Friday, March 13, 2026

ಸತ್ಯ | ನ್ಯಾಯ |ಧರ್ಮ

ಹೊರ್ಮುಜ್ ದಾಟಿ ಭಾರತಕ್ಕೆ ಹಡಗು ಬಂದಿದ್ದು ಮೋದಿಯವರ ಗೆಲುವೇ? Automatic Identification System ಹೇಳುವ ಸತ್ಯವೇನು?

“..ಹಡಗು ಭಾರತವನ್ನು ತಲುಪಿದ ಎರಡು ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯದು ಅಂತಾರಾಷ್ಟ್ರೀಯ ಹಡಗು ಸಂಚಾರ ವ್ಯವಸ್ಥೆ. ಎರಡನೆಯದು, ಹಡಗುಗಳ Automatic Identification System..” ಮಾಚಯ್ಯ ಎಂ ಹಿಪ್ಪರಿಗಿಯವರ ಬರಹದಲ್ಲಿ

ಇಸ್ರೇಲ್‌-ಅಮೆರಿಕಾ ಜಂಟಿಯಾಗಿ ಇರಾನ್‌ ಮೇಲೆ ದಾಳಿ ಮಾಡಲು ಶುರುವಾದ ನಂತರ ಇದೇ ಮೊದಲ ಬಾರಿಗೆ 1,35,000 ಮೆಟ್ರಿಕ್‌ ಟನ್‌ನಷ್ಟು ಕಚ್ಚಾತೈಲವನ್ನು ಹೊತ್ತ ಹಡಗೊಂದು ಹೊರ್ಮುಜ್‌ ಜಲಸಂಧಿಯನ್ನು ತಡಾಯ್ದು ಮಾರ್ಚ್ 11ರಂದು ಸುರಕ್ಷಿತವಾಗಿ ಮುಂಬೈ ಬಂದರಿಗೆ ಬಂದು ತಲುಪಿತು. ಯಥಾ ಪ್ರಕಾರ ನಮ್ಮ ಗೋದಿ ಮೀಡಿಯಾಗಳು, ಬಿಜೆಪಿ ಸಮರ್ಥಕರು ಇದು ಮೋದಿ ಸರ್ಕಾರದ ರಾಜತಾಂತ್ರಿಕ ಗೆಲುವು ಎಂದು ಅಬ್ಬರಿಸಲು ಶುರು ಮಾಡಿದ್ದಾರೆ. ಅದಕ್ಕೆ ಕಾರಣವುಂಟು. ಮಾರ್ಚ್ 10ನೇ ತಾರೀಖು, ನಮ್ಮ ವಿದೇಶಾಂಗ ಸಚಿವರಾದ ಎಸ್‌ ಜೈಶಂಕರ್‍‌ ಅವರು, ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಘಚಿಯವರ ಜೊತೆ ಫೋನ್‌ ಸಂಭಾಷಣೆ ನಡೆಸಿದ್ದರು. ಆ ಮಾತುಕತೆಯ ಫಲವಾಗಿಯೇ ಇರಾನ್‌, ಭಾರತದ ಹಡಗುಗಳಿಗೆ ಹೊರ್ಮುಜ್‌ ಜಲಸಂಧಿಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದೆ ಎಂಬುದು ಅವರ ನೆರೇಟಿವಿಟಿಯ ಸಾರಾಂಶ.

ಆದರೆ ಇದು ಶುದ್ದಾಂಗ ಸುಳ್ಳು! ಈ ರೀತಿಯ ಸುದ್ದಿಗಳು ಭಾರತದ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆಯೇ ಸ್ವತಃ ಇರಾನ್‌ ಸಚಿವಾಲಯದ ಅಧಿಕಾರಿಗಳೆ ಸ್ಪಷ್ಟಣೆ ನೀಡಿ, “ಇಂತಹ ಯಾವ ಮಾತುಕತೆಯೂ ನಡೆದಿಲ್ಲ. ಭಾರತೀಯ ಹಡಗುಗಳಿಗೆ ವಿಶೇಷ ಅನುಮತಿ ನೀಡಲಾಗಿಲ್ಲ” ಎಂದು ಹೇಳಿದ್ದಾರೆ.
(https://timesofindia.indiatimes.com/videos/news/iran-breaks-silence-after-reports-claim-tehran-allowed-indian-oil-tanker-through-strait-of-hormuz/videoshow/129500750.cms?utm_source=chatgpt.com)

ಹಾಗಾದ್ರೆ, ಆ ಹಡಗು ಮಾರ್ಚ್‌ 11ರಂದು ಭಾರತವನ್ನು ತಲುಪಿದ್ದು ಹೇಗೆ? ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕೆಂದರೆ, ಎರಡು ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯದು ಅಂತಾರಾಷ್ಟ್ರೀಯ ಹಡಗು ಸಂಚಾರ ವ್ಯವಸ್ಥೆ. ಎರಡನೆಯದು, ಹಡಗುಗಳ Automatic Identification System (AIS).

ಮುಂಬೈ ಬಂದರನ್ನು ತಲುಪಿದ ಆ ಹಡಗಿನ ಹೆಸರು ಶೆನ್‌ಲಾಂಗ್‌ ಶ್ಯೂಯೆಜ್‌ ಮ್ಯಾಕ್ಸ್‌. ಹೆಸರು ಕೇಳುತ್ತಿದ್ದಂತೆಯೇ ಹೇಳಬಹುದು, ಇದು ಭಾರತದ ಹಡಗಲ್ಲ. ಇದು ಲೈಬೀರಿಯಾ ಧ್ವಜ ಹೊಂದಿದ ಹಡಗು. ಹಡಗುಗಳ ಸಾಗಾಣಿಕ ಉದ್ಯಮ ವಿಶಿಷ್ಟವಾದುದು. ಆಯಾ ದೇಶದ ಹಡುಗುಗಳೇ ಆಯಾ ದೇಶದ ಸರಕುಗಳನ್ನು ಸಾಗಾಣಿಕೆ ಮಾಡಬೇಕು ಎಂಬ ನಿಯಮವಿಲ್ಲ. ಯಾವುದೇ ದೇಶದಲ್ಲಿ ನೋಂದಾಯಿತವಾದ ಒಂದು ಹಡಗು ಯಾವುದೇ ದೇಶದ ಸರಕುಗಳನ್ನು ಬೇಕಾದರು ಸಾಗಾಣಿಕೆ ಮಾಡಬಹುದು. ಇದೊಂಥರಾ ಲಗೇಜ್‌ ಆಟೋಗಳನ್ನು ಬಾಡಿಗೆ ಹಿಡಿದಂತೆ. ಇನ್ನೂ ವಿಚಿತ್ರವೆಂದರೆ, ಆಯಾ ದೇಶದ ಸಾಗಾಣಿಕ ಕಂಪನಿ ಆಯಾ ದೇಶದಲ್ಲೇ ತನ್ನ ಹಡಗನ್ನು ನೋಂದಾಯಿಸಿಕೊಳ್ಳಬೇಕು ಎಂಬ ನಿಯಮವೂ ಇಲ್ಲ. ಇಂಗ್ಲೆಂಡ್‌ನ ಸಾಗಾಣಿಕ ಕಂಪನಿಯೊಂದು ತನ್ನ ಹಡಗನ್ನು ಲೈಬೀರಿಯಾ ದೇಶದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಯಾವ ದೇಶದಲ್ಲಿ ನೋಂದಣಿಗೆ ಒಳಪಟ್ಟಿರುತ್ತದೋ ಆ ದೇಶದ ಧ್ವಜವನ್ನು ಅದಕ್ಕೆ ನೀಡಲಾಗುತ್ತದೆ. ಇದನ್ನು Flag of the Ship ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೋಂದಣಿ ಪ್ರಕ್ರಿಯೆಗಳು ಎಲ್ಲಿ ಸರಳವಾಗಿರುತ್ತವೋ ಆ ದೇಶದಲ್ಲಿ ವಿದೇಶಿ ಸಂಸ್ಥೆಗಳು ತಮ್ಮ ಹಡಗುಗಳನ್ನು ನೋಂದಾಯಿಸುತ್ತವೆ. ಹಡಗೊಂದರ ಒಡೆತನವು ಇಂಗ್ಲೆಂಡಿಗೆ ಸೇರಿದ ಕಂಪನಿಯ ಬಳಿ ಇದ್ದರೂ, ಅದು ಈಗ ಲೈಬೀರಿಯಾ ದೇಶದ ಹಡಗು ಎನಿಸಿಕೊಳ್ಳುತ್ತದೆ. ಅಂದರೆ, ಲೈಬೀರಿಯಾ ಅದರ Flag state.

ಅದರಲ್ಲಿ ಕೆಲಸ ಮಾಡುವ ನೌಕರರು ಲೈಬೀರಿಯಾದವರಾದರೂ ಆಗಿರಬಹುದು, ಇಂಗ್ಲೆಂಡಿನವರಾದರೂ ಆಗಿರಬಹುದು ಅಥವಾ ಈ ಎರಡೂ ದೇಶಕ್ಕೆ ಸಂಬಂಧಪಡದ ಬೇರೆ ದೇಶದವರನ್ನೂ ಆ ಕಂಪನಿ ನೇಮಿಸಿಕೊಳ್ಳಬಹುದು. ಅದೇರೀತಿ ಈ ಎರಡೂ ದೇಶಗಳಿಗೆ ಸಂಬಂಧಪಡದ ಬೇರೆ ದೇಶದ ಸರಕು ಸಾಗಿಸುವ ಕೆಲಸಕ್ಕೂ ಕಂಪನಿ ಅದನ್ನು ಬಳಕೆ ಮಾಡಿಕೊಳ್ಳಬಹುದು. ಒಡೆತನದ ದೇಶಕ್ಕೆ, ಅಥವಾ ನೋಂದಾಯಿತವಾದ ದೇಶಕ್ಕೆ ಮಾತ್ರ ಕೆಲಸ ಮಾಡಬೇಕು ಎಂಬ ನಿರ್ಬಂಧವಿಲ್ಲ.

ಉದಾಹರಣೆ ಸಹಿತ ಹೇಳಬೇಕೆಂದರೆ, ಗ್ರೀಕ್‌ ಕಂಪನಿಯೊಂದು ಲೈಬೀರಿಯಾದಲ್ಲಿ ತನ್ನ ಹಡಗನ್ನು ನೋಂದಾಯಿಸಿಕೊಂಡು ಲೈಬೀರಿಯಾ ಧ್ವಜದೊಂದಿಗೆ ಸೌದಿಯ ತೈಲವನ್ನು ಭಾರತಕ್ಕೆ ಸರಬರಾಜು ಮಾಡಬಹುದು. ಆ ಹಡಗಿನ ಕ್ಯಾಪ್ಟನ್‌ ಈ ಯಾವ ದೇಶಕ್ಕೂ ಸಂಬಂಧಪಡದ ಬೇರಾವುದೆ ದೇಶದವರಾದರೂ ಆಗಿರಬಹುದು. ಶೆನ್‌ಲಾಂಗ್‌ ಶ್ಯೂಯೆಜ್‌ ಮ್ಯಾಕ್ಸ್‌ ಹಡಗಿನ ವಿಚಾರದಲ್ಲಿ ಆಗಿದ್ದು ಇದೇ! ಅದು ಭಾರತಕ್ಕೆ ತೈಲವನ್ನು ತಂದರೂ, ಅದು ಭಾರತದ ಧ್ವಜ ಹೊಂದಿರುವ ಭಾರತದ ಹಡಗಲ್ಲ. ಲೈಬೀರಿಯಾ ಧ್ವಜ ಹೊಂದಿರುವ ಲೈಬೀರಿಯಾ ಹಡಗು. ಹೇಗೆ ಚೀನಾ ಹಡಗುಗಳಿಗೆ ಸಂಚಾರದ ಅನುಮತಿ ನೀಡಿದೆಯೋ ಅದೇ ರೀತಿ, ಅಮೆರಿಕಾ-ಇಸ್ರೇಲ್‌ ಜೊತೆ ಗುರುತಿಸಿಕೊಳ್ಳದ ಆಫ್ರಿಕಾದ ಈ ಪುಟ್ಟ ದೇಶ ಲೈಬೀರಿಯಾದ ಹಡಗುಗಳಿಗೂ ಇರಾನ್‌ ಅನುಮತಿ ನೀಡಿದೆ. ಆ ಕಾರಣಕ್ಕೆ ಅದು, ಪ್ರಕ್ಷುಬ್ಧ ಪರಿಸ್ಥಿತಿಯ ಹೊರತಾಗಿಯೂ ಹೊರ್ಮುಜ್‌ ಜಲಸಂಧಿ ದಾಟಿ ಮುಂಬೈ ತಲುಪಲು ಸಾಧ್ಯವಾಯ್ತು.

ನಾವು ಹೈವೇಗಳಲ್ಲಿ ಕಾಣುವಂತೆ ಗೇಟ್‌ ಹಾಕಿ, ವಾಹನಗಳನ್ನು ಚೆಕ್‌ಮಾಡಿ, ಅದು ಎಲ್ಲಿಗೆ ಹೋಗುತ್ತಿದೆ ಎಂದು ತಿಳಿದುಕೊಳ್ಳುವ ಟೋಲ್‌ಗೇಟ್‌ ವ್ಯವಸ್ಥೆ ಯಾವುದೇ ಜಲಸಂಧಿಯಲ್ಲಿ ಇರುವುದಿಲ್ಲ. ಆ ಹಡಗಿನ ಮೇಲಿರುವ ಧ್ವಜ ಆಧಾರದಲ್ಲಿ, ಆ ಧ್ವಜದ ಹಡಗಿಗೆ ನಮ್ಮ ಸಮುದ್ರ ನೀರಿನಲ್ಲಿ ಸಾಗಲು ಅನುಮತಿ ಇದೆಯೇ, ಇಲ್ಲವೇ ಎಂಬುದನ್ನು ಆಯಾ ದೇಶಗಳು ನಿರ್ಧರಿಸಿ ಅವಕಾಶ ಮಾಡಿಕೊಡುತ್ತವೆ, ಅಥವಾ ನಿರ್ಬಂಧಿಸುತ್ತವೆ.

ಹಾಗಾದ್ರೆ ಒಂದು ದೇಶದ ಧ್ವಜ ಹೊಂದಿರುವ ಹಡಗು ಯಾವ ಸರಕ ಸಾಗಿಸುತ್ತಿದೆ, ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಿಲ್ಲವೇ? ಖಂಡಿತ ಇದೆ. ಇದನ್ನು ಹಡಗಿನ Automatic Identification System (AIS) ಸಿಸ್ಟಮ್‌ ಎಂದು ಕರೆಯಲಾಗುತ್ತದೆ. ರೆಡಾರ್‍‌ ವ್ಯವಸ್ಥೆಗಳ ಮೂಲಕ ಹಡಗಿನ ಹೆಸರು, ಅದು ಚಲಿಸುತ್ತಿರುವ  ಜಿಪಿಎಸ್‌ ಲೊಕೇಷನ್‌ ಮ್ಯಾಪ್‌, ವೇಗ-ದಿಕ್ಕು, ಎಲ್ಲಿಗೆ ಹೋಗುತ್ತಿದೆ, ಹಡಗಿನಲ್ಲಿ ಯಾವ ದಾಸ್ತಾನಿದೆ ಎಂಬುದನ್ನು ಪ್ರತಿ ಹಡಗು ನಿರಂತರವಾಗಿ ರವಾನಿಸುತ್ತಿರುತ್ತವೆ. ಬೇರೆ ಹಡಗುಗಳು, ಬಂದರು ಅಧಿಕಾರಿಗಳು, ಕರಾವಳಿ ರಕ್ಷಣಾ ಪಡೆಗಳು, ಆಯಾ ಕಂಪನಿಯ ನಿಯಂತ್ರಣ ಸಂಸ್ಥೆಗಳು ಈ ಮಾಹಿತಿಯನ್ನು ಟ್ಯ್ರಾಕ್‌ ಮಾಡಬಹುದು. ಹಡಗುಗಳ ನಡುವೆ ಮುಖಾಮುಖಿ ಅಪಘಾತ ತಪ್ಪಿಸಲು, ಹಡಗು ಸಂಚಾರ ದಟ್ಟಣೆ ನಿಯಂತ್ರಿಸಲು ಇದು ನೆರವಾಗುತ್ತದೆ.

ಇದರ ಆಧಾರದ ಮೇಲೆ, ಶೆನ್‌ಲಾಂಗ್‌ ಶ್ಯೂಯೆಜ್‌ ಮ್ಯಾಕ್ಸ್‌ ಹಡಗು ಭಾರತದ ಸರಕು ಸಾಗಿಸುತ್ತಿದೆ ಎಂದು ಇರಾನ್‌ ಪಡೆಗಳು ಪತ್ತೆಹಚ್ಚಿ ತಡೆಹಿಡಿಯಬಹುದಿತ್ತಲ್ಲವೇ? ಅಥವಾ ನಾಶ ಮಾಡಬಹುದಿತ್ತಲ್ಲವೇ?

ಇಲ್ಲೇ ಇರೋದು ಅಸಲಿ ಸಂಗತಿ! ಹೊರ್ಮುಜ್‌ ಜಲಸಂಧಿಯನ್ನು ಪ್ರವೇಶಿಸುವುದಕ್ಕು ತುಸು ಹಿಂದೆಯೇ ತನ್ನ ಈ ಎ.ಐ.ಎಸ್ ಸಿಸ್ಟಮ್‌ ಸ್ವಿಚ್‌ಆಫ್‌ ಮಾಡಿಕೊಂಡ ಈ ಹಡಗು ಮತ್ತೆ ಅದನ್ನು ಆನ್‌ ಮಾಡಿದ್ದು ಭಾರತದ ಕಡಲತೀರ ಸಮೀಪಿಸಿದ ಮೇಲೆ! ಹೀಗೆ ಮಾಡುವುದು ರಸ್ತೆಗಳ ಮೇಲೆ ನಂಬರ್‍‌ ಪ್ಲೇಟ್‌ಗಳನ್ನು ಮುಚ್ಚಿಕೊಂಡು ವಾಹನ ಓಡಿಸಿದಂತೆ ಅಪರಾಧವೇನಲ್ಲ. ಯುದ್ಧದಂತಹ ಸನ್ನಿವೇಶಗಳಲ್ಲಿ ವೈರಿಗಳ ದಾಳಿಗೆ ತುತ್ತಾಗುವ ಸಾಧ್ಯತೆಯನ್ನು ತಪ್ಪಿಸಲು ಹೀಗೆ ಎ.ಐ.ಎಸ್ ಆಫ್‌ ಮಾಡಿಕೊಳ್ಳಲು ಅವಕಾಶವಿದೆ. ಈ ಹಡಗು ಮಾಡಿದ್ದು ಅದನ್ನೇ. ಹಾಗಾಗಿ ಲೈಬೀರಿಯಾ ಧ್ವಜ ಹೊಂದಿರುವ ಈ ಹಡಗಿನಲ್ಲಿ, ಭಾರತದ ಸರಕು ಇದೆ ಎನ್ನುವುದಾಗಲಿ ಅಥವಾ  ಇದು ಭಾರತಕ್ಕೆ ಪ್ರಯಾಣಿಸುತ್ತಿದೆ ಎಂಬ ಮಾಹಿತಿಯಾಗಲಿ ಇರಾನ್‌ ಪಡೆಗಳಿಗೆ ಸಿಗಲಿಲ್ಲ. ಧ್ವಜ ನೋಡಿ ಚಲಿಸಲು ಅವಕಾಶ ಮಾಡಿಕೊಡಲಾಯ್ತು. ಹಡಗು ಭಾರತಕ್ಕೆ ಬಂದು ತಲುಪಿತು. ಇದರಲ್ಲಿ ಯಾವುದೇ ರಾಜತಾಂತ್ರಿಕ ಹೆಚ್ಚುಗಾರಿಕೆಗಳಿಲ್ಲ. ಹಾಗೊಮ್ಮೆ ಇದ್ದಿದ್ದೇ ಆದಲ್ಲಿ, ಅದು ಆ ಹಡಗಿನ ಸಿಬ್ಬಂದಿಗಳ ಧೈರ್ಯ ಮತ್ತು ಸಾಹಸವಷ್ಟೆ. ಜಲಸಂಧಿಯಲ್ಲಿ ಭುಗಿಲೆದ್ದಿರುವ ಪ್ರಕ್ಷಬ್ಧ ಸನ್ನಿವೇಶದಲ್ಲಿ ತನ್ನ ಎಐಎಸ್‌ ಆಫ್‌ ಮಾಡಿಕೊಂಡು ಹಡಗನ್ನು ಚಲಾಯಿಸಲು ಮುಂದಾದ ಅವರ ಧೈರ್ಯವನ್ನು ನಾವಿಲ್ಲಿ ಮೆಚ್ಚಬೇಕಷ್ಟೆ. ಯಾಕೆಂದರೆ, ಹೀಗೆ ಎಐಎಸ್ ಆಫ್‌ ಮಾಡಿಕೊಂಡಾಗ ಸನಿಹದ ಹಡಗುಗಳಿಗೆ ಇದರ ಮಾಹಿತಿ ದೊರಕದೆ ಮುಖಾಮುಖಿಯಾಗುವ ಅಪಾಯವಿರುತ್ತದೆ. ಇಂತಹ ಸಂಘರ್ಷದಲ್ಲಿ ಹೆಚ್ಚಿನ ಹಡಗುಗಳು ಸಂಚರಿಸಲಾರವು ಎಂಬ ನಂಬಿಕೆ ಮತ್ತು ಹಡಗಿನ ಮೇಲಿದ್ದ  ಲೈಬೇರಿಯಾ ಧ್ವಜದ ಕಾರಣಕ್ಕೆ ಆ ಹಡಗಿನ ಸಿಬ್ಬಂದಿ ಈ ಸಾಹಸಕ್ಕೆ ಮುಂದಾಗಿದ್ದಾರೆ.  ಒನ್ಸ್‌ ಎಗೇನ್‌, ಇಲ್ಲಿ ಯಾವುದೇ ರಾಜತಾಂತ್ರಿಕ ಚಮತ್ಕಾರ ನಡೆದಿಲ್ಲ.

ಸಾರಾಂಶದಲ್ಲಿ ಹೇಳಬೇಕೆಂದರೆ ಶೆನ್‌ಲಾಂಗ್‌ ಶ್ಯೂಯೆಜ್‌ ಮ್ಯಾಕ್ಸ್‌ ಹಡಗಿಗೆ ಹೊರ್ಮುಜ್‌ ಜಲಸಂಧಿ ದಾಟಲು ಅವಕಾಶ ಸಿಕ್ಕಿದ್ದು ಭಾರತದ ಹಡಗೆಂಬ ಕಾರಣಕ್ಕೆ ಅಲ್ಲ, ಲೈಬೀರಿಯಾ ಧ್ವಜ ಹೊಂದಿದ ಹಡಗೆಂಬ ಕಾರಣಕ್ಕೆ! ಅದೂ, ಅದರಲ್ಲಿ ಭಾರತದ ಸರಕಿದೆ ಎಂಬ ಮಾಹಿತಿಯನ್ನು ಬಿಟ್ಟುಕೊಡದೆ ಎಐಎಸ್‌ ಆಫ್‌ ಮಾಡಿಕೊಂಡ ಕಾರಣಕ್ಕೆ!! ಯಾಕೆ ಎಐಎಸ್‌ ಸ್ವಿಚ್ಛ್‌ ಆಫ್‌ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸುವ ಹಕ್ಕು ಇರಾನ್‌ಗೂ ಇಲ್ಲ, ಯಾರಿಗೂ ಇಲ್ಲ. ಎಐಎಸ್‌ ಆಫ್‌ ಮಾಡಿಕೊಂಡ ಕಾರಣಕ್ಕೆ ಅನುಮತಿ ಹೊಂದಿರುವ ಹಡಗಿನ ಮೇಲೆ ದಾಳಿ ಮಾಡುವಂತೆಯೂ ಇಲ್ಲ. ಹೊರ್ಮುಜ್ ದಾಟಿ ಭಾರತಕ್ಕೆ ಬಂದ ಹಡಗಿನ ಅಸಲೀ ಕಥೆ ಇದು!

ವಿದೇಶಾಂಗ ಜೈಶಂಕರ್‍‌ ನಡೆಸಿದ ಮಾತುಕತೆಗೂ, ಈ ಹಡಗು ಭಾರತಕ್ಕೆ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಇನ್ನೂ ಸ್ಪಷ್ಟವಾಗಿ ಅರ್ಥ ಮಾಡಿಸಬೇಕೆಂದರೆ ಈ ಹಡಗಿನ ಟೈಮ್‌ಲೈನ್‌ ನೋಡಬೇಕಾಗುತ್ತೆ. ಇದು ಸೌದಿ ಅರೇಬಿಯಾದ ರಾಸ್‌ ತನುರಾದಲ್ಲಿ ತೈಲವನ್ನು ಲೋಡ್‌ ಮಾಡಿಕೊಂಡು ಹೊರಟಿದ್ದು ಮಾರ್ಚ್ 3ನೇ ತಾರೀಖು. ಹೊರ್ಮುಜ್‌ ಜಲಸಂಧಿಯನ್ನು ದಾಟಿದ್ದು ಮಾರ್ಚ್ 8ನೇ ತಾರೀಖು. ನೆನಪಿಡಿ, ನಮ್ಮ ಜೈಶಂಕರ್‍‌ಜಿಯವರು ಇರಾನ್‌ ಸಚಿವರ ಜೊತೆ ಮಾತಾಡಿದ್ದು ಮಾರ್ಚ್ 10ನೇ ತಾರೀಖು. ಅಂದರೆ, ಅವರು ಮಾತುಕತೆ ನಡೆಯುವುದಕ್ಕೆ ಎರಡು ದಿನ ಮೊದಲೇ ಈ ಹಡಗು ಹೊರ್ಮುಜ್‌ ಜಲಸಂಧಿ ದಾಟಿಯಾಗಿತ್ತು! ಹೀಗಿರುವಾಗ, ಮಾತುಕತೆ ಪ್ರಭಾವದಿಂದ ಹಡಗು ಜಲಸಂಧಿ ದಾಟಿತು ಎನ್ನುವವರು ಮುಠ್ಠಾಳರಷ್ಟೆ!!

ಇನ್ನೂ ಸಾಕ್ಷಿ ಬೇಕೇ? ಸಾಮಾನ್ಯವಾಗಿ ಸಾಗಾಣಿಕಾ ಹಡಗುಗಳು 12-15 ನಾಟ್‌ಗಳ ವೇಗದಲ್ಲಿ (ಪ್ರತಿ ಗಂಟೆಗೆ 22-30 ಕಿಮೀ) ಸಂಚರಿಸುತ್ತವೆ. ಈ ವೇಗದಲ್ಲಿ ಹೊರ್ಮುಜ್‌ ಜಲಸಂಧಿಯಿಂದ ಮುಂಬೈಗೆ ತಲುಪಲು ಕನಿಷ್ಠ 3 ರಿಂದ 5 ದಿನಗಳು ಬೇಕಾಗುತ್ತವೆ. ಹವಾಮಾನ ವೈಪರೀತ್ಯದ ಮೇಲೆ ಅದು ಅವಲಂಭಿಸಿರುತ್ತದೆ. ಈಗ ಅಂತಹ ಯಾವುದೇ ಹವಾಮಾನ ವೈಪರೀತ್ಯವಿಲ್ಲವಾದ್ದರಿಂದ ಕನಿಷ್ಠ 3 ದಿನವಾದರೂ ಬೇಕೇಬೇಕು. ಜೈಶಂಕರ್‍‌ ಇರಾನ್‌ ಸಚಿವರ ಜೊತೆ ಮಾತಾಡಿದ್ದು ಮಾರ್ಚ್‌ 10ರ ಸಂಜೆ. ಹಡಗು ಮುಂಬೈಗೆ ಬಂದಿದ್ದ ಮಾರ್ಚ್‌ 11ರ ಬೆಳಿಗ್ಗೆ. ಅಂದರೆ ಇವೆರಡರ ನಡುವೆ ಕೆಲವೇ ಗಂಟೆಗಳ ವ್ಯತ್ಯಾಸ. ಅವರ ಮಾತುಕತೆಯಿಂದಲೇ ಜಲಸಂಧಿ ದಾಟಲು ಅನುಮತಿ ಸಿಕ್ಕಿದ್ದರೆ, ಕೇವಲ ಅರ್ಧ ದಿನದಲ್ಲಿ ಆ ಹಡಗು ಹೊರ್ಮುಜ್‌ ಜಲಸಂಧಿ ತೊರೆದು ಮುಂಬೈಗೆ ತಲುಪಲು ಸಾಧ್ಯವಿತ್ತೆ?

ಪರಾಕು ಹಾಕುವವರಿಗೆ ಇಂತಹ ಫ್ಯಾಕ್ಟ್‌ಗಳು ರುಚಿಸುವುದಿಲ್ಲ. ಆದರೆ ಜನರಿಗೆ ಇವುಗಳನ್ನು ತಲುಪಿಸುವುದು ನಮ್ಮ ಹೊಣೆಯಾಗಿರುತ್ತದೆ.

ಲಾಸ್ಟ್‌ ಸಿಪ್‌: ಬಿಜೆಪಿ ಸಮರ್ಥಕರು ಹೇಳುತ್ತಿರುವಂತೆ ಜೈಶಂಕರ್‍‌ ಮಾತುಕತೆಯಿಂದ ಇರಾನ್‌ ಅಷ್ಟೆಲ್ಲ ಮಣಿದಿದ್ದು ನಿಜವೇ ಆದಲ್ಲಿ, ಆ ಮಾತುಕತೆಯ ನಂತರ, ಇಸ್ರೇಲನ್ನು ತನ್ನ ಫಾದರ್‍‌ಲ್ಯಾಂಡ್‌ ಎಂದು ಎದೆಯುಬ್ಬಿಸಿ ಹೇಳಿಬಂದ ನಮ್ಮ ಪ್ರಧಾನಿಗಳಿಗೇಕೆ ಇರಾನ್‌ ಅಧ್ಯಕ್ಷರ ಜೊತೆ ಫೋನ್‌ ಮಾಡಿ ಮಾತನಾಡುವ ಅಗತ್ಯಬೀಳುತ್ತಿತ್ತು? ಅಂದರೆ ಜೈಶಂಕರ್ ಮಾತುಕತೆಯಿಂದ ಯಾವುದೇ ಪರಿಣಾಮವಾಗಿಲ್ಲ ಎಂಬುದನ್ನು ಇದು ಅರ್ಥ ಮಾಡಿಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page