Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೋದಿಯವರ ಮುಸ್ಲಿಮ್‌ ಪ್ರೇಮ | ಪ್ರಧಾನಿಯ ಸಡನ್‌ ಯೂ ಟರ್ನ್‌ಗೆ ಕಾರಣವೇನು

ಈ ಬಾರಿಯ ಲೋಕಸಭಾ ಚುನಾವಣೆ ಘೋಷಣೆಯಾಗುವವರೆಗೂ ಮೋದಿ ತಾನು ಸಬ್ಕಾ ಸಾತ್‌ ಸಬ್ಕಾ ವಿಶ್ವಾಸ್‌ ಘೋಷಣೆಯ ರಾಯಭಾರಿಯಂತೆ ವರ್ತಿಸುತ್ತಾ, ವಿಶ್ವವ್ಯಾಪಿ ವೇದಿಕೆಗಳಲ್ಲೂ ತಾನೊಬ್ಬ ಸೆಕ್ಯುಲರ್‌ ದೇಶದ ಸೆಕ್ಯುಲರ್‌ ನಾಯಕ ಎಂಬಂತೆ ಪೋಸ್‌ ಕೊಡುತ್ತಿದ್ದರು.

ಜೊತೆಗೆ ಅವರ ತುತ್ತೂರಿ ಮೀಡಿಯಾಗಳು ಅದಕ್ಕೆ ತಕ್ಕನಾದ ತಾಳ-ಮೇಳಗಳನ್ನು ನುಡಿಸುತ್ತಿದ್ದವು. ದೇಶದೊಳಗೆ ಎಷ್ಟು ದಂಗೆಗಳು ನಡೆಯುತ್ತಿದ್ದರೂ ಸಬ್‌ ಚೆಂಗಾಸಿಯೆನ್ನಿಸುವ ಸುದ್ದಿಗಳನ್ನು ಅವು ಪ್ರಸಾರಿಸುತ್ತಿದ್ದವು. ಮೋದಿಯನ್ನು ಅಭಿವೃದ್ಧಿಯ ಹರಿಕಾರರೆನ್ನುವಂತೆ ತೋರಿಸುತ್ತಿದ್ದವು.

ಇದು ಮೊದಲ ಹಂತದ ಚುನಾವಣೆ ನಡೆಯುವರೆಗೂ ಹೀಗೆ ಸಾಗುತ್ತಿತ್ತು. ಆದರೆ ಮೊದಲ ಹಂತದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನ ಮೋದಿ ಮತ್ತು ಅವರ ಪಟಾಲಮ್ಮನ್ನು ಕಂಗಾಲಾಗಿಸಿತ್ತು. ಸೋಲಿನ ವಾಸನೆ ಬಿಜೆಪಿಯ ಮೂಗಿಗೆ ಬಡಿಯುತ್ತಿತ್ತು. ಅದು ಎಷ್ಟೇ ಚಾರ್‌ ಸೋ ಪಾರ್‌ ಎಂದರೂ ಕಳೆದ ಬಾರಿಯೇ ಬಿಜೆಪಿ ತಾನು ಗಳಿಸಬಹುದಾದ ಗರಿಷ್ಠ ಸೀಟುಗಳನ್ನು ಗಳಿಸಿಯಾಗಿತ್ತು. ಈ ಬಾರಿ ಅದು ಸೀಟುಗಳನ್ನು ಕಳೆದುಕೊಳ್ಳಬಹುದಾಗಿತ್ತೇ ಹೊರತು ಗಳಿಸುವ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ.

ಜೊತೆಗೆ ಈ ಮತದಾನ ಪ್ರಮಾಣದಲ್ಲಿನ ಕುಸಿತ ಬಿಜೆಪಿಯನ್ನು ಇನ್ನಷ್ಟು ಕಂಗಾಲು ಮಾಡಿತ್ತು. ಆಗಲೇ ಮೋದಿ ತಾನು ತನ್ನೊಳಗಿನ ಮುಸ್ಲಿಂ ದ್ವೇಷ ಎನ್ನುವ ಹೆಬ್ಬಾವನ್ನು ಬಡಿದೆಬ್ಬಿಸಿಲು ನಿರ್ಧರಿಸಿದ್ದು. ಹಾಗೂ ಕಾಂಗ್ರೆಸ್‌ ಹಾಗೂ ಮುಸ್ಲಿಂ ಸಮುದಾಯವನ್ನು ಒಟ್ಟೊಟ್ಟಿಗೆ ಟಾರ್ಗೆಟ್‌ ಮಾಡುವ ಮೂಲಕ ಉತ್ತರ ಭಾರತದಲ್ಲಿನ ಮುಸ್ಲಿಂ ದ್ವೇಷದ ಗೊಬ್ಬರ ಬೆರೆತ ಮಣ್ಣಿನಲ್ಲಿ ಮತದ ಬೆಳೆ ತೆಗೆಯಲು ಮುಂದಾಗಿದ್ದು.

ಅದರ ನಂತರ ನಿವೃತ್ತ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು ಟಾರ್ಗೆಟ್‌ ಮಾಡಿ ಕಾಂಗ್ರೆಸ್ ಮುಸ್ಲಿಮರ ಪರ ಎನ್ನುವ ಕತೆಯನ್ನು ಹೇಳತೊಡಗಿದರು. ಜೊತೆಗೆ ಅಮಿತ್‌ ಶಾ, ನಡ್ಡಾ, ಯೋಗಿಯಂತಹ ಬಿಜೆಪಿ ನಾಯಕರು ಸಹ ತಮ್ಮಿಂದ ಸಾಧ್ಯವಿರುವಷ್ಟು ಮುಸ್ಲಿಂ ವಿರೋಧಿ ಹೇಳಿಕೆ ನೀಡಿದರು. ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ತೆಗೆಯುವುದಾಗಿ ಇಂದು ಸಹ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ತಮಾಷೆಯೆಂದರೆ ಬಿಜೆಪಿಯದ್ದೇ ಮಿತ್ರ ಪಕ್ಷವಾದ ಟಿಡಿಪಿ ತಾನು ಆಂಧ್ರದಲ್ಲಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ತೆಗೆಯುವುದಿಲ್ಲ ಎಂದಿದೆ ಮತ್ತು ಇದಕ್ಕೆ ಬಿಜೆಪಿ ಪ್ರತಿಕ್ರಿಯೆಯನ್ನೇ ನೀಡಿಲ್ಲ.

ಇದೆಲ್ಲ ಹೀಗಿರುವಾಗ ಮುಸ್ಲಿಂ ದ್ವೇಷದ ಹೈವೇಯಲ್ಲಿ ಫುಲ್‌ ಸ್ಪೀಡಲ್ಲಿ ಹೋಗುತ್ತಿದ್ದ ಮೋದಿ ನಿನ್ನೆ ಒಂದು ಸಂದರ್ಶನದಲ್ಲಿ ಸಡನ್‌ ಯೂ ಟರ್ನ್‌ ತೆಗೆದುಕೊಂಡು ನಾನು ಮುಸ್ಲಿಂ ವಿರೋಧಿ ಭಾಷಣವನ್ನೇ ಮಾಡಿಲ್ಲ. ನನಗೆ ಎಲ್ಲರೂ ಒಂದೇ, ನಾನು ಮುಸ್ಲಿಂ ವಿರೋಧಿ ರಾಜಕಾರಣ ಮಾಡಿದ ದಿನ ರಾಜಕೀಯ ಕ್ಷೇತ್ರದಲ್ಲಿ ಇರಲು ಯೋಗ್ಯನಲ್ಲದ ವ್ಯಕ್ತಿಯಾಗುತ್ತೇನೆ ಇತ್ಯಾದಿಯಾಗಿ ಹೇಳಿದ್ದಾರೆ.

ಹಾಗಿದ್ದರೆ ಮೋದಿಯವರ ಈ ಸಡನ್‌ ಯೂಟರ್ನ್‌ಗೆ ಕಾರಣವೇನು? ಇದಕ್ಕೆ ಮೋದಿ ತಾನು ತನ್ನ ವಿಶ್ವ ನಾಯಕನ ಇಮೇಜ್‌ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎನ್ನುತ್ತದೆ ದಿ ವೈರ್‌ ವರದಿ.

ಈ ವರದಿಯಲ್ಲಿನ ಕೆಲವು ಅಂಶಗಳು ಹೀಗಿವೆ:

  • ಮೋದಿಯವರ ಬಹಿರಂಗ ಕೋಮುವಾದಿ ಹೇಳಿಕೆಗಳು ಭಾರತದ ‘ವಿಶ್ವ ನಾಯಕ’ ಎಂಬ ಇಮೇಜ್ ಅನ್ನು ಹಾಳುಮಾಡಿದೆ. ಅವರ ಭಾಷಣವನ್ನು ಭಾರತೀಯ ಮಾಧ್ಯಮಗಳಲ್ಲಿ ತೀವ್ರವಾಗಿ ಟೀಕಿಸಲಾಗಿದೆ, ಆದರೆ ಮೋದಿ ಜಾಗತಿಕ ಮಾಧ್ಯಮಗಳ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ.
  • ʼಮೋದಿಯವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮಾಡಿದ ಭಾಷಣದ ಭಾಷೆ ಜಾಗತಿಕ ವೇದಿಕೆಯಲ್ಲಿ ಅವರು ಬಿಂಬಿಸಿಕೊಂಡಿರುವ ವಿಶ್ವ ನಾಯಕನ ಇಮೇಜಿಗೆ ವಿರುದ್ಧವಾಗಿದೆ.
  • ʼಈ ಭಾಷಣಗಳು ಬಿಜೆಪಿಗೆ ತಿರುಗುಬಾಣವಾಗಿವೆ. ಮತದಾರರು ಈ ಕಾರಣವಾಗಿ ಬಿಜೆಪಿಯ ವಿರುದ್ಧ ತಿರುಗಿಬಿದ್ದಿದ್ದಾರೆ (ಆದರೆ ಈ ತೀರ್ಮಾನಕ್ಕೆ ಬರಲು ಈಗಾಗಲೇ ಸಾಕಷ್ಟು ಪುರಾವೆಗಳು ಲಭ್ಯವಿಲ್ಲ).
  • ʼಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಸೃಷ್ಟಿಸಲಾಗುತ್ತಿದೆ. ವಿರೋಧ ಪಕ್ಷಗಳು, ನಾಗರಿಕ ಸಮಾಜದ ಜನರು ಮತ್ತು ಸಾರ್ವಜನಿಕರು ಭಾರತೀಯ ಮುಸ್ಲಿಮರ ವಿರುದ್ಧ ಮಾಡಿದ ದ್ವೇಷ ಭಾಷಣಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.ʼ
  • ʼಈಗ ಬಹುಶಃ ಕಾನೂನು ಕ್ರಮವನ್ನು ತಪ್ಪಿಸಲು, ಮೋದಿ ತಮ್ಮ ಮುಸ್ಲಿಂ ವಿರೋಧಿ ಹೇಳಿಕೆಗಳಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ, ಅವರು ನಿಜವಾಗಿಯೂ ಮುಸ್ಲಿಮರ ಹೆಸರನ್ನು ತೆಗೆದುಕೊಂಡಿದ್ದಾರೆ ಎಂದು ತೋರಿಸಲು ಸಾಕಷ್ಟು ಪುರಾವೆಗಳಿವೆ.ʼ

ಅದೇನೇ ಇದ್ದರೂ ಮೋದಿಯವರ ಇಂತಹ ನಡೆಗಳು ಅವರ ಅಭಿಮಾನಿಗಳನ್ನೇ ಗೊಂದಲದಲ್ಲಿ ಕೆಡವಿರುವುದಂತೂ ನಿಜ. ಮೋದಿಯವರ ದಿನಕ್ಕೊಂದು ವೇಷವನ್ನು ಸಮರ್ಥಿಸಿಕೊಳ್ಳಲಾಗದೆ ಅವರು ತೊಳಲಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿಯನ್ನು ಯಾವ ಹಂತಕ್ಕೆ ತಂದು ನಿಲ್ಲಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು