Tuesday, July 1, 2025

ಸತ್ಯ | ನ್ಯಾಯ |ಧರ್ಮ

ಕರಾವಳಿಯಲ್ಲಿ ಮಹಿಳೆ ಮತ್ತು ಮಕ್ಕಳ ನೈಜ ರಕ್ಷಕರು ಯಾರು? ಹಿಂದೂ ಸಂಘಟನೆಗಳೇ? ಪ್ರಗತಿಪರ ಸ್ತ್ರೀವಾದಿಗಳೇ?

ಒಂದೆಡೆ ಹಿಂದೂ ಹೆಣ್ಮಕ್ಕಳ ರಕ್ಷಣೆಯ ನೆಪದಲ್ಲಿ ಹೆಣ್ಣು ಮಕ್ಕಳ ಮೇಲೆ ಕರಾವಳಿಯಲ್ಲಿ ದೌರ್ಜನ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಮಹಿಳಾ ಪರ ಹೋರಾಟಗಾರು ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅದೂ ಕಠಿಣವಾದ ಸವಾಲುಗಳೊಂದಿಗೆ..! ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

2013 ನೇ ಇಸವಿ ಎಂಬುದು ದುರ್ಗಾವಾಹಿನಿ ಕರಾವಳಿಯಲ್ಲಿ ಹೆಚ್ಚು ಸಕ್ರೀಯವಾಗಿದ್ದ ದಿನಗಳು. ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ ನಡೆಸುವ ಮಾರಲ್ ಪೊಲೀಸಿಂಗ್ ಗೆ ‘ಮಹಿಳೆಯರ ರಕ್ಷಣೆಯ ಹಿಂದುತ್ವ ಕಾರ್ಯಾಚರಣೆ’ ಎಂದು ಬಣ್ಣ ಕೊಡುತ್ತಿದ್ದದ್ದೇ ದುರ್ಗಾವಾಹಿನಿ ! 2013ರಲ್ಲಿ ಮಂಗಳೂರಿನ ಅತ್ತಾವರ ರಸ್ತೆಯಲ್ಲಿರುವ ಹೊಟೇಲೊಂದರಲ್ಲಿ ನಾಲ್ವರು ಹುಡುಗಿಯರು ಮತ್ತು ಮೂವರು ಹುಡುಗರು ಊಟ ಮಾಡುತ್ತಿದ್ದಾಗ ಬಜರಂಗ ದಳ ಮತ್ತು ದುರ್ಗಾವಾಹಿನಿ ಸದಸ್ಯರು ದಾಳಿ ನಡೆಸಿದರು. ಏನೂ ಅಪರಾಧ ಮಾಡದ ಈ ಏಳೂ ಜನರನ್ನು ಕ್ರಿಮಿನಲ್ ಗಳಂತೆ ಹಿಡಿದುಕೊಂಡ ಈ ಹಿಂದುತ್ವವಾದಿಗಳು, ಪೊಲೀಸರನ್ನು ಕರೆಸಿ ಅವರಿಗೆ ಒಪ್ಪಿಸಿದರು. ಪೊಲೀಸರು ಮರುಮಾತಾಡದೇ ಯುವಕ ಯುವತಿಯರನ್ನು ಜೀಪಿನಲ್ಲಿ ಕೂರಿಸಿ, ಹಿಂದುತ್ವವಾದಿಗಳನ್ನು ಬೀಳ್ಕೊಟ್ಟರು.  ಈ ಘಟನೆ ನಡೆದ ಮರುದಿನವೇ ಪಂಪ್ವೆಲ್ ಸರ್ಕಲ್ ಬಳಿ ಕಾರೊಂದನ್ನು ಅಡ್ಡಗಟ್ಟಿ ದುರ್ಗಾವಾಹಿನಿ ಮತ್ತೊಂದು ದಾಳಿ ನಡೆಸಿತು. ಕಾರಣ ಏನೆಂದರೆ, ಮುಸ್ಲಿಂ ದಂಪತಿಗಳು ಅವರದ್ದೇ ಅಂಗಡಿಯ ಮಹಿಳಾ ಉದ್ಯೋಗಿಯನ್ನು ಕಾರಿನಲ್ಲಿ ಮನೆಗೆ ಬಿಟ್ಟು ಬರುತ್ತಿದ್ದರು ಎಂಬ ಕಾರಣಕ್ಕೆ ! ಈ ರೀತಿಯ ಮಹಿಳಾ ರಕ್ಷಣೆಯಲ್ಲಿ ದುರ್ಗಾವಾಹಿನಿ ತೊಡಗಿದ್ದಾಗಲೇ ಮಂಗಳೂರಿನ ನಾಲ್ಕೈದು ನೈಜ ಮಹಿಳಾ ಪರರು ಮಗು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಒಂದೆಡೆ ಹಿಂದೂ ಹೆಣ್ಮಕ್ಕಳ ರಕ್ಷಣೆಯ ನೆಪದಲ್ಲಿ ಹೆಣ್ಣು ಮಕ್ಕಳ ಮೇಲೆ ಕರಾವಳಿಯಲ್ಲಿ ದೌರ್ಜನ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಮಹಿಳಾ ಪರ ಹೋರಾಟಗಾರರಾದ ವಿದ್ಯಾ ದಿನಕರ್, ಅಸುಂತಾ ಡಿಸೋಜಾ, ರೆಹನಾ, ಸುನೀತಾ ವಾಮನ್ ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅದೂ ಕಠಿಣವಾದ ಸವಾಲುಗಳೊಂದಿಗೆ..!

ರೆಹನಾ (ಈ ಹಿಂದಿನ ಬರಹಗಳಲ್ಲಿ ಅವರ ಹೆಸರನ್ನು ಬದಲಾಯಿಸಿ ಬರೆಯಲಾಗಿತ್ತು) ಅವರು ಬಜಾಲ್ ನ ಕಲ್ಲಕಟ್ಟೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಂಗನವಾಡಿ ಕಾರ್ಯಕರ್ತೆಯಾಗಿ ಮನೆಮನೆಗೆ ಬೇಟಿ ನೀಡಿ ಮಕ್ಕಳು ಮತ್ತು ಗರ್ಭಿಣಿಯರ ಪರಿಶೀಲನೆ ಮಾಡುತ್ತಿದ್ದಾಗ ಲೆನೆಟ್ ವೇಗಸ್ ಅವರ ಮನೆಯಲ್ಲಿ ಪುಟ್ಟ ಮಗುವೊಂದು ಕಂಡು ಬಂತು. ಲೆನೆಟಾ ವೇಗಸ್ ಗರ್ಭಿಣಿಯಾಗಿದ್ದ ಮಾಹಿತಿಯೇ ಇರದಿದ್ದ ಅಂಗನವಾಡಿ ಕಾರ್ಯಕರ್ತೆ ರೆಹನಾ ಅವರು ಮಗು ಬಗ್ಗೆ ವಿಚಾರಿಸಿದಾಗ ‘ನನ್ನದೇ ಮಗು’ ಎಂದು ಲೆನೆಟ್ ಉತ್ತರಿಸಿದ್ದರು. ಅನುಮಾನ ಬಂದ ರೆಹನಾ ಅವರು ಅಕ್ಕಪಕ್ಕದ ಮನೆಗಳನ್ನು ಗೌಪ್ಯವಾಗಿ ವಿಚಾರಿಸಿದರು. ಕೆಲವರ ಬಳಿ ‘ನನ್ನ ಪರಿಚಯದೊಬ್ಬರಿಗೆ ಮಗು ಬೇಕು. ಯಾರ ಬಳಿ ಸಿಗಬಹುದು’ ಎಂದು ಗುಪ್ತವಾಗಿ ಮಾತನಾಡುವಂತೆ ನಟಿಸಿದರು. ಹಲವಾರು ಮನೆಗಳವರು ಲೆನೆಟಾ ವೇಗಸ್ ಮನೆಯತ್ತಾ ಗುಟ್ಟಾಗಿ ಕೈ ತೋರಿಸಿದಾಗ ರೆಹನಾ ಅವರ ಅನುಮಾನ ನಿಜವಾಗತೊಡಗಿತು.

ಪ್ರಕರಣವು ಜನಪರ ನಿಲುವಿನ ರೆನ್ನಿ ಡಿಸೋಜಾ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪಡಿ- ಚೈಲ್ಡ್ ಲೈನ್ ಅಂಗಳಕ್ಕೆ ಬಂದು ನಿಂತಿತ್ತು. 15.07.2013 ರಂದು ಪ್ರಕರಣದ ಕಡತವನ್ನು ಕೈಗೆತ್ತಿಕೊಂಡ ಚೈಲ್ಡ್ ಲೈನ್ ಸಿಬ್ಬಂದಿ ಅಸುಂತಾ ಡಿಸೋಜಾ ಮತ್ತು ಸುನೀತಾ ವಾಮನ್ ಅವರು ಬಜಾಲ್ ನ ಕಲ್ಲಕಟ್ಟೆಗೆ ತೆರಳಿ  ಮನೆಮನೆಗೆ ಅಲೆದಾಡಿ  ಮಾಹಿತಿ ಸಂಗ್ರಹ ಮಾಡಿದರು.  ಅಸುಂತಾ ಡಿಸೋಜಾ ಅಂತೂ ಅವರದ್ದೇ ಮನೆಯ ಮಗುವೆಂಬಂತೆ ಕಾರ್ಯತತ್ಪರರಾಗಿದ್ದರು. ಮಗು ಮಾರಾಟಕ್ಕಾಗಿಯೇ ಲೆನಿಟಾ ವೇಗಸ್ ಅವರು ಮಗುವನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಪ್ರಾಥಮಿಕವಾಗಿ ಖಚಿತಗೊಂಡ ಬಳಿಕ ಅಸುಂತಾ ಡಿಸೋಜಾ ಅವರು ನೇರವಾಗಿ ಲೆನಿಟಾ ಮನೆಗೆ ಹೋಗಿ ವಿಚಾರಣೆ ನಡೆಸಿದರು. ಆಗ ಲೆನಿಟಾ ಅವರು ಮಗುವಿನ ಬರ್ತ್ ಸರ್ಟಿಫಿಕೇಟ್ ನಿಂದ ಹಿಡಿದು, ಬಾಣಂತಿ ಲೆನಿಟಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗಿನ ಆಸ್ಪತ್ರೆ ದಾಖಲೆ ಹೊಂದಿದ್ದರು. ಹಾಗಾಗಿ ಅಸುಂತಾ ಡಿಸೋಜಾ ತಂಡ ಲೆನಿಟಾ ವೇಗಸ್ ಮನೆಯಿಂದ ವಾಪಸ್ ಬರಬೇಕಾಯಿತು.

ಈ ಮಧ್ಯೆ ಅಂಗನವಾಡಿ ಕಾರ್ಯಕರ್ತೆ ರೆಹನಾ ಅವರು ಪಟ್ಟು ಹಿಡಿದು ತನಿಖೆ ನಡೆಸಿದಾಗ, ಮಗು ಪಜೀರು ಗ್ರಾಮದ ಕಲ್ಲು ಕೋರೆಯ ಕಾರ್ಮಿಕ ಮಹಿಳೆಯ ಮಗು ಎಂದು ತಿಳಿಯಿತು. ನಾನು, ಅಸುಂತಾ ಡಿಸೋಜಾ, ಸುನೀತಾ ವಾಮನ್ ಅವರು ಪಜೀರ್ ಗ್ರಾಮದ ಕಲ್ಲು ಕೋರೆಗೆ ಹೋಗಿ ವಿಚಾರಣೆ ನಡೆಸಿದೆವು. ಅಸುಂತಾ ಡಿಸೋಜಾ ಅವರು ಎಲ್ಲಾ ಮಹಿಳಾ ಕಾರ್ಮಿಕರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮಾತನಾಡಿಸಿದಾಗ ಕಾರ್ಮಿಕೆಯೊರ್ವಳು ಮೂರು ತಿಂಗಳ ಮಗುವನ್ನು ಮಾರಾಟ ಮಾಡಿರುವ ಮಾಹಿತಿ ಲಭ್ಯವಾಯಿತು. ಲೆನಿಟಾ ಅವರ ಬಳಿ ಇರುವ ಮಗು ಮತ್ತು ಕ್ವಾರಿ ಕಾರ್ಮಿಕೆಯ ಮಗು ಒಂದೇ ಎಂಬುದನ್ನು ಪ್ರೂವ್ ಮಾಡಲು ಚೈಲ್ಡ್ ಲೈನ್ ಬಳಿ ದಾಖಲೆಗಳು ಇರಲಿಲ್ಲ. ನಾವು ಮತ್ತೊಮ್ಮೆ ಲೆನಿಟಾ ವೇಗಸ್ ಮನೆಗೆ ಹೋಗುವಂತಿರಲಿಲ್ಲ. ಆ ರೀತಿಯ ಚಟುವಟಿಕೆಗೆ ಮಗುವಿಗೆ ಅಪಾಯ ತಂದೊಡ್ಡಬಲ್ಲದು ಎಂಬ ಆತಂಕವೂ ಇತ್ತು.

ಹಾಗಾಗಿ, ವಿದ್ಯಾ ದಿನಕರ್ ಸಹಕಾರದಲ್ಲಿ ಮಗು ರಕ್ಷಣೆಯ ಕಾರ್ಯಾಚರಣೆ ಮಾಡಲು ಸಿದ್ದತೆ ನಡೆಸಲಾಯಿತು. ನಾನು ನಡೆದ ಎಲ್ಲಾ ಘಟನೆಯನ್ನು ವಿದ್ಯಾ ದಿನಕರ್ಗೆ ವಿವರಿಸಿದೆ. ಅಂಗನವಾಡಿ ಕಾರ್ಯಕರ್ತೆ ರೆಹನಾ ಅವರು ಅಷ್ಟೊತ್ತಿಗಾಗಲೇ ಲೆನಿಟಾ ವೇಗಸ್ ಅವರ ನಂಬಿಕೆ ಗಳಿಸಿಕೊಂಡಿದ್ದರು. ‘ನನ್ನಲ್ಲಿ ದುಬೈಯ ಪಾರ್ಟಿ ಇದೆ’ ಎಂದು ನಂಬಿಸಿದ್ದರು.  ವಿದ್ಯಾದಿನಕರ್ ಅವರು ಅಂಗನವಾಡಿ ಕಾರ್ಯಕರ್ತೆ ರೆಹನಾ ಅವರ ಶಿಫಾರಸ್ಸಿನಂತೆ ಲೆನಿಟಾ ಅವರಿಗೆ ಕರೆ ಮಾಡಿದರು. ಲೆನಿಟಾ ಮಗು ನೀಡಲು ಒಪ್ಪಿದರು. ಆದರೆ ಏನೋ ಅನುಮಾನ ಬಂದು ದಿನ ದೂಡುತ್ತಿದ್ದರು. ಈ ಮಧ್ಯೆ ನಾನು ಸಿಐಡಿ ಮಾನವ ಕಳ್ಳಸಾಗಾಟ ಘಟಕದ ಇನ್ಸ್ಪೆಕ್ಟ ರ್ ನವೀನ್ ಅವರನ್ನು ಸಂಪರ್ಕಿಸಿದ್ದೆ. ಅವರು ಎರಡು ದಿನ ಬಂದು ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದರು. ಆದರೆ ಲೆನಿಟಾ ಮಗು ಮಾರುವ ದಿನವನ್ನು ಮುಂದೂಡಿದ್ದರಿಂದ ಅವರು ವಾಪಸ್ ಹೋದರು. 26.07.2013 ರಂದು ವಿದ್ಯಾದಿನಕರ್ಗೆ ಕರೆ ಮಾಡಿದ ಲಿನೆಟಾ ವೇಗಸ್ ಅವರು ಇಂದೇ ಕ್ಲೀನಿಕ್ಗೆ ಬರುವಂತೆ ಸೂಚಿಸಿದರು. ತಕ್ಷಣ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದ ನಮ್ಮ ತಂಡ ಕಾರ್ಯಚರಣೆಯನ್ನು ವಿವರಿಸಲಾಯಿತು. ಎಸ್ಐಒ ವಿದ್ಯಾರ್ಥಿ ನಾಯಕ ಶಬ್ಬೀರ್ ತಂದುಕೊಟ್ಟ ಬುರ್ಕಾ ತೊಟ್ಟುಕೊಂಡು ವಿದ್ಯಾದಿನಕರ್ ತೊಕ್ಕೊಟ್ಟಿನ ಕ್ಲೀನಿಕ್ಗೆ ಹೊರಟರು. ಪೊಲೀಸ್ ಹೆಡ್ಕಾನ್ಸ್ಸ್ಟೇಬರ್ ಇಕ್ಬಾಲ್ ಎಇ(ಈಗ ಕೋಸ್ಟ್ ಗಾರ್ಡ್ ಹೆಡ್ ಕಾನ್ಸ್ಸ್ಟೇಬಲ್) ಅವರು ವಿದ್ಯಾ ದಿನಕರ್ ಅವರ ಗಂಡನಂತೆ ನಟಿಸಿ ಕ್ಲೀನಿಕ್ ಒಳಹೊಕ್ಕರು. ಪೊಲೀಸರೇ ತಂದಿದ್ದ 95 ಸಾವಿರ ರೂಪಾಯಿಗಳನ್ನು ಲೆನಿಟಾ ವೇಗಸ್ಗೆ ನೀಡಿ ಮಗು ವಿದ್ಯಾದಿನಕರ್ ಕೈಗೆ ಬರುತ್ತಿದ್ದಂತೆ ಲೆನಿಟಾ ವೇಗಸ್ ಅರೆಸ್ಟ್ ಆಗಿದ್ದರು. 15.07.2013 ರಿಂದ 26.07.2013 ರವರೆಗೆ ಅಂದರೆ 17 ದಿನಗಳ ಕಾಲ ನಿರಂತರ ನಡೆದ ಕಾರ್ಯಾಚರಣೆಯ ಬಳಿಕ ಮಗು ಸುರಕ್ಷಿತವಾಗಿ ನಮ್ಮ ಕೈ ಸೇರಿತ್ತು.

ಕೆಲಸ ಇದ್ದಿದ್ದು ಆ ಬಳಿಕ ! ಅಸುಂತಾ ಡಿಸೋಜಾ, ಸರಿತಾ, ಸುನೀತಾ ವಾಮನ್, ಜಯಂತಿ, ರೆಹನಾಗೆ ಹಗಲು ರಾತ್ರಿ ಕೆಲಸಗಳಿದ್ದವು. ಮಗುವಿಗೆ ಸಂಬಂಧಪಟ್ಟ ದಾಖಲೆಗಳು, ದೂರುಗಳು, ವರದಿಗಳನ್ನು ಸಿದ್ದಪಡಿಸಿ, ಠಾಣೆಗೆ ಹಲವು ಬಾರಿ ಅಲೆಡಾಡಿ ಪ್ರಕರಣವನ್ನು ಗಟ್ಟಿಗೊಳಿಸಲಾಯಿತು. ಹುಟ್ಟುತ್ತಲೇ ತಾಯಿಂದ ಬೇರ್ಪಟ್ಟು ಮಾರಾಟಗಾರ್ತಿ ಜೊತೆ ಇದ್ದ ಮೂರು ತಿಂಗಳ ಮಗುವನ್ನು ಸುರಕ್ಷಿತವಾಗಿ ಸಿಡಬ್ಲ್ಯುಸಿಗೆ ಒಪ್ಪಿಸಿ ಅದರ ಆರೋಗ್ಯ ನಿಗಾ ವಹಿಸಿ, ಅದಕ್ಕೆ ಸಂಬಂಧಪಟ್ಟ ವೈದ್ಯರ ದಾಖಲೆಗಳನ್ನು ಸಿದ್ದಪಡಿಸುವಷ್ಟು ಸಹನೆ ಭೂಮಿ ತೂಕದ್ದು ! ಅಂತಹ ಭೂಮಿತೂಕದ ಸಹನೆಯೇ ಇಂದು ಮಕ್ಕಳ ಕಳ್ಳಸಾಗಾಟಗಾರರಿಗೆ ಶಿಕ್ಷೆಯಾಗುವಂತೆ ಮಾಡಿದೆ.

ಮಗುವಿನಂತಹ ಮನಸ್ಸಿನ ರೆನ್ನಿ ಡಿಸೋಜಾ ಅವರು ಚೈಲ್ಡ್ ಲೈನ್ ನಿರ್ದೇಶಕರಾಗಿದ್ದ ನಾವು ತಂಡವಾಗಿ ಹತ್ತಾರು ಮಕ್ಕಳ ಮಾರಾಟ ಜಾಲ, ಬಾಲಕಾರ್ಮಿಕರನ್ನು ಪತ್ತೆ ಹಚ್ಚಿದ್ದೇವೆ. ಬೀದಿಯಲ್ಲಿ ಪತ್ತೆ ಹಚ್ಚಿದ್ದ ಒಂದು ಮಗುವಂತೂ ಅದೊಂದು ದಿನ ಯೂನಿಫಾರಂ ಹಾಕಿಕೊಂಡು ‘ಅಂಕಲ್ ನನ್ನ ಪರಿಚಯ ಆಯ್ತಾ’ ಎಂದು ನನ್ನನ್ನೂ, ಸುದೀಪ್ತೋನನ್ನು ಕೇಳಿದಾಗ ಸುದೀಪ್ತೋಗೆ ಕಣ್ಣೀರು ಬಂದಿತ್ತು. ಆದರೆ ಮಕ್ಕಳನ್ನು ಈ ಸ್ಥಿತಿಗೆ ದೂಡಿದ್ದ ಯಾವ ಆರೋಪಿಗಳಿಗೂ ಶಿಕ್ಷೆಯಾಗಿರಲಿಲ್ಲ. ಕಾರ್ಯಾಚರಣೆಯಲ್ಲಿ ನಾವು ತಂಡವಾಗಿ ಹಲವರು ಭಾಗಿಯಾಗಿರಬಹುದು. ಆದರೆ ಕಾರ್ಯಾಚರಣೆಯ ನಿಜವಾದ ತಾರೆಗಳು ರೆಹನಾ, ಅಸುಂತಾ ಡಿಸೋಜಾ, ವಿದ್ಯಾದಿನಕರ್, ಸುನೀತಾ ವಾಮನ್ ರವರುಗಳು.

ಅಸುಂತಾ ಡಿಸೋಜಾ ಸಧ್ಯ ಜನವಾದಿ ಮಹಿಳಾ ಸಂಘಟನೆಯಲ್ಲಿ ಸಕ್ರೀಯರಾಗಿದ್ದಾರೆ. ಯಾವ ಬೆದರಿಕೆಗೂ ಜಗ್ಗದೇ ತನ್ನ ಕರ್ತವ್ಯವನ್ನು ತಾಯಿ ಹೃದಯದಿಂದ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆ ರೆಹನಾ ಈಗ ಅಂಗನವಾಡಿ ಸೂಪರ್ವೈಸರ್ ಆಗಿದ್ದಾರೆ. ಅವರು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೊಂದು ಮಾದರಿ. ಸುನೀತಾ ವಾಮನ್ ಅವರು ಪಡಿ ಸಂಸ್ಥೆಯಲ್ಲಿದ್ದಾರೆ. ವಿದ್ಯಾದಿನಕರ್ ಅವರ ಸಾಮಾಜಿಕ ಸೇವೆಯಲ್ಲಿ ನೂರಾರು ಸಾಧನೆಗಳು ಸೇರ್ಪಡೆಗೊಳ್ಳುತ್ತಲೇ ಇವೆ.

2013 ರಲ್ಲಿ ಮಂಗಳೂರಿನಲ್ಲಿ 45 ನೈತಿಕ ಪೊಲೀಸ್ಗಿರಿಗಳು ನಡೆದಿದ್ದವು. 2014 ರಲ್ಲಿ 39 ಮಾರಲ್ ಪೊಲೀಸಿಂಗ್ ನಡೆದಿದೆ. ಹಿಂದೂ ಧರ್ಮ ಮತ್ತು ಮತ್ತು ಹಿಂದೂ ಮಹಿಳೆಯರ ರಕ್ಷಣೆಗಾಗಿ ನಾವು ಈ ದಾಳಿಯನ್ನು ಮಾಡಿದ್ದೆವು ಎಂದು ಭಜರಂಗದಳ, ದುರ್ಗಾವಾಹಿನಿ ಹೇಳಿಕೊಂಡಿತ್ತು. ಆದರೆ ನಮ್ಮ ಜನಪರ ಮಹಿಳಾ ತಂಡ ಪುಟ್ಟ ಪುಟ್ಟ ಮಕ್ಕಳು, ಹೆಣ್ಮಕ್ಕಳ ರಕ್ಷಣೆಯ ನಿಜವಾದ ಕಾರ್ಯಾಚರಣೆಯಲ್ಲಿ ತೊಡಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page