ಹನಿಟ್ರ್ಯಾಪ್‌ನಿಂದ ತಪ್ಪಿಸಿಕೊಳ್ಳಲು ನಮ ಹುಷಾರಿನಲ್ಲಿ ನಾವಿರಬೇಕು. ಯಾರಾದರೂ ಹಾಯ್ ಎಂದರೆ ಪ್ರತಿಯಾಗಿ ಹಾಯ್ ಎನ್ನಬಾರದು, ಬಾಯ್ ಹೇಳಿ ಬೇರೆ ಕಡೆ ಓಡಿ ಹೋಗಬೇಕಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಷ್ಟೆ ಅಲ್ಲ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿಕೊಂಡಿರುವ ಪ್ರಕಾರ ಹಾಯ್ ಎಂದಾಗ ಬಾಯ್ ಹೇಳಿ ಹೋಗಿದ್ದಾರೆ. ಇಲ್ಲಿ ಯಾರಿಗೆ ಯಾರು ಮಿತ್ರರು, ಯಾರು ಶತ್ರುಗಳು ಎಂಬುದೇ ಗೊತ್ತಾಗುವುದಿಲ್ಲ. ಎಚ್ಚರಿಕೆಯಿಂದ ಇರಬೇಕಷ್ಟೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವ ಸೂತ್ರವನ್ನು ಅನುಸರಣೆ ಮಾಡುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ವರದಿಯಾಗಿರುವ ಪ್ರಕಾರ, ನನ್ನ ಹೆಸರು ಮತ್ತು ಈಶ್ವರ್ ಖಂಡ್ರೆ ಅವರ ಹೆಸರು ಪ್ರಸ್ತಾಪವಾಗಿದೆ. ಆದರೆ ಹಿರಿಯ ನಾಯಕರ ನಡುವೆ ಯಾವ ರೀತಿಯ ಚರ್ಚೆಯಾಗಿದೆ ಎಂಬುದು ಗೊತ್ತಿಲ್ಲ ಎಂದರು.
ಸಚಿವ ರಾಜಣ್ಣ ಅವರ ಹನಿಟ್ರಾಪ್ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ರೀತಿಯ ವರದಿ ಬರುತ್ತದೆ ಎಂದು ಕಾದು ನೋಡುತ್ತೇವೆ. ಹನಿಟ್ರ್ಯಾಪ್ ಪ್ರಕರಣಕ್ಕೆ ಅಂತ್ಯ ಹಾಡಲಾಗುವುದು. ಹನಿಟ್ರಾಪ್ ಎಂಬುದು ಬೋಗಸ್. ಯಾವ ಆರೋಪವೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಹಾಗೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ಹೈಕಮಾಂಡ್ ಮುಖ್ಯಮಂತ್ರಿಯವರಿಗೆ ತಿಳಿಸಿರುತ್ತದೆ. ಅವರ ಜೊತೆ ಚರ್ಚಿಸಿದ ಬಳಿಕ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.