Friday, June 14, 2024

ಸತ್ಯ | ನ್ಯಾಯ |ಧರ್ಮ

ಗಂಗೆ ಬಂದಳೆಲ್ಲಿಗೆ?

(ಈ ವರೆಗೆ)


ತನ್ನ ಬಣ್ಣ ಬಯಲಾಗುತ್ತಿದ್ದಂತೆ ಮೋಹನ ಗಂಗೆಯೊಂದಿಗೆ ಪೂನಾಕ್ಕೆ ಹೊರಟು ಬೆಂಗಳೂರು ತಲಪುತ್ತಾನೆ. ಬೆಂಗಳೂರಿನ ಅಂದ ಚೆಂದ ಕಂಡು ಬಿಟ್ಟ ಬಾಯಿ ಮುಚ್ಚದ ಗಂಗೂನ ಕರೆದುಕೊಂಡು ದೊಡ್ಡದಾದ ಬಂಗಲೆಯೊಂದಕ್ಕೆ ಕರೆತರುತ್ತಾನೆ. ಅಲ್ಲಿಯ ಹುಡುಗಿಯರ ಅಂದಚೆಂದ ಕಂಡು ಗರಬಡಿದ ಗಂಗೆಯನ್ನು ಸೀದಾ ಒಳ ಕರೆದೊಯ್ಯುತ್ತಾನೆ. ಬಂಗಲೆಯ ಒಳಗೆ ಏನು ನಡೆಯುತ್ತದೆ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತೆರಡನೆಯ ಕಂತು.

ಗಂಗೆ  ಆ ದೊಡ್ಡ ಹಾಲಿನ ಒಳಗೆ ಕಾಲಿಡುತ್ತಿದ್ದಂತೆ ಅಲ್ಲಿ ತುಂಬಿದ್ದ ಮತ್ತೇರಿಸುವಂತಹ ಸೆಂಟಿನ ಘಮಲು ಅವಳ ಮೂಗಿಗೆ ಬಡಿದು ಹೊಟ್ಟೆ ತೊಳಸಿ ವಾಂತಿ ಬಂದಂತಾಯ್ತು. ತನ್ನ ಸೆರಗಿನಿಂದ ಮೂಗು  ಮುಚ್ಚಿ ” ಏನೀ ವಾಂತಿ ಬತೈತೆ” ಎಂದಳು. ಮೋಹನ  ಹಾಲಿನ ಆಚೆಗಿದ್ದ  ಬಚ್ಚಲಿನತ್ತ ಬೆರಳು ತೋರಿಸಿ “ಬರ್ಬೇಕಾ ಗಂಗೂ” ಎಂದು ಕೇಳಿದ. “ಬ್ಯಾಡ ನಾನೆ ಹೋಗ್ ಬತ್ತಿನಿ ಕೂತ್ಕೊಳ್ಳಿ” ಎಂದು ಹೇಳಿ ಬಾಯ ತುದಿಗೆ ಬಂದಿದ್ದ ವಾಂತಿಯನ್ನು ತಡೆಹಿಡಿದು ಬಚ್ಚಲಿನತ್ತ ಓಡಿದಳು.

 ಅಲ್ಲಿಯೇ ಇದ್ದ ಸೋಫಾದ ಮೇಲೆ ವಿರಾಜಮಾನನಾದ ಮೋಹನ, ಒಳಗಿನ ಭಾವೋನ್ಮಾದವನ್ನು ಇನ್ನಷ್ಟು ಉದ್ದೀಪಿಸುವಂತಿದ್ದ ಬಣ್ಣ ಬಣ್ಣದ ಮಬ್ಬು ಬೆಳಕಿನ ಆ ವಾತಾವರಣವನ್ನು ಆಸ್ವಾದಿಸುತ್ತ ಸುತ್ತಲೂ ಕಣ್ಣಾಡಿಸಿದ. ಅಲ್ಲಿದ್ದ ಹತ್ತಾರು ರೂಮುಗಳು ಆಗಲೇ ಕಾರ್ಯ ಪ್ರವೃತ್ತವಾಗಿದ್ದು ಅಲ್ಲಿಂದ ಹೊರಹೊಮ್ಮುತ್ತಿದ್ದ ನರಳುವಿಕೆಯ, ಬುಸುಗುಡುವ ಸದ್ದುಗಳು ಸುಖದ ತೀವ್ರತೆಯನ್ನು ರುಜು ಪಡಿಸುತ್ತಿತ್ತು.  ಪ್ರತಿ  ಬಾರಿ ಇಲ್ಲಿಗೆ ಬಂದಾಗಲೂ ಈ ಸದ್ದುಗಳನ್ನು ಆಸ್ವಾದಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದ ಮೋಹನ, ಕಣ್ಣುಮುಚ್ಚಿ ಆ ಕೋಣೆಗಳ ಬಸುಗುಡುವ ಮಂಚದಲ್ಲಿ ಗಂಗೆಯನ್ನು ಕಲ್ಪಿಸಿಕೊಂಡ. ಅವನ ಅರಿವಿಗೆ ಬಾರದಂತೆ ಮನಸ್ಸು ಭಾರವಾಯಿತು. ಅಲ್ಲಿ ಕೇಳಿ ಬರುತ್ತಿದ್ದ  ಕಾಮಕೇಳಿಯ ಸದ್ದು ಮೈ ಇರಿದಂತಾಗಿ ಕೂರಲಾರದೆ ಗಂಗೆ ಇದ್ದ  ಬಚ್ಚಲ ಕೋಣೆಯತ್ತ ಓಡಿ ಬಂದು ಬಾಗಿಲು ತಟ್ಟಿದ. ಬಾಗಿಲು ತೆರೆದ ಗಂಗೆ “ಏನೀ… ನಂಗೆ ಬಾಳ ಸುಸ್ತಾತೈತೆ. ತಲೆ ಸಿಡ್ದು ಚೂರಾಗುವಂಗೆ ನೋಯ್ತೈತೆ ಆಯ್ತಾನೆ ಇಲ್ಲ” ಎಂದು ತೇಲುಗಣ್ಣು ಬಿಡುತ್ತಾ ನರಳಿದಳು. ಗಂಗೆಯನ್ನು ತಬ್ಬಿದ ಮೋಹನ “ಬಾ ಸ್ವಲ್ಪ ಊಟ ಮಾಡಿ ಮಲಗ್ಬಿಡು ಯಲ್ಲ ಸರಿಯಾಗುತ್ತೆ” ಎಂದು ಹೇಳಿ ಅಡಿಗೆ ಕೋಣೆಯತ್ತ ಅವಳನ್ನು ಕರೆದುಕೊಂಡು ಹೋದ.

 “ಓ.. ಇಷ್ಟು ದಿನ ಮೋನಪ್ಪನ ಸವಾರಿ ಯಾವ ಕಡೆ ಹೋಗಿತ್ತಪ್ಪ ಪತ್ತೆನೆ ಇರ್ಲಿಲ್ವಲ್ಲ” ಎಂದು ಇಷ್ಟಗಲ ಬಾಯಿ ತೆರೆದ ಅಡಿಗೆಯ ಯಮುನಕ್ಕ, ಮೋಹನನ ಬಗಲಿನಲ್ಲಿದ್ದ ಗಂಗೆಯನ್ನು ಮೇಲಿನಿಂದ ಕೆಳಗಿನವರೆಗೂ ತದೇಕ ಚಿತ್ತಳಾಗಿ ನೋಡಿದಳು. ಗಂಗೆ ತೊಟ್ಟಿದ್ದ  ಕಪ್ಪುಬಳೆ, ತಾಳಿ ಕಾಲುಂಗುರಗಳನ್ನೆಲ್ಲ ಗಮನಸಿದ ಯಮುನಕ್ಕ  “ಇದು ಯಾರು ಅಂತ ಕೇಳ್ಬಹುದ ಮೋನಪ್ಪ” ಎಂದು ತುಸು ಕಸಿವಿಸಿಯಿಂದಲೇ ಕೇಳಿದಳು. ಯಮುನಕ್ಕನ ಮನಸ್ಸನ್ನು ಅರಿತ ಮೋಹನ ಅವಳ ತೀಕ್ಷ್ಣವಾದ ನೋಟವನ್ನು  ಎದುರಿಸಲಾರದೆ ತನ್ನ ದೃಷ್ಟಿಯನ್ನು ಬೇರೆಡೆಗೆ ನೆಟ್ಟು  “ವಾರದ ಹಿಂದೆ ಮದ್ವೆ ಮಾಡ್ಕೊಂಡೆ ಯಮುನಕ್ಕ” ಎಂದು ಮೆಲ್ಲಗೆ ಉಸುರಿದ. “ನೋಡೋಕೆ ಒಳ್ಳೆ ಕುಟುಂಬದಿಂದ ಬಂದ ಹೆಣ್ಣ್ ಮಗ್ಳಂಗ್ ಕಾಣ್ತಳೆ. ಒಳ್ಳೆ ಬಾಳೆ ಸುಳಿಯಂಗ್ ಅವ್ಳೆ ಇಂತ ಜಾಗಕ್ಕೆ ಯಾಕ್ ಕರ್ಕೊಂಡು ಬಂದಪ್ಪ” ಎಂದು ಮರುಗಿ ಗಂಗೆಯ ಹೆಸರು ಕೇಳಿ ಲಟಿಕೆ ತೆಗೆದಳು. ಕೂಡಲೆ ಮೋಹನ ತನ್ನ ಬಾಯಿಯ ಮೇಲೆ ಬೆರಳಿಟ್ಟು ಯಮುನಕ್ಕನನ್ನು ಸುಮ್ಮನಿರುವಂತೆ ಸನ್ನೆ ಮಾಡಿದ. “ಇವಳಿಗೆ  ಊಟ ಹಾಕ್ಕೊಡಿ ಅಕ್ಕ  ಸ್ವಲ್ಪ ಸುಸ್ತಾಗಿದ್ದಾಳೆ ಮಲಗಿ ಬಿಡ್ಲಿ” ಎಂದು ಹೇಳಿ ತಾನೆ  ಊಟ ಮಾಡಿಸಲು ಮುಂದಾದ. ಅನ್ನದ ತಟ್ಟೆ ನೋಡುತ್ತಿದ್ದಂತೆ ಗಂಗೆಗೆ ಮತ್ತೊಮ್ಮೆ ವಾಂತಿ ಉಮ್ಮಳಿಸಿ ಬಂದು “ನಿಮ್ಮ್ ದಮ್ಮಯ್ಯ ಬ್ಯಾಡ ಕನಿ ನಾನು ಮಲಿಕ ಬೇಕು” ಎಂದು ಮೋಹನನ ಭುಜಕ್ಕೊರಗಿದಳು.  

“ಇಲ್ಲಿ ಯಾವ್ ರೂಮು ಖಾಲಿ ಇದೆ ಯಮುನಕ್ಕ” ಎಂದು ಕೇಳಿದ ಮೋಹನನಿಗೆ “ನೋಡು ಮೋನಪ್ಪ ಇಲ್ಲಿರೊ ಯಾವ  ರೂಮಿಗೂ ಅವಳನ್ನ ಕರ್ಕೊಂಡು ಹೋಗ್ಬೇಡ. ಹಿಂದೆ ಇರೊ ಔಟ್ ಹೌಸ್ಗೆ  ಕರ್ಕೊಂಡು ನಡಿ ಅಲ್ಲಿಗೆ ಯಾರು ಅಷ್ಟು ಸುಲುಭಕ್ಕೆ ಬರೋದಿಲ್ಲ, ಪಾಪ ಹುಡುಗಿ ಚೆನ್ನಾಗಿ ಸುಧಾರಿಸ್ಕೊಳ್ಳಿ” ಎಂದು ಹೇಳಿ ಔಟ್ ಹೌಸಿನ ಬೀಗ ತೆಗೆದುಕೊಟ್ಟು “ಅವಳನ್ನ ಮಲುಗ್ಸಿ ಬಾ ಮೋನಪ್ಪ ಊಟ ಬಡಿಸಿರ್ತೀನಿ” ಎಂದು ಹೇಳಿ ಹೊರಬಂದಳು. ರೂಮಿನ ಒಳಹೋದದ್ದೆ  ಮೋಹನನನ್ನು ಗಟ್ಟಿಯಾಗಿ ತಬ್ಬಿ ಹಿಡಿದ ಗಂಗೆ “ಏನಿ…. ಇಲ್ಲಿ ನಂಗ್ಯಾಕೊ ಹೆದ್ರುಕೆ ಆಯ್ತತೈತೆ ನಿಮ್ಮ ದಮ್ಮಯ್ಯ ನನ್ಬುಟ್ಟು ಎಲ್ಲು ಹೋಗ್ಬೇಡಿ” ಎಂದು ಗೋಗರೆದಳು. “ಹೊಸ ಜಾಗ ಅಲ್ವಾ ಗಂಗೂ.. ಅದಿಕ್ಕೆ ನಿಂಗೆ ಹಾಗ್ ಅನ್ನಿಸ್ತಿದೆ ಊಟ ಮಾಡಿ ಬಂದ್ಬಿಡ್ತೀನಿ ಮಲ್ಗಿರು” ಎಂದ ಮೋಹನ ಅಲ್ಲಿ ಒಟ್ಟಿದ್ದ ಹಾಸಿಗೆಯ ರಾಶಿಯಿಂದ ಒಂದು ಹಾಸಿಗೆ ಎಳೆದು ತಂದುಹಾಕಿ ಅವಳನ್ನು ಮಲಗಿಸಿ ಅಡುಗೆ ಕೋಣೆಯತ್ತ ಬಂದ.

ಮೋಹನನಿಗಾಗಿ  ಕಾಯುತ್ತಾ ಕುಳಿತಿದ್ದ ಯಮುನಕ್ಕ ಅವನ ಮುಂದೆ ಅನ್ನ ತುಂಬಿದ ತಟ್ಟೆಯನ್ನಿಟ್ಟು  “ನೋಡು ಮೋನಪ್ಪ ನಾನು ಹಿಂಗ್ ಅಂತಿನಿ ಅಂತ ಬೇಸರ ಮಾಡಬೇಡ. ನೀನು ತಪ್ಪು ಮಾಡ್ತಿದ್ದಿ. ಬಾಳ್ ಕೊಡ್ತೀನಿ ಅಂತ ಕುಲವಂತ್ರು ಮನೆ ಹೆಣ್ಣು ಮಗ್ಳು ಕಟ್ಕೊಂಡ್ ಬಂದು ಹಿಂಗ್ ಮೋಸ ಮಾಡ್ಬಾರ್ದು ಕಣಪ್ಪ. ಅವಳಾಗೆ ಇಷ್ಟಪಟ್ಟು ಈ ದಂಧೆಗ್ ಬಂದಿದ್ರಿ ನನ್ಗೇನು ಅನ್ನುಸ್ತಿರ್ಲಿಲ್ಲ” ಎಂದು ತಾನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡು ಬಂದು ಅನುಭವಿಸಿದ ಈ ವೃತ್ತಿಯ ನೋವು ಸಂಕಟ ಅವಮಾನಗಳನ್ನೆಲ್ಲ  ಅವನ ಮುಂದೆ ಹರವಿ “ವಾಸಿಂದರ್  ಬಾಬು ಆಂಧ್ರದಿಂದ ಇವತ್ತು ಬರ್ತೀನಿ ಅಂದಿದ್ದ. ಆ ಹೆಣ್ ಮಗ್ಳು ಅದೃಷ್ಟ ಇವತ್ತು ಬಂದಿಲ್ಲ. ಅವನೇನಾದ್ರು ಅವಳನ್ನ ನೋಡಿದ್ರೆ ಖಂಡಿತ ಬಿಡೋದಿಲ್ಲ. ಬೆಳಗ್ಗೆ ಅವನು ಬರೋದ್ರೊಳಗೆ ಇಲ್ಲಿಂದ ಅವಳನ್ನ ಕರ್ಕೊಂಡು ಹೋರ್ಟುಬಿಡಪ್ಪ” ಎಂದು ಮೋಹನನಿಗೆ ತಿಳಿ ಹೇಳಿದಳು.

ಯಮುನಕ್ಕನ ಮಾತು ಮೋಹನನ ಹೃದಯ ತಟ್ಟಿ, ಕಣ್ಣೀರಾಗಿ ಹರಿಯಿತು. ಅವಳಿಗೆ ಕೈಮುಗಿದು ನಿಂತ ಮೋಹನ “ನನ್ನ ಪ್ರಾಣ ಹೋದ್ರು  ಅವಳನ್ನ ಈ ದಂಧೆಗೆ ಇಳಿಸೊದಿಲ್ಲ ಯಮುನಕ್ಕ” ಎಂದು ಅವಳಿಗೆ ಪ್ರಮಾಣ ಮಾಡಿ  ಉಣ್ಣುವ ಮನಸ್ಸಾಗದೆ ಎದ್ದು ರೂಮಿನತ್ತ ಬಂದ. ಒಂದು ರೀತಿಯ ತಳಮಳ ಆವರಿಸಿ ಕಣ್ಣು ಮುಚ್ಚಲಾರದೆ ಹಾಸಿಗೆಯಲ್ಲಿಯೇ ಒದ್ದಾಡುತ್ತಿದ್ದ ಗಂಗೆ,  ಒಳ ಬಂದ ಗಂಡನನ್ನು  ಕಂಡು ತುಸು ನಿರಾಳವಾದಳು. “ಏನೀ ಹೊಟ್ಟೆ ತುಂಬಾ ಉಂಡ್ರಿ ತಾನೆ” ಎಂದು ಪ್ರೀತಿ ತುಂಬಿ ಕೇಳಿದಳು. “ಹೂಂ ನಿನ್ನ ತಲೆ ನೋವು ಕಮ್ಮಿ ಆಯ್ತಾ…” ಎಂದು ವಿಚಾರಿಸಿ ಕೊಂಡ ಮೋಹನ ಬಟ್ಟೆ ಬದಲಾಯಿಸುವ ಮನಸ್ಸಾಗದೆ ಅವಳ ಪಕ್ಕ ಬಂದು ಹಾಗೆಯೇ ಉರುಳಿಕೊಂಡ. ಅವನ ಕಳೆಗುಂದಿದ  ಮುಖವನ್ನು ಗಮನಿಸಿದ ಗಂಗೆ ” ಈಗ ಸ್ವಲ್ಪ ಪರ್ವಾಗಿಲ್ಲ. ಯಾಕ್ ಒಂಥರ ಇದ್ದೀರಲ ಏನಾಯ್ತು” ಎಂದಳು. “ಏನಿಲ್ಲ ನನ್ಗೂ ಸ್ವಲ್ಪ ಆಯಾಸ ಆಗಿದೆ ಅಷ್ಟೆ. ಬೇಗ ಮಲ್ಗು ಗಂಗೂ ಅರ್ಲಿ ಮಾರ್ನಿಂಗ್ ಟ್ರೈನ್ ಹಿಡಿಬೇಕು  ನಾವು” ಎಂದು ಅವಳನ್ನು ತಬ್ಬಿ ಹಣೆಗೆ ಮುತ್ತಿಟ್ಟ. ಗಂಡನ ಪ್ರೀತಿಯ ಅಪ್ಪುಗೆಯೊಳಗೆ ಕಳೆದು ಹೋದ ಗಂಗೆಗೆ ಮಧ್ಯರಾತ್ರಿ ಯಾರೋ ಬಂದು ಬಾಗಿಲು ಬಡಿದ ಸದ್ದಾದಾಗಲೇ ಎಚ್ಚರವಾಗಿದ್ದು. 

ಗಂಗೆ ನಿದ್ದೆಯಲ್ಲಿದ್ದ ಗಂಡನನ್ನು ಎಚ್ಚರ ಗೊಳಿಸಲು ಮನಸ್ಸಾಗದೆ  ತಾನೇ ಎದ್ದು ಬಾಗಿಲು ತೆರೆಯಲು ಮುಂದಾದಳು. ಮನೆಯೊಡೆಯ ವಾಸಿಂದಾರ್ ಬಾಬುವಿನ ದನಿಯನ್ನು ಚೆನ್ನಾಗಿಯೇ ಗ್ರಹಿಸಿದ್ದ ಮೋಹನ, ಕೂಡಲೆ  ಅವಳ ಕೈ ಹಿಡಿದು ತನ್ನ ಬಗಲಿಗಾಕಿಕೊಂಡು ” ಬಾಗ್ಲು ತೆಗಿಬೇಡ ಗಂಗೂ ಇದು ಎಂತ ಮನೆ ಅಂತ ನಿಂಗೊತ್ತಿಲ್ಲ. ಅವ್ರು ಎಷ್ಟಾದ್ರು ಬಾಗ್ಲು ಬಡ್ಕೊಳ್ಳಿ ತಲೆ ಕೆಡುಸ್ಕೊಬೇಡ ಸುಮ್ನೆ ಮಲಗು” ಎಂದು ಪಿಸುಗಟ್ಟಿದ. ಅವನ ಮಾತಿನ ತಲೆ ಬುಡ ಅರ್ಥವಾಗದ ಗಂಗೆ “ಇದೆಂಥ ಮನೆ ಕನಿ…. ಅದೇನು ನಾನು ವಸಿ ಅರ್ಥ ಮಾಡ್ಕೊತಿನಿ  ಬುಡ್ಸೇಳಿ” ಎಂದಳು. ಅವಳ ಮಾತಿಗೆ ಉತ್ತರಿಸಲಾರದ ಮೋಹನ “ಡಿಸ್ಟರ್ಬ್ ಮಾಡಬೇಡ ಗಂಗು  ನಂಗೆ ಬಾಳ ನಿದ್ರೆ ಬರ್ತಿದೆ ಸುಮ್ನೆ ಮಲ್ಗು” ಎಂದು ಹೇಳಿ ಮಗ್ಗುಲು ತಿರುಗಿಸಿ ಮಲಗಿದ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಹಿಂದಿನ ಸಂಚಿಕೆ ಓದಿದ್ದೀರಾ? ತವರು ತೊರೆದ ಗಂಗೆ

Related Articles

ಇತ್ತೀಚಿನ ಸುದ್ದಿಗಳು