ಒಂದು ವರ್ಷದಲ್ಲಿ ಆರ್‌ಎಸ್‌ಎಸ್ ಅಂಗಸಂಸ್ಥೆಯ 1,000 ಶಾಲೆಗಳ ಸ್ಥಾಪನೆ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಣೆ

ಕೋಲ್ಕತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಿಕ್ಷಣ ಅಂಗವಾದ ವಿದ್ಯಾ ಭಾರತಿ ನಡೆಸುವ ಕನಿಷ್ಠ 1,000 ಶಾಲೆಗಳನ್ನು ಒಂದು ವರ್ಷದೊಳಗೆ ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಕೋಲ್ಕತಾದಲ್ಲಿ ಗುರುವಾರ ನಡೆದ ವಿದ್ಯಾ ಭಾರತಿಯ 74ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ ಹಾಗೂ ಪಂಚಾಯಿತಿ ಮಟ್ಟದಲ್ಲಿ ಈ ಶಿಕ್ಷಣ ಸಂಸ್ಥೆಗಳು ಕಾರ್ಯಾರಂಭ ಮಾಡಬೇಕು ಮತ್ತು ಆ ಮೂಲಕ ‘ರಾಷ್ಟ್ರೀಯವಾದಿ ಕಲಿಕೆ’ಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ವಿಶೇಷವಾಗಿ ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ವಿದ್ಯಾ ಭಾರತಿಯ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಬೇಕು ಎಂದು ಅವರು ಪ್ರತಿಪಾದಿಸಿದರು. ಈ ಜಿಲ್ಲೆಗಳಲ್ಲಿ ದೇಶವಿರೋಧಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು, ಅಲ್ಲಿ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸುವ ಅಗತ್ಯವಿದೆ ಎಂದು ಅವರು ವಾದಿಸಿದರು.

ಇದೇ ವೇಳೆ, ಹಿಂದಿನ ತೃಣಮೂಲ ಕಾಂಗ್ರೆಸ್ ಆಡಳಿತವು ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂದು ಆರೋಪಿಸಿದ ಅವರು, ಹೊಸ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ವಿದ್ಯಾ ಭಾರತಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಭಾರತದಾದ್ಯಂತ ಶಾಲೆಗಳನ್ನು ನಡೆಸುತ್ತಿರುವ ವಿದ್ಯಾ ಭಾರತಿ, ಸಾಮಾನ್ಯ ಪಠ್ಯಕ್ರಮದ ಜತೆಗೆ ಸಾಂಸ್ಕೃತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.

ರಾಜ್ಯದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಮತ್ತು ಮದರಸಾ ಶಿಕ್ಷಣಕ್ಕೆ ಪ್ರತ್ಯೇಕ ವ್ಯವಸ್ಥೆ ಇರಬಾರದು ಎಂದು ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದರು. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ‘ಒಂದು ದೇಶ, ಒಂದು ಸಂವಿಧಾನ, ಒಂದು ಧ್ವಜ, ಒಬ್ಬ ನಾಯಕ’ ಎಂಬ ಘೋಷಣೆಯನ್ನು ಉಲ್ಲೇಖಿಸಿದ ಅವರು, ಇದೇ ತತ್ವ ಶಿಕ್ಷಣ ಕ್ಷೇತ್ರಕ್ಕೂ ಅನ್ವಯವಾಗಬೇಕು ಎಂದು ಪ್ರತಿಪಾದಿಸಿದರು. ಉಳಿದ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿದ್ದರೆ, ಆಲಿಯಾ ವಿಶ್ವವಿದ್ಯಾಲಯವನ್ನು ಮಾತ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ನಿರ್ವಹಿಸುವ ಪ್ರಸ್ತುತ ವ್ಯವಸ್ಥೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಬೋರ್ಡ್ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರನ್ನು ಸನ್ಮಾನಿಸಿದ ನಂತರ, ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯು ಪ್ರತ್ಯೇಕವಾಗಿ 27 ಮುಸ್ಲಿಂ ವಿದ್ಯಾರ್ಥಿಗಳ ಪಟ್ಟಿಯನ್ನು ಕಳುಹಿಸಿದ್ದನ್ನು ಮುಖ್ಯಮಂತ್ರಿ ಪ್ರಶ್ನಿಸಿದರು. ಈಗಾಗಲೇ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳನ್ನು ಒಟ್ಟಾಗಿ ಸನ್ಮಾನಿಸಲಾಗಿದ್ದಾಗ ಪ್ರತ್ಯೇಕ ಪಟ್ಟಿಯ ಅಗತ್ಯವೇನಿತ್ತು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ, ಶಾಲೆಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ನಿರಾಕರಿಸುವ ಶಾಲೆಗಳಿಗೆ ಸರ್ಕಾರಿ ಅನುದಾನವನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಪೂರ್ಣ ಗೀತೆಯನ್ನು ಬಾಯಿಬಿಟ್ಟು ಹಾಡಬೇಕೆಂಬ ನಿಯಮವನ್ನು ಅವರು ಪುನರುಚ್ಚರಿಸಿದರು. ಸರ್ಕಾರದ ಈ ಪ್ರಸ್ತಾಪಕ್ಕೆ ವಿಮರ್ಶಕರಿಂದ ಆಕ್ಷೇಪಗಳು ವ್ಯಕ್ತವಾಗಿದ್ದು, ಆರ್‌ಎಸ್‌ಎಸ್ ಪ್ರೇರಿತ ಶಿಕ್ಷಣ ವ್ಯವಸ್ಥೆಯು ನಿರ್ದಿಷ್ಟ ಸೈದ್ಧಾಂತಿಕ ಹಾದಿಯನ್ನು ಶಾಲಾ ಹಂತದಲ್ಲೇ ಹೇರುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು