Wednesday, August 14, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 28 : ಆಕಾಶ ಮತ್ತು ಬೆಕ್ಕಿಗೆ ಏನು ಸಂಬಂಧ?

ಕೈಗಳ ಅನಾರೋಗ್ಯದಿಂದಾಗಿ ಕೆಲವು ಸಾಲುಗಳಿಗೆ ಮೀರಿ ಏನು ಬರೆಯಲಾಗದೆ ಈ ಅಂಕಣವನ್ನು ವಾರಕ್ಕೆ ಎರಡರಂತೆ ಬರೆಯಲು ಆಗಲಿಲ್ಲ . ಅದಕ್ಕಾಗಿ ಕ್ಷಮಿಸಿ. ಈ ಸಂದರ್ಭದಲ್ಲಿ ಓದಿದ, ನೋಡಿದ ರಾಜಕೀಯ ಪ್ರಹಸನಗಳು ರೊಚ್ಚು ಹಿಡಿಸಿದುದರಿಂದ, ವಾಕರಿಕೆ ಬರಿಸಿದುದರಿಂದ ಒಂದೆರಡು ವಾರ ರಾಜಕೀಯೇತರ ವಿಷಯಗಳನ್ನೇ ನಿಮ್ಮ ಮುಂದೆ ಇರಿಸುತ್ತೇನೆ.

ದಿವಂಗತ ಯು. ಆರ್. ಅನಂತಮೂರ್ತಿಯವರ ಕತೆಯೊಂದನ್ನು ಬಹುಶಃ ಮೂರೂವರೆ ದಶಕಗಳ ಹಿಂದೆ ಓದಿದ್ದೆ. ಅದರ ಹೆಸರು “ಆಕಾಶ ಮತ್ತು ಬೆಕ್ಕು”. ಇಷ್ಟು ವರ್ಷಗಳ ನಂತರ ಅದರ ವಿವರ ನೆನಪಿಲ್ಲವಾದರೂ, ಈ ಹೆಸರು ತಲೆಯೊಳಗೆ ಹುದುಕಿ ಕೂತಿತ್ತು. ಆಕಾಶ ಮತ್ತು ಬೆಕ್ಕಿಗೆ ಏನು ಸಂಬಂಧ? ಈ ಕುರಿತು ಮತ್ತೆ ಚಿಂತಿಸುವ ಘಟನೆಗಳು ನಮ್ಮ ಮನೆಯಲ್ಲಿ ಕೆಲವು ಬೆಕ್ಕುಗಳ ದೆಸೆಯಿಂದ ನಡೆದವು. ಬಹುಶಃ ಬೆಕ್ಕು ಎಂದರೆ ಜೀವ, ನಶ್ವರ; ಆಕಾಶ ಎಂದರೆ ಆನಂತ, ಅನೂಹ್ಯ ಮತ್ತು ಶಾಶ್ವತ ಎಂದು ಹೇಳಲು ಅವರು ಆಧ್ಯಾತ್ಮಿಕ ಎನಿಸುವ ಈ ಶೀರ್ಷಿಕೆ ಬಳಸಿದರೋ ಎಂದು ಈಗ ಅನಿಸುತ್ತಿದೆ. ನನಗೆ ಸರಿಯಾಗಿ ಗೊತ್ತಿಲ್ಲ.

ನನಗೆ ಬಾಲ್ಯದಿಂದಲೂ ನಾಯಿಗಳೆಂದರೆ ಇಷ್ಟ; ಬೆಕ್ಕುಗಳನ್ನು ಕಂಡರಾಗದು. ನಾಯಿಗಳು ಏಕೆ ಇಷ್ಟವೆಂದರೆ, ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಟೋಪಿ ಎಂಬ ಒಂದು ಕಂದು ನಾಯಿ ಇತ್ತು ಅದು ಮನೆಯಿಂದ ಯಾರೇ ಹೊರಟರೂ ಬಾಡಿಗಾರ್ಡ್ ರೀತಿ ಬರುತ್ತಿತ್ತು. ಅದು ಹಿಂಬಾಲಕನಾಗಿರಲಿಲ್ಲ! ಮಂತ್ರಿಗಳ ಗಾಡಿಯ ಮುಂದೆ ಸಾಗುವ ಪೈಲಟ್ ಗಾಡಿಯ ರೀತಿಯಲ್ಲಿ ಮುಂದೆಮುಂದೆ ಸಾಗಿ ಚೆಕ್ ಮಾಡಿ, ಹಿಂತಿರುಗಿ ನೋಡಿ, ಬನ್ನಿ ಎಂಬ ಸೂಚನೆಯನ್ನು ಕೊಡುತ್ತಿತ್ತು. ಅದೇ ನನಗೆ ಗೊತ್ತಿರುವಂತೆ ಕನಿಷ್ಟ ಎರಡು ಬಾರಿ ನಮ್ಮ ತಂದೆಯವರನ್ನು ಕೆಲವೇ ಅಡಿಗಳ ಅಂತರದಲ್ಲಿ ನಾಗರಹಾವಿನಿಂದ ಬದುಕಿಸಿತ್ತು. ಗಾತ್ರದಲ್ಲಿ ದೊಡ್ಡದಾಗಿರದಿದ್ದರೂ, ಭಯಾನಕ ಧೈರ್ಯಶಾಲಿ, ಹೋರಾಟಗಾರ, ಈ ಗಂಭೀರ ಮತ್ತು ಯಾವುದೇ ಮಕ್ಕಳ ಕುರಿತು ಅಚ್ಚರಿ ಹುಟ್ಟಿಸುವಷ್ಟು ಕಾಳಜಿ ಹೊಂದಿದ್ದ ಈ ನಾಯಿ ಟೋಪಿ, ಮುದಿಯಾಗಿ ಚಡಪಡಿಸಿ ಸತ್ತಾಗ, ಅಜ್ಜಿಯರ ಸಹಿತ ಎಲ್ಲರೂ ಕಣ್ಣೀರು ಹಾಕಿ, ಮನೆಮಗ ಹೋದ ಎಂದು ಬಿಳಿ ಬಟ್ಟೆಯಲ್ಲಿ ಸುತ್ತಿ ಗೌರವಪೂರ್ವಕವಾಗಿ ಮಣ್ಣಿಗೆ ಸೇರಿಸಿದ್ದೆವು. ಇದನ್ನು ಆಕಾಶ ಮತ್ತು ನಾಯಿ ಎಂದು ನೀವು ಕರೆಯಬಹುದು. ಆದರೆ ನಂತರ ಬಂದ ನಾಯಿಗಳು ಅದರ ಬಾಲಕ್ಕೂ ಸಮವಿಲ್ಲದಾಗಿ ಮನೆಯಲ್ಲಿ ನಾಯಿ ಸಾಕುವುದೇ ಬಿಟ್ಟುಬಿಟ್ಟರು.

ಬೆಕ್ಕುಗಳು ನನಗೆ ಯಾಕೆ ಇಷ್ಟವಿಲ್ಲ ಎಂದರೆ, ಒಂದು ಬೆಕ್ಕು ಇತ್ತು. ಗಂಡು ಬೆಕ್ಕು. ಅದು ದೊಡ್ಡ ಕಳ್ಳಬೆಕ್ಕು. ಎಷ್ಟೇ ತಿನ್ನಲು ಹಾಕಿದರೂ ರಾತ್ರಿ ಹಳೆಕಾಲದ ಒಲೆಯ ಮೇಲಿನ ಮೀನಿನ, ಹಾಲಿನ ಮಣ್ಣಿನ ಗಡಿಗೆಗಳನ್ನೇ ಉರುಳಿಸಿ ಒಡೆದು ತಿಂದು, ಕುಡಿದು ಹಾಕುತ್ತಿತ್ತು. ನಂತರ ಹಗಲೂ. ಕಾವಿಡಲು ಎತ್ತರದಲ್ಲಿ ನೇತುಹಾಕುವ ಬುಟ್ಟಿಯಿಂದಲೇ ಮೊಟ್ಟೆ ತಿನ್ನುತ್ತಿತ್ತು. ನಂತರ ಪುಟ್ಟ ಮರಿಗಳನ್ನು, ನಂತರ ದೊಡ್ಡ ಮರಿಗಳನ್ನು! ಅದರದ್ದೇನೂ ತಪ್ಪಿಲ್ಲ ಬಿಡಿ, ಅದು ಪ್ರಾಣಿ ಸ್ವಭಾವ ಎಂದು ಈಗ ಅಂದುಕೊಳ್ಳಬಹುದು. ಆದರೆ, ಆ ಕಾಲದಲ್ಲಿ ಇದೊಂದು ಮೆನೇಸ್ ಆಗಿತ್ತು. ಒಂದು ಸಲ ಅದನ್ನು ಪೇಟೆಯಲ್ಲಿ ಹೊಟೇಲು ಪಕ್ಕ, ಏನಾದರೂ ತಿಂದುಕೊಂಡು ಬದುಕಲಿ ಎಂದು ಬಿಟ್ಟುಬಂದರು. ಆದರದು ಒಂದು ತಿಂಗಳ ನಂತರ ಮರಳಿ ಬಂತು. ಹಿಂದಿನ ಚಾಳಿಯೂ ಮರಳಿ ಬಂತು. ತಾಳ್ಮೆಗೂ ಮಿತಿಯಿದೆ ನೋಡಿ. ಕೊನೆಗದನ್ನು ಸಂಕದಿಂದ ನೇತ್ರಾವತಿ ನದಿಗೇ ಎಸೆದು ಕೃಷ್ಣಾರ್ಪಣ ಎಂದರು. ಆಗಿನಿಂದ ನಮ್ಮ ಮನೆಯಲ್ಲಿ ಬೆಕ್ಕುಗಳನ್ನೂ ಸಾಕುತ್ತಿಲ್ಲ.

ವರ್ಷಗಳು ಕಳೆದು ನಾವೂ ಬೆಳೆದು ಮಕ್ಕಳೆಲ್ಲಾ ಬೇರೆಬೇರೆ ಮನೆ ಮಾಡಿದಾಗ ತಮ್ಮನ ಗಂಡು ಬೆಕ್ಕೊಂದು ಮನೆಗೆ ಬರಲಾರಂಭಿಸಿತು. ಚಂದದ ಗೊಂಡೆ ಬಾಲದ ಬೆಕ್ಕು. ನಂತರ ಮನೆಯಲ್ಲೇ ವಾಸ. ನಾನಾಗ ರೆಗ್ಯುಲರ್ ಕೆಲಸ ಬಿಟ್ಟು ಫ್ರೀಲ್ಯಾನ್ಸ್ ಎಂದು ಮನೆಯಿಂದಲೇ ಮೊಬೈಲಲ್ಲಿ ಬರೆಯುತ್ತಿದ್ದೆ. ಅದು ಭಯಂಕರ ಕುತೂಹಲದಿಂದ ನನ್ನ ಎದೆಯ ಮೇಲೆ ಕುಳಿತು ನೋಡುತ್ತಿತ್ತು.

ಮೂಡನಂಬಿಕೆಯವರು ಹಿಂದೆ ಹೇಳಿರುವ ಟೋಪಿ ನಾಯಿಯೇ ಅವತಾರವೆತ್ತಿ ಬಂದ ಎಂದು ಹೇಳಬಹುದಾಗಿತ್ತು. ಅಷ್ಟರ ಮಟ್ಟಿಗೆ ನನಗೆ ಅಂಟಿಕೊಂಡ. ಮಲಗುವ ಚಿತ್ರವಿಚಿತ್ರ ಭಂಗಿಗಳು. ಡೋಂಟ್ ಕ್ಯಾರ್ ಎಂಬಂತ ಒಂದು ರೀತಿಯ ಉಡಾಫೆ. ಎದುರಲ್ಲಿ ಮೀನಿದ್ದರೆ, ಯಾವ ಬೆಕ್ಕಿಗೂ ಹುಚ್ಚು ಹತ್ತುತ್ತದೆ. ಆದರೆ, ಈ ಬೆಕ್ಕು ಮೀನು ತೆರೆದಿಟ್ಟರೂ ಮೂಸಿಯೂ ನೋಡುತ್ತಿರಲಿಲ್ಲ. ಕೈಯಿಂದ ಹಾಕಿದರಷ್ಟೇ ಊಟ. ಮನೆಯಲ್ಲಿ ಒಬ್ಬನೇ ಇದ್ದು ಕೆಲಸ ಮಾಡುತ್ತಾ ಇದ್ದ ನನಗೆ ಇದು ಆಪ್ತಮಿತ್ರನಾಗಿಹೋಯಿತು. ನನ್ನ ಬರವಣಿಗೆಯನ್ನು ಮೊಬೈಲಲ್ಲಿಯೇ ಓದುತ್ತಿದ್ದ ಕುಟುಂಬದ ಏಕಮಾತ್ರ ಸದಸ್ಯ. ಅದನ್ನೊಂದು ದಿನ ಅಸೂಯೆಯಿಂದ ಇರಬೇಕು, ಕೊಲೆ ಮಾಡಿದರು. ಹೆಣ ನೀರು ಇಂಗಿದ ತೋಡಲ್ಲಿ ಸಿಕ್ಕಿತು. ಎರಡೂ ಮನೆಗಳವರ ಮಕ್ಕಳ ಮನ ಮುದುಡಿತು.

ಅವನದ್ದೇ ಸಂತಾನದ ಒಂದು ಗೊಂಡೆ ಬಾಲದ ಹೆಣ್ಣು ಬೆಕ್ಕು ಎರಡೂ ಮನೆಗಳಿಗೆ ಎಡತಾಕುತ್ತಿದ್ದರೂ. ನಮ್ಮ ಮನೆಯಲ್ಲೇ ವಾಸ. ಇದೀಗ ಹನ್ನೆರಡನೇ ಹೆರಿಗೆಯೂ ನಮ್ಮ ಮನೆಯಲ್ಲೇ ಆದುದು; ಮಗಳ ಜೊತೆಯಲ್ಲಿ. ಒಂದೇ ದಿನ, ಒಂದೇ ಸಮಯ. ಹನ್ನೊಂದನೇ ಹೆರಿಗೆಯಲ್ಲಿ ಈ ಬೆಕ್ಕು ಎರಡು ಮರಿ ಇಟ್ಟಿತು. ಒಂದು ಕಪ್ಪು, ಇನ್ನೊಂದು ಬಿಳಿ. ಬಿಳಿ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ! ಕರಿ ಮಾತ್ರ ಮನೆಯಲ್ಲೇ ಉಳಿಯಿತು. ಅದು ತಮ್ಮನ ಮನೆಗೆ ಹೋಗಲೇ ಇಲ್ಲ! ಆದಕ್ಕೆ ರುಡ್ಯಾರ್ಡ್ ಕಿಪ್ಲಿಂಗ್‌ನ ಜಂಗಲ್ ಬುಕ್‌ನಲ್ಲಿ ಬರುವ ಕಪ್ಪು ಚಿರತೆ ಬಗೀರಾ ಮಾದರಿಯಲ್ಲಿ ಲೇಡಿ ಬಗೀರಾ ಎಂದು ಹೆಸರಿಟ್ಟದ್ದು ಆಯಿತು.

ಇದು ಮನೆಯಲ್ಲಿ ಚೆನ್ನಾಗಿ ತಿಂದುಂಡು ಬದುಕುತ್ತಿತ್ತು. ಹೆಣ್ಣು ಮಕ್ಕಳಿಲ್ಲದ ನನಗೆ ಒಂದು ದಿನ ಭಾಸವಾಯಿತು. ನಾಲ್ಕಾರು ಗಂಟ ಬೆಕ್ಕುಗಳು ರಾತ್ರಿ ರಾತ್ರಿ ನಿರಂತರವಾಗಿ ಚೀರಾಡುತ್ತಿವೆ: ಕೂಗಾಟ, ಹೊಡೆದಾಟ. ನಮ್ಮ ಮುಗ್ಧ ಕರಿ ಬೆಕ್ಕು ಮೂರು ದಿನ ಮಾಯವಾಯಿತು. ಇದೆಲ್ಲೋ ಸತ್ತಿದಬೇಕು, ನಾಯಿಗಳು ಹಿಡಿದಿರಬೇಕು ಎಂದು ನಾವೆಲ್ಲರೂ ಚಿಂತೆಯಿಂದ ಇದ್ದರೆ, ಒಂದು ದಿನ ಮರಳಿ ಬಂತು. ನನ್ನ ಹೆಂಡತಿ ಎಲ್ಲಾ ಬಿಟ್ಟು ನನ್ನ ಜೊತೆ ಬಂದು ಮೂವತ್ತೈದು ವರ್ಷಗಳಿಂದ ಸಂಸಾರ ಮಾಡಿರುವುದು ಹೀಗೆಯೇ!

ಅವಳ ಹೊಟ್ಟೆ ದೊಡ್ಡದಾಗುತ್ತಾ ಬಂತು. ತಾಯಿಯೂ ಹನ್ನೆರಡನೇ ಹೆರಿಗೆಗೆ ತಯಾರಾಗುತ್ತಿದ್ದಳು. ಇದಾಗಿ ಒಂದು ದಿನ ಈ ಕರಿಬೆಕ್ಕು ಸೋಫಾದಲ್ಲಿ ಕುಳಿತು ನಾಲಗೆ ಹೊರಹಾಕುತ್ತಾ ವಿಕಾರವಾಗಿ ನರಳುತ್ತಿತ್ತು. ಎರಡು ಹೆತ್ತ ನನ್ನ ಹೆಂಡತಿಗೆ ಅದು ಆರ್ಥವಾಗದೆ ಆಸ್ಪತ್ರೆಗೆ ಕೊಂಡುಹೋಗುವ ಎಂದಳು. ಎರಡೂ ಹೆರಿಗೆಗಳಲ್ಲಿ ಚೀರಾಟ ಕೇಳುತ್ತಾ ಗಂಟೆಗಟ್ಟಲೆ ನರಳಿದ್ದ ನನಗೆ ಗೊತ್ತಾಯಿತು ಇದು ನನ್ನಿಂದ ಊಹಿಸಲಾಗದ, ಸಹಿಸಲಾಗದ ಹೆರಿಗೆ ನೋವೆಂದು. ಹಾಗೆಂದೇ ಇಂದೂ ನಾನು ನನ್ನನ್ನು ಹುಟ್ಟಿಸಿದ ತಾಯಿಯೂ ಸೇರಿದಂತೆ ಎಲ್ಲಾ ಹೆಣ್ಣು ಮಕ್ಕಳ ಪದತಲದಲ್ಲಿಯೇ ಇದ್ದೇನೆ. ಆಸ್ಪತ್ರೆಗೆ ಸೇರಿಸುವ ಮೊದಲೇ ಮಕ್ಕಳ‌ು ಹೆಸರಿಟ್ಟ ಲೇಡಿ ಬಗೀರಾ ನಮ್ಮ ಒಳಕೋಣೆಯ ಮಂಚದ ಕೆಳಗೆ ನಾಲ್ಕು ಮರಿಗಳಿಗೆ ಜನ್ಮವಿತ್ತು ಮಾತೆಯಾದಳು. ಅನುಭವದ, ಅನುಭಾವದ ಕಾರಣದಿಂದ ಇರಬೇಕು, ತಾಯಿ ಬೆಕ್ಕು ನನ್ನ ಮಂಚದ ಕೆಳಗೆ ಮೂರು ಮರಿ ಇಟ್ಟಳು. ನಾನು ನೋಡಿದಾಗ ಒಂದು ಮರಿ ಹುಟ್ಟಿ ಕಣ್ಣು ತೆರೆಯುವ ಮೋದಲೇ ಸತ್ತಿತ್ತು. ನೂರಾರು ಮಾನವ ಮಕ್ಕಳು ಭ್ರೂಣದಲ್ಲೇ ಸತ್ತಿರುವುದನ್ನು ನೋಡಿರುವ ನಾನು ಸಂತಾಪದಿಂದಲೇ ಹುಗಿದು ಬಂದೆ. ಆದರೆ, ನಮ್ಮ ಮಹಾಮಾತೆಗೆ ಯಾವುದೇ ವ್ಯತ್ಯಾಸ ಆದಂತೆ ಕಾಣಲಿಲ್ಲ. ಅದು ಉಳಿದ ಮರಿಗಳ ಮೈ ನೆಕ್ಕುತ್ತಿತ್ತು. ಒಳಗೆ ಅವಳ ಮಗಳೂ ತನ್ನ ನಾಲ್ಕೂ ಮಕ್ಳಳ ಮೈ ನೆಕ್ಕುತ್ತಿದ್ದಳು. ಎರಡು ತನ್ನಂತೆ ಕರಿ. ಒಂದು ಕರಿ ಬಿಳಿ ಮತ್ತೊಂದು ಬೂದು ಮಿಶ್ರಿತ. ಅವಳು ಮನುಷ್ಯರಂತೆ ವರ್ಣಬೇಧ ಮಾಡಲಿಲ್ಲ.

ಎಲ್ಲೋ ಒಂದು ಕಡೆ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ನಾಯಿ “ಕಿವಿ” ಬಗ್ಗೆ ಬರೆಯುತ್ತಾ ಮನುಷ್ಯ ಸ್ವಭಾವ, ಭಾವನೆಗಳನ್ನು ಪ್ರಾಣಿಗಳಿಗೆ ಆರೋಪಿಸಬಾರದು ಎಂದು ಬರೆದಿದ್ದಾರೆ ಎಂದು ಓದಿದ ನೆನಪು. ನಿಜವೇ, ಸುಳ್ಳೇ? ನೀವು ಬಯಸಿದಲ್ಲಿ ಮುಂದೆ ಇದೇ ಈ ಬೆಕ್ಕುಗಳ ಮುಂದುವರಿದ ಕತೆಯಲ್ಲಿ ಹೇಳುವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page