಂಬೇಡ್ಕರ್‌ಗೆ ಮಾಡುತ್ತಿರುವ ಅವಮಾನ” ಎಂದರು. ಹಿಂದೂ ಧರ್ಮದಲ್ಲಿದ್ದ ತಾರತಮ್ಯಗಳನ್ನು ನಿವಾರಿಸಲು ಅಂಬೇಡ್ಕರ್ ವಿಫಲವಾದ್ದರಿಂದ ಮತಾಂತರಗೊಂಡರು. ಇತಿಹಾಸ ತಿಳಿದು ಮಾತನಾಡಬೇಕು, ಕೇವಲ ಭಾವನಾತ್ಮಕವಾಗಿ ‘ಹಿಂದೂತ್ವ’ ಎನ್ನವುದು ಸರಿಯಲ್ಲ ಎಂದು ರಾಜಣ್ಣ ಕಿವಿಮಾತು ಹೇಳಿದರು.

“ಈಗ ‘ಹಿಂದೂ ಗಣೇಶ’ ಎಂಬ ಟ್ರೆಂಡ್ ಬಂದಿದೆ. ಮುಸ್ಲಿಂ ಗಣೇಶ, ಕ್ರಿಶ್ಚಿಯನ್ ಗಣೇಶ ಎಂದು ಬೇರೆ ಇದ್ದಾನೆಯೇ? ಗಣೇಶ ಯಾವತ್ತೂ ಹಿಂದೂನೇ, ಆದರೆ ಹಿಂದೂತ್ವದ ಹೆಸರಿನಲ್ಲಿ ಒಡಕು ಮೂಡಿಸುವ ಕೆಲಸ ನಡೆಯುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗಣೇಶ ಉತ್ಸವದಲ್ಲಿ ಗೊಂದಲ ಸೃಷ್ಟಿಯಾಗುವುದನ್ನು ತಪ್ಪಿಸಲು ರಾಜಣ್ಣ ಅವರು ಒಂದು ಸಲಹೆ ನೀಡಿದರು: “ಯಾವುದೇ ಹಿಂದೂ ದೇವಸ್ಥಾನವಿದ್ದರೂ, ಅದರ ಸುತ್ತ 25 ಅಡಿ ಮಾರ್ಕ್ ಮಾಡಿ ‘ಸೈಲೆಂಟ್ ಜೋನ್’ ಎಂದು ಸರ್ಕಾರದಿಂದ ಘೋಷಣೆ ಮಾಡಬೇಕು. ಅಲ್ಲಿ ಯಾರೂ ತಮಟೆ ಬಡಿಯಬಾರದು, ಡಿಜೆ ಹಾಕಬಾರದು ಅಥವಾ ಘೋಷಣೆಗಳನ್ನು ಕೂಗಬಾರದು. ಇದರಿಂದ ಎಷ್ಟೋ ಅನಾಹುತಗಳು ತಪ್ಪುತ್ತವೆ” ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page