Saturday, June 15, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರಗಳು ಸಾಂಸ್ಕೃತಿಕ ಜಡತ್ವದಿಂದ ಬಿಡುಗಡೆ ಆಗುವುದು ಯಾವಾಗ?

ತನಗೆ ಕನ್ನಡ ಸಂಸ್ಕೃತಿ ಇಲಾಖೆಯೇ ಬೇಕೆಂದು ಹಠ ಹಿಡಿದು ಪ್ರೀತಿಯಿಂದ ಪಡೆದ ಸಚಿವರನ್ನು ಇಲಾಖೆ ಪಡೆದಿಲ್ಲ. ನನಗೆ ತಿಳಿದಿರುವಂತೆ ತುಂಬಾ ಹಿಂದೆ ಕೆ. ಎಚ್. ಶ್ರೀನಿವಾಸ ಅವರೊಬ್ಬರು ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ತಮಗೆ ಬೇಕೆಂದು ಕೇಳಿ ಪಡೆದ ಏಕೈಕ ನಿದರ್ಶನ- ಮಲ್ಲಿಕಾರ್ಜುನ ಕಡಕೋಳ, ಸಾಹಿತಿಗಳು 

ಯಾವುದೇ ಪಕ್ಷದ ಸರಕಾರಗಳು ಅಧಿಕಾರಕ್ಕೆ ಬಂದರೂ ಅವುಗಳ ಸಾಂಸ್ಕೃತಿಕ ಜಡತ್ವಕ್ಕೆ ಬಿಡುಗಡೆಯೇ ಇರುವುದಿಲ್ಲ. ಆ ರೀತಿಯಲ್ಲಿ ನಡಕೊಳ್ಳುವ ಜೋಬದ್ರಗೇಡಿತನ ಅವಕ್ಕೆ ರೂಢಿಯಾಗಿ ಹೋಗಿದೆ. ಸಾಂಸ್ಕೃತಿಕ ಲೋಕ ಕುರಿತು ಸರಕಾರಗಳಿಗೆ ಇರುವ ಅವಜ್ಞೆ ಅಥವಾ ನಿರಾಸಕ್ತಿ ಪ್ರಕ್ರಿಯೆಯಲ್ಲಿ ಗಮನಾರ್ಹ ಫರಕುಗಳು ಇರುವುದಿಲ್ಲ ಎಂಬುದೂ ಗಮನಾರ್ಹ. ಅದನ್ನು ಆಗಾಗ ಆಯಾ ಸರಕಾರಗಳು ಸಾಬೀತು ಮಾಡುತ್ತಲೇ ಇರುತ್ತವೆ. ಅಧಿಕಾರದಲ್ಲಿ ಇಲ್ಲದಾಗ ಅವು ಮಾತಾಡುವುದೇ ಬೇರೆ, ಅದೇ ಪಕ್ಷಗಳು ತಾವೇ ಪ್ರಭುತ್ವದ ಚುಕ್ಕಾಣಿ ಹಿಡಿದಾಗ ಅವು ವರ್ತಿಸುವ ವರಸೆಯೇ ತರಹೇವಾರಿ ತರಹ. 

ಪುಣ್ಯಕ್ಕೆಂಬಂತೆ ಕರ್ನಾಟಕದಲ್ಲಿ “ಕನ್ನಡ ಮತ್ತು ಸಂಸ್ಕೃತಿ” ಎಂಬ ಪೂರ್ಣ ಪ್ರಮಾಣದ ಇಲಾಖೆಯೇ ಅಸ್ತಿತ್ವದಲ್ಲಿದೆ. ಮಂತ್ರಿ ಮತ್ತು ಮಂತ್ರಾಲಯವಿದೆ. ಇಲಾಖೆಯ ಮಂತ್ರಿಯಾಗಿ ಅವರು ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಒಳ್ಳೆಯದು‌ ಮಾಡುವ ವಿವೇಕ ಮತ್ತು ವಿವೇಚನೆಗಳು ಒತ್ತಟ್ಟಿಗಿರಲಿ. ಆದರೆ ಅವರು ಅದರಿಂದ ಕಲಿಯಬೇಕಾದ ಮಹತ್ವದ ಸಾಂಸ್ಕೃತಿಕ ಚಿಂತನೆಗಳು ಮಾತ್ರ ಯಥೇಚ್ಛ ಎಂಬುದನ್ನು ಮರೆಯಬಾರದು. ಏಕೆಂದರೆ ಅದೊಂದು ಸಾಂಸ್ಕೃತಿಕ ಸದವಕಾಶ.

ಹಿಂದಿನ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಬ್ಬರು ಇಲಾಖೆಯ ಮಂತ್ರಿಯಾದ ಕೆಲವೇ ದಿನಗಳಲ್ಲಿ ಇಲಾಖೆಯ ಅಸ್ತಿತ್ವಕ್ಕೆ ಸಂಚಕಾರ ರೂಪಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಇನ್ನೊಂದೆರಡು ಇಲಾಖೆಗಳನ್ನು ವಿಲೀನಗೊಳಿಸಿ ”ಒಂದೇಒಂದು” ಇಲಾಖೆ ರಚಿಸುವ ಹುನ್ನಾರ ನಡೆಸಿದ್ದರು. ಆ ಮೂಲಕ ಮೂರ್ನಾಲ್ಕು ಇಲಾಖೆ ಮತ್ತು ಮಂತ್ರಿಗಳನ್ನು ಕುಗ್ಗಿಸಿ ಆರ್ಥಿಕ ದುಂದುವೆಚ್ಚ ಕಡಿಮೆ ಮಾಡುವ ‘ಭಯಂಕರ’ ಸಾಂಸ್ಕೃತಿಕ ಕಾಳಜಿ ಅವರದಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ವತಂತ್ರವಾಗಿ ಇರುವಾಗಲೇ ಇಷ್ಟೊಂದು ಅಪಸವ್ಯಗಳು ಈಡೇರುತ್ತವೆ. ಇನ್ನು ಅದು ಮತ್ತೊಂದು ಇಲಾಖೆಯೊಳಗೆ ವಿಲೀನ ಆದಾಗ ಅದರ ಮಹತ್ವದ ಕುರಿತು ಊಹೆ ಮಾಡದಷ್ಟು ಅವಕೃಪೆಗಳು. ಮಂತ್ರಿಗಳ ಇಂತಹ ಆಲೋಚನೆಯು ನಮ್ಮ ಸರಕಾರಗಳು ತೋರುವ ಕನ್ನಡದ ಸಾಂಸ್ಕೃತಿಕ ಕಳಕಳಿಗೆ ಹಿಡಿದ ಕೈ ಕನ್ನಡಿಯೇ ಆಗಿದೆ.

ಸ್ವತಂತ್ರವಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಚನೆಗೆ ಮುನ್ನ ಸಾಹಿತ್ಯ, ಕಲೆ, ಸಂಗೀತ ಇತ್ಯಾದಿ ಸಾಂಸ್ಕೃತಿಕ ಪ್ರಪಂಚದ ಆಗುಹೋಗುಗಳು ಶಿಕ್ಷಣ ಇಲಾಖೆಯ ಅಧೀನಕ್ಕೆ ಒಳಪಟ್ಟಿದ್ದವು. ಸ್ವತಂತ್ರ ಇಲಾಖೆಯಾಗಿ ಅದು ತನ್ನ ಅಸ್ಮಿತೆ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಗಾಗಿ ಇಂತಹ ಹಕೀಕತ್ತುಗಳ ವಿರುದ್ಧ ಆನುಷಂಗಿಕವಾಗಿ ಹೋರಾಟ ಮಾಡುತ್ತಲೇ ಬಂದಿದೆ. ತನಗೆ ಕನ್ನಡ ಸಂಸ್ಕೃತಿ ಇಲಾಖೆಯೇ ಬೇಕೆಂದು ಹಠ ಹಿಡಿದು ಪ್ರೀತಿಯಿಂದ ಪಡೆದ ಸಚಿವರನ್ನು ಇಲಾಖೆ ಪಡೆದಿಲ್ಲ. ನನಗೆ ತಿಳಿದಿರುವಂತೆ ತುಂಬಾ ಹಿಂದೆ ಕೆ. ಎಚ್. ಶ್ರೀನಿವಾಸ ಅವರೊಬ್ಬರು ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ತಮಗೆ ಬೇಕೆಂದು ಕೇಳಿ ಪಡೆದ ಏಕೈಕ ನಿದರ್ಶನ. 

ಹಾಗೆ ನೋಡಿದರೆ ಇದು ಬಹುಪಾಲು ಎಲ್ಲ ಮಂತ್ರಿ ಮಹೋದಯರಿಗೆ ಬೇಡವಾದ ಇಲಾಖೆಯಂತಿದೆ. ಅದಕ್ಕೆಂದೇ ಇನ್ನೊಂದು ಇಲಾಖೆಯೊಂದಿಗೆ ಇದೂ ಇರಲೆಂಬಂತೆ ಹೆಚ್ಚುವರಿಯಾಗಿ ಇದರ ಹಂಚಿಕೆಯಾಗುವುದೇ ವಾಡಿಕೆ. ಹೀಗೆ ಬಹಳಷ್ಟು ಮಂದಿ ಮಂತ್ರಿಗಳಿಗೆ‌ ಇದು ಬೇಡದ ದೌರ್ಭಾಗ್ಯದಂತಾಗಿದೆ. ಹೀಗಿರುವಾಗ ಇದೊಂದನ್ನೇ ‘ಏಕೈಕ’ ಖಾತೆಯಾಗಿ ಪಡೆದು ಕನ್ನಡ ಮತ್ತು ಸಂಸ್ಕೃತಿಯ ಕನಸುಗಳನ್ನು ಈಡೇರಿಸುವುದು ಕನಸಿನ ಮಾತೇ ಹೌದು. ಹಾಗೆ ನೋಡಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಸದಾ ಸುದ್ದಿಯಲ್ಲಿರುವ ಸಾಕಷ್ಟು ಸದವಕಾಶಗಳು ಇರುತ್ತವೆ. ಅದರ ಸದ್ವಿನಿಯೋಗ ಪಡೆಯುವ ಸಾಂಸ್ಕೃತಿಕ ಸಂವೇದನೆಗಳು ಸಚಿವರಾದವರಿಗೆ ಇದ್ದರೆ ಅದು ಅವರಿಗೇ ಅಧಿಕ ಉಪಯುಕ್ತ. 

ಕನ್ನಡ ‌ಮತ್ತು ಸಂಸ್ಕೃತಿ ಇಲಾಖೆಗಿರುವ‌ ಅನುದಾನವೂ ಕಡಿಮೆ. ಅದರಲ್ಲೂ ಈ ಬಾರಿ ಸಿದ್ಧರಾಮಯ್ಯನವರು ಕಳೆದ ಬಾರಿಗಿಂತ ಕಮ್ಮಿ ಅನುದಾನ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಕಲಬುರಗಿಯಲ್ಲಿದೆ. ಇದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಕೃಷಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿರುವ ಸರ್ಕಾರದ ಸ್ವಾಧೀನ ಸಂಘ. ಅದಕ್ಕಾಗಿ ರಾಜ್ಯಸಚಿವ ದರ್ಜೆಯ ಅಧ್ಯಕ್ಷ ಮತ್ತು ಸಿಬ್ಬಂದಿ. ಅದರ ವಾರ್ಷಿಕ ಬಜೆಟ್ ಯಾವಾಗಲೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿಂತ ಹೆಚ್ಚಿಗೇ ಇರುತ್ತದೆ. ಸರಕಾರವೇ ಸ್ಥಾಪಿಸಿರುವ ಒಂದು ಪ್ರಾದೇಶಿಕ ಸಂಘಕ್ಕಿಂತ‌ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿ ದೊಡ್ಡದೆಂಬ ವಾಸ್ತವ ಗಾಳಿಗೆ ತೂರಿ ಅನುದಾನ ನಿಗದಿಯಾಗುತ್ತದೆ.

ಪ್ರಾಯಶಃ ಕಡಿಮೆ ಬಜೆಟ್ಟಿನ ಇಲಾಖೆ ಎಂಬ ಕಾರಣಕ್ಕೆ ಇದರ ಮಂತ್ರಿತ್ವವೇ ಬೇಡವೆಂಬ ಹಿಂದೇಟಿನ ಇರಾದೆ ಸಚಿವರಾಗುವ ಶಾಸಕ ಮಹೋದಯರಿಗೆ‌ ಇರಬಹುದು. ಮೇಲಾಗಿ ಪವರ್ಫುಲ್ ಅಧಿಕಾರವೇ ಇಲ್ಲದ ಅನುತ್ಪಾದಿತ ಇಲಾಖೆಯೆಂಬ ಅಸಡ್ಡೆತನವೂ ಇದ್ದೀತು?.

ಅಕಾಡೆಮಿ, ಪ್ರತಿಷ್ಠಾನ, ಪ್ರಾಧಿಕಾರಗಳ ಅಧ್ಯಕ್ಷ ಸದಸ್ಯರ ನೇಮಕಾತಿಯಲ್ಲಂತೂ ಪ್ರತಿಬಾರಿಯೂ ವಿಳಂಬದ ನೀತಿ. ಕಳೆದ ಒಂದು ವರುಷದಿಂದಲೂ ಸಾಂಸ್ಕೃತಿಕ ಅಕಾಡೆಮಿಗಳಿಗೆ ಅಧ್ಯಕ್ಷ,ಸದಸ್ಯರಿಲ್ಲದೇ ಕೆಲಸಗೇಡಿಗಳಂತೆ ಅವು ಖಾಲಿ ಕುಂತಿವೆ. ಅವುಗಳ ಅವಧಿ 2022 ರ ಅಕ್ಟೋಬರ್ ಮೊದಲ ವಾರವೇ ಮುಗಿದು ಹೋಗಿದೆ. ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದಾಗೆಲ್ಲ ಹಿಂದಿನ ಬೇರೆ ಸರಕಾರಗಳು ರಚಿಸಿದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷ ಸದಸ್ಯರ ನೇಮಕಾತಿ ರದ್ದುಪಡಿಸುವ ಕೆಲಸವೇ ಆಗುತ್ತಿತ್ತು. ಅದರ ಅಗತ್ಯ ನೂತನ ಸಿದ್ಧರಾಮಯ್ಯನವರ ಸರ್ಕಾರಕ್ಕೆ ಈ ಬಾರಿ ಬರಲಿಲ್ಲ. ಸಿದ್ಧರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಹತ್ತು ತಿಂಗಳು ತಡವಾಗಿಯೇ ಅಕಾಡೆಮಿ, ಪ್ರಾಧಿಕಾರಿಗಳಿಗೆ ನೇಮಕಾತಿ ಮಾಡಿದ್ದರು.

ಇದೀಗ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಸಾಂಸ್ಕೃತಿಕ ಪ್ರಾಧಿಕಾರ, ಸಂಘ ಸಂಸ್ಥೆಗಳ ಕಾರ್ಯಕಾರಿ ಸಮಿತಿ ನೇಮಕಾತಿಯ ಸುಳಿವುಗಳಿಲ್ಲ. ಗ್ಯಾರಂಟಿ ಭಾಗ್ಯಗಳ ಆರ್ಥಿಕ ಹೊರೆ ನಿಭಾಯಿಸಲು ಸಾಹಿತ್ಯ ಸಮ್ಮೇಳನ ಇತರೆ ಉತ್ಸವಗಳ ಮುಂದೂಡಿಕೆ ಇದ್ದೀತು. ಹಾಗೆಯೇ ಲೋಕಸಭೆ ಚುನಾವಣೆ ನಂತರ ನಿಗಮ, ಮಂಡಳಿಗಳ ಜತೆಗೆ ಸಾಂಸ್ಕೃತಿಕ ಅಕಾಡೆಮಿಗಳ ಭಾಗ್ಯ ಬಂದೀತೆಂಬ ಗುಸು ಗುಸು ಸುದ್ದಿಗಳು. ಇಂತಹ ಸುದ್ದಿಗಳ ಬೆನ್ನಲ್ಲೇ ಅದಕ್ಕಾಗಿ “ತಜ್ಞರ ಸಮಿತಿ” ರಚಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದ್ದರು. ತದನಂತರ ಸಾಂಸ್ಕೃತಿಕ ವಲಯದಲ್ಲಿ ತಜ್ಞರ ಸಮಿತಿ ಅಧ್ಯಕ್ಷರಿಗೆ ಕೆಲವರ ಹೆಸರುಗಳು ಅಂತೆಕಂತೆಯಾಗಿ ಕೇಳಿಬಂದವು. 

ಅದೂ ತಡವಾಗುತ್ತಾ ಬಂದಿದ್ದು, ತಜ್ಞರ ಸಮಿತಿ ರಚನೆಗಾಗಿ ಮತ್ತೊಂದು ಶೋಧಕ ಸಮಿತಿ ರಚನೆಯ ಅಗತ್ಯವಂತೂ ಇರಲಾರದು ಅಲ್ಲವೇ?. ಪ್ರಸ್ತಾಪಿಸಬೇಕಾದ ಮತ್ತೊಂದು ಮಹತ್ವದ ವಿಷಯವಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಪ್ರಕಟಗೊಂಡ ಗುಬ್ಬಿವೀರಣ್ಣ ಪ್ರಶಸ್ತಿ ಸೇರಿದಂತೆ ರಾಜ್ಯ ಸರ್ಕಾರದ ಹತ್ತಾರು ಪ್ರಶಸ್ತಿಗಳ ‘ಪ್ರದಾನ ಕಾರ್ಯಕ್ರಮ’ ಜರುಗಿಲ್ಲ. ಸಾಹಿತಿ, ಕಲಾವಿದರು, ನಾಡೋಜರು ಬದುಕಿರುವಾಗಲೇ ಅದು ನೆರವೇರಬೇಕು. ಸರ್ಕಾರಕ್ಕೆ ಸಾಂಸ್ಕೃತಿಕ ಜಡತ್ವದಿಂದ ಬಿಡುಗಡೆಯ ಭಾಗ್ಯ ಬೇಗ ದೊರಕಲಿ. 

 ಮಲ್ಲಿಕಾರ್ಜುನ ಕಡಕೋಳ, ಸಾಹಿತಿಗಳು

ಮೊ: 9341010712

ಇದನ್ನೂ ಓದಿ-ಸಂಸ್ಕೃತಿ ಇಲಾಖೆಯ ನಿರ್ದೇಶಕರ ಎತ್ತಂಗಡಿ; ಪೊಲೀಸ್ ಅಧಿಕಾರಿಣಿಗೆ ಸ್ವಾಗತ ಮಾಡಿ

Related Articles

ಇತ್ತೀಚಿನ ಸುದ್ದಿಗಳು