Friday, July 12, 2024

ಸತ್ಯ | ನ್ಯಾಯ |ಧರ್ಮ

ಪಶ್ಚಿಮ ಬಂಗಾಳ: ಪರಪುರುಷನ ಜೊತೆಗಿದ್ದಳು ಆರೋಪಿಸಿ ಮಹಿಳೆಗೆ ಅಮಾನುಷವಾಗಿ ಥಳಿಸಿದ ಟಿಎಂಸಿ ಮುಖಂಡ

ಉತ್ತರ ದಿನಾಜ್‌ಪುರ: ಜಿಲ್ಲೆಯ ಲಖೀಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘೆಮ್ಟಗಚ್ ಗ್ರಾಮದ ರಸ್ತೆಯಲ್ಲಿ ವಿವಾಹಿತ ಮಹಿಳೆಯೊಬ್ಬಳಿಗೆ ಆಡಳಿತ ಪಕ್ಷದ ತೃಣಮೂಲ ಕಾಂಗ್ರೆಸ್‌ ಪಕ್ಷದ ರಾಜಕೀಯ ಪುಡಾರಿಯೊಬ್ಬ ಸಾರ್ವಜನಿಕವಾಗಿ ಥಳಿಸಿದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

ಮಹಿಳೆ ಮತ್ತು ಆಕೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಭೀಕರವಾಗಿ ಥಳಿಸುವಾಗ ನೂರಾರು ಜನರು ಸುತ್ತುವರಿದು ನೋಡುವ ದೃಶ್ಯ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ಈ ದೃಶ್ಯವನ್ನು ಚಿತ್ರೀಕರಿಸಿಕೊಂಡು ಹರಿಬಿಟ್ಟ ಯುವಕನನ್ನು ಈಗಾಗಲೇ ಊರಿನಿಂದ ಹೊರಗೆ ಓಡಿಸಲಾಗಿದೆ ಎಂದು ದಿ.ವೈರ್‌ ವರದಿ ಮಾಡಿದೆ.

ಜೂನ್ 28ರಂದು ಘಟನೆ ನಡೆದರೂ ಬೆಳಕಿಗೆ ಬಂದಿರಲಿಲ್ಲ. ಜನರ ಮೊಬೈಲ್‌ನಲ್ಲಿ ವಿಡಿಯೋ ಹರಿದಾಡುತ್ತಿತ್ತು. ಆದರೆ, ಯಾರೂ ಭಯದಿಂದ ಪೊಲೀಸರು ಮತ್ತು ಮಾಧ್ಯಮಗಳಿಗೆ ತಿಳಿಸಿರಲಿಲ್ಲ ಎಂದು ವರದಿಗಳು ಹೇಳಿವೆ.

ಘಟನೆ ಸಂಬಂಧ ಇಸ್ಲಾಂಪುರ ಪೊಲೀಸ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಡಾ. ಜೋಬಿ ಥಾಮಸ್ ಕೆ ಅವರನ್ನು ವೈರ್‌ ಸಂಪರ್ಕಿಸಿದಾಗ “ಚೋಪ್ರಾ ಪ್ರದೇಶದ ಘಟನೆಯೊಂದು ನಮ್ಮ ಗಮನಕ್ಕೆ ಬಂದಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸ್ ತನಿಖೆ ಮುಂದುವರಿಯುತ್ತದೆ.” ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಹಲ್ಲೆಗೆ ಕಾರಣ: ಹಲ್ಲೆಗೊಳಗಾದ ಮಹಿಳೆಯನ್ನು ಸುಲ್ತಾನಾ ಎಂದು ಗುರುತಿಸಲಾಗಿದ್ದು, ಈಕೆ ವಾರದ ಹಿಂದೆ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು ರಾಜೀವ್ ಎಂಬ ವ್ಯಕ್ತಿಯೊಂದಿಗೆ ಸಿಲಿಗುರಿ ಬಳಿಯ ಮಟಿಗಾರ ಪ್ರದೇಶಕ್ಕೆ ತೆರಳಿದ್ದರು. ಜೂನ್ 28 ರಂದು ರಾಜೀವ್ ಮತ್ತು ಸುಲ್ತಾನಾ ಗ್ರಾಮಕ್ಕೆ ಮರಳಿದ್ದು ತಿಳಥಳಿಸಲಾಗಿದೆ ಎಂದು ದಿ ವೈರ್ ಹೇಳಿದೆ.

ಟಿಎಂಸಿಯ ಸ್ಥಳೀಯ ಮುಖಂಡ ತಾಜಿಮುಲ್ ಅಲಿಯಾಸ್ ‘ಜೆಸಿಬಿ’ ಮಹಿಳೆಗೆ ಥಳಿಸಿದ್ದು, ಆಕೆ ತನ್ನ ಪತಿಯನ್ನು ಎರಡನೇ ಬಾರಿ ಮದುವೆಯಾಗಬೇಕಾದರೆ 3 ಲಕ್ಷ ರೂ. ಮತ್ತು ತಾಜಿಮುಲ್‌ಗೆ 2 ಲಕ್ಷ ರೂ. ಪಾವತಿಸಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ, ಸುಲ್ತಾನಾ ಹಣ ಪಾವತಿಸಲು ನಿರಾಕರಿಸಿದ್ದರು.

ಇದರಿಂದ ಕುಪಿತಗೊಂಡ ತಾಜಿಮುಲ್, ಮೊದಲು ಮಹಿಳೆಗೆ ಅವಮಾನಿಸಿ ಬಳಿಕ ಸುಮಾರು ಒಂದು ಗಂಟೆಗಳ ಕಾಲ ಭೀಕರವಾಗಿ ಥಳಿಸಿದ್ದಾನೆ. ರಾಜೀವ್‌ಗೂ ಥಳಿಸಲಾಗಿದೆ ಎನ್ನಲಾಗಿದೆ.

ಘಟನೆ ನಡೆದ ನಾಲ್ಕೈದು ಗಂಟೆಗಳ ನಂತರ ಚೋಪ್ರಾ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಜ್ಞಾಹೀನರಾಗಿದ್ದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಪಿಯ ರಾಜಕೀಯ ಹಿನ್ನೆಲೆ: ತಾಜಿಮುಲ್ ಚೋಪ್ರಾ ಶಾಸಕ ಹಮೀದುರ್ ರೆಹಮಾನ್ ಅವರ ಬಲಗೈ ಬಂಟ ಎಂದು ತಿಳಿದು ಬಂದಿದೆ. ಈತ ಕಳೆದ ವರ್ಷ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಗುಂಡಿನ ದಾಳಿಯಿಂದ ಹತ್ಯೆಗೀಡಾದ ಯುವ ಸಿಪಿಐ(ಎಂ) ಕಾರ್ಯಕರ್ತ ಮನ್ಸೂರ್ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಈತನಾಗಿದ್ದಾನೆ.

ಮಾಜಿ ಸಂಸದ ಮತ್ತು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರು ಎಕ್ಸ್‌ ಪೋಸ್ಟ್‌ನಲ್ಲಿ ಹಲ್ಲೆಯ ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಈಗಾಗಲೇ ಗ್ರಾಮದಿಂದ ಹೊರಹಾಕಲಾಗಿದೆ ವಿಡಿಯೋ ಹಂಚಿಕೆಯಲ್ಲಿ ಪಾತ್ರವಹಿಸಿದ ಇನ್ನೊಬ್ಬ ವ್ಯಕ್ತಿಗೆ 50,000 ರೂ “ದಂಡ” ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ವಿಡಿಯೋ ಲಿಂಕಗಾಗಿ ಇಲ್ಲಿ ಕ್ಲಿಕ್ಕಿಸಿ.

Related Articles

ಇತ್ತೀಚಿನ ಸುದ್ದಿಗಳು