Home ಅಪರಾಧ ಅತ್ಯಾಚಾರ ಪ್ರಕರಣ : ಆರೋಪಿ ಬಚಾವ್ ಮಾಡುವ ತಂತ್ರ ನಡೆದಿದೆಯೇ? : ಹೋರಾಟಗಾರರು ಪೊಲೀಸರಿಗೆ ನೀಡಿದ...

ಅತ್ಯಾಚಾರ ಪ್ರಕರಣ : ಆರೋಪಿ ಬಚಾವ್ ಮಾಡುವ ತಂತ್ರ ನಡೆದಿದೆಯೇ? : ಹೋರಾಟಗಾರರು ಪೊಲೀಸರಿಗೆ ನೀಡಿದ ಮನವಿ ಪತ್ರ ಏನು ಹೇಳುತ್ತೆ? ತಪ್ಪದೇ ಓದಿ

0

ಚುನಾವಣಾ ಸಂದರ್ಭವಾದರೂ ದೇಶವೇ ಬೆಚ್ಚಿ ಬೀಳುವಂತಾ ಪ್ರಕರಣದ ಮೂಲಕ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ ದೇಶದಾದ್ಯಂತ ದೊಡ್ಡ ಸುದ್ದಿ ಮಾಡುತ್ತಿದೆ. ಮೇಲ್ನೋಟಕ್ಕೆ ಸ್ಪಷ್ಟವಾಗಿ ಲೆಕ್ಕಕ್ಕೂ ಸಿಗದಷ್ಟು ಹೆಣ್ಣು ಮಕ್ಕಳ ಅತ್ಯಾಚಾರ ನಡೆದಿದ್ದರೂ ಪೊಲೀಸ್ ಇಲಾಖೆ ರೇಪ್ ಕೇಸ್ ಗೆ ಬಳಸುವ ಸೆಕ್ಷನ್ ದಾಖಲಿಸದೇ ಇರುವುದು ಹಲವಷ್ಟು ಅನುಮಾನ ಹುಟ್ಟು ಹಾಕಿದೆ.

ಈಗಾಗಲೇ ಸಂತ್ರಸ್ತರ ಕಡೆಯಿಂದ ಒಂದೊಂದಾಗಿ ದೂರು ಬಂದರೂ ಇಲಾಖೆ ಕಡೆಯಿಂದಲೇ ಅವರ ರಕ್ಷಣೆ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿವೆ. ಹೀಗಾಗಿ ಹೋರಾಟಗಾರರು, ವಿವಿಧ ಜನಪರ ಸಂಘಟನೆಗಳ ಮುಖ್ಯಸ್ಥರು ಸೇರಿದಂತಹ ತಂಡ ಇಂದು ಪ್ರಮುಖ ಅಂಶಗಳನ್ನು ಒಳಗೊಂಡಂತೆ ಪೊಲೀಸ್ ಇಲಾಖೆಯ ಗಮನ ಸೆಳೆಯಲು ಪ್ರಯತ್ನಿಸಿದೆ. ಅದರಂತೆ, ಈಗಾಗಲೇ ಹಾಕಲಾದ ಸೆಕ್ಷನ್ ಗಳು ಎಷ್ಟು ಸರಿಯಾಗಿವೆ, ಸಂತ್ರಸ್ತರ ರಕ್ಷಣೆಗೆ ಕೈಗೊಳ್ಳಬೇಕಾದ ಪ್ರಮುಖ ನಡೆಗಳು, ಆರೋಪಿ ಕುಟುಂಬ ಪ್ರಭಾವ ಸಂತ್ರಸ್ತರ ಮೇಲೆ ಬಿದ್ದದ್ದೇ ಆದರೆ ಅದರ ಪರಿಣಾಮ, ಈ ಎಲ್ಲಾ ವಿಚಾರಗಳನ್ನೂ ಒಳಗೊಂಡಂತೆ ಪೊಲೀಸ್ ಇಲಾಖೆಗೆ ಹೋರಾಟಗಾರರು ಮನವಿ ಸಲ್ಲಿಸಿದ್ದಾರೆ.

ಮನವಿ ಪತ್ರದಲ್ಲೇನಿದೆ?
ದಿನಾಂಕ 28.04.2024 ರಂದು 47 ವರ್ಷದ ಸಂತ್ರಸ್ತ ಮಹಿಳೆ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ರಿ ದೂರನ್ನು ಪಡೆದುಕೊಂಡಿರುವ ಹೊಳೆನರಸೀಪುರ ಪೊಲೀಸರು ಅಪರಾಧ ಸಂಖ್ಯೆ 107/2024 ಎಂದು ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 354a, 354d, 506, 509 ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿರುವ ದೂರು ಮತ್ತು ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಸಾರಾಂಶದಲ್ಲಿ “ಪಿರ್ಯಾದಿಗೆ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಎಚ್ ಡಿ ರೇವಣ್ಣರವರ ಮನೆಯಲ್ಲಿ ಮೂರುವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದು ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ 4 ತಿಂಗಳ ನಂತರ ಹೆಚ್ ಡಿ ರೇವಣ್ಣ ರವರು ತಮ್ಮ ಕೊಠಡಿಗೆ ಬರುವಂತೆ ಅಹ್ವಾನಿಸುತ್ತಿದ್ದರು. ಮನೆಯಲ್ಲಿ 6 ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು. ಎಲ್ಲರು ಪ್ರಜ್ವಲ್ ರೇವಣ್ಣ ಬಂದಾಗ ನಮಗೆ ಭಯವಾಗುತ್ತದೆ ಎಂದು ಭಯ ಹೊರ ಹಾಕುತ್ತಿದ್ದರು. ರೇವಣ್ಣರವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಸ್ಟೋರ್ ರೂಮ್ ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರ. ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು.  ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಪ್ರಜ್ವಲ್ ರೇವಣ್ಣ ಅಡುಗೆ ಮನೆಯಲ್ಲಿ ಇದ್ದಾಗ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆ ಭಾಗದಲ್ಲಿ, ಜಿಗುಟುತ್ತಿದ್ದರು. ಎಣ್ಣೆ ಹಚ್ಚಲು ನನ್ನನ್ನು ಕಳಿಸು ಎಂದು ಕೆಲಸ ಮಾಡುವ ಹುಡುಗನ ಹೇಳಿ ಕಳುಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದು, ಮನೆಯಲ್ಲಿದ್ದಾಗ ಪೋನ್ ಮಾಡಿ ಮನೆಯಲ್ಲಿ ಮಗಳು ಇರುತ್ತಿದ್ದು ಸುಮಾರು ಸಲ ವಿಡಿಯೋ ಕಾಲ್ ಮಾಡಿ ಪಿರ್ಯಾದಿ ಮಗಳ ಜೊತೆಯೂ ಅಸಭ್ಯ ಸಂಬಾಷಣೆ ಮೂಲಕ ಪ್ರಚೋದಿಸಲು ಯತ್ನಿಸುತ್ತಿದ್ದು, ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಮಾಡಿದ್ದು, ಇದರಿಂದ ಪಿರ್ಯಾದಿಯವರು ಮನೆಯಿಂದ ಕೆಲಸ ಬಿಟ್ಟು ಹೊರ ಬಂದಿದ್ದರು” ಎಂದು ಎಫ್ಐಆರ್ ಸಾರಾಂಶದಲ್ಲಿ ದಾಖಲಿಸಿಕೊಂಡಿದ್ದಾರೆ.

ಪೊಲೀಸರೇ ದಾಖಲಿಕೊಂಡಿರುವ ಎಫ್ಐಅರ್ ಸಾರಾಂಶದ ಪ್ರಕಾರ ಈ ಪ್ರಕರಣ ಅತ್ಯಾಚಾರದ ಪ್ರಕರಣ ಆಗಿರುತ್ತದೆ. ಹಾಗಾಗಿ ಲೈಂಗಿಕ ದೌರ್ಜನ್ಯಗಳನ್ನು ವಿವರಿಸಿರುವ ಪ್ರಕರಣಗಳಲ್ಲಿ ರೇಪ್ ಗೆ ಸಂಬಂಧಪಟ್ಟ ಹಲವು ಸೆಕ್ಷನ್ ಗಳನ್ನು ದಾಖಲಿಸಿಕೊಳ್ಳಬೇಕಿತ್ತು. “ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು” ಎಂಬ ಆರೋಪವು ಅತ್ಯಾಚಾರವನ್ನು ಸ್ಪಷ್ಟವಾಗಿ ಸಂಕೇತಿಸುತ್ತದೆ. ಭರವಸೆಗಳನ್ನು ನೀಡಿ, ಅಮಿಷವೊಡ್ಡಿ ಒಪ್ಪಿತ ಲೈಂಗಿಕ ಚಟುವಟಿಕೆ ಮಾಡುವುದು ಕೂಡಾ ಅತ್ಯಾಚಾರ ಎಂದು ಪರಿಗಣಿತವಾಗಿದೆ. ಕೆಲ ವಿಡಿಯೊಗಳಲ್ಲಿ ಒಪ್ಪಿತ ಲೈಂಗಿಕ ಚಟುವಟಿಕೆ ಎಂದು ಕಂಡು ಬಂದರೆ ಇನ್ನು ಕೆಲ ವಿಡಿಯೋಗಳಲ್ಲಿ ಮಹಿಳೆಯರು ಪ್ರತಿರೋಧ ಮಾಡಿದರೂ ಲೈಂಗಿಕ ಕ್ರೀಯೆ ನಡೆಸಲಾಗಿದೆ‌. ಹಾಗಾಗಿ ಆರೋಪಿಯೇ ಚಿತ್ರಿಕರಿಸಿರುವ ನೂರಾರು ವಿಡಿಯೋಗಳಲ್ಲಿ ಅತ್ಯಾಚಾರ ಮಾಡಿರುವುದು ಸ್ಪಷ್ಟವಾಗಿದೆ‌. ಇವೆಲ್ಲವನ್ನೂ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಜತೆಗೇ ನೋಡಬೇಕಿದೆ.

ಮಹಿಳೆ ನೀಡಿರುವ ದೂರಿನ ಎಫ್ಐಆರ್ ಸಾರಾಂಶದಲ್ಲಿ, ಮಹಿಳೆಯ ಇಚ್ಚೆಗೆ ವಿರುದ್ದವಾಗಿ ಮಹಿಳೆಯ ಮೈ ಮುಟ್ಟಿರುವುದಲ್ಲದೇ, ದೌರ್ಜನ್ಯವನ್ನು ಮುಂದುವರೆಸಿದ್ದರು ಎಂದು ಹೇಳಲಾಗಿದೆ. ಮಾತ್ರವಲ್ಲದೇ ಸಂತ್ರಸ್ತ ಮಹಿಳೆಯ ಮಗಳಿಗೂ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ಎಫ್ಐಆರ್ ನ ಸಂತ್ರಸ್ತರ ಕಾಲಂನಲ್ಲಿ ಒರ್ವ  ಸಂತ್ರಸ್ತರ ಹೆಸರು ಮಾತ್ರ ಉಲ್ಲೇಖಿಸಲಾಗಿದೆ. ಇಬ್ಬರು ಸಂತ್ರಸ್ತರು ಎಂಬುದನ್ನು ದಾಖಲಿಸದೇ ಎಫ್ಐಆರ್ ಅನ್ನು ಸರಳೀಕರಿಸಿ ಆರೋಪಿ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ಗೆ ಪೊಲೀಸರು ಸಹಕಾರ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಹಾಲಿ ಸಂಸದರಾಗಿದ್ದು, ಎಚ್ ಡಿ ರೇವಣ್ಣ ಹಲವು ಭಾರಿ ಪ್ರಭಾವಿ ಸಚಿವರಾಗಿದ್ದವರು. ಇಡೀ ಕುಟುಂಬ ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬವಾಗಿದ್ದು, ಅವರನ್ನು ರಕ್ಷಣೆ ಮಾಡಲೆಂದೇ ಪೊಲೀಸರು ದುರ್ಬಲ ಸೆಕ್ಷನ್ ಗಳನ್ನು ದಾಖಲಿಸಿದ್ದಾರೆ ಮತ್ತು ರೇಪ್ ಸೆಕ್ಷನ್ ಗಳನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಹೊಳೆನರಸೀಪುರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಈ ಎಫ್ಐಆರ್ ಗೆ ಸಂಬಂಧಿಸಿದ ಎಲ್ಲಾ ಪೊಲೀಸರನ್ನು ಅಮಾನತ್ತು ಮಾಡಿ, ಪ್ರಾಮಾಣಿಕ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸುವಂತೆ ದೂರು.

ಸದರಿ ಈ ದೂರನ್ನು ಆದರಿಸಿ ಹೋರಾಟಗಾರರ ತಂಡ ಪ್ರಮುಖ ಬೇಡಿಕೆಗಳನ್ನು ಪೊಲೀಸ್ ಇಲಾಖೆ ಮುಂದೆ ಇರಿಸಿದೆ.

ಬೇಡಿಕೆಗಳು
1. ದೂರುದಾರ ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಮಹಿಳಾ ಆಪ್ತಸಮಾಲೋಚಕರು ಇರಬೇಕು
2. ಅತ್ಯಾಚಾರದ ಸ್ಪಷ್ಟ ಸಂಕೇತಗಳು ಇದ್ದರೂ ದುರ್ಬಲ ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲಿಸಿದ ಹೊಳೆನರಸೀಪುರದ ಇನ್ಸ್ ಪೆಕ್ಟರ್ ಅನ್ನು ಅಮಾನತ್ತು ಮಾಡಬೇಕು
3. ದೂರುದಾರ ಸಂತ್ರಸ್ತ ಮಹಿಳೆಯರಿಗೆ ಭದ್ರತೆ ಒದಗಿಸಬೇಕು
4. ವಿಡಿಯೋದಲ್ಲಿರುವ ಮಹಿಳೆಯರನ್ನು ಪೊಲೀಸರೇ ಪತ್ತೆ ಹಚ್ಚಿ ಹೇಳಿಕೆ ದಾಖಲಿಸಬೇಕು.
5. ಈಗಾಗಲೇ ದೂರು ದಾಖಲಿಸಿರುವ ಮಹಿಳೆಯ ಮರು ಹೇಳಿಕೆ  ತೆಗೆದುಕೊಳ್ಳಬೇಕು.
6.  FIR 107/2024 ನಲ್ಲಿ ಇಬ್ಬರು ಸಂತ್ರಸ್ತರಿದ್ದರೂ ಸಂತ್ರಸ್ತರ ಕಾಲಂನಲ್ಲಿ ಹಾಕದೇ ಇರುವ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು
7.  ಈಗಾಗಲೇ ದಾಖಲಿಸಿರುವ ಎಫ್ಐಆರ್ ಗೆ ಹೆಚ್ಚುವರಿ ಅಂಶಗಳನ್ನು, ಸೆಕ್ಷನ್ ಗಳನ್ನು ಸೇರ್ಪಡೆಗೊಳಿಸಿ ಬಲಗೊಳಿಸಬೇಕು
8.  ಆರೋಪಿ ಕುಟುಂಬದ ಜೊತೆ ನಿಕಟ ಸಂಪರ್ಕ ಹೊಂದಿರುವ ಪೊಲೀಸರನ್ನು ವರ್ಗಾಹಿಸಬೇಕು
9.  ಆರೋಪಿಯ ಕುಟುಂಬದ ಯಾವುದೇ ವ್ಯಕ್ತಿಯ ಶಿಫಾರಸ್ಸು ಪತ್ರದ ಮೇರೆಗೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳನ್ನು ಹಾಸನದಿಂದ ವರ್ಗಾಯಿಸಬೇಕು
10.  ತನ್ನ ಪ್ರಭಾವವನ್ನೆ ಅಸ್ತ್ರವನ್ನಾಗಿಸಿಕೊಂಡು ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಅತಿ ಘೋರ ಪ್ರಕರಣ ಇದಾಗಿರುವುದರಿಂದ ಈ ಪ್ರಕರಣವನ್ನು ನಿಷ್ಪಕ್ಷಪಾತ, ನಿರ್ಭೀತಿಯಿಂದ ತನಿಖೆ ನಡೆಸಲಾಗುತ್ತದೆ ಎಂದು ಖಾತ್ರಿಗೊಳಿಸಬೇಕು.

ಎಂದು ಮನವಿ ಮಾಡಲಾಗಿದೆ. ಮನವಿಯಲ್ಲಿ ಕಂಡುಬಂದ ಪ್ರಮುಖ ಹೆಸರುಗಳೆಂದರೆ.. 1. ಮೀನಾಕ್ಷಿ ಬಾಳಿ, ಅಧ್ಯಕ್ಷರು ಜನವಾದಿ ಮಹಿಳಾ ಸಂಘಟನೆ
2. ಸಬೀಹಾ ಭೂಮಿಗೌಡ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ
3. ಮುನೀರ್ ಕಾಟಿಪಳ್ಳ, ರಾಜ್ಯ ಅಧ್ಯಕ್ಷರು ಡಿವೈಎಫ್ಐ
4. ಕೆ ನೀಲಾ, ಉಪಾಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ
5. ನವೀನ್ ಸೂರಿಂಜೆ, ಬರಹಗಾರರು
6. ಅಖಿಲಾ ವಿದ್ಯಾಸಂದ್ರ, ವಕೀಲರು
7. ಜ್ಯೋತಿ ಅನಂತ ಸುಬ್ಬರಾವ್, ಎನ್ಎಫ್ಐಡಬ್ಲ್ಯು
8. ವಿನಯ್ ಶ್ರೀನಿವಾಸ್, ವಕೀಲರು
9. ನಾಗೇಗೌಡ ಕೆ ಎಸ್, ಚಿಂತಕರು
10. ಬೈರಪ್ಪ ಹರೀಶ್ ಕುಮಾರ್, ಕನ್ನಡ ಹೋರಾಟಗಾರರು
11. ಪ್ರಭಾ ಬೆಳವಂಗಲ, ಜನವಾದಿ ಮಹಿಳಾ ಸಂಘಟನೆ
12. ಮಧುಭೂಷನ್,  ಮಹಿಳಾ ಹಕ್ಕು ಹೋರಾಟಗಾರರು
13. ಸತ್ಯಾ ಎಸ್. ಜನವಾದಿ ಮಹಿಳಾ ಸಂಘಟನೆ
14. ಕಾವ್ಯ ಅಚ್ಯುತ್, ಸಮುದಾಯ ಬೆಂಗಳೂರು

You cannot copy content of this page

Exit mobile version