Sunday, June 16, 2024

ಸತ್ಯ | ನ್ಯಾಯ |ಧರ್ಮ

ಮುಲ್ಕಿಯಲ್ಲಿ ಹಿಂದೂ ಹೆಣ್ಣು ಮಗಳಿಗೆ ಆದ ಅನ್ಯಾಯದ ಬಗ್ಗೆ ಶೋಭಾ ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ? : ಕಾಂಗ್ರೆಸ್

ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡಿದ ಪ್ರಕರಣ ಇನ್ನೂ ಬಿಸಿ ಇರುವಾಗಲೇ, ಮುಲ್ಕಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತನೊಬ್ಬ ಹೆಣ್ಣು ಮಗಳೊಬ್ಬರು ಸ್ನಾನ ಮಾಡುವಾಗ ತಗೆದ ವಿಡಿಯೋ ಪ್ರಕರಣ ಈಗ ರಾಜ್ಯ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ದಕ್ಷಿಣ ಕನ್ನಡ ಭಾಗದ ಬಿಜೆಪಿ ಪಕ್ಷದ ಅಂಗಸಂಸ್ಥೆ ಎಂದೇ ಗುರುತಿಸಿಕೊಂಡಿರುವ ‘ಹಿಂದೂ ಜಾಗರಣ ವೇದಿಕೆ’ಯ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ಮುಲ್ಕಿಯ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ ಈ ಕೃತ್ಯ ಎಸಗಿರುವ ಆರೋಪಿ. ಉಡುಪಿಯ ಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣದಲ್ಲಿ ವಿಧಾನಸೌಧಕ್ಕೇ ಕೇಳುವಷ್ಟರ ಮಟ್ಟಿಗೆ ಸದ್ದು ಮಾಡಿದ್ದ ಬಿಜೆಪಿ, ಈ ಪ್ರಕರಣದಲ್ಲಿ ಸದ್ದು ಮಾಡುವುದಿರಲಿ, ಕನಿಷ್ಟ ಖಂಡನೆಯನ್ನೂ ವ್ಯಕ್ತಪಡಿಸದೇ ಇರುವುದು ಆಶ್ಚರ್ಯ ತರಿಸಿದೆ.

ಈ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆದಿರುವ ರಾಜ್ಯ ಕಾಂಗ್ರೆಸ್ ಪಕ್ಷ, ತನ್ನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಬಿಜೆಪಿ ಪಕ್ಷವನ್ನು ಕೆಣಕಿದೆ. ‘ಸಂಘಪರಿವಾರದಿಂದ ವಿಡಿಯೋ ಚಿತ್ರೀಕರಣದ ತರಬೇತಿ ಪಡೆದವನೊಬ್ಬ ಬಾತ್ ರೂಮಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಸಿಕ್ಕಿ ಬಿದ್ದಿರುವ ಸುದ್ದಿ ಇನ್ನೂ ಬಿಜೆಪಿ ಕಚೇರಿಯನ್ನು ತಲುಪಿಲ್ಲವೇ?’ ಬಿಜೆಪಿ ಪಕ್ಷ ಹೋರಾಟ, ಪ್ರತಿಭಟನೆಗಳನ್ನು ಯಾವಾಗ ಹಮ್ಮಿಕೊಳ್ಳುತ್ತದೆ? ಎಂದು ವ್ಯಂಗ್ಯವಾಡಿದೆ.

ಇಂತಹ ಪ್ರಕರಣಗಳಲ್ಲಿ ಬಿಜೆಪಿ ಪಕ್ಷದ ನಾಯಕರು ಅನುಸರಿಸುವ ದ್ವಂದ್ವ ನಿಲುವು ಈಗ ಎಲ್ಲೆಡೆ ತಿಳಿಯುವಂತೆ ಕಾಂಗ್ರೆಸ್ ತಂತ್ರಗಾರಿಕೆ ಹೆಣೆದಿದೆ. ಉಡುಪಿ ಮತ್ತು ಮುಲ್ಕಿ ಎರಡೂ ಪ್ರಕರಣದಲ್ಲಿ ಸಂತ್ರಸ್ತೆ ಸ್ಥಾನದಲ್ಲಿ ನಿಂತಿರುವುದು ಹಿಂದೂ ಹೆಣ್ಣು ಮಕ್ಕಳೆ. ಎರಡೂ ಬಹುತೇಕ ಒಂದೇ ರೀತಿಯ ಪ್ರಕರಣವಾದರೂ ಬಿಜೆಪಿ ಪಕ್ಷ ಒಂದು ಪ್ರಕರಣವನ್ನು ಮಾತ್ರ ಮುನ್ನಲೆಗೆ ತಂದು ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಬಗ್ಗೆ ಈಗ ಹೆಚ್ಚು ಚರ್ಚೆ ಮತ್ತು ಬಿಜೆಪಿ ನಿಲುವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇಷ್ಟಕ್ಕೆ ಬಿಡದ ಕಾಂಗ್ರೆಸ್ ಪಕ್ಷ ‘ಈತನಿಂದ ಸಂತ್ರಸ್ತಳಾದ ಹಿಂದೂ ಹೆಣ್ಣುಮಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ? ಈ ಪ್ರಕರಣದಲ್ಲಿ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡುವುದಿಲ್ಲವೇ?’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ. ಇತ್ತೀಚೆಗೆ ಉಡುಪಿ ವಿಡಿಯೋ ಪ್ರಕರಣದ ತನಿಖೆಯನ್ನು ಕೇಂದ್ರ SIT ಗೆ ವಹಿಸುವಂತೆ ರಾಜ್ಯ ಬಿಜೆಪಿ ನಿಯೋಗ ಇತ್ತೀಚೆಗೆ ರಾಜ್ಯಪಾಲರನ್ನು ಭೇಟಿ ಮಾಡಿತ್ತು.

ಇನ್ನು ಉಡುಪಿ ವಿಡಿಯೋ ಪ್ರಕರಣದಲ್ಲಿ ‘ಮುಸ್ಲಿಂ ವಿಧ್ಯಾರ್ಥಿನಿಯರು ಹಿಂದೂ ಹೆಣ್ಣು ಮಕ್ಕಳ ಖಾಸಗಿ ವಿಡಿಯೋ ತಗೆದು ಜಿಹಾದಿಗಳಿಗೆ ಕಳಿಸುತ್ತಾರೆ, ಭಯೋತ್ಪಾದಕ ಚಟುವಟಿಕೆಗೆ ಬಳಕೆಯಾಗುತ್ತೆ’ ಎಂಬ ಆರೋಪಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಮತ್ತೊಂದು ಪ್ರಶ್ನೆ ಎತ್ತಿದೆ. “‘ಬಿಜೆಪಿ ರಕ್ಷಣಾ ಪಡೆ’ಯವನೊಬ್ಬ ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತ ವಿಡಿಯೋ ಮಾಡಿ ಬಿಜೆಪಿ ಕಚೇರಿಗೆ ಕಳಿಸುತ್ತಿದ್ದನೇ? ಅಥವಾ ಸಿ.ಟಿ.ರವಿ, ಪ್ರತಾಪ್ ಸಿಂಹ ಅವರಿಗೆ ಕಳಿಸುತ್ತಿದ್ದನೇ? ಇವನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ? ಈತನ ಕೃತ್ಯದ ಹಿಂದೆ ಯಾವ ಷಡ್ಯಂತ್ರವಿದೆ? ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಪಕ್ಷದ ಎಲ್ಲಾ ಪ್ರೈವೇಟ್ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ?” ಎಂದು ಬಿಜೆಪಿ ಪಕ್ಷದ ಕಾಲೆಳೆದಿದೆ.

ಘಟನೆ ಹಿನ್ನೆಲೆ
ಮುಲ್ಕಿಯ ಪಕ್ಷಿಕೆರೆ ಎನ್ನುವಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವಾಗ ಅದನ್ನು ಕದ್ದು ರೆಕಾರ್ಡ್‌ ಮಾಡುತ್ತಿದ್ದ ಹಿಂದೂ ಜಾಗರಣಾ ವೇದಿಕೆ ಸಕ್ರಿಯ ಕಾರ್ಯಕರ್ತ ಸುಮಂತ್ ಪೂಜಾರಿ ಎನ್ನುವವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಆ ಬಳಿಕ ಸಂಘ ಪರಿವಾರದ ಮುಖಂಡನೊಬ್ಬನ ಒತ್ತಾಯದ ಮೇಲೆ ಪೊಲೀಸರು ‘ಸ್ಟೇಷನ್‌ ಬೇಲ್’ನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ನಂತರ ಆರೋಪಿಯನ್ನು ಮತ್ತೆ ಬಂಧಿಸಿ, ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸಧ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ.

Related Articles

ಇತ್ತೀಚಿನ ಸುದ್ದಿಗಳು