Tuesday, August 26, 2025

ಸತ್ಯ | ನ್ಯಾಯ |ಧರ್ಮ

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಅರಣ್ಯ ಇಲಾಖೆ ಕೊಟ್ಟ ಮಾಹಿತಿಯಲ್ಲಿ ಏನೇನಿದೆ? ಈ ಸ್ಟೋರಿ ಓದಿ

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿಯುಗುರಿನ ಪ್ರಕರಣದ ನಂತರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಎಲ್ಲೆಡೆ ಜೀವ ಪಡೆದುಕೊಂಡಿದೆ. ಸಧ್ಯ ಇದನ್ನೇ ಆಧಾರವಾಗಿಟ್ಟುಕೊಂಡು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಪ್ರಕಟಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕಾಯ್ದೆಯಂತೆ ವನ್ಯಜೀವಿಗಳನ್ನು ಬೇಟೆ ಆಡುವುದು, ಸ್ವಾಧೀನ ಪಡಿಸಿಕೊಳ್ಳುವುದು, ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳೋದು, ಅವುಗಳ ಖರೀದಿಸುವುದು, ಸಾಗಾಣೆ ಮಾಡುವುದು ಅಲ್ಲದೇ ಮಾಂಸ ಮಾರಾಟ, ಭಕ್ಷಣೆ ಕೂಡ ಅಪರಾಧವೆಂದು ತಿಳಿಸಿದೆ.

ಇದಷ್ಟೇ ಅಲ್ಲದೇ ವನ್ಯಜೀವಿಗಳ ವಸ್ತುಗಳಾದಂತ ಕೊಂಬು, ಚರ್ಮ, ಟ್ರೋಫಿಗಳು, ಹಲ್ಲು, ಗೊರಸು ಅಥವಾ ಇವುಗಳಿಂದ ತಯಾರಾದಂತ ಆಲಂಕಾರಿಕ ವಸ್ತುಗಳ ವ್ಯಾಪಾರ, ಉಡುಗೋರೆ ನೀಡೋದು, ಪಡೆಯೋದು, ಖರೀದಿಸೋದು, ಸಾಗಾಟ ಮಾಡೋದು, ಇನ್ನೊಬ್ಬರಿಗೆ ವರ್ಗಾಯಿಸೋದು ಕೂಡ ಅಪರಾಧ. ಹೀಗೆ ಮಾಡದಂತೆ ಎಚ್ಚರಿಕೆಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿದೆ.

ಕಾಯ್ದೆಯ ನಿಯಮದಂತೆ ಕಾಯ್ದೆ ಜಾರಿಗೂ ಹಿಂದಿನಿಂದ ವನ್ಯಜೀವಿಗಳಿಗೆ ಸಂಬಂಧಿಸಿದ ಮೇಲೆ ಸೂಚಿಸಿದ ವಸ್ತುಗಳು ಕಂಡುಬಂದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಈ ಎಲ್ಲಾ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡಿದ್ದರೂ, ಮುಂದಿನ ಸಚಿವ ಸಂಪುಟ ಸಭೆಯ ವೇಳೆಯಲ್ಲಿ 2-3 ತಿಂಗಳ ಒಳಗಾಗಿ ಸರ್ಕಾರಕ್ಕೆ ಹಿಂದಿರುಗಿಸುವುದಕ್ಕೆ ಅವಕಾಶವನ್ನು ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಹಿಂದೆ ತಿಳಿಸಿದ್ದರು.

ಇದಷ್ಟೇ ಅಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡರೆ ಅಂತವರಿಗೆ ಸುಮಾರು 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಶಿಕ್ಷೆಯ ಜೊತೆಗೆ 1 ಲಕ್ಷದವರೆಗೂ ದಂಡವನ್ನು ಕೂಡ ವಿಧಿಸಬಹುದಾಗಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page