Wednesday, August 14, 2024

ಸತ್ಯ | ನ್ಯಾಯ |ಧರ್ಮ

ದಿನನಿತ್ಯ ಪುಶ್‌-ಅಪ್‌ ಮಾಡಿದರೆ ಏನಾಗುತ್ತದೆ?

ಪ್ರತಿದಿನ ಪುಷ್-ಅಪ್‌ ಮಾಡಿದರೆ ಸ್ನಾಯುವಿನ ತೂಕದಿಂದ ಹಿಡಿದು ಭಂಗಿಯ ವರೆಗೆ ನಿಮ್ಮ ದೇಹದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ. ಪುಷ್‌-ಅಪ್ಸ್‌ ಮಾಡುವುದನ್ನು ನೀವು ದಿನನಿತ್ಯ ರೂಡಿಸಿಕೊಂಡರೆ ನಿಮಗೆ ಹಲವಾರು ಪ್ರಯೋಜನವಾಗಲಿದೆ.  ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯಿರಿ.

ಸ್ನಾಯುವಿನಲ್ಲಿ ಶಕ್ತಿ ಹೆಚ್ಚಾಗುತ್ತದೆ

ಪುಷ್-ಅಪ್‌ಗಳನ್ನು ಮಾಡುವುದರಿಂದ ಮೊದಲು ಎದೆ, ಭುಜಗಳು, ಟ್ರೈಸ್ಪ್‌ಗಳು ಮತ್ತು ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳಲ್ಲಿ ಬದಲಾವಣೆಗಳಾಗುತ್ತದೆ. ಇದು ದೇಹದ ಮೇಲ್ಭಾಗದ ಶಕ್ತಿ ಹೆಚ್ಚಲು ಇರುವ ಅತ್ಯುತ್ತಮ ವ್ಯಾಯಾಮ. ದಿನನಿತ್ಯ ಈ ವ್ಯಾಯಾಮ ಮಾಡಿದರೆ ದೇಹದ ಈ ಮೇಲ್ಭಾಗದ ಸ್ನಾಯುವಿನ ತೂಕ ಮತ್ತು ಟೋನ್‌ (ರಚನೆ)ಯಲ್ಲಿ ಆಗುವ ಬದಲಾವಣೆಗಳನ್ನು ನೀವು ಗಮನಿಸಬಹುದು.   

ಹೃದಯದ ರಕ್ತನಾಳದ ಆರೋಗ್ಯ ಹೆಚ್ಚಾಗುತ್ತದೆ

ಪುಷ್-ಅಪ್‌ಗಳನ್ನು ಪ್ರಾಥಮಿಕವಾಗಿ ಶಕ್ತಿ ಕೊಡುವ ವ್ಯಾಯಾಮ ಎಂದು ಕರೆಯಲಾಗುತ್ತದೆಯಾದರೂ, ಇದನ್ನು ಮೆಲ್ಲಗೆ ಆರಂಭಿಸಿ ವೇಗವಾಗಿ ಮಾಡುವುದರಿಂದ ಹೃದಯದ ರಕ್ತನಾಳಕ್ಕೂ ಪ್ರಯೋಜನವಾಗಲಿದೆ. ಸ್ನಾಯುಗಳಿಗೆ ಆಮ್ಲಜನಕವನ್ನು ತಲುಪಿಸಲು ಹೃದಯವು ಹೆಚ್ಚು ರಕ್ತವನ್ನು ಪಂಪ್ ಮಾಡುವ ಅಗತ್ಯವಿರುವುದರಿಂದ ರಕ್ತನಾಳಗಳಿಗೂ ವ್ಯಾಯಾಮವಾದಂತಾಗುತ್ತದೆ. ಕಾಲಾನಂತರದಲ್ಲಿ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಹೃದಯದ ರಕ್ತನಾಳದ ಕಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದೇಹದ ಭಂಗಿಯಲ್ಲಿ ಬದಲಾವಣೆ

ಪುಷ್-ಅಪ್‌ಗಳು ಕೋರ್ ಸ್ನಾಯುಗಳನ್ನು (ಕಿಬ್ಬೊಟ್ಟೆ ಮತ್ತು ಬೆನ್ನು) ಬಲಪಡಿಸುತ್ತವೆ, ಇದು ದೇಹಕ್ಕೆ ಸರಿಯಾದ ಭಂಗಿಯನ್ನು ನೀಡಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬಾಗಿದ ಬೆನ್ನನ್ನು ತಡೆಯುತ್ತದೆ. ನಿಯಮಿತವಾಗಿ ಪುಷ್-ಅಪ್‌ ಬೆನ್ನು ನೋವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ.

ಜಾಯಿಂಟ್‌ ಸಪೋರ್ಟ್‌ ಮತ್ತು ಸ್ಟೆಬಿಲಿಟಿ ಹೆಚ್ಚುತ್ತದೆ

ಪುಶ್-ಅಪ್‌ಗಳನ್ನು ಮಾಡುವಾಗ ನಿಮ್ಮ ಭುಜಗಳು, ಮೊಣಕೈಗಳು ಮತ್ತು ಮಣಿಕಟ್ಟುಗಳ ಸುತ್ತಲಿನ ಸ್ನಾಯುಗಳು ಹಾಗೂ ಸ್ನಾಯುರಜ್ಜುಗಳಿಗೆ ವ್ಯಾಯಾಮವಾಗುತ್ತದೆ. ಆ ಸಮಯದಲ್ಲಿ ಜಾಯಿಂಟ್‌ ಸಪೋರ್ಟ್‌, ಸ್ಥಿರತೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಗಾಯಗಳಾಗುವುದನ್ನು ತಡೆಯುತ್ತದೆ ಮತ್ತು ಇತರ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕರಿಸುತ್ತದೆ.

ಚಯಾಪಚಯ ಹೆಚ್ಚಾಗುತ್ತದೆ

ಪುಷ್-ಅಪ್‌ಗಳಂತಹ ವ್ಯಾಯಾಮಗಳು ಸ್ನಾಯುವಿನ ತೂಕವನ್ನು ಹೆಚ್ಚಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚಿನ ಚಯಾಪಚಯವನ್ನು ಹೊಂದಿರುವ ನಿಮ್ಮ ದೇಹವು ವಿಶ್ರಾಂತಿ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತದೆ, ಸರಿಯಾದ ತೂಕವನ್ನು ಕಾಯ್ದುಕೊಂಡು ದೇಹದ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಪುಷ್-ಅಪ್‌ಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಮತ್ತು  ಚಯಾಪಚಯಕ್ಕೆ ಉಪಯೋಗವಾಗಲಿದೆ.

ಮಾನಸಿಕ ಆರೋಗ್ಯ ಹೆಚ್ಚಾಗುತ್ತದೆ

ಪುಷ್-ಅಪ್‌ಗಳನ್ನು ಒಳಗೊಂಡಂತೆ ವ್ಯಾಯಾಮಗಳನ್ನು ಮಾಡುವುದರಿಂದ ನ್ಯಾಚುರಲ್‌ ಮೂಡ್‌ ಎಲವೇಟರ್‌ಗಳಾದ ಎಂಡಾರ್ಫಿನ್‌ಗಳ ಉತ್ಪಾದನೆಯಾಗುತ್ತದೆ. ಇದು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಪುಷ್-ಅಪ್‌ಗಳನ್ನು ಮಾಡಲು ಅಗತ್ಯವಿರುವ ಶಿಸ್ತು ಮತ್ತು ಬದ್ಧತೆಯು ನಿಮ್ಮ ಸಾಮರ್ಥ್ಯದಲ್ಲಾಗುವ ಪ್ರಗತಿಯನ್ನು ನೋಡುವುದರಿಂದ ನಿಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಸುಧಾರಿತ ಸಮತೋಲನ ಮತ್ತು ಸಮನ್ವಯತೆ

ಪುಷ್-ಅಪ್‌ಗಳಿಗೆ ವಿವಿಧ ಸ್ನಾಯು ಗುಂಪುಗಳ ಸಮನ್ವಯತೆ ಮತ್ತು ದೇಹದ ಸ್ಥಿರೀಕರಣದ ಅಗತ್ಯವಿರುತ್ತದೆ. ಅವುಗಳನ್ನು ನಿಯಮಿತವಾಗಿ ನಿರ್ವಹಿಸುವುದು ನಿಮ್ಮ ಸಮತೋಲನ ಮತ್ತು ಸಮನ್ವಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ದೈನಂದಿನ ಚಟುವಟಿಕೆಗಳಿಗೆ ಮತ್ತು ಇತರ ರೀತಿಯ ವ್ಯಾಯಾಮಗಳಿಗೆ ಪ್ರಯೋಜನಕಾರಿಯಾಗಿದೆ.

ಪುಶ್‌-ಅಪ್‌ಗಳಿಂದ ಆಗುವ ಅಪಾಯಗಳು ಮತ್ತು ಎಚ್ಚರಿಕೆ

ಪ್ರತಿದಿನ ಪುಷ್-ಅಪ್‌ಗಳನ್ನು ಮಾಡುವುದರಿಂದ ಹಲವು ಪ್ರಯೋಜನಗಳಿದ್ದರೂ, ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಸಾಕಷ್ಟು ವಿಶ್ರಾಂತಿ ಇಲ್ಲದೆ ಈ ವ್ಯಾಯಾಮ ಮಾಡಿದರೆ ಸ್ನಾಯು ಗುಂಪುಗಳು ಅತಿಯಾಗಿ ಕೆಲಸ ಮಾಡುವುದರಿಂದ ಟೆಂಡೈನಿಟಿಸ್ ಅಥವಾ ಸ್ನಾಯುವಿನ ಗಾಯಕ್ಕೆ ಕಾರಣವಾಗಬಹುದು. ನಿಮ್ಮ ಸ್ನಾಯುಗಳು ಚೇತರಿಸಿಕೊಳ್ಳಲು ಮತ್ತು ಬಲಗೊಳ್ಳಲು ಸಮಯ ನೀಡಬೇಕು. ಅದಕ್ಕಾಗಿ ವಿಶ್ರಾಂತಿಯ ಅಗತ್ಯವಿದೆ. ಪರ್ಯಾಯ ದಿನಗಳಲ್ಲಿ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page