ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಯಾರು? ತಾಯಿಯ ಕೂಗಿಗೆ ಸ್ಪಂದಿಸಲಿದೆಯೇ ಕೇಂದ್ರ?

ಕತಾರ್‌ನಲ್ಲಿ ಎಂಟು ಭಾರತೀಯರಿಗೆ ಗಲ್ಲು ಶಿಕ್ಷೆ ವಿಧಿಸುವ ನಿರ್ಧಾರದ ನಡುವೆಯೇ ಯೆಮೆನ್‌ನಲ್ಲಿ ಭಾರತೀಯ ನರ್ಸ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತೀಯ ಮಹಿಳೆ ನಿಮಿಷಾ ಅವರನ್ನು ಯೆಮೆನ್ ನ್ಯಾಯಾಲಯ ಕೊಲೆ ಆರೋಪಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದೆ. ಈ ಪ್ರಕರಣದಲ್ಲಿ ಆರೋಪಿ ನಿಮಿಷಾರ ತಾಯಿ ಯೆಮೆನ್‌ಗೆ ತೆರಳಲು ಅನುಮತಿ ಕೊಡಿಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಒಂದು ವಾರ ಕಾಲಾವಕಾಶ ನೀಡಿದೆ.

ನಿಮಿಷಾ ಪ್ರಿಯಾ ಅವರ ತಾಯಿಯ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸರ್ಕಾರ ತನಗೆ ಅಲ್ಲಿಗೆ ತೆರಳುವುದಕ್ಕೆ ಅನುಮತಿ ನೀಡಿದಲ್ಲಿ ತಾನು ತನ್ನ ಮಗಳ ಶಿಕ್ಷೆಯ ವಿಷಯದಲ್ಲಿ ಏನಾದರೂ ಮಾಡುವ ಯೋಚನೆ ನಿಮಿಷಾರ ತಾಯಿಯದು. ಅವರು ಬ್ಲಡ್‌ ಮನಿ (ಸಾವಿಗೆ ಪರಿಹಾರವಾಗಿ ಹಣ) ನೀಡುವ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ.

ಇದಕ್ಕೂ ಮುನ್ನ ನವೆಂಬರ್ 13ರಂದು ಯೆಮೆನ್ ಸುಪ್ರೀಂ ಕೋರ್ಟ್ ಮರಣದಂಡನೆ ವಿರುದ್ಧ ನಿಮಿಷಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.

ಮಗಳನ್ನು ರಕ್ಷಿಸುವಂತೆ ತಾಯಿಯ ಮನವಿ

ತನ್ನ ಮಗಳನ್ನು ಉಳಿಸಲು, ನಿಮಿಷಾ ಅವರ ತಾಯಿ ಯೆಮೆನ್‌ಗೆ ಹೋಗಲು ಬಯಸುತ್ತಾರೆ ಮತ್ತು ತನ್ನ ಮಗಳನ್ನು ಕ್ಷಮಿಸುವಂತೆ ಮಹದಿಯ ಕುಟುಂಬಕ್ಕೆ ಮನವಿ ಮಾಡುತ್ತಾರೆ. ಮಹದಿಯ ಸಾವಿಗೆ ಬದಲಾಗಿ ಅವರ ಕುಟುಂಬಕ್ಕೆ ಬ್ಲಡ್‌ ಮನಿ ನೀಡುವ ಬಗ್ಗೆ ಮಾತುಕತೆ ನಡೆಸಲು ಅವರು ಬಯಸುತ್ತಿದ್ದಾರೆ. ಸದ್ಯ ಮಗಳನ್ನು ಉಳಿಸಲು ಇದೊಂದೇ ದಾರಿ ಎನ್ನುತ್ತಾರೆ ಅವರು.

ನಿಮಿಷಾರನ್ನು ರಕ್ಷಿಸಲು ಸಂತ್ರಸ್ತ ಕುಟುಂಬದವರೊಂದಿಗೆ ಮಾತನಾಡಿ ರಾಜಿ ಸಂಧಾನಕ್ಕೆ ಪ್ರಯತ್ನಿಸುವುದೊಂದೇ ದಾರಿ ಎಂದು ಅರ್ಜಿದಾರರ ಪರ ವಕೀಲ ಸುಭಾಷ್ ಚಂದ್ರನ್ ಕೆ.ಆರ್. ಹೇಳಿದ್ದಾರೆ. ಇದಕ್ಕಾಗಿ ಅರ್ಜಿದಾರರು ಯೆಮೆನ್‌ಗೆ ಹೋಗಬೇಕಾಗಿದ್ದರೂ, ಯೆಮೆನ್‌ಗೆ ಹೋಗುವುದಕ್ಕೆ
ಪ್ರಸ್ತುತ ನಿಷೇಧದಿಂದಾಗಿ ಹೋಗಲು ಸಾಧ್ಯವಾಗುತ್ತಿಲ್ಲ.

ನಡೆದಿದ್ದೇನು?

ನಿಮಿಷಾ 2017ರಿಂದ ಯೆಮೆನ್‌ ದೇಶದ ಜೈಲಿನಲ್ಲಿದ್ದಾರೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹದಿ ಹತ್ಯೆ ವಿಷಯದಲ್ಲಿ ನಿಮಿಷಾ ತಪ್ಪಿತಸ್ಥರೆಂದು ಸಾಬೀತಾಗಿದೆ. ತಲಾಲ್‌ ನಿಮಿಷಾರ ಪಾಸ್‌ಪೋರ್ಟ್‌ ಇಟ್ಟುಕೊಂಡು ಅದನ್ನು ಆಕೆಗೆ ಕೊಡದೆ ಸತಾಯಿಸುತ್ತಿದ್ದ. ಅದನ್ನು ಹೇಗಾದರೂ ಮಾಡಿ ಪಡೆದುಕೊಳ್ಳುವ ಯೋಚನೆಯಲ್ಲಿ ತಲಾಲ್‌ಗೆ ನಿಮಿಷಾ ಮತ್ತು ಬರುವ ಇಂಜಕ್ಷನ್‌ ಕೊಟ್ಟಿದ್ದರು. ಅವನು ಮತ್ತಿನಲ್ಲಿರುವಾಗ ಪಾಸ್‌ಪೋರ್ಟ್‌ ಎತ್ತಿಕೊಳ್ಳುವುದು ನಿಮಿಷಾ ಯೋಚನೆಯಾಗಿತ್ತು. ಆದರೆ ಇಂಜಕ್ಷನ್‌ ಡೋಸ್‌ ಹೆಚ್ಚಾಗಿ ತಲಾಲ್‌ ಮೃತಪಟ್ಟಿದ್ದ.

ಕೇರಳದ ಪಾಲಕ್ಕಾಡ್ ನಿವಾಸಿಯಾದ ನರ್ಸ್ ನಿಮಿಷಾ ಕಳೆದ ಒಂದು ದಶಕದಿಂದ ಪತಿ ಮತ್ತು ಮಗಳೊಂದಿಗೆ ಯೆಮೆನ್‌ನಲ್ಲಿ ಕೆಲಸ ಮಾಡುತ್ತಿದ್ದರು. 2016ರಲ್ಲಿ, ಯೆಮೆನ್‌ನಲ್ಲಿ ಅಂತರ್ಯುದ್ಧದ ಕಾರಣ, ದೇಶದಿಂದ ಹೊರಹೋಗಲು ನಿಷೇಧವನ್ನು ವಿಧಿಸಲಾಯಿತು. ಆದರೆ ಅದಕ್ಕೂ ಮುನ್ನ 2014ರಲ್ಲಿ ಅವರ ಪತಿ ಹಾಗೂ ಮಗಳು ಭಾರತಕ್ಕೆ ಮರಳಿದ್ದರು.

ಆದರೆ ನಿಮಿಷಾ ಹಿಂತಿರುಗಲು ಸಾಧ್ಯವಾಗಲಿಲ್ಲ. ಇದರ ನಂತರ, ನಿಮಿಷಾ ಮೇಲೆ ಜುಲೈ 2017ರಲ್ಲಿ ಯೆಮೆನ್ ಪ್ರಜೆಯ ಹತ್ಯೆಯ ಆರೋಪ ಹೊರಿಸಲಾಯಿತು. ಮಾರ್ಚ್ 7, 2018ರಂದು, ಯೆಮೆನ್ ನ್ಯಾಯಾಲಯವು ನಿಮಿಷಾ ಅವರ ಮರಣದಂಡನೆಯನ್ನು ವಿಧಿಸಿತ್ತು.

ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ತಲಾಲ್ ಮಹದಿ ನಿಮಿಷಾರಿಗೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ ಮತ್ತು ಆಕೆಯ ಪಾಸ್‌ಪೋರ್ಟನ್ನು ಸ್ವಾಧೀನಪಡಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಪ್ರಸ್ತುತ ಯೆಮನ್‌ ರಾಷ್ಟ್ರಪತಿ ನಿಮಿಷಾರನ್ನು ಕ್ಷಮಿಸುವುದರ ಹೊರತಾಗಿ ಬೇರೆ ಯಾವುದೇ ಕಾನೂನಾತ್ಮಕ ಪರಿಹಾರ ಸಾಧ್ಯವಿಲ್ಲ ಎನ್ನಲಾಗುತ್ತಿದ್ದು, ಬ್ಲಡ್‌ ಮನಿ ಕೂಡಾ ನಿಮಿಷಾರನ್ನು ಪಾರು ಮಾಡಬಲ್ಲದು ಎನ್ನುವುದು ಆಕೆಯ ತಾಯಿಯ ವಾದವಾಗಿದೆ.

Related Articles

ಇತ್ತೀಚಿನ ಸುದ್ದಿಗಳು