Wednesday, June 19, 2024

ಸತ್ಯ | ನ್ಯಾಯ |ಧರ್ಮ

ಕಮರಿ ಹೋಯ್ತಾ ಉತ್ತರ ಕನ್ನಡ ಜಿಲ್ಲೆಯ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಬೇಡಿಕೆಯ ಕೂಗು?

ಇಲ್ಲಿಗೆ ಕೇವಲ 2 ತಿಂಗಳ ಹಿಂದೆ… ಅಂದ್ರೆ ಜುಲೈ 20, 2022 ರ ಸಂಜೆ 4 ಗಂಟೆಯ ಸುಮಾರಿಗೆ ಉಡುಪಿ ಜಿಲ್ಲೆಯ ಶಿರೂರು ಟೋಲ್ ಗೇಟ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಹೊರಟ ಆಂಬುಲೆನ್ಸ್ ಚಾಲಕನ ಅಜಾಗರುಕತೆಯಿಂದಲೋ ಅಥವಾ ಟೋಲ್ ಸಿಬ್ಬಂದಿಯ ಬೇಜವಾಬ್ದಾರಿಯಿಂದಲೋ ಆಂಬುಲೆನ್ಸ್ ನಲ್ಲಿದ್ದ ನಾಲ್ವರ ಜೀವ ಬಲಿ ಪಡೆದುಕೊಂಡಿತ್ತು.

ಹೆಚ್ಚಿನ ಮಂದಿಗೆ ಈ ಭೀಕರ ದುರಂತ ಮರೆತು ಹೋಗಿರಲಾರದು. ಆದರೆ ಆ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದ ಒಂದು ಬಿಸಿಬಿಸಿ ಚರ್ಚೆ ಮಾತ್ರ ಹುಟ್ಟಿದಷ್ಟೇ ವೇಗವಾಗಿ ತಣ್ಣಗಾಗಿದ್ದು ಜನಪ್ರತಿನಿಧಿಗಳ ಬೇಜವಾಬ್ದಾರಿ ಎನ್ನಬೇಕೋ ಅಥವಾ ಜನಪ್ರತಿನಿಧಿಗಳ ಕೊರಳ ಪಟ್ಟಿ ಹಿಡಿದು ಕೇಳಬೇಕಾದ ಪ್ರಜೆಗಳ ಅಲ್ಪಕಾಲದ ನೆನಪಿನ ಶಕ್ತಿ ಎನ್ನಬೇಕೋ ತಿಳಿಯದು. ಅಷ್ಟರ ಮಟ್ಟಿಗೆ ಉತ್ತರ ಕನ್ನಡ ಜಿಲ್ಲೆಗೊಂದು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆ ಸಂದರ್ಭದ ಕೂಗಾಯ್ತೇ ಹೊರತು ಒಂದು ಗಟ್ಟಿ ದನಿಯಾಗಿ ನಿಲ್ಲಲೇ ಇಲ್ಲ.

ಸಧ್ಯ ಈ ಸಂದರ್ಭದಲ್ಲಿ ಈ ಪೀಠಿಕೆಗೆ ಒಂದು ಪ್ರಮುಖ ಕಾರಣವಿದೆ. ವಿಧಾನ ಸಭೆಯ ನಿನ್ನೆಯ ಪಲಾಪದಲ್ಲಿ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಚರ್ಚೆಗೆ ಪ್ರಸ್ತಾವನೆ ಇಟ್ಟಿದ್ದರು. ದುರಂತ ಎಂದರೆ ಅದೇ ಜಿಲ್ಲೆಯವರಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಗೈರಿನ ನೆಪವೊಡ್ಡಿ ರೂಪಾಲಿ ನಾಯ್ಕ ಅವರ ಬಾಯಿ ಮುಚ್ಚಿಸಿ ಕೂರಿಸಿದ್ದಾರೆ. ಕನಿಷ್ಟ ಪಕ್ಷ ಮುಖ್ಯಮಂತ್ರಿ ಬೊಮ್ಮಾಯಿಯಾದರೂ ಒಂದು ಭರವಸೆಯ ಮಾತನ್ನಾದರೂ ಹೇಳಬಹುದಿತ್ತು. ಆದರೆ ಆ ಬಗ್ಗೆ ಸೂಚನೆಯೂ ಅವರಿಂದ ಸಿಕ್ಕಿಲ್ಲ.

ಶಾಸಕಿ ರೂಪಾಲಿ ನಾಯ್ಕ

ಹಾಗೆ ನೋಡಿದರೆ ಉತ್ತರ ಕನ್ನಡ ಜಿಲ್ಲೆಗೆ ಶಿರಸಿ ಪ್ರಮುಖ ಪಟ್ಟಣವಾದರೂ ಜಿಲ್ಲೆಯ ಭೌಗೋಳಿಕ ಲಕ್ಷಣಗಳನ್ನು ನೋಡಿದರೆ ಕುಮಟಾ ಜಿಲ್ಲೆಯ ಎಲ್ಲಾ ಭಾಗಕ್ಕೂ ಮಧ್ಯೆ ಬರುತ್ತದೆ. ಉತ್ತರ ಕನ್ನಡ ಜಿಲ್ಲೆ ನಾಲ್ಕು ತಾಲ್ಲೂಕುಗಳು ಕರಾವಳಿ ಭಾಗದಲ್ಲಿದ್ದರೆ, ಉಳಿದ ತಾಲ್ಲೂಕುಗಳು ಮಲೆನಾಡು ಭಾಗಕ್ಕೆ ಸೇರಿದಂತಿವೆ. ಹಾಗಾಗಿ ಒಂದು ಕೇಂದ್ರ ಸ್ಥಾನವಾಗಿ ಹೊಸ ಆಸ್ಪತ್ರೆ ನಿರ್ಮಾಣ ಎಲ್ಲಿ ಆಗಬೇಕು ಎಂಬ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗಿವೆ.

ಒಂದು ದೃಷ್ಟಿಯಿಂದ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆದರೆ ಕುಮಟಾದಲ್ಲಿ ಆದರೆ ಒಳ್ಳೆಯದು ಎಂಬುದು ಹಲವರ ಅಭಿಪ್ರಾಯ. ಯಾಕೆಂದರೆ ಇತ್ತ ದಕ್ಷಿಣದಿಂದ ಉತ್ತರಕ್ಕೆ ಕರಾವಳಿ ಮತ್ತು ಘಟ್ಟ ಪ್ರದೇಶ ಇವುಗಳಿಗೆ ಕೇಂದ್ರ ಸ್ಥಾನದಂತಿರುವುದು ಕುಮಟಾ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ, ಸೂಕ್ತ ಜಾಗದ ಹುಡುಕಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ ಕಾರವಾರದಲ್ಲಿ ಇರುವ ಮೆಡಿಕಲ್ ಕಾಲೇಜನ್ನು ಉನ್ನತೀಕರಿಸಿದರೆ ಜಿಲ್ಲೆಯ ಕರಾವಳಿ ಭಾಗದ ನಾಲ್ಕು ತಾಲ್ಲೂಕುಗಳಿಗೆ ಉತ್ತಮ ಸೌಕರ್ಯ ಒದಗಿಸಬಹುದು. ಹಾಗೇ ಶಿರಸಿಯ ಆಸ್ಪತ್ರೆನ್ನು ಮೇಲ್ದರ್ಜೆಗೇರಿಸಿದರೆ ಘಟ್ಟ ಪ್ರದೇಶದ ಎಲ್ಲಾ ತಾಲ್ಲೂಕುಗಳ ಜನರಿಗೂ ಉತ್ತಮ ಸೌಕರ್ಯ ಕೊಡಬಹುದು. ಹಾಗೇ ಒಂದು ದೊಡ್ಡ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಟ್ಟುವುದಕ್ಕಿಂತ ಇದು ಉತ್ತಮ ನಿರ್ಧಾರ ಕೂಡಾ.

ಆದರೆ ದುರಂತ ಎಂದರೆ ಇಷ್ಟೆಲ್ಲಾ ಯೋಜನೆ, ಯೋಚನೆ ಆಸ್ಪತ್ರೆಗಾಗಿ ಹೋರಾಟವನ್ನು ರೂಪಿಸಿದವರದ್ದೇ ಹೊರತು ಇಲ್ಲಿನ ಜನಪ್ರತಿನಿಧಿಗಳದ್ದಲ್ಲ. ಮೇಲಿನ ಎಲ್ಲಾ ಲೆಕ್ಕಾಚಾರಗಳೂ ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲೆಸಿದಂತಿದೆ. ಇಲ್ಲಿ ಕಳೆದ ಮೂರು ಅವಧಿಯಲ್ಲಿ ಆರಿಸಿ ಹೋಗುತ್ತಿರುವ ಸಂಸದ ಅನಂತ ಕುಮಾರ್ ಹೆಗ್ಡೆ “ನನ್ನ ಕೆಲಸ ಆಸ್ಪತ್ರೆ ಕಟ್ಟೋದಲ್ಲ..” ಎಂಬುದಾಗಿ ನೇರವಾಗಿ ಹೇಳಿ, ಆಸ್ಪತ್ರೆ ಕಟ್ಟಲು ಬೇಕಾದ ಯಾವ ಕೆಲಸವೂ ನನ್ನಿಂದಾಗದು ಎಂದು ಪರೋಕ್ಷವಾಗಿ ಹೇಳಿಯಾಗಿದೆ. ಇನ್ನು ಉಳಿದ ಜನಪ್ರತಿನಿಧಿಗಳಿಗೆ ಸರ್ಕಾರದ ಸಚಿವ ಸಂಪುಟದವರ ಮೂಗು ಹಿಡಿದು ಕೇಳುವ ಧೈರ್ಯವಿಲ್ಲ.

ಸಂಸದ ಅನಂತ ಕುಮಾರ್ ಹೆಗ್ಡೆ

ಬಾಯ್ಬಿಟ್ಟರೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿ ಬಡಾಯಿ ಕೊಚ್ಚಿದ್ದೇ ಬಂತು. ಇಲ್ಲಿಯವರೆಗೆ ಸರ್ಕಾರದ ಕಡೆಯಿಂದ ಆಸ್ಪತ್ರೆಯ ಬಗ್ಗೆ ಭರವಸೆಯ ಮಾತೂ ಸಹ ಈ ಜಿಲ್ಲೆಯ ನಾಗರೀಕರಿಗೆ ಸಿಕ್ಕಿಲ್ಲದಿರುವುದು ಕ್ಷೇತ್ರಕ್ಕಾಗುತ್ತಿರುವ ನಿಜವಾದ ಅನ್ಯಾಯ. ಜಿಲ್ಲೆಯ ಮುಕ್ಕಾಲು ಪಾಲು ಜನಪ್ರತಿನಿಧಿಗಳು ಆಡಳಿತ ಪಕ್ಷ ಬಿಜೆಪಿಯವರೇ ಆದರೂ ಜಿಲ್ಲೆಯ ಬಹು ಬೇಡಿಕೆಯ ಆರೋಗ್ಯ ಕ್ಷೇತ್ರಕ್ಕೆ ನಯಾ ಪೈಸೆಯ ಕೊಡುಗೆ ಸಿಕ್ಕಿಲ್ಲ.

ಇನ್ನು ಉತ್ತರ ಕನ್ನಡ ಜಿಲ್ಲೆಗೆ ಆಸ್ಪತ್ರೆ ಕೂಗು ಮತ್ತೆ ಕೇಳಿ ಬರಬೇಕು ಎಂದರೆ ಇನ್ನೊಂದು ಆಂಬುಲೆನ್ಸ್ ದುರಂತವೋ ಅಥವಾ ಇನ್ನೋವುದೋ ಜೀವಹಾನಿಯೋ ಆಗಿ ಮುನ್ನೆಲೆಗೆ ಬರಬೇಕೇನೋ? ಅಲ್ಲಿಯವರೆಗೆ ಇಲ್ಲಿನ ಜನರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಈ ವಿಚಾರ ಗಂಭೀರ ಅನ್ನಿಸುವುದಿಲ್ಲ. ಅಲ್ಲಲ್ಲಿ ಆಸ್ಪತ್ರೆಗಾಗಿ ಹೋರಾಟಗಾರರ ಒಂದಷ್ಟು ಗುಂಪಷ್ಟೆ ದನಿ ಎತ್ತರಿಸುತ್ತಿರುತ್ತವೆ.

Related Articles

ಇತ್ತೀಚಿನ ಸುದ್ದಿಗಳು