Monday, December 8, 2025

ಸತ್ಯ | ನ್ಯಾಯ |ಧರ್ಮ

ಚಿಕ್ಕಮಗಳೂರು ಪ್ರಕರಣ | ಸಂಘ ಪರಿವಾರಕ್ಕೆ ಸಿಗುವ ಗುರುದಕ್ಷಿಣೆಯ ಹಣ ಅಮಾಯಕರ ರಕ್ತ ಚೆಲ್ಲಲು ಬಳಕೆಯಾಗುತ್ತಿದೆಯೇ? – ಪ್ರಿಯಾಂಕ್‌ ಖರ್ಗೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸುತ್ತಿದ್ದಂತೆಯೇ, ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆಯವರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಸಚಿವರು, ಕೊಲೆ ಆರೋಪಿಗೆ ಬಜರಂಗದಳದ ಹಿನ್ನೆಲೆ ಇರುವುದರಿಂದ ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿದ್ದಾರೆ. “ಸಾಮಾನ್ಯವಾಗಿ ಎಲ್ಲಾದರೂ ಹೆಣ ಬಿದ್ದರೆ ರಣಹದ್ದುಗಳಂತೆ ಹಾರಿ ಬರುವ ಬಿಜೆಪಿ ನಾಯಕರು, ಈಗ ತಮ್ಮದೇ ಸಿದ್ಧಾಂತದ ಕಾರ್ಯಕರ್ತ ಕೊಲೆ ಮಾಡಿದಾಗ, ಸಮಾಜದ ಸಾಮರಸ್ಯ ಕದಡುವ ಈ ಕುಕೃತ್ಯದ ಬಗ್ಗೆ ಏನು ಉತ್ತರ ನೀಡುತ್ತಾರೆ?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಪ್ರಿಯಾಂಕ್ ಖರ್ಗೆಯವರು, ಈ ಘಟನೆ ಸಂಘ ಪರಿವಾರದ ಭಯೋತ್ಪಾದಕ ಮುಖವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ಶಾಖೆಗಳಲ್ಲಿ ಇಂತಹ ಪಾತಕ ಪಾಠಗಳನ್ನು ಹೇಳಿಕೊಡುವುದೇ ಸಂಘ ಪರಿವಾರದ ಸಂಸ್ಕಾರವೇ? ಅಲ್ಲಿ ಸಂಗ್ರಹವಾಗುವ ಗುರುದಕ್ಷಿಣೆಯ ಹಣವು ಅಮಾಯಕರ ರಕ್ತ ಚೆಲ್ಲಲು ಬಳಕೆಯಾಗುತ್ತಿದೆಯೇ?” ಎಂದು ಅವರು ನೇರವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಚಿವ ಖರ್ಗೆಯವರು ಮೃತ ಗಣೇಶ್ ಗೌಡ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. “ನಮ್ಮ ಸರ್ಕಾರವು ಈ ಕೊಲೆಗಡುಕರಿಗೆ ಕಾನೂನಿನ ಅಡಿಯಲ್ಲಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಗಣೇಶ್ ಅವರ ಸಾವಿಗೆ ಕಟ್ಟುನಿಟ್ಟಿನ ನ್ಯಾಯ ದೊರಕಿಸಿಕೊಡಲಿದೆ,” ಎಂದು ಅವರು ಭರವಸೆ ನೀಡಿದ್ದಾರೆ. ಈ ಪ್ರಕರಣವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ವಾಕ್ಸಮರವನ್ನು ಹೆಚ್ಚಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page