Friday, August 16, 2024

ಸತ್ಯ | ನ್ಯಾಯ |ಧರ್ಮ

ಹೋಂ ಸ್ಟೇ ದಾಳಿ ಸಂತ್ರಸ್ತ ಹಿಂದೂ ಜಾಗರಣಾ ವೇದಿಕೆಯ ಕೃತ್ಯದ ಬಗ್ಗೆ ನ್ಯಾಯಾಲಯದಲ್ಲಿ ಹೇಳಿದ್ದೇನು? – ನವೀನ್ ಸೂರಿಂಜೆ

ಹೋಂ ಸ್ಟೇ ದಾಳಿಯ ಸಂತ್ರಸ್ತರಾಗಿರುವ ಪ್ರಾಸಿಕ್ಯೂಶನ್ ಸಾಕ್ಷಿ 1 ನ್ಯಾಯಾಲಯದಲ್ಲಿ ಹೇಳಿರುವ ಸಾಕ್ಷ್ಯದ ದಾಖಲೆಯ ಸರಳೀಕರಿಸಿದ ಭಾಗ ಇಲ್ಲಿದೆ :

ನೈತಿಕ ಪೊಲೀಸ್ ಗಿರಿ ಮೂಲಕ ಅಮಾಯಕ ಹುಡುಗ ಹುಡುಗಿಯರ ಮೇಲೆ ಭೀಬತ್ಸ ದಾಳಿ ನಡೆಸಿದ್ದ ಹಿಂದೂ ಜಾಗರಣಾ ವೇದಿಕೆಯ ಎಲ್ಲಾ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿ 2024 ಆಗಸ್ಟ್ 06 ರಂದು ಆದೇಶ ಹೊರಡಿಸಿದೆ. ಆದರೆ ಈ ಪ್ರಕರಣಕ್ಕೆ ನಿಜಕ್ಕೂ ಸಾಕ್ಷ್ಯಾಧಾರಗಳ ಕೊರತೆ ಇತ್ತೆ ? ಪ್ರಕರಣದ ಸಂತ್ರಸ್ತರಾಗಿದ್ದ, ಪ್ರಾಸಿಕ್ಯೂಶನ್ನ ಮೊದಲನೇ ಸಾಕ್ಷಿ ನ್ಯಾಯಾಲಯದಲ್ಲಿ ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ.

ಹೋಂ ಸ್ಟೇ ದಾಳಿಯ ಸಂತ್ರಸ್ತರಾಗಿರುವ ಪ್ರಾಸಿಕ್ಯೂಶನ್ ಸಾಕ್ಷಿ 1 ನ್ಯಾಯಾಲಯದಲ್ಲಿ ಹೇಳಿರುವ ಸಾಕ್ಷ್ಯದ ದಾಖಲೆಯ ಸರಳೀಕರಿಸಿದ ಭಾಗ ಇಲ್ಲಿದೆ :

28.7.2012 ರಂದು ನನ್ನ ಇಬ್ಬರು ಹುಟ್ಟುಹಬ್ಬ ಆಗಿದ್ದ ಕಾರಣ ನಾವು ಅವರು ಹುಟ್ಟುಹಬ್ಬವನ್ನು ಮಂಗಳೂರಿನ ಪಡೀಲ್ ನಲ್ಲಿರುವ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇನಲ್ಲಿ ಆಚರಿಸಲು ನಿರ್ಧಾರ ಮಾಡಿದ್ದೆವು. ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ಕೂಡಾ ನಮ್ಮ ಸ್ನೇಹಿತರಲ್ಲೊಬ್ಬನಿಗೆ ಸೇರಿದ್ದಾಗಿರುತ್ತದೆ. ನಾವು ಆ ಬಗ್ಗೆ ಸ್ನೇಹಿತನ ಬಳಿ ಮಾತನಾಡಿದಾಗ ಆತ ತನ್ನ ತಾಯಿಯ ಜೊತೆ ಮಾತನಾಡಲು ಹೇಳಿದರು. ಅವರ ತಾಯಿ ನಮಗೆ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲು ಅನುಮತಿ ನೀಡಿದರು. ಅದರಂತೆ ನಾವು ಅವರಿಗೆ 5,000 ರೂ ಹಣವನ್ನು ಮುಂಗಡವಾಗಿ ನೀಡಿದಾಗ ಅವರು ನಮಗೆ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ನ ಕೀ ಅನ್ನು ನೀಡಿದರು. ನಾವು ಕೀ ಪಡೆದುಕೊಂಡು ನಮ್ಮ ಸ್ನೇಹಿತರ ಜೊತೆ ‘ಮಧ್ಯಾಹ್ನ 3.00 ಗಂಟೆಗೆ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ ಯಲ್ಲಿ ಸಿಗುವ’ ಎಂದು ಮಾತಾಡಿಕೊಂಡು ಮಧ್ಯಾಹ್ನ 3.00 ಗಂಟೆಗೆ ಹೋಂ ಸ್ಟೇಯತ್ತಾ ಹೋದೆವು. ನಮ್ಮ ಉಳಿದ ಸ್ನೇಹಿತ-ಸ್ನೇಹಿತೆಯರು ಜೀಪ್ ನಲ್ಲಿ ಹೋಮ್ ಸ್ಟೇ ಗೆ ಬಂದರು. ನಾವು ಹೋಗಿ ಜಾಗವನ್ನು ನೋಡಿದೆವು. ಎಲ್ಲರೂ ಒಟ್ಟಿಗೆ ಸೇರಿದಾಗ ನಾವು ಸ್ನೇಹಿತರಿಬ್ಬರ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಿದೆವು. ನಂತರ ನಾವುಗಳು ಬಾಲ್ಕನಿಯಲ್ಲಿ ಕುಳಿತು ಪರಸ್ಪರ ಮಾತನಾಡುತ್ತಾ ಊಟ ಮಾಡುತ್ತಿದ್ದೆವು.

ಸಂಜೆ 6.45 ರಿಂದ 7,00 ಗಂಟೆಯ ಸಮಯದಲ್ಲಿ ನನ್ನ ಸ್ನೇಹಿತ ಬಾಲ್ಕನಿಯಲ್ಲಿ ಇದ್ದು ಆತನು ‘ನಮಗೆ ಹೊರಗಡೆ ಸುಮಾರು 40ರಷ್ಟು ಜನ ಬರುತ್ತಿದ್ದಾರೆ ಯಾರು ಹೊರಗಡೆ ಹೋಗಬೇಡಿ, ಒಳಗಡೆ ಇರಿ’ ಎಂದು ಸೂಚನೆ ನೀಡಿದನು. ನಾವು ಹೋಮ್ ಸ್ಟೇ ನ ಮುಂದಿನ ಬಾಗಿಲನ್ನು ಹಾಕಿಕೊಳ್ಳುವ ಪ್ರಯತ್ನ ಮಾಡಿದೆವು. ಆಗ ಬಂದ ಜನರು ಬಾಗಿಲನ್ನು ತಳ್ಳಿ ಒಳಗೆ ಪ್ರವೇಶಿಸಿದರು. ಅವರು ಒಳಗೆ ಬಂದ ಕೂಡಲೆ ಯಾವುದೇ ಮಾತನಾಡದೆ ನಮ್ಮ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಅವರು ಅವಾಚ್ಯ ಶಬ್ದಗಳಿಂದ ಅಂದರೆ ಬೇ, ರಂಗ ಮತ್ತು ಸೂ***ಮಗ ಎಂದು ಬೈಯುತ್ತಾ ಪ್ರತಿಯೊಬ್ಬರನ್ನು ಹೊಡೆಯಲು ಪ್ರಾರಂಭಿಸಿದರು. ನಮ್ಮ ಜೊತೆ ಇದ್ದ ಸ್ನೇಹಿತೆಯವರಿಗೆ ಮಾನಭಂಗ ಮಾಡಲು ಪ್ರಯತ್ನಿಸಿದರು. ಆ ಸಮಯದಲ್ಲಿ ನಮ್ಮ ಸ್ನೇಹಿತರಲ್ಲಿ ಇಬ್ಬರು ಕೆಳ ಹಂತಸ್ತಿನಲ್ಲಿ ಇರುವ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು. ಹೋಮ್ ಸ್ಟೇ ಒಳಗೆ ಬಂದ ವ್ಯಕ್ತಿಗಳ ಪೈಕಿ ನಮ್ಮ ಸ್ನೇಹಿತೆಯರನ್ನು ಹಿಡಿದುಕೊಂಡು ಆಕೆಯ ಎದೆಯ ಮೇಲೆ ಕೈ ಹಾಕಲು ಪ್ರಯತ್ನಿಸಿದರು. ಒಬ್ಬ ವ್ಯಕ್ತಿ ಕಪ್ಪಾಳಕ್ಕೆ ಹೊಡೆದನು. ಸ್ನೇಹಿತೆಯೊಬ್ಬಳು ಹೆದರಿ 1 ನೇ ಮಹಡಿಯಿಂದ ನೆಲಮಹಡಿಗೆ ಜಂಪ್ ಮಾಡಿದಳು. ನಾನು ಕೂಡ ಹೆದರಿ ಬೊಬ್ಬೆ ಹಾಕಿ ತಪ್ಪಿಸಿಕೊಳ್ಳಲು ಬಾಲ್ಕನಿಯಿಂದ ಪ್ರಯತ್ನಿಸಿದೆನು. ಆಗ ಅವರು ನನ್ನ ಹಿಂದೆ ಬಂದು ನನ್ನನ್ನು ಹಿಡಿದುಕೊಂಡು, ನಾನು ಕುತ್ತಿಗೆಗೆ ಹಾಕಿದ್ದ ಚಿನ್ನದ ಸರವನ್ನು ಎಳೆದರು. ‘ದಯವಿಟ್ಟು ಹಲ್ಲೆ ಮಾಡಬೇಡಿ. ಪೊಲೀಸರನ್ನು ಕರೆಯಿರಿ’ ಎಂದು ನಾನು ಮನವಿ ಮಾಡಿದೆನು. ನನ್ನ ಇನ್ನೊಬ್ಬ ಗೆಳೆಯ ಮೇಲಿನ ಕೋಣೆಯಲ್ಲಿ ಇದ್ದನು. ಆತನಿಗೂ ಸಹ ಜನರು ಎಳೆದು, ಆತನು ಹಾಕಿದ್ದ ಶರ್ಟ್ ತೆಗೆದರು ಮತ್ತು ಆತನ ಕೂದಲನ್ನು ಎಳೆದರು.

ನಮ್ಮನ್ನು ಮತ್ತು ಸ್ನೇಹಿತೆಯರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿದ ದಾಳಿಕೋರರು ಹುಡುಗಿಯವರ ಮುಖವನ್ನು ತೋರಿಸಿ ಎಂದು ಫೋಟೋಗಳನ್ನು ತೆಗೆದರು. ನಮ್ಮ ಮಹಿಳಾ ಸ್ನೇಹಿತೆಯವರು ಅವರ ಮುಖಗಳನ್ನು ಮುಚ್ಚಿಕೊಳ್ಳುತ್ತಿದ್ದರು, ಆದರೆ ಅವರಿಗೆ ಮುಖ ತೋರಿಸಿ ಎಂದು ಒತ್ತಾಯಿಸುತ್ತಿದ್ದರು. ನಮ್ಮ ಮಹಿಳಾ ಸ್ನೇಹಿತೆಯರು ಹಾಕಿದ್ದ ಬಟ್ಟೆಯನ್ನು ಎಳೆದಾಡಿ ಅವರ ಮಾನಭಂಗ ಮಾಡಲು ಪ್ರಯತ್ನಿಸಿದರು. ಆ ರೀತಿ ಆಗುತ್ತಿದ್ದ 30 ನಿಮಿಷದ ಒಳಗೆ ಪೊಲೀಸರು ಬಂದರು.
ಹೋಂ ಸ್ಟೆಯಲ್ಲಿ ನಾವು ಒಟ್ಟು 13 ಜನ ಇದ್ದೆವು. 5 ಹುಡುಗಿಯರು ಮತ್ತು 8 ಜನ ಹುಡುಗರು ಇದ್ದೆವು. ನಮ್ಮನ್ನು ಪೊಲೀಸರು ಬಂದು ನಮ್ಮ ರಕ್ಷಣೆಗೊಸ್ಕರ ಒಂದು ರೂಮಿಗೆ ಕಳಿಸಿದರು. ನಮಗೆ ಹಲ್ಲೆ ಮಾಡಲು ಬಂದ ಜನರನ್ನು ಹೊರಗಡೆ ಕಳಿಸಿದರು. ನಾನು ನನ್ನ ಸ್ನೇಹಿತರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ನೇಹಿತೆಯ ಚೈನ್ ಮತ್ತು ಫೋನ್ ಅನ್ನು ಕೂಡಾ ದಾಳಿಕೋರರು ಕಿತ್ತು ಕೊಂಡಿದ್ದಾರೆ ಎಂದು ತಿಳಿಯಿತು. ಒಬ್ಬನ ಕೈಯಲ್ಲಿ ಬೇಡ್ ಇತ್ತು ಮತ್ತು ಅದರಿಂದ ಹಲ್ಲೆ ಮಾಡಲು ಪ್ರಯತ್ನಿಸಿದನು. ಸ್ನೇಹಿತನಿಗೆ ಬ್ಲೇಡ್ ನಿಂದ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಆತನು ಕಾಲನ್ನು ಅಡ್ಡವಾಗಿ ಇಟ್ಟ ಕಾರಣ ಆತನ ಕಾಲಿಗೆ ಕತ್ತರಿಸಿದ ಗಾಯವಾಗಿತ್ತು.

ಪೊಲೀಸರು ಬಂದು ನಮ್ಮನ್ನು ವಿಚಾರಿಸಿದರು. ಆಗ ನಾವು ಹುಟ್ಟು ಹಬ್ಬ ಆಚರಣೆಗೆ ಬಂದಿದ್ದೇವೆ ಎಂದು ತಿಳಿಸಿದೆವು. ಪೊಲೀಸರು ನಮ್ಮನ್ನು ಒಳಗೆ ಇರಲು ಸೂಚಿಸಿದರು. ಹೊರಗಡೆ ಏನು ಆಗುತ್ತಿತ್ತು ಎಂದು ನನಗೆ ಗೊತ್ತಾಗಿರುವುದಿಲ್ಲ, ಏಕೆಂದರೆ ನಾವು ರೂಮಿನಲ್ಲಿ ಇದ್ದೆವು. ನಂತರ ಪೊಲೀಸ್ ಕಮಿಷನರ್ ಸಹ ಸ್ಥಳಕ್ಕೆ ಬಂದಿದ್ದರು. ನಂತರ ರಾತ್ರಿ 10.30 ರಿಂದ 11.00 ಗಂಟೆಯ ಸಮಯಕ್ಕೆ ನಮ್ಮನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪೊಲೀಸರು ನಮ್ಮನ್ನು ರಾತ್ರಿ 1.00 ಗಂಟೆಯ ಸಮಯಕ್ಕೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದರು ನನ್ನ ಭುಜದ ಮೇಲೆ ಸಣ್ಣ ಗಾಯ ಆಗಿತ್ತು. ಕೆಲವರಿಗೆ ಸಣ್ಣ ಪುಟ್ಟ ಗಾಯವಾಗಿತ್ತು. ನಂತರ ನಮ್ಮನ್ನು ಮನೆಗೆ ಕಳಿಸಿದರು.

ಈ ದಿನ ನ್ಯಾಯಾಲಯದ ಮುಂದೆ ಇರುವ ಎಲ್ಲಾ ಆರೋಪಿತರನ್ನು ನೋಡಿ ಇವರುಗಳೇ ನಮ್ಮ ಮೇಲೆ ಹಲ್ಲೆ ನಡೆಸಿದವರು ಎಂದು ಗುರುತಿಸುತ್ತೇನೆ. ಈ ಆರೋಪಿಯ ಪೈಕಿ ಒಬ್ಬಾತ ನನ್ನ ಸ್ನೇಹಿತೆಯ ಜರ್ಕಿನ್ ಕಸಿದು ಹಾಕಿಕೊಂಡಿದ್ದವನು.

ನಾನು ಈ ಸಮಯದಲ್ಲಿ ಒಂದು ವಿಷಯವನ್ನು ನ್ಯಾಯಾಲಯದಲ್ಲಿ ಹೇಳಲು ಇಷ್ಟ ಪಡುತ್ತೇನೆ ಘಟನೆಯಾದ ನಂತರ ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗಿರುತ್ತದೆ. ನಾವು ಮತ್ತು ನಮ್ಮ ಮಹಿಳಾ ಸ್ನೇಹಿತರು ಮುಜುಗರಕ್ಕೆ ಒಳಗಾಗಿ ತುಂಬಾ ಖಿನ್ನತೆಗೆ ಒಳಗಾಗಿದ್ದಾರೆ. ನಮ್ಮ ಜೊತೆ ಮಹಿಳಾ ಸ್ನೇಹಿತೆಯವರು ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಅವರು ಮನೆಯಿಂದ ಹೊರಗಡೆ ಬರುವುದನ್ನು ಬಿಟ್ಟಿರುತ್ತಾರೆ. ಘಟನೆಯಾದ ಸುಮಾರು 4 ತಿಂಗಳುಗಳ ಕಾಲ ಹಿಂಸೆ ಅನುಭವಿಸಿದ ನಂತರ ನಾನು ಮಂಗಳೂರನ್ನು ಬಿಟ್ಟು ಬೆಂಗಳೂರಿಗೆ ಹೊರಟು ಹೋಗಲು ನಿರ್ಧರಿಸಿದ್ದೆನು. ಘಟನೆಯಾದ 7 ವರ್ಷದ ನಂತರ ನಾನು ಈಗ ಎಲ್ಲಾ ಹಿಂಸೆಯಿಂದ ಹೊರಗಡೆ ಬಂದಿದ್ದೇನೆ ಮತ್ತು ಇನ್ನು ಮುಂದೆ ನನ್ನ ಜೀವನದಲ್ಲಿ ಆ ರೀತಿ ಯಾವುದೇ ಘಟನೆಯಾಗ ಬಾರದು ಮತ್ತು ಆರೋಪಿತರು ನನಗೆ ಇನ್ನು ಮುಂದೆ ನನ್ನ ಜೀವನದಲ್ಲಿ ಯಾವುದೇ ತೊಂದರೆಯನ್ನು ಕೊಡಬಾರದು ಎಂದು ಹೇಳಲು ನಾನು ಇಷ್ಟ ಪಡುತ್ತೇನೆ’’ ಎಂದು ಸಾಕ್ಷಿಯೂ ಆಗಿರುವ ಸಂತ್ರಸ್ತರು ಹೇಳಿಕೆ ದಾಖಲಿಸಿ ಎಲ್ಲಾ ಆರೋಪಿಗಳನ್ನು ಗುರುತಿಸಿ, ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನದ ಸರ ಮತ್ತಿತರ ವಸ್ತುಗಳು, ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಇನ್ನಿತರ ವಸ್ತು, ಹಣ ಮತ್ತು ದಾಖಲೆಗಳನ್ನು ಗುರುತಿಸಿದ್ದಾರೆ.

ಆದರೆ ನ್ಯಾಯಾಲಯವು ಹೋಂ ಸ್ಟೇ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page