Home ದೇಶ ಪಶ್ಚಿಮ ಬಂಗಾಳ: ದುರ್ಗಾಪೂಜಾ ಮಂಟಪಗಳ ಬಳಿಯ ಎಡಪಂಥೀಯ ಪುಸ್ತಕ ಮಳಿಗೆಗಳ ಮೇಲೆ ಬುಲ್ಡೋಜರ್ ಕ್ರಮ, ಬಲವಂತದ...

ಪಶ್ಚಿಮ ಬಂಗಾಳ: ದುರ್ಗಾಪೂಜಾ ಮಂಟಪಗಳ ಬಳಿಯ ಎಡಪಂಥೀಯ ಪುಸ್ತಕ ಮಳಿಗೆಗಳ ಮೇಲೆ ಬುಲ್ಡೋಜರ್ ಕ್ರಮ, ಬಲವಂತದ ತೆರವು

0

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜಾ ಮತ್ತು ದಸರಾ ಮಹೋತ್ಸವದ ಸಂದರ್ಭದಲ್ಲಿ ಎಡಪಕ್ಷಗಳು ದಶಕಗಳಿಂದಲೂ ಸಾಂಪ್ರದಾಯಿಕವಾಗಿ ಹಾಕಿಕೊಂಡು ಬರುತ್ತಿದ್ದ ಪುಸ್ತಕ ಮಳಿಗೆಗಳನ್ನು (ಬುಕ್ ಸ್ಟಾಲ್‌ಗಳು) ಬುಲ್ಡೋಜರ್‌ಗಳು ಹಾಗೂ ಪೊಲೀಸ್ ಬಲಪ್ರಯೋಗದ ಮೂಲಕ ತೆರವುಗೊಳಿಸಿ ಧ್ವಂಸಗೊಳಿಸುತ್ತಿರುವ ಕ್ರಮ ತೀವ್ರ ವಿವಾದಕ್ಕೆ ನಾಂದಿ ಹಾಡಿದೆ.

ದುರ್ಗಾ ದೇವಿ ಪೂಜಾ ಮಂಟಪಗಳ ಸಮೀಪ ಸಾರ್ವಜನಿಕರಲ್ಲಿ ಜ್ಞಾನ ಮತ್ತು ವೈಚಾರಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳು ತೆರೆದಿದ್ದ ನೂರಾರು ಪುಸ್ತಕ ಮಳಿಗೆಗಳನ್ನು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ನೆಲಸಮಗೊಳಿಸಿದ್ದಾರೆ.

ಕೋಲ್ಕತಾದ ಚೋರ್‌ಬಾಗಾನ್ ಸಾರ್ವಜನಿಕ ದುರ್ಗಾ ಮಂಟಪದ ಬಳಿ ಶನಿವಾರ ರಾತ್ರಿ ಸಂಭವಿಸಿದ ಸಣ್ಣ ಕಾಲ್ತುಳಿತದ ಘಟನೆಯನ್ನು ನೆಪವಾಗಿಟ್ಟುಕೊಂಡು ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕೋಲ್ಕತಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಬುಲ್ಡೋಜರ್‌ಗಳೊಂದಿಗೆ ಆಗಮಿಸಿ ಎಡಪಂಥೀಯ ಮಳಿಗೆಗಳನ್ನು ಧ್ವಂಸಗೊಳಿಸಿ, ಸಾಮಗ್ರಿಗಳನ್ನು ತೆರವುಗೊಳಿಸಿದ್ದಾರೆ. ಆದರೆ, ಅದೇ ಆವರಣಗಳಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಬೆಂಬಲಿತ ಸಂಸ್ಥೆಗಳು ನಡೆಸುತ್ತಿರುವ ಪುಸ್ತಕ ಮಳಿಗೆಗಳನ್ನು ಮಾತ್ರ ಅಧಿಕಾರಿಗಳು ಮುಟ್ಟದೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಿಪಿಐ(ಎಂ) ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಬಂಗಾಳ ರಾಜ್ಯ ಸಮಿತಿ ಸದಸ್ಯ ಸುದೀಪ್ ಸೇನ್‌ಗುಪ್ತಾ, ಸ್ಥಳೀಯ ಆಡಳಿತ ಮತ್ತು ಪೊಲೀಸರಿಂದ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದೇ ಮಳಿಗೆಗಳನ್ನು ನಡೆಸಲಾಗುತ್ತಿದ್ದರೂ ಬಲವಂತವಾಗಿ ತೆರವು ಮಾಡಲಾಗಿದೆ ಎಂದಿದ್ದಾರೆ. ಹೈಕೋರ್ಟ್ ರಜೆಯ ಅವಧಿಯನ್ನು ಬಳಸಿಕೊಂಡು ಇಂತಹ ಕೃತ್ಯವೆಸಗಲಾಗುತ್ತಿದೆ ಎಂದು ಆರೋಪಿಸಿದ ಹಿರಿಯ ಎಡರಂಗ ನಾಯಕ ಬಿಮನ್ ಬಸು, 1952 ರಿಂದ ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲದಿಂದ ದುರ್ಗಾಪೂಜಾ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆದುಕೊಂಡು ಬಂದಿರುವ ಪರಂಪರೆಯನ್ನು ಹೊಂದಿದ್ದು, ಪುಸ್ತಕ ಮತ್ತು ವೈಚಾರಿಕತೆಗೆ ಹೆದರಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

You cannot copy content of this page

Exit mobile version