Thursday, June 13, 2024

ಸತ್ಯ | ನ್ಯಾಯ |ಧರ್ಮ

ಶಿವಮೊಗ್ಗದ ಕೋಮುಹಿಂಸೆಗೆ ಕಾರಣ ಯಾರು? ಸೌಹಾರ್ದತೆ ಕದಡಲು  ಕಾಯುತ್ತಿದ್ದಾರೆ ಮತಾಂಧರು !

ಹಿಂದುತ್ವವಾದಿ ಮತಾಂಧರ ಪ್ರಚೋದನೆಗೆ ಹಿಂಸಾತ್ಮಕ ಪ್ರತಿಕ್ರಿಯೆ ಕೊಟ್ಟು ಪ್ರತೀಕಾರ ತೀರಿಸಿಕೊಳ್ಳಲು ಬಯಸಿದಷ್ಟೂ ಮುಸ್ಲಿಂ ಸಮುದಾಯವೇ ಹೆಚ್ಚು ತೊಂದರೆಗೊಳಗಾಗುವುದು ನಿಶ್ಚಿತ. ಮತೀಯ ಶಕ್ತಿಗಳ ಮತಾಂಧತೆಗೆ ಸಮಾಧಾನದಿಂದಿರುವುದೇ ಸೂಕ್ತ. ಪ್ರತಿಕ್ರಿಯಿಸಲೇ ಬೇಕೆಂದಿದ್ದರೆ ಅದು ಕಾನೂನಾತ್ಮಕವಾಗಿರಬೇಕು ಇಲ್ಲವೇ ರಾಜಕೀಯ ಒತ್ತಡ ಸೃಷ್ಟಿಸಬೇಕು. ಇದು ಈ ದುರಿತ ಕಾಲದ ಅನಿವಾರ್ಯತೆಯಾಗಿದೆ. ಮತಿಗೆಟ್ಟ ಮತಾಂಧರನ್ನು ನಿಯಂತ್ರಿಸುವ ತಂತ್ರವಾಗಿದೆ ಶಶಿಕಾಂತ ಯಡಹಳ್ಳಿ

ಅಹಿಂಸಾವಾದಿ ಗಾಂಧೀಜಿಯವರ ಜನ್ಮದಿನಾಚರಣೆಯ ಹಿಂದಿನ ದಿನ, ಪ್ರವಾದಿ ಪೈಗಂಬರರ ಮೆರವಣಿಗೆಯ ಕ್ಷಣ ಶಿವಮೊಗ್ಗದಲ್ಲಿ ಕೋಮುಹಿಂಸಾತ್ಮಕ ಗಲಭೆ ಆರಂಭವಾಗಿ ಅಕ್ಟೋಬರ್ ಎರಡರಂದೂ ಮುಂದುವರೆಯಿತು. ಶಿವಮೊಗ್ಗದ ರಾಗಿಗುಡ್ಡ ಪ್ರದೇಶ ಅಸಹಿಷ್ಣುತತೆಯ ಕುಲುಮೆಯಾದರೆ, ಪಕ್ಕದ ಶಾಂತಿನಗರ ಅಶಾಂತಿಯ ಬೀಡಾಯಿತು. ಈ ಮೂಲಕ ಕೋಮುಸೌಹಾರ್ದತೆಗಾಗಿ ಪ್ರಾಣವನ್ನೇ ಬಲಿಕೊಟ್ಟ ಮಹಾತ್ಮನಿಗೆ ಹಾಗೂ ಶಾಂತಿಯನ್ನು ಬಯಸಿದ ಪ್ರವಾದಿಗಳಿಗೆ ಅಗೌರವ ತೋರಿಸಲಾಯ್ತು.

ಆಗಿದ್ದಿಷ್ಟೇ… ಸೆಪ್ಟಂಬರ್ 28 ರಂದು ಪ್ರವಾದಿ ಪೈಗಂಬರರ ಜನ್ಮ ದಿನಾಚರಣೆ. ಮುಸ್ಲಿಂ ಬಾಂಧವರಿಗೆ ಹರುಷದ ದಿನ. ಮೆರವಣಿಗೆ ಮೂಲಕ ಪ್ರವಾದಿಗಳಿಗೆ ಗೌರವ ಪ್ರೀತಿ ಸಲ್ಲಿಸುವ ವಾಡಿಕೆ. ಆದರೆ ಶಿವಮೊಗ್ಗದಲ್ಲಿ ಹಿಂದುತ್ವವಾದಿ “ಹಿಂದು ಮಹಾ ಸಭಾʼ ದವರು ಗಣೇಶನನ್ನು ಕೂಡಿಸಿದ್ದು ಆ ದಿನ  ಅದ್ದೂರಿ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು.  ಈ ಹಿಂದಿನ ವರ್ಷಗಳ ಕೋಮುಗಲಭೆ ಮತ್ತೆ ಮರುಕಳಿಸಬಹುದು, ಸಮುದಾಯಗಳ ನಡುವೆ ಸಂಘರ್ಷ ಆಗಬಹುದು ಎಂಬ ಆತಂಕದಿಂದ ಪೋಲೀಸರು ಸೆ.28 ರ ಬದಲಾಗಿ ಅಕ್ಟೋಬರ್ 1 ರಂದು ಈದ್ ಮೀಲಾದ್ ಪ್ರಯುಕ್ತ ಮೆರವಣಿಗೆಗೆ ಅನುಮತಿ ಇತ್ತಿದ್ದರು. ಅದಕ್ಕೆ ಮುಸ್ಲಿಂ ಬಾಂಧವರೂ ಒಪ್ಪಿದ್ದರು. ಹಿಂದೂ ಸಂಘಟನೆಗಳ ಅಬ್ಬರದ ಜೊತೆಗೆ ಗಣೇಶನ ವಿಸರ್ಜನೆಯ ಮೆರವಣಿಗೆಯೇನೋ ಸಾಂಗವಾಗಿ ನೆರವೇರಿತು. ಆದರೆ ಈದ್ ಮೆರವಣಿಗೆಯಲ್ಲಿ ಏನಾಗಬಾರದಿತ್ತೋ ಅದೇ ಆಯಿತು. 

ಈ ಘಟನೆ ಶುರುವಾದದ್ದು ಹೀಗೆ

ಬೊಮ್ಮಾಯಿಯವರು ಹೇಳಿದ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯೇ ಈ ಗಲಭೆಯ ಹಿಂದಿದೆ. ಅದು ಕೂಡಾ ಶುರುವಾಗುವುದು ಈ ಮತಾಂಧ ಹಿಂದೂ ಸಂಘಟನೆಗಳು ಮಾಡಿದ ಅತಿರೇಕದಿಂದ ಹಾಗೂ ಆ ಸಂಘಟನೆಗಳ ಹಿಂದಿರುವ ಕೋಮುವಾದಿ ಪ್ರೇರೇಪಣೆಯಿಂದ. ಅದೇನಾಯ್ತು ಅಂದರೆ ಹಿಂದೂ ಮಹಾಸಭಾದವರು ಪ್ರತಿವರ್ಷದಂತೆ ಅದ್ದೂರಿ ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ. ಎಲ್ಲಾ ಕಡೆಯಂತೆ ಇಲ್ಲೂ ಗಣೇಶನ ಉತ್ಸವ ನಡೆಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಯಾವಾಗ ಕೋಮುದ್ವೇಷ ಪ್ರಚೋದಿಸುವ ಕೆಲಸವನ್ನು ಗಣೇಶ ಹಬ್ಬದ ನೆಪದಲ್ಲಿ ಸಂಘಿಗಳು ಮಾಡಿದ್ದರೋ ಅದು ಮತ್ತೊಂದು ಗುಂಪಿನವರಲ್ಲಿ ಅಸಹನೆಯನ್ನು ಹಾಗೂ ಆತಂಕವನ್ನೂ ಹೆಚ್ಚಿಸಿತು. ಶಿವಮೊಗ್ಗದ ಶಿವಪ್ಪ ಸರ್ಕಲ್ಲಿನಲ್ಲಿ ಶಿವಪ್ಪ ಸರ್ಕಲಲ್ಲಿ ಉಗ್ರನರಸಿಂಹ ದೇವರು ಮುಸ್ಲಿಂ ವ್ಯಕ್ತಿಯ ಎದೆ ಬಗೆಯುವಂತಹ ಕಟೌಟ್ ಹಾಕಿದ್ದಕ್ಕೂ ಗಣೇಶ ಹಬ್ಬಕ್ಕೂ ಸಂಬಂಧವೇ ಇರಲಿಲ್ಲ ಆದರೂ ಹಾಕಲಾಯ್ತು. ನಗರದಲ್ಲಿ ಹಾಕಲಾದ ಉಗ್ರ ಹಿಂದುತ್ವವಾದಿಯಾದ ಸಾವರ್ಕರ್ ರ ಪೋಸ್ಟರ್ ಬ್ಯಾನರ್ ಗಳಿಗೂ ಗಣೇಶ ಹಬ್ಬಕ್ಕೂ ಲಿಂಕೇ ಇಲ್ಲವಾದರೂ ಅಳವಡಿಸಲಾಗಿತ್ತು. ಇದೇ ಹಿಂದುತ್ವವಾದಿಗಳು ಶಿವಮೊಗ್ಗದ ಬಸ್ ನಿಲ್ದಾಣದ ಮುಂದೆ ಜ್ಞಾನವ್ಯಾಪಿ ಶಿವನ ಮಹಾದ್ವಾರ ನಿರ್ಮಿಸಿದ್ದಕ್ಕೂ ಗಣೇಶೋತ್ಸವಕ್ಕೂ ಎತ್ತನಿಂದೆತ್ತವೂ ಕಾರಣಗಳಿಲ್ಲ ಆದರೂ ನಿರ್ಮಿಸಲಾಗಿತ್ತು. ಮುಸ್ಲಿಮರೇ ಅಧಿಕವಾಗಿರುವ ಇಲ್ಯಾಸ್ ನಗರದತ್ತ ಗುರಿಯಿಟ್ಟು ಬಿಲ್ಲು ಹಿಡಿದು ನಿಂತ ಶ್ರೀರಾಮನ ದೊಡ್ಡ ಕಟೌಟ್  ನಿರ್ಮಿಸುವುದಕ್ಕೂ ಗಣೇಶನ ಹಬ್ಬಕ್ಕೂ ನೇರಾನೇರಾ ಸಂಬಂಧವಿಲ್ಲವಾದರೂ ಮಾಡಲಾಯಿತು. ಇಲ್ಲಿ ಗಣೇಶ ಹಬ್ಬದಾಚರಣೆ ಬರೀ ನೆಪವಾಗಿದ್ದು ಹಿಂದುತ್ವದ ಪರ ಪ್ರಚಾರ ಹಾಗೂ ಮುಸ್ಲಿಂ ದ್ವೇಷವೇ ಪ್ರಮುಖವಾಗಿತ್ತು. ಮುಸ್ಲಿಂ ಸಮುದಾಯವನ್ನು ಕೆರಳಿಸುವ ಅಣಕಿಸುವ ಉದ್ದೇಶವೂ ಇವುಗಳ ಹಿಂದಿತ್ತು.

ಮತಾಂಧ ಶಕ್ತಿಗಳಿಂದ ಕ್ರಿಯೆಗೆ ಪ್ರತಿಕ್ರಿಯೆ

ಮತಾಂಧ ಶಕ್ತಿಗಳ ಈ ಎಲ್ಲಾ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕೆರಳಿದ ಮುಸ್ಲಿಂ ಯುವಕರು ಔರಂಗಜೇಬ್ ಮಹಾದ್ವಾರ ನಿರ್ಮಿಸಿದರು. ಮುಸ್ಲಿಂ ವ್ಯಕ್ತಿಯ ಎದೆ ಬಗೆಯುವ ನರಸಿಂಹ ಅವತಾರದ ಕಟೌಟಿಗೆ ಕೌಂಟರ್ ಆಗಿ ಬ್ರಿಟಿಷ್‌ ಪರ ಸೈನಿಕನನ್ನು ಕಾಲಡಿ ಹೊಸಗುವ ಟಿಪ್ಪು ಕಟೌಟನ್ನು ಈದ್ ಹಬ್ಬದ ನೆಪದಲ್ಲಿ ನಿಲ್ಲಿಸಿ ತಮ್ಮ ಆಕ್ರೋಶವನ್ನು ತೋರಿದರು. ಈದ್ ಆಚರಣೆಗೆ ಸಂಬಂಧವೇ ಇಲ್ಲದ ಔರಂಗಜೇಬ್ ಹಾಗೂ ಟಿಪ್ಪು ಕಟೌಟುಗಳನ್ನು ಕೆಲವು ಇಸ್ಲಾಂ ಸಮುದಾಯದ ಮತಾಂಧರು ಅಳವಡಿಸಿದ್ದರು. ಇದು ಹಿಂದೂ ಮತಾಂಧರ ಕಣ್ಣು ಕೆಂಪೇರಿಸಿತು. ಮೊದಲೇ ಹಿಂದೂ ಕೋಮುವಾದಿಗಳ ಪ್ರಯೋಗಶಾಲೆ ಈ ಶಿವಮೊಗ್ಗ. ಇಂತಹ ಅಧಿಕ ಪ್ರಸಂಗವನ್ನು  ಸಹಿಸಿಯಾರೆ? ಬೆಂಕಿ ಹಚ್ಚಲು ಸಿಕ್ಕ ಅವಕಾಶವನ್ನು ಬಿಟ್ಟಾರೆಯೇ?  ಕೋಮುಗಲಭೆ ಹುಟ್ಟು ಹಾಕಲು ನೆಪಕ್ಕಾಗಿ ಶಿವಮೊಗ್ಗದ ಸಂಘ ಪರಿವಾರದ ಉದ್ರಿಕ್ತ ಮತಾಂಧ ಪಡೆ ಕಾಯುತ್ತಿತ್ತು. ಉದ್ವೇಗಗೊಳಿಸುವ ಈ ಕಟೌಟುಗಳು ಕೋಮು ಕಿಡಿ ಹೊತ್ತಿಕೊಳ್ಳಲು ಕಾರಣವಾಯ್ತು. ಜೊತೆಗೆ ಮೆರವಣಿಗೆಯಲ್ಲಿ ಆವೇಶಭರಿತ ಕೆಲವು ಮುಸ್ಲಿಂ ಯುವಕರು ನಕಲಿ ಕತ್ತಿ ತಲವಾರ್ ಗಳನ್ನು ಎತ್ತಿ ಹಿಡಿದು ಕುಣಿದರು. ಹಿಂದೂ ಮತಾಂಧರಿಗೆ ಇಷ್ಟೇ ಬೇಕಿತ್ತು. ಅದೆಲ್ಲಿಂದಲೋ ಕಾಣದ ಕೈಗಳಿಂದ ಕಲ್ಲುಗಳು ಬಂದು ಮೆರವಣಿಗೆಯ ಮೇಲೆ ಬಿದ್ದವು. ಧರ್ಮದ ಅಫೀಮು ಕುಡಿದು ಕುಣಿಯುತ್ತಿದ್ದ ಮುಸ್ಲಿಂ ಯುವಕರು ಕೆರಳಿ ನಿಂತು ಕಾಣದ ಕೈಗಳು ಕಾಣದೇ ಹೋದಾಗ ಕೆಲವು ಹಿಂದೂ ಧರ್ಮೀಯರ ಮನೆಯ ಮೇಲೆ ಕಲ್ಲು ತೂರಿ ದೌರ್ಜನ್ಯಕ್ಕೆ ಮುಂದಾದರು. ಪೊಲೀಸರೂ ಬೇಕಾದಷ್ಟು ಮುಂಜಾಗ್ರತೆ ವಹಿಸಿದ್ದರೂ ಎರಡೂ ಸಮುದಾಯದ ಮತಾಂಧ ಪಡೆಯ ಅಟ್ಟಹಾಸಕ್ಕೆ ಮೂಕಪ್ರೇಕ್ಷಕರಾದರು.

ಹತ್ತಿದ ಕಿಡಿ ಹೀಗೆ ಬೆಂಕಿಯಾಯಿತು..

ಅಷ್ಟೇ ಆಗಿದ್ದರೆ ಪೊಲೀಸರ ಪ್ರಯತ್ನದಿಂದ ಎಲ್ಲವೂ ತಣ್ಣಗಾಗಬಹುದಾಗಿತ್ತು. ಆದರೆ ಹತ್ತಿದ ಕಿಡಿಯನ್ನು ಬೆಂಕಿಯಾಗಿಸಲು  ಗೋದಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಹೆಸರಲ್ಲಿ ದ್ವೇಷದ ಪೆಟ್ರೋಲ್ ಸುರಿಯತೊಡಗಿದರು. ಅದಕ್ಕೆ ಪೂರಕವಾಗಿ ಹಿಂದೂ ಮತಾಂಧರು ಹಳೆಯ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡತೊಡಗಿದರು. ಹತ್ತಿದ ಕೋಮುಬೆಂಕಿಯನ್ನು ಆರಿಸಲು ಪ್ರಯತ್ನಿಸಬೇಕಾಗಿದ್ದ ಬಿಜೆಪಿ ನಾಯಕರುಗಳು ಮುಸ್ಲಿಂ ಸಮುದಾಯದ ಮೇಲೆ, ಕಾಂಗ್ರೆಸ್ ಸರಕಾರದ ಮೇಲೆ ಮತ್ತಷ್ಟು ಬೆಂಕಿ ಕಾರತೊಡಗಿದರು. ಇದರಿಂದಾಗಿ ಕೋಮುದ್ವೇಷದುರಿಯಲ್ಲಿ ಕೋಮುಸೌಹಾರ್ದತೆ ಹೊತ್ತಿ ಉರಿಯತೊಡಗಿತು. 

ಪೊಲೀಸರು ತಡೆಯಬಹುದಾಗಿತ್ತು

ಈ ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡನ್ನೂ ಪೊಲೀಸರು ತಡೆಯಬಹುದಾಗಿತ್ತು. ಹಿಂದೂ ಮಹಾಸಭಾದವರು ಕೋಮುಪ್ರಚೋದನೆಗಾಗಿ ಅಳವಡಿಸಿದ್ದ, ಗಣೇಶೋತ್ಸವಕ್ಕೆ ಹೊರತಾದ ಪೋಸ್ಟರ್ ಕಟೌಟ್ ಗಳನ್ನು ಜಿಲ್ಲಾಡಳಿತ ತೆರವುಗೊಳಿಸಬಹುದಾಗಿತ್ತು ಮಾಡಲಿಲ್ಲ. ಮುಸ್ಲಿಂ ಸಮುದಾಯದವರ ಮನವೊಲಿಸಿ ಈದ್ ಗೆ ಸಂಬಂಧವೇ ಇಲ್ಲದ ಕಟೌಟ್ ಮಹಾದ್ವಾರಗಳನ್ನಾದರೂ ಪೋಲೀಸರ ಮೂಲಕ ತೆಗೆಸಿ ಹಾಕಬಹುದಾಗಿತ್ತು, ಅದನ್ನೂ ಮಾಡಲಿಲ್ಲ. ಹೀಗಾಗಿ ಈ ಮತಾಂಧರ ಕ್ರಿಯೆ ಮತ್ತು ಪ್ರತಿಕ್ರಿಯೆ ಸಂಘರ್ಷದಲ್ಲಿ ಕೋಮುಗಲಭೆ ದೊಡ್ಡದಾಯಿತು.

ಕೋಮುಗಲಭೆಗೆ ಕಾರಣ ಯಾರು?

ಹಾಗಾದರೆ ಈ ಅಹಿತಕರ ಕೋಮುಗಲಭೆಗೆ ಕಾರಣ ಯಾರು? ಮುಸ್ಲಿಂ ಸಮುದಾಯವನ್ನು ಪ್ರಚೋದಿಸುವಂತಹ ಕಟೌಟ್ ಬ್ಯಾನರ್ ಹಾಕಿದ ಹಿಂದೂ ಮತಾಂಧರಾ? ಅದಕ್ಕೆ ಪ್ರತಿಯಾಗಿ ಹಿಂದೂ ಮತಾಂಧರನ್ನು ಪ್ರಚೋದಿಸುವಂತೆ ಕಟೌಟ್ ಹಾಕಿ ಈದ್ ಮೆರವಣಿಗೆಯಲ್ಲಿ ಕತ್ತಿ ಝಳಪಿಸಿದ ಮುಸ್ಲಿಂ ಮತಾಂಧರಾ? ಇದಕ್ಕೆ ಪ್ರತಿಯಾಗಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ ಹಾಗೂ ಮಾಡಿಸಿದ ಹಿಂದುತ್ವವಾದಿ ಕೋಮುವಾದಿಗಳಾ? ಈ ಮತಿಹೀನ ಮತಾಂಧರ ಸಮೂಹ ಸನ್ನಿಯನ್ನು ನಿಯಂತ್ರಿಸಲು ವಿಫಲರಾದ ಪೋಲೀಸರಾ? ಮುಸ್ಲಿಂ ಮತಾಂಧ ಯುವಕರ ದಾಂದಲೆಯನ್ನು ಮಾತ್ರ ಪದೇ ಪದೇ ತೋರಿಸಿ, ಸಂತ್ರಸ್ತ ಹಿಂದೂ ಮನೆಯವರ ನೋವಿನ ಮಾತನ್ನು ಮಾತ್ರ ಮತ್ತೆ ಮತ್ತೆ ಏಕಪಕ್ಷೀಯವಾಗಿ ತೋರಿಸಿ ಕೋಮುಗಲಭೆಗೆ ಮತ್ತಷ್ಟು ಪ್ರಚೋದನೆ ಕೊಟ್ಟು ಕೋಮುಸೌಹಾರ್ಧತೆಯನ್ನು ಹಾಳು ಮಾಡಲು ಅಹೋರಾತ್ರಿ ಪ್ರಯತ್ನಿಸಿದ ಕೋಮು ಮಾಧ್ಯಮಗಳಾ? ಎಂದೋ ನಡೆದ ಗಲಭೆಗಳ ವಿಡಿಯೋಗಳನ್ನು ಈ ಗಲಭೆಯದ್ದೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡ ಕೋಮುಪೀಡಿತ ಐಟಿ ಸೆಲ್ ಗಳಾ? ಉದ್ರಿಕ್ತ ಮುಸ್ಲಿಂ ಮತಾಂಧ ಯುವಕರ ದುಷ್ಕೃತ್ಯವನ್ನು ಮಾತ್ರ ಖಂಡಿಸದೇ ಇಡೀ ಸಮುದಾಯವನ್ನೇ ತಾಲಿಬಾನಿಗಳು, ಹಿಂದೂ ವಿರೋಧಿಗಳು ಎಂದು ದೂಷಿಸುವ ಬಿಜೆಪಿಯ ನಾಯಕರುಗಳಾ? ಹಿಂದಿನ ಕಹಿ ಅನುಭವಗಳಿಂದ ಹೀಗೆ ಆಗಬಹುದು ಎಂದು ಮೊದಲೇ ಊಹಿಸಿ ಪೊಲೀಸ್ ಸರ್ಪಗಾವಲನ್ನು ಹಾಕದ ಹಾಲಿ ಸರಕಾರವಾ? ವಿವಾದಾತ್ಮಕ ಕಟೌಟಗಳನ್ನು ಹಾಕಲು ಬಿಟ್ಟ ಜಿಲ್ಲಾಡಳಿತವಾ? 

ಈ ಎಲ್ಲರ ಸಂಘಟಿತ ಪ್ರಯತ್ನ ಹಾಗೂ ಜಿಲ್ಲಾಡಳಿತದ ನಿರ್ಲಕ್ಷವೇ ಈ ಉದ್ವಿಗ್ನತೆಗೆ, ಕೋಮುಹಿಂಸೆಗೆ, ಕೋಮುಪ್ರಚೋದನೆಗೆ ಬಹುಮುಖ್ಯ ಕಾರಣಗಳಾಗಿವೆ. ಅಷ್ಟೇ ಅಲ್ಲ ಈ ಗಲಭೆಯ ಹಿಂದೆ ಕೋಮುವಾದಿಗಳ ಪ್ರೀಪ್ಲಾನ್ ಷಡ್ಯಂತ್ರವೂ ಅಡಗಿದೆ. 

ಇದು ಮೊದಲನೆಯ ಕೋಮು ಗಲಭೆಯೂ ಅಲ್ಲ, ಕೊನೆಯದೂ ಅಲ್ಲ

ಇದೇನೂ ಮೊದಲನೆಯ ಕೋಮುಗಲಭೆ ಏನಲ್ಲ. ಇನ್ನೂ ಬೇಕಾದಷ್ಟು ನಡೆಯುವುದು ಬಾಕಿ ಇದೆ. ಮುಂದೆ ಲೋಕಸಭಾ ಚುನಾವಣೆ ಇದೆ. ಬಿಜೆಪಿ ಪ್ರಭಾವ ರಾಜ್ಯದಲ್ಲಿ ದುರ್ಬಲವಾಗಿದೆ. ಮೋದಿ ವರ್ಚಸ್ಸು ಮಂಕಾಗಿದೆ. ಕಾಂಗ್ರೆಸ್ ಸರಕಾರದ ಉಚಿತ ಭಾಗ್ಯಗಳು ಜನಪ್ರಿಯವಾಗಿವೆ. ಇಂತಹ ಸಮಯದಲ್ಲಿ ಸಂಘ ಪರಿವಾರಕ್ಕೆ ಹಿಂದೂ ಮುಸ್ಲಿಂ ಕೋಮುಗಲಭೆ ಹುಟ್ಟಿಸುವುದನ್ನು ಬಿಟ್ಟು ಬೇರೆ ದಾರಿ ಕಾಣದಾಗಿದೆ.  ಈ ಹಿಂದೆ ಮಾಡಿದಂತೆ ಈಗಲೂ ಹಿಂದೂ ಭಾವನೆಗಳನ್ನು ಕೆರಳಿಸಿ, ಅನ್ಯ ಧರ್ಮದ್ವೇಷವನ್ನು ಪ್ರಚೋದಿಸಿ ಹಿಂದೂಗಳ ಮತಗಳನ್ನು ಧ್ರುವೀ ಕರಿಸಬೇಕಿದೆ. ಮುಸ್ಲಿಮರು ತಾಲಿಬಾನಿಗಳು, ಭಯೋತ್ಪಾದಕರು, ಹಿಂಸಾವಾದಿಗಳು, ಆತಂಕವಾದಿಗಳೂ ಆಗಿದ್ದು ಅವರನ್ನು ನಿಯಂತ್ರಿಸಲು ಬಿಜೆಪಿಯೊಂದೇ ಸಮರ್ಥ ಪಕ್ಷ ಎಂದು ಹಿಂದೂ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. 

ಅದಕ್ಕಾಗಿ ಹೀಗೆ ಅವಕಾಶ ಸಿಕ್ಕಾಗ, ಸಿಗದೇ ಹೋದರೆ ಅವಕಾಶ ಹುಟ್ಟು ಹಾಕಿ ಕೋಮುಗಲಭೆಗಳನ್ನು ಸೃಷ್ಟಿಸುವ ಕೆಲಸವನ್ನು ಕೋಮುವಾದಿ ಪಡೆ ಮುಂದುವರೆಸುತ್ತದೆ. ಅದಕ್ಕೆ ಸುಳ್ಳುಗಳನ್ನು ಸೃಷ್ಟಿಸಲು ಸಾಮಾಜಿಕ ಜಾಲತಾಣಗಳನ್ನು ಹಾಗೂ ಸುಳ್ಳುಗಳನ್ನು ಸಮರ್ಥಿಸಿಕೊಳ್ಳಲು ಗೋದಿ ಮಾಧ್ಯಮಗಳನ್ನು ಅವ್ಯಾಹತವಾಗಿ ಬಳಸಿಕೊಳ್ಳುತ್ತದೆ.

ಇದು ಅತ್ಯಂತ ಅಗತ್ಯ

ಸನಾತನವಾದಿಗಳ ಈ ಪುರಾತನ ತಂತ್ರಗಳನ್ನು ಆಂತರಿಕ ಮತಬೇಧದಲ್ಲಿ ಮೈಮರೆತಿರುವ ಕಾಂಗ್ರೆಸ್ ಪಕ್ಷ ಅರ್ಥಮಾಡಿಕೊಳ್ಳಬೇಕಿದೆ. ಸುಳ್ಳು ಸುದ್ದಿ ಹಬ್ಬಿಸುವವರನ್ನು ಹುಡುಕಿಹುಡುಕಿ ಜೈಲಿಗಟ್ಟಬೇಕಿದೆ. ಕೋಮುಪ್ರಚೋದನಾತ್ಮಕ ಹೇಳಿಕೆ ಕೊಡುತ್ತಿರುವ ನಾಯಕರ ಮೇಲೆ ಕೇಸ್ ಹಾಕಲೇಬೇಕಿದೆ. ಕೋಮುಗಲಭೆಗೆ ಕಾರಣರಾದವರು ಯಾವುದೇ ಸಮುದಾಯದವರಾಗಿದ್ದರೂ ಬಂಧಿಸಿ ಕಾರಾಗೃಹಕ್ಕೆ ಕಳುಹಿಸಬೇಕಿದೆ. ಇನ್ನು ಮುಂದೆ ಗುಂಪು ಸೇರಿ ಆಚರಿಸುವ ಯಾವುದೇ ಸಮುದಾಯದ ಹಬ್ಬ ಮೆರವಣಿಗೆಗಳ ಸಮಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕಿದೆ. ಕೋಮುವ್ಯಾಧಿಗಳ ಮಿತ್ಯಾರೋಪಗಳಿಗೆ ಸಾಕ್ಷಿ ಸಮೇತ ಉತ್ತರಗಳನ್ನು ಕೊಡಬೇಕಿದೆ. ಇದು ಆಳುವ ಪಕ್ಷದ ಜವಾಬ್ದಾರಿಯೂ ಆಗಿದೆ. ಕೋಮುವಾದಿಗಳ ಷಡ್ಯಂತ್ರವನ್ನು ಸೋಲಿಸಲು ಅತ್ಯಂತ ಅಗತ್ಯವಾಗಿದೆ.

ಮುಸ್ಲಿಂ ಸಮುದಾಯದ ಮತಾಂಧರನ್ನು ನಿಯಂತ್ರಿಸಬೇಕಿದೆ

ಇನ್ನು ಮುಸ್ಲಿಂ ಸಮುದಾಯದ ಹಿರಿಯರು, ರಾಜಕೀಯ ನಾಯಕರುಗಳು, ಧಾರ್ಮಿಕ ಮುಖಂಡರುಗಳು ತಮ್ಮ ಸಮುದಾಯದ ಮತಾಂಧರನ್ನು ನಿಯಂತ್ರಿಸಬೇಕಿದೆ. ಉದ್ರಿಕ್ತ ಯುವಕರಿಗೆ ಬುದ್ದಿ ಹೇಳಿ ಗಲಭೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಬೇಕಿದೆ. ಪ್ರಚೋದನೆಗೆ ಒಳಗಾಗಿ ಯುವಜನತೆ ವಿವೇಕವನ್ನು ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕಿದೆ. ಹಿಂದುತ್ವವಾದಿ ಮತಾಂಧರ ಪ್ರಚೋದನೆಗೆ ಹಿಂಸಾತ್ಮಕ ಪ್ರತಿಕ್ರಿಯೆ ಕೊಟ್ಟು ಪ್ರತೀಕಾರ ತೀರಿಸಿಕೊಳ್ಳಲು ಬಯಸಿದಷ್ಟೂ ಮುಸ್ಲಿಂ ಸಮುದಾಯವೇ ಹೆಚ್ಚು ತೊಂದರೆಗೊಳಗಾಗುವುದು ನಿಶ್ಚಿತ. ಮತೀಯ ಶಕ್ತಿಗಳ ಮತಾಂಧತೆಗೆ ಸಮಾಧಾನದಿಂದಿರುವುದೇ ಸೂಕ್ತ. ಪ್ರತಿಕ್ರಿಯಿಸಲೇ ಬೇಕೆಂದಿದ್ದರೆ ಅದು ಕಾನೂನಾತ್ಮಕವಾಗಿರಬೇಕು ಇಲ್ಲವೇ ರಾಜಕೀಯ ಒತ್ತಡ ಸೃಷ್ಟಿಸಬೇಕು. ಇದು ಈ ದುರಿತ ಕಾಲದ ಅನಿವಾರ್ಯತೆಯಾಗಿದೆ. ಮತಿಗೆಟ್ಟ ಮತಾಂಧರನ್ನು ನಿಯಂತ್ರಿಸುವ ತಂತ್ರವಾಗಿದೆ. ರಕ್ತಕ್ಕೆ ರಕ್ತ, ಸೇಡಿಗೆ ಸೇಡು ಎನ್ನುವ ದ್ವೇಷ ಯಾವತ್ತೂ ಸಮುದಾಯಗಳ ನೆಮ್ಮದಿ ಹಾಳುಮಾಡಿ ಸಮಾಜದ ಶಾಂತಿಯನ್ನು ಕದಡುತ್ತದೆ. ಕೋಮುಸೌಹಾರ್ದತೆ ಬಯಸುವ ಎಲ್ಲಾ ಸಮುದಾಯದವರೂ ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಿದೆ. ಸರ್ವ ಜನಾಂಗದ ತೋಟದ ಕನಸು ನನಸಾಗಬೇಕಿದೆ.

 ಶಶಿಕಾಂತ ಯಡಹಳ್ಳಿ

ಈ ವಿಡಿಯೋ ನೋಡಿ- ಶಿವಮೊಗ್ಗ ಕೋಮು ಗಲಭೆ : ಈಶ್ವರಪ್ಪನವರಿಗೆ ನಿರಾಸೆಯಾಯ್ತಾ? ಹತಾಶೆಯಾಯ್ತಾ?  https://fb.watch/nr_Q0czR8N/?mibextid=RUbZ1f

Related Articles

ಇತ್ತೀಚಿನ ಸುದ್ದಿಗಳು