ತೃಣಮೂಲ ಕಾಂಗ್ರೆಸ್‌ನಲ್ಲಿ ಮಹಾ ಬಂಡಾಯ: 20 ಎಂಪಿಗಳಿಂದ ದೀದಿಗೆ ಶಾಕ್, ಎನ್‌ಡಿಎಗೆ ಬೆಂಬಲ ಘೋಷಿಸಿ ಓಂ ಬಿರ್ಲಾಗೆ ಪತ್ರ!

ಕೋಲ್ಕತಾ: ತೃಣಮೂಲ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಆಂತರಿಕ ರಾಜಕೀಯ ಬಿಕ್ಕಟ್ಟು ಇದೀಗ ದೆಹಲಿ ಮಟ್ಟಕ್ಕೆ ತಲುಪಿದೆ. ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಈಗಾಗಲೇ 58ಕ್ಕೂ ಹೆಚ್ಚು ಶಾಸಕರು ಬಂಡಾಯವೆದ್ದು ತೃಪ್ತರ ಗುಂಪು ರಚಿಸಿಕೊಂಡಿರುವ ಬೆನ್ನಲ್ಲೇ, ಲೋಕಸಭೆಯ 20 ಟಿಎಂಸಿ ಸಂಸದರು ಪಕ್ಷದ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದಾರೆ. ದೆಹಲಿಯಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ ಒಕ್ಕೂಟ’ದ ಜಂಟಿ ಸಭೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಬಂಡಾಯ ಸಂಸದರ ಪರವಾಗಿ ಮಾಹಿತಿ ನೀಡಿರುವ ಸಂಸದೆ ಕಾಕೋಲಿ ಘೋಷ್, ಪ್ರಸ್ತುತ ಟಿಎಂಸಿ ನಾಯಕತ್ವ ಮತ್ತು ನೀತಿಗಳ ವಿರುದ್ಧ ಅಸಮಾಧಾನಗೊಂಡು 20 ಲೋಕಸಭಾ ಸಂಸದರು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಜಂಟಿ ಪತ್ರ ಬರೆದಿರುವ ಸಂಸದರು, ತಾವು ಸಂಸತ್ತಿನಲ್ಲಿ ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳಲು ಬಯಸಿದ್ದು, ತಮಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಅಧಿಕೃತವಾಗಿ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ಟಿಎಂಸಿ ಹೊಂದಿರುವ 28 ಸಂಸದರ ಪೈಕಿ 20 ಮಂದಿ ರೆಬೆಲ್ ಆಗಿರುವುದು ಮಮತಾ ಬ್ಯಾನರ್ಜಿ ಅವರಿಗೆ ನುಂಗಲಾರದ ತುತ್ತಾಗಿದೆ.

ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ರಾಜೀನಾಮೆ: ಇದಕ್ಕೂ ಮುನ್ನ, ದಶಕಗಳಿಂದ ಮಮತಾ ಬ್ಯಾನರ್ಜಿ ಅವರ ಅತ್ಯಂತ ಆಪ್ತರಾಗಿದ್ದ ಮತ್ತು ಸಂಸತ್ತಿನಲ್ಲಿ ಪಕ್ಷದ ಪ್ರಮುಖ ಧ್ವನಿಯಾಗಿದ್ದ ಹಿರಿಯ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ತಮ್ಮ ಸಂಸತ್ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ಭಾರಿ ಸಂಚಲನ ಮೂಡಿಸಿದರು. ಟಿಎಂಸಿಯ 15 ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹಾಗೂ ಸಾರ್ವಜನಿಕ ಲೂಟಿ ಹೆಚ್ಚಾಗಿದೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳದ ನೂತನ ಬಿಜೆಪಿ ಸರ್ಕಾರದ ಆಡಳಿತವನ್ನು ಶ್ಲಾಘಿಸಿರುವ ಅವರು, ಬಂಗಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದು, ಹೊಸ ಸರ್ಕಾರವು ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸಿದೆ ಎಂದಿದ್ದಾರೆ. ಸುಖೇಂದು ಅವರ ರಾಜೀನಾಮೆಯನ್ನು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅಂಗೀಕರಿಸಿದ್ದಾರೆ.

ರಾಜೀನಾಮೆ ಬೆನ್ನಲ್ಲೇ ಸುಖೇಂದು ಶೇಖರ್ ರಾಯ್ ಅವರು ಟಿಎಂಸಿಯ 13 ಬಂಡಾಯ ಸಂಸದರೊಂದಿಗೆ ಪ್ರಮುಖ ಸಭೆ ನಡೆಸಿದ್ದಾರೆ. ಈ ನಾಯಕರು ದೆಹಲಿಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಬಳಿಕ ಎನ್‌ಡಿಎ ಮೈತ್ರಿಕೂಟಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಮತ್ತೊಂದೆಡೆ, ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಟ್ಯಾಂಪರಿಂಗ್ ಸೇರಿದಂತೆ ಹಲವು ಗಂಭೀರ ಹಗರಣಗಳ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕ ಜಹಾಂಗೀರ್ ಖಾನ್‌ನನ್ನು ಪೊಲೀಸರು ನೇಪಾಳ ಗಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಬಿರುಕು ಇನ್ನು ಹೆಚ್ಚಾಗಲಿದೆ – ಬಂಡಾಯ ಶಾಸಕರ ಎಚ್ಚರಿಕೆ: ಸಂಸದರ ಈ ಬಂಡಾಯದ ಕುರಿತು ಮಾತನಾಡಿರುವ ಟಿಎಂಸಿ ಬಂಡಾಯ ಶಾಸಕರ ಗುಂಪಿನ ಪ್ರಮುಖ ನಾಯಕ ರಿತಬ್ರತ ಬ್ಯಾನರ್ಜಿ, “ಬಂಗಾಳದ ಶಾಸಕರಲ್ಲಿ ಆರಂಭವಾದ ಅಸಮಾಧಾನದ ಕಿಡಿ ಈಗ ದೆಹಲಿಯ ಸಂಸದರವರೆಗೂ ವ್ಯಾಪಿಸಿದೆ. ಸಮಯ ಕಳೆದಂತೆ ಪಕ್ಷದೊಳಗಿನ ಈ ಅಸಮಾಧಾನ ಮತ್ತು ಬಂಡಾಯದ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ. ಶಾಸಕರ ಬಂಡಾಯದ ನೇತೃತ್ವ ವಹಿಸಿರುವ ರಿತಬ್ರತ ಬ್ಯಾನರ್ಜಿ ಅವರನ್ನು ಇತ್ತೀಚೆಗಷ್ಟೇ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಸ್ಪೀಕರ್ ಅಧಿಕೃತವಾಗಿ ಗುರುತಿಸಿದ್ದಾರೆ.

ಈ ಮಹಾ ಬಂಡಾಯದ ಕುರಿತು ಟಿಎಂಸಿ ಸುಪ್ರೀಮೋ ಮಮತಾ ಬ್ಯಾನರ್ಜಿ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ಇಡೀ ಪಕ್ಷದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಈ ಸರಣಿ ಬಂಡಾಯಗಳೇ ಸಾಕ್ಷಿ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು